ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಯೋಜನೆ ಪರ ಜ.15ರಿಂದ ಫೆ.28ರವರೆಗೆ ಕರ್ನಾಟಕದಾದ್ಯಂತ ಜಾಗೃತಿ ಅಭಿಯಾನ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಬೆಂಗಳೂರು : ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಯೋಜನೆ ಪರ ಜ.15ರಿಂದ ಫೆ.28ರವರೆಗೆ ಕರ್ನಾಟಕದಾದ್ಯಂತ ಜಾಗೃತಿ ಅಭಿಯಾನ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚೆಗೆ ಎನ್‌ಡಿಎ ಸರ್ಕಾರ (ಕೇಂದ್ರ ಸರ್ಕಾರ) ವಿಬಿ ಜಿ ರಾಮ್ ಜಿ ಕಾಯ್ದೆ ತಂದಿದ್ದಾರೆ. ಇದು ಸಕಾರಾತ್ಮಕ ಚಿಂತನೆ ಇರುವ ಕಾಯ್ದೆ. ಮನ್‌ರೇಗಾ ಯೋಜನೆಯಲ್ಲಿ ಅನೇಕ ಅಂಶಗಳನ್ನು ಸುಧಾರಿಸಿ ವಿಬಿ ಜಿ ರಾಮ್ ಜಿ ಕಾಯ್ದೆ ತರಲಾಗಿದೆ. ಮನ್‌ರೇಗಾ ಯೋಜನೆಯಲ್ಲಿ ದುರ್ಬಳಕೆ, ಭ್ರಷ್ಟಾಚಾರ ಇತ್ತು. ಮೂಲಸೌಕರ್ಯ ವೃದ್ಧಿಗೆ ಅದು ಸಹಕಾರಿ ಆಗಿರಲಿಲ್ಲ. ಅದಕ್ಕಾಗಿ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದು ಸಮರ್ಥಿಸಿಕೊಂಡರು.

ಕಾಂಗ್ರೆಸ್ ಈಗಾಗಲೇ ಅಪಪ್ರಚಾರ ಶುರು ಮಾಡಿದೆ

ಆದರೆ, ಇದರ ವಿರುದ್ಧ ಕಾಂಗ್ರೆಸ್ ಈಗಾಗಲೇ ಅಪಪ್ರಚಾರ ಶುರು ಮಾಡಿದೆ. ಕೇಂದ್ರದ ಯೋಜನೆಗಳಲ್ಲಿ ಕಾಂಗ್ರೆಸ್ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ನಿರಂತರವಾಗಿ ಮಾಡಿಕೊಂಡು ಬಂದಿದೆ. ಕಾಂಗ್ರೆಸ್‌ ಪಕ್ಷಕ್ಕೆ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಇರುವುದನ್ನು ಸಹಿಸಲು ಆಗುತ್ತಿಲ್ಲ. ಈಗ ವಿ ಬಿಜಿ ರಾಮ್ ಜಿ ವಿರುದ್ಧ ಅಪಪ್ರಚಾರ ಶುರು ಮಾಡಿದ್ದಾರೆ ಎಂದು ಹೇಳಿದರು.

ಹಳ್ಳಿಗಳು ಉದ್ಧಾರವಾಗಬೇಕು:

ಗಾಂಧೀಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸಾಗಬೇಕಾದರೆ ಹಳ್ಳಿಗಳು ಉದ್ಧಾರ ಆಗಬೇಕು. ಅಂಬೇಡ್ಕರ್ ಆಗಲಿ ಗಾಂಧಿಯವರಾಗಲೀ ಅವರ ಹೆಸರಿಗೆ ಬಿಜೆಪಿ ಅಪಮಾನ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಅಪಮಾನ ಮಾಡೋ ಜಾಯಮಾನ ಇರೋದು ಕಾಂಗ್ರೆಸ್ಸಿಗೆ ಮಾತ್ರ ಎಂದು ವಿಜಯೇಂದ್ರ ಹೇಳಿದರು.