ನನಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ಹೈಕಮಾಂಡ್‌ ಎಂದು ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದರು. ಅವರು ನಾನು ಹೇಳುವವರೆಗೆ ಏನೂ ಮಾಡಬೇಡಿ ಎಂದಿದ್ದಾರೆ. ಹೀಗಾಗಿ ನಾನು ಎಲ್ಲೂ ಮಾತನಾಡಿಲ್ಲ. 

ಬೆಂಗಳೂರು (ಅ.07): ನನಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ಹೈಕಮಾಂಡ್‌ ಎಂದು ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದರು. ಅವರು ನಾನು ಹೇಳುವವರೆಗೆ ಏನೂ ಮಾಡಬೇಡಿ ಎಂದಿದ್ದಾರೆ. ಹೀಗಾಗಿ ನಾನು ಎಲ್ಲೂ ಮಾತನಾಡಿಲ್ಲ. ಯಡಿಯೂರಪ್ಪ ಅವರು ಏನೋ ಹೇಳಿದ್ದಾರೆ. ಹೀಗಾಗಿ ಅಲ್ಲಿಯವರೆಗೆ ಮಾತನಾಡಲ್ಲ ಮತ್ತು ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ ಎಂದರು.

ಮೈತ್ರಿಯಿಂದ ಉಸಿರುಗಟ್ಟಿಸುವ ವಾತಾವರಣ: ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಜೆಡಿಎಸ್‌ ಮುಖಂಡರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ಬೆನ್ನಲ್ಲೇ ಇದೀಗ ಬಿಜೆಪಿಯಲ್ಲಿಯೂ ಅಪಸ್ವರ ಕೇಳಿಬಂದಿದೆ. ''ಜೆಡಿಎಸ್‌-ಬಿಜೆಪಿ ಮೈತ್ರಿ ಬಗ್ಗೆ ನನಗೆ ವೈಯಕ್ತಿಕ ಅಸಮಾಧಾನವಿದೆ. ಮೈತ್ರಿಯಿಂದ ನಮಗೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ'' ಎಂದು ಎಸ್‌.ಟಿ.ಸೋಮಶೇಖರ್‌ ಬೇಸರ ಹೊರಹಾಕಿದ್ದಾರೆ. ಉಭಯ ಪಕ್ಷಗಳ ನಡುವೆ ಅಧಿಕೃತವಾಗಿ ಮೈತ್ರಿಯಾದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದೂ ಅವರು ತೀಕ್ಷ್ಣವಾಗಿ ಹೇಳಿದ್ದಾರೆ.

ಲಿಂಗಾಯತ ಡಿಸಿಎಂ ಯಾರಿಗೆ ಬೇಕು, ಮಾಡೋದಿದ್ರೆ ಸಿಎಂ ಮಾಡಿ: ಶಾಮನೂರು ಶಿವಶಂಕರಪ್ಪ ಸ್ಪೋಟಕ ಹೇಳಿಕೆ

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜೆಡಿಎಸ್‌ ಜತೆ ವೈಯಕ್ತಿಕವಾಗಿ 20 ವರ್ಷದಿಂದ ಸೆಣಸಾಟ ಮಾಡಿಕೊಂಡು ಬಂದಿದ್ದೇವೆ. ಬಿಜೆಪಿಗೆ ಮೊದಲಿನಿಂದಲೂ ಜೆಡಿಎಸ್‌ ವಿರೋಧ ಇದೆ. ಎಂದಿಗೂ ನಮ್ಮ ಮತ್ತು ಅವರ ಕಾರ್ಯಕರ್ತರಿಗೆ ಹೊಂದಾಣಿಕೆ ಇಲ್ಲ ಎಂದು ತಿಳಿಸಿದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇತ್ತು. ಅವರು ಇವರಿಗೆ ಮತ ಹಾಕಲಿಲ್ಲ. ಇವರು ಅವರಿಗೆ ಮತ ಹಾಕಲಿಲ್ಲ. ಈಗ ಯಾರೂ ಕೂಡ ಆ ಬಗ್ಗೆ ಮಾತನಾಡುತ್ತಿಲ್ಲ. ಆದರೆ, ಎಲ್ಲರಿಗೂ ಅಸಮಾಧಾನ ಅಂತೂ ಇದೆ. ನಮ್ಮ ಪಕ್ಷದಲ್ಲಿ ಯಾರನ್ನೂ ಕರೆದು ಚರ್ಚೆ ಮಾಡಿಲ್ಲ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಬೆಂಬಲಿಗರು ಬಿಜೆಪಿ ಬಿಡುವ ವಿಚಾರ ಕೇವಲ ನನ್ನ ಕ್ಷೇತ್ರಕ್ಕೆ ಸೀಮಿತವಲ್ಲ. ಮಾಜಿ ಸಚಿವರಾದ ಆರ್‌.ಅಶೋಕ್, ಮುನಿರತ್ನ ಸೇರಿದಂತೆ ಇತರ ಶಾಸಕರ ಕ್ಷೇತ್ರದಲ್ಲಿಯೂ ಕಾರ್ಯಕರ್ತರು ಹೋಗಿದ್ದಾರೆ, ಶೇ.100ರಷ್ಟು ನಾನು ಬಿಜೆಪಿಯಲ್ಲಿಯೇ ಇದ್ದೇನೆ. ಅದರೆ ಮೈತ್ರಿ ಬಳಿಕ ಯೋಚನೆ ಮಾಡಬೇಕಿದೆ ಎಂದು ಮಾರ್ಮಿಕವಾಗಿ ಹೇಳಿದರು.

ಲೋಕಸಭೆಗೆ ಪತ್ನಿ ಡಾ.ಪ್ರಭಾ ಸ್ಪರ್ಧೆ ಚರ್ಚೆ ಆಗಿಲ್ಲ: ಸಚಿವ ಎಸ್.ಎಸ್‌.ಮಲ್ಲಿಕಾರ್ಜುನ

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಿಂದ ನಮಗೆ ಉಸಿರುಗಟ್ಟುವ ವಾತಾವರಣ ನಿರ್ಮಾಣ ಆಗಿದೆ. ಹಿಂದೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲೂ ಹಾಗೆಯೇ ಆಗಿತ್ತು. ನಾವು ಹೊರಗಡೆ ಬಂದ ಉದ್ದೇಶ ಏನು? ಲೋಕಸಭೆ ಚುನಾವಣೆಗೆ ಮೈತ್ರಿ ಆದ ಉದ್ದೇಶ ಏನು? ಮುಖಂಡರು ಒಂದಾಗಬಹುದು. ಆದರೆ, ಕೆಳಮಟ್ಟದ ಕಾರ್ಯಕರ್ತರಿಗೆ ಹಿಂಸೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.