ವಿಜಯೇಂದ್ರ ಬಿಜೆಪಿಗೆ ತಾತ್ಕಾಲಿಕ ರಾಜ್ಯಾಧ್ಯಕ್ಷ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಟೀಕೆ
ಶಾಸಕ ಬಿ.ವೈ.ವಿಜಯೇಂದ್ರ ಅವರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ತಾತ್ಕಾಲಿಕವಾದದು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ಚುನಾವಣೆಯಲ್ಲಿ ಲಿಂಗಾಯತರು ಪಕ್ಷ ಬಿಟ್ಟು ಹೋಗಿದ್ದಾರೆ.
ಮೈಸೂರು (ನ.13): ಶಾಸಕ ಬಿ.ವೈ. ವಿಜಯೇಂದ್ರ ಅವರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ತಾತ್ಕಾಲಿಕವಾದದು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ಚುನಾವಣೆಯಲ್ಲಿ ಲಿಂಗಾಯತರು ಪಕ್ಷ ಬಿಟ್ಟು ಹೋಗಿದ್ದಾರೆ ಎಂದು ನರೇಂದ್ರ ಮೋದಿ, ಅಮಿತ್ ಶಾ, ಬಿ.ಎಲ್. ಸಂತೋಷ್ ಅವರು ಶೇಕ್ಸ್ಪಿಯರ್ ನ ನಾಟಕದಂತೆ ವಿಜಯೇಂದ್ರಗೆ ಅಧ್ಯಕ್ಷ ಸ್ಥಾನ ನೀಡಿದ್ದಾರೆ ಎಂದು ಆರೋಪಿಸಿದರು. ವರ್ಷಾನುಗಟ್ಟಲೆ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಲಾಗಿದೆ. ಲಿಂಗಾಯತ ನಾಯಕರಾದ ಬಿ.ಸಿ. ಪಾಟೀಲ್, ಮುರುಗೇಶ ನಿರಾಣಿ, ವಿ. ಸೋಮಣ್ಣ, ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ತುಳಿದರು.
ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿಯನ್ನು ಹೊರಗೆ ತಳ್ಳಿರು. ಹಾಗಾಗಿ ಲಿಂಗಾಯತ ಸಮಾಜ ಈ ನಾಟಕವನ್ನು ನಂಬಿ ಮತ್ತೆ ಯಮಾರಬೇಡಿ ಎಂದು ಅವರು ಮನವಿ ಮಾಡಿದರು. ಈಗ ಜ್ಯೂನಿಯರ್ ನಾಯಕನಿಗೆ ಪಟ್ಟ ಕಟ್ಟಿರುವುದು ತಾತ್ಕಾಲಿಕವಷ್ಟೆ. ಜೂನ್ ನಂತರ ಆ ಸ್ಥಾನವನ್ನೂ ಕಿತ್ತುಕೊಳ್ಳುತ್ತಾರೆ. ಬಿ.ವೈ. ವಿಜಯೇಂದ್ರ ನೇಮಕವನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ. ಯಾವ ಭಯವೂ ಇಲ್ಲ. ಯಡಿಯೂರಪ್ಪ ಅವರ ಸಿಎಂ ಸ್ಥಾನ ಕಳೆದುಕೊಳ್ಳಲು ಯಾರು ಕಾರಣ? 2012ರಲ್ಲಿ ಸಿಎಂ ಸ್ಥಾನ ಹೋಗಲು ಮತ್ತ್ಯಾರು ಕಾರಣ. ಯಡಿಯೂರಪ್ಪ ಅವರ ಸಹಿ ಮಾಡಿದ್ದು, ಆರ್ಟಿಜಿಎಸ್ ಮೂಲಕ ಹಣ ಪಡೆದಿದ್ದು ಯಾರು? ಉತ್ತರಿಸಬೇಕು ಎಂದು ಅವರು ಆಗ್ರಹಿಸಿದರು.
ವಿಜಯೇಂದ್ರ ಆಯ್ಕೆಯಿಂದ ಕೆಲವರಲ್ಲಿ ಅಸಮಾಧಾನವಾಗಿರುವುದು ನಿಜ: ಮುರುಗೇಶ್ ನಿರಾಣಿ
ಕರ್ನಾಟಕದಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಪ್ರಭಾವ ಕಡಿಮೆಯಾದ್ದರಿಂದ ವಿಜಯೇಂದ್ರ ನೇಮಿಸಲಾಗಿದೆ. ಸಂಸದ ಪ್ರತಾಪ ಸಿಂಹ ಈಗ ನಾಪತ್ತೆಯಾಗಿದ್ದಾರೆ. ಮೋದಿಯನ್ನು ದೇವರು ಎನ್ನುತ್ತಿದ್ದ ನಳಿನ್ ಕುಮಾರ್ ಕಟೀಲ್ ಬದಲಿಸಲು ಕಾರಣ ಏನು? ಎಂದು ಅವರು ಪ್ರಶ್ನಿಸಿದರು. ಬಿಜೆಪಿ ಆಂತರಿಕ ಸಮೀಕ್ಷೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ 2 ಸ್ಥಾನ ಮಾತ್ರ ಗೆಲ್ಲಲಿದೆ ಎಂಬ ಮಾಹಿತಿ ಇದೆ. ಮೋದಿ ಮತ್ತು ಜೆಡಿಎಸ್ ಇದ್ದ ಮೇಲೆ ಬಿ.ಎಸ್. ಯಡಿಯೂರಪ್ಪ ಯಾಕೇ ಬೇಕು ತಿಳಿಸುವಂತೆ ಅವರು ಒತ್ತಾಯಿಸಿದರು. ನಗರ ಕಾಂಗ್ರೆಸ್ ಅಧ್ಯ್ಯಕ್ಷ ಆರ್. ಮೂರ್ತಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಮಾಧ್ಯಮ ಸಂಚಾಲಕ ಕೆ. ಮಹೇಶ, ಸೇವಾದಳದ ಗಿರೀಶ್ ಇದ್ದರು.