ರಾಜ್ಯದ ಉಭಯ ಸದನಗಳಲ್ಲಿ ಅಂಗೀಕಾರ ಪಡೆದಿರುವ ರಾಜ್ಯ ಸರ್ಕಾರದ ‘ದ್ವೇಷ ಭಾಷಣ ತಡೆ ಕಾಯ್ದೆ’ ಅತ್ಯಂತ ಮಹತ್ವದ ಹಾಗೂ ಪ್ರಸ್ತುತ ಕಾಲಘಟ್ಟಕ್ಕೆ ಅತ್ಯಗತ್ಯವಾದ ಕಾಯ್ದೆ ಎಂದು ನಾನು ದೃಢವಾಗಿ ನಂಬುತ್ತೇನೆ.

ಬಿ.ಕೆ.ಹರಿಪ್ರಸಾದ್‌, ಕಾಂಗ್ರೆಸ್‌ ಹಿರಿಯ ಮುಖಂಡ

ಬೆಂಗಳೂರು (ಡಿ.24): ರಾಜ್ಯದ ಉಭಯ ಸದನಗಳಲ್ಲಿ ಅಂಗೀಕಾರ ಪಡೆದಿರುವ ರಾಜ್ಯ ಸರ್ಕಾರದ ‘ದ್ವೇಷ ಭಾಷಣ ತಡೆ ಕಾಯ್ದೆ’ ಅತ್ಯಂತ ಮಹತ್ವದ ಹಾಗೂ ಪ್ರಸ್ತುತ ಕಾಲಘಟ್ಟಕ್ಕೆ ಅತ್ಯಗತ್ಯವಾದ ಕಾಯ್ದೆ ಎಂದು ನಾನು ದೃಢವಾಗಿ ನಂಬುತ್ತೇನೆ. ಈ ಕಾಯ್ದೆ ಕುರಿತು ಸದನದಲ್ಲಿ ಸಾಧಕ-ಭಾಧಕ ಚರ್ಚಿಸುವುದಕ್ಕಿಂತ ಮೊದಲೇ ಕೆಲ ಹಿತಾಸಕ್ತಿಗಳ ಮುಖವಾಡಗಳು ಬಯಲಾದವು. ಈ ಮಸೂದೆಯಿಂದ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆಯಾಗುತ್ತಿದೆ ಎಂದು ಅಪಪ್ರಚಾರ ಶುರು ಮಾಡಿದರು. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಳೆದ 12 ವರ್ಷಗಳಿಂದ ಹತ್ತಿಕ್ಕುತ್ತಿರುವವರೇ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ.

ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ ಅಲ್ಲ: ನಮ್ಮ ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದ ಆರ್ಟಿಕಲ್ ಬಗ್ಗೆ ಇಲ್ಲಿ ಉಲ್ಲೇಖಿಸಲು ಇಚ್ಛಿಸುತ್ತೇನೆ. ಆರ್ಟಿಕಲ್ 19(1)(ಎ) ನಾಗರಿಕರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಒತ್ತಿ ಹೇಳಿದೆ. ಹಾಗಾದರೆ ಈಗ ನಮ್ಮ ಸರ್ಕಾರ ತರುತ್ತಿರುವ ಕಾಯ್ದೆ ಈ ಆರ್ಟಿಕಲ್‌ನ ವಿರುದ್ಧವಾಗಿಲ್ಲವೇ ಎಂಬ ಪ್ರಶ್ನೆ ಮೂಡಬಹುದು. ಖಂಡಿತಾ ಇಲ್ಲ, ನಮ್ಮ ಅದೇ ಸಂವಿಧಾನದ ಆರ್ಟಿಕಲ್ 19(2) ಸಾರ್ವಜನಿಕ ಶಾಂತಿ, ಸೌಹಾರ್ದತೆ, ರಾಷ್ಟ್ರದ ಏಕತೆ ಮತ್ತು ನೈತಿಕತೆಗಾಗಿ ಆರ್ಟಿಕಲ್ 19(1)(a) ಯ ಮೇಲೆ ನಿರ್ಬಂಧಗಳನ್ನು ವಿಧಿಸುವ ಅಧಿಕಾರವನ್ನು ಸರ್ಕಾರಕ್ಕೆ ನೀಡಿದೆ. ಹಾಗಾಗಿ ಈ ಕಾಯ್ದೆ ಸಂವಿಧಾನದ ಆರ್ಟಿಕಲ್ 19(2) ಅಡಿ ಬರಲಿದೆ ಎಂಬುದನ್ನು ಮೊದಲಿಗೆ ಸ್ಪಷ್ಟಪಡಿಸುತ್ತಿದ್ದೇನೆ.

ನಿಮಗೆ ನೆನಪಿರಬಹುದು. ಇತ್ತೀಚೆಗೆ ನಮ್ಮ ಕರ್ನಾಟಕದ ಕರಾವಳಿ ಭಾಗದಲ್ಲಿ ಸರಣಿ ಕೊಲೆಗಳು, ಕೋಮು ಗಲಭೆಗಳು ನಡೆದವು. ಅಮಾಯಕ ಹಿಂದಳಿದ ಜಾತಿಗೆ ಸೇರಿದ ಮಕ್ಕಳು ಕೊಲೆ ಮಾಡುತ್ತಿದ್ದಾರೆ, ಹಿಂದುಳಿದ ಜಾತಿಗೆ ಸೇರಿದ ಮಕ್ಕಳೇ ಕೊಲೆಯಾಗುತ್ತಿದ್ದಾರೆ, ಕೊನೆಗೆ ಹಿಂದುಳಿದ ಜಾತಿಗಳ ಮಕ್ಕಳೇ ಜೈಲಲ್ಲಿ ಕಂಬಿ ಎಣಿಸುತ್ತಿದ್ದಾರೆ. ಈ ಎಲ್ಲಾ ಗಲಭೆಗಳ ಹಿಂದೆ ಇದ್ದಿದ್ದು ಉದ್ರೇಕಕಾರಿ ದ್ವೇಷ ಭಾಷಣಗಳೇ ಹೊರತು ದೇಶಪ್ರೇಮದ ಭಾಷಣಗಳಲ್ಲ. ದ್ವೇಷ ಭಾಷಣ ಎಂದರೆ ಕೇವಲ ಬರೀ ಮಾತಲ್ಲ. ಅದು ಸಮಾಜ ವಿಭಜಿಸುವ ಕೋಮುವಾದಿಗಳ ಅಸ್ತ್ರ.

ದ್ವೇಷ ಭಾಷಣಗಳಿಂದ ಭಾರತ ತಲೆತಗ್ಗಿಸುವಂತಾಗಿದೆ: ದ್ವೇಷ ಭಾಷಣಗಳಿಂದ ಭಾರತ ಜಾಗತಿಕವಾಗಿಯೂ ತಲೆ ತಗ್ಗಿಸುವಂತಾಗಿದೆ. ಬಿಜೆಪಿ ಅಧಿಕೃತ ವಕ್ತಾರೆ ನೂಪೂರ್ ಶರ್ಮಾ ಹಾಗೂ ದೆಹಲಿಯ ಬಿಜೆಪಿ ಮಾಧ್ಯಮ ಘಟಕದ ಅಧ್ಯಕ್ಷ ನವೀನ್ ಕುಮಾರ್ ಜಿಂದಾಲ್ ಎಂಬುವವರು ಪ್ರವಾದಿ ಮೊಹಮ್ಮದ್‌ ಅವರ ಬಗ್ಗೆ ಮಾಧ್ಯಮಗಳಲ್ಲಿ ಆಡಿದ ದ್ವೇಷಪೂರಿತ ಮಾತುಗಳು ದೇಶದಲ್ಲಿ ಭಾರೀ ಹಿಂಸೆಗೆ ಕಾರಣವಾಯಿತು. ಜಾಗತಿಕವಾಗಿ ಭಾರತದ ಉತ್ಪನ್ನಗಳನ್ನು ನಿಷೇಧಿಸುವಂತೆ ಒತ್ತಡ ಶುರುವಾಯಿತು, ಕೊನೆಗೆ ಆಗಿನ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಕುವೈತ್ ಪ್ರವಾಸದಲ್ಲಿದ್ದಾಗ ದ್ವೇಷ ಭಾಷಣ ಬಗ್ಗೆ ಪ್ರತಿಕ್ರಿಯೆ ನೀಡವಂತಾಯಿತು. ಇದು ಭಾರತಕ್ಕೆ ರಾಜತಾಂತ್ರಿಕ ಹಿನ್ನಡೆಯಲ್ಲವೇ? ಭಾರತಕ್ಕೆ ಆದ ಜಾಗತಿಕ ಅವಮಾನವಲ್ಲವೇ? ಇದಕ್ಕೆಲ್ಲ ಕಾರಣ ಯಾರು?

ಅನುರಾಗ್ ಸಿಂಗ್ ಠಾಕೂರ್ ಎನ್ನುವ ಕೇಂದ್ರದ ಸಚಿವರೊಬ್ಬರು ದೆಹಲಿಯಲ್ಲಿ ಎನ್ಆರ್‌ಸಿ ಖಂಡಿಸಿ ಹೋರಾಟದಲ್ಲಿದ್ದ ವಿದ್ಯಾರ್ಥಿಗಳ ಕುರಿತು ‘ದೇಶ್‌ ಕೆ ಗದ್ದಾರೋಂಕೋ ಗೋಲಿ ಮಾರೋ ಸಾಲೋಂಕೋ’ ಎನ್ನುವ ಅಸಾಂವಿಧಾನಿಕ ಹೇಳಿಕೆ ನೀಡುತ್ತಾರೆ. ಈ ಹೇಳಿಕೆ ನೀಡಿದ ಕೂಡಲೇ ವಿದ್ಯಾರ್ಥಿಗಳ ಮೇಲೆ ಭೀಕರ ಗುಂಡಿನ ದಾಳಿ ನಡೆದಿದೆ. ಸಂವಿಧಾನದ ಮೇಲೆ ಪ್ರಮಾಣ ಮಾಡಿರುವ ಸಚಿವರು, ಜನಪ್ರತಿನಿಧಿಗಳೇ ಬಹಿರಂಗವಾಗಿ ದ್ವೇಷ ಭಾಷಣ ಮಾಡುವಾಗ ಸಂಘಟನೆಯ ಮುಖಂಡರು, ಪಕ್ಷದ ವಕ್ತಾರರಿಗೆ ಕಡಿವಾಣ ಹಾಕಲು ಸಾಧ್ಯವಿದೆಯೇ?

2023ರ ಒಂದೇ ವರ್ಷದಲ್ಲಿ 668 ದ್ವೇಷ ಭಾಷಣ ಕೇಸ್‌: ಐಎಚ್ಎಲ್‌ ಸಂಶೋಧನಾ ಸಂಸ್ಥೆಯ ವರದಿಯ ಅಂಶಗಳನ್ನು ನೋಡಿದರೆ ದಿನದಿಂದ ದಿನಕ್ಕೆ ಭಾರತದಲ್ಲಿ ಹೆಚ್ಚುತ್ತಿರುವ ದ್ವೇಷ ಭಾಷಣದ ಅಪಾಯಗಳ ಬಗ್ಗೆ ಅರ್ಥವಾಗುತ್ತದೆ. 2023ರಲ್ಲಿ ಒಂದೇ ವರ್ಷದಲ್ಲಿ ದೇಶದ ಹಲವು ಕಡೆ 668 ದ್ವೇಷ ಭಾಷಣ ಪ್ರಕರಣಗಳು ದಾಖಲಾಗಿದೆ. ಇದರಲ್ಲಿ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ 413 ಪ್ರಕರಣಗಳು ದಾಖಲಾಗಿದೆ. ಅಷ್ಟೇ ಅಲ್ಲ, ಅತಿ ಹೆಚ್ಚಿನ ದ್ವೇಷ ಭಾಷಣ ಪ್ರಕರಣಗಳು ದಾಖಲಾಗಿರುವುದು ಚುನಾವಣೆ ಸಂದರ್ಭದಲ್ಲಿ. ಹಾಗಾದರೆ ದ್ವೇಷ ಭಾಷಣದಿಂದ ಚುನಾವಣೆಯಲ್ಲಿ ಲಾಭ ಪಡೆಯುತ್ತಿರುವವರು ಯಾರು? ಇಂದು ಈ ಮಸೂದೆಯನ್ನು ವಿರೋಧ ಮಾಡುತ್ತಿರುವವರೇ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.

ಐಪಿಸಿ ಇದ್ದಿದ್ದರೆ ಈ ಮಸೂದೆಯ ಅಗತ್ಯ ಬರುತ್ತಿರಲಿಲ್ಲ: ದ್ವೇಷ ಭಾಷಣಗಳನ್ನು ತಡೆಯಲು ಈ ಹಿಂದೆ ಐಪಿಸಿಯಲ್ಲಿ ಅವಕಾಶ ಇತ್ತು. ಐಪಿಸಿ, ಇಂಡಿಯನ್ ಪಿನಲ್ ಕೋಡ್ ಈಗ ಅಸ್ತಿತ್ವದಲ್ಲಿ ಇದ್ದಿದ್ದರೆ ಈ ಕಾಯ್ದೆ ಮಂಡಿಸುವ ಅಗತ್ಯವೇ ಸರ್ಕಾರಕ್ಕೆ ಬರುತ್ತಿರಲಿಲ್ಲ. ಆದರೆ ಪ್ರಧಾನಿ ಮೋದಿ ಹಾಗೂ ಗೃಹ ಮಂತ್ರಿ ಅಮಿತ್ ಶಾ ಐಪಿಸಿ ಬದಲಿಗೆ ಬಿಎನ್ಎಸ್ ತೆಗೆದುಕೊಂಡು ಬಂದರು. ಹಿಂದೆ ಐಪಿಸಿಯಲ್ಲಿ ದ್ವೇಷ ಭಾಷಣ ತಡೆಗೂ ಸಶಕ್ತ ಸೆಕ್ಷನ್‌ಗಳಿದ್ದವು. ಆದರೆ ಈಗ ಬಿಎನ್ಎಸ್‌ನಲ್ಲಿ ದ್ವೇಷ ಭಾಷಣದ ಅಪರಾಧದ ಸೆಕ್ಷನ್‌ಗಳನ್ನು ದುರ್ಬಲಗೊಳಿಸಲಾಗಿದೆ. ಯಾವುದೇ ದ್ವೇಷ ಭಾಷಣ ಮಾಡಿ ಸಾವು-ನೋವಿಗೆ ಕಾರಣವಾಗುವ ಆರೋಪಿ ಬಿಎನ್ಎಸ್ ಸೆಕ್ಷನ್‌ಗಳ ಪ್ರಕಾರ ಸುಲಭವಾಗಿ ಜಾಮೀನು ಪಡೆಯಬಹುದು. ಕೆಳ ನ್ಯಾಯಾಲಯ ಜಾಮೀನು ನೀಡದಿದ್ದರೆ ಹೈಕೋರ್ಟ್ ಸುಲಭವಾಗಿ ಜಾಮೀನು ನೀಡಬಹುದು. ದ್ವೇಷ ಭಾಷಣದ ಆರೋಪಿಯನ್ನು ನೇರವಾಗಿ ಬಂಧಿಸುವ ಅಧಿಕಾರವೇ ಪೊಲೀಸರಿಗೆ ಇಲ್ಲ. ನಮ್ಮ ರಾಜ್ಯ ಸರ್ಕಾರ ಜಾರಿಗೆ ತಂದ ಕಾಯ್ದೆಯಡಿ ಅಂಥವರಿಗೆ ಜಾಮೀನು ನೀಡಲು ಪೊಲೀಸರಿಂದಲೂ, ಸೂಕ್ತ ವಿಚಾರಣೆಯಿಲ್ಲದೆ ಕೆಳ ನ್ಯಾಯಾಲಯದಿಂದಲೂ ಸಾಧ್ಯವಿಲ್ಲ. ಹಾಗಾಗಿ ಈ ಕಾಯ್ದೆ ಕೇವಲ ಕಾನೂನು ಅಲ್ಲ. ಇದು ಸಂವಿಧಾನ ರಕ್ಷಿಸುವ ಸಾಧನ.

ಈ ಕಾಯ್ದೆಯ ಅಗತ್ಯ ಯಾಕಿದೆ ಗೊತ್ತಾ?: ಮಾಧ್ಯಮ, ಸಾಮಾಜಿಕ ಜಾಲತಾಣ, ಸಾರ್ವಜನಿಕ ಸಭೆಗಳು ಎಲ್ಲೆಡೆ ಹೊಣೆಗಾರಿಕೆಯ ಕೊರತೆ ಕಾಣಿಸುತ್ತಿದೆ. ಹಾಗಾಗಿಯೇ ದ್ವೇಷ ಭಾಷಣಕಾರರು ಹೀರೋಗಳಾಗುತ್ತಿದ್ದಾರೆ. ದಕ್ಷಿಣ ಕನ್ನಡದ ಒಬ್ಬ ಸಂಘಪರಿವಾರದ ನಾಯಕನ(ಕಲ್ಲಡ್ಕ ಪ್ರಭಾಕರ್ ಭಟ್) ಮೇಲೆ 13 ದ್ವೇಷ ಭಾಷಣ ಪ್ರಕರಣಗಳಿವೆ. ಒಂದು ಪ್ರಕರಣದ ಜಾಮೀನು ಷರತ್ತು ಉಲ್ಲಂಘಿಸದೇ ಇನ್ನೊಂದು ಪ್ರಕರಣ ನಡೆಯಲು ಸಾಧ್ಯವಿಲ್ಲ. ಹಾಗಿದ್ದರೂ ಮತ್ತೊಂದು ಪ್ರಕರಣದಲ್ಲಿ ಹೇಗೆ ಜಾಮೀನು ಸಿಗುತ್ತದೆ? ಯಾಕೆಂದರೆ ಕಾಯ್ದೆಯ ಸೆಕ್ಷನ್‌ಗಳು ದುರ್ಬಲವಾಗಿದೆ. ಹೀಗಾಗಿ ನಾವು ಈ ಕಾಯ್ದೆ ಜಾರಿಗೆ ತಂದು ಪೊಲೀಸರು ಮತ್ತು ನ್ಯಾಯಾಂಗದ ಕೈ ಬಲಪಡಿಸಿದ್ದೇವೆ.

ಇದು ಎಲ್ಲರಿಗೂ ಅನ್ವಯಿಸುವ ಕಾಯ್ದೆ: ಇದು ಯಾವುದೇ ಧರ್ಮ, ಜಾತಿ, ಪಕ್ಷ, ಸಂಘಟನೆಗಳಿಗೆ ಸಂಬಂಧಿಸಿದ ಕಾಯ್ದೆಯಲ್ಲ. ಕರ್ನಾಟಕದ ಎಲ್ಲಾ ಜನಕೋಟಿಗೂ ಅನ್ವಯಿಸುವ ಕಾಯ್ದೆ. ರಾಜ್ಯ ಸರ್ಕಾರ ಟೀಕಾಕಾರರ ಬಾಯ್ಮುಚ್ಚಿಸಲು ದ್ವೇಷ ಭಾಷಣ ತಡೆ ಕಾಯ್ದೆ ತಂದಿದೆ ಎಂದು ಕೇಂದ್ರದ ಸಚಿವರಾದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಟೀಕೆ ಎನ್ನುವುದು ದ್ವೇಷ ಅಲ್ಲ. ಭಿನ್ನಾಭಿಪ್ರಾಯ ಎನ್ನುವುದು ಅಪರಾಧ ಅಲ್ಲ. ಅವರೆಡು ಪ್ರಜಾಪ್ರಭುತ್ವದ ಸೌಂದರ್ಯ. ಸರ್ಕಾರವನ್ನು, ವ್ಯವಸ್ಥೆಯನ್ನು, ಪಟ್ಟಭದ್ರ ಹಿತಾಸಕ್ತಿಗಳು, ಚಲನೆ ಕಳೆದುಕೊಂಡ ಗೊಡ್ಡು ಸಂಪ್ರದಾಯಗಳನ್ನು ಟೀಕಿಸುವ, ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕುಗಳನ್ನು ಈ ಕಾಯ್ದೆ ಮೊಟಕುಗೊಳಿಸಲ್ಲ. ಮೊಟಕುಗೊಳಿಸಬಾರದು ಕೂಡ. ಆದರೆ, ಹಿಂಸೆಗೆ ಪ್ರಚೋದನೆ, ಒಂದು ಸಮುದಾಯದ ವಿರುದ್ಧ ವಿಷ ಬೀಜ ಬಿತ್ತುವುದು, ಸಮಾಜವನ್ನು ಒಡೆಯುವ ಮಾತನಾಡುವುದು ಸ್ವಾತಂತ್ರ್ಯವಲ್ಲ. ಅದು ಅಪರಾಧ.

ಭಾರತದಲ್ಲಿ ಈವರೆಗೆ ದ್ವೇಷ ಭಾಷಣವನ್ನು ವ್ಯಾಖ್ಯಾನಿಸುವ ಅಥವಾ ಶಿಕ್ಷಿಸುವ ಸ್ವತಂತ್ರ ಕಾನೂನು ಇಲ್ಲ. ಬದಲಾಗಿ, ಪೊಲೀಸರು ಬಿಎನ್‌ಎಸ್ ಚದುರಿದ ಬಿಡಿ ಬಿಡಿ ಸೆಕ್ಷನ್‌ಗಳನ್ನು ಅವಲಂಬಿಸಬೇಕಿದೆ. ಹೀಗಾಗಿ ದ್ವೇಷ ಭಾಷಣದ ಪ್ರಕರಣದಲ್ಲಿ ಆಗಾಗ್ಗೆ ಬಂಧನ ಆಗುತ್ತಿದ್ದರೂ, ಶಿಕ್ಷೆ ವಿಧಿಸುವಿಕೆ ವಿರಳ. ಎನ್‌ಸಿಆರ್‌ಬಿ ರಿಪೋರ್ಟ್ 2020 ರಲ್ಲಿ ಕೇವಲ 20.2%. ಆರೋಪಿಗಳಿಗೆ ಮಾತ್ರ ಶಿಕ್ಷೆ ಪ್ರಕಟವಾಗಿದೆ. ದ್ವೇಷ ಭಾಷಣ ಎನ್ನುವ ಅಪರಾಧಗಳು ಸಂಜ್ಞೇಯವಾಗಿದ್ದು (ಕಾಗ್ನಿಜೇಬಲ್) ಪೊಲೀಸರಿಗೆ ವಾರಂಟ್ ಇಲ್ಲದೆ ಬಂಧಿಸಲು ಅವಕಾಶ ನೀಡುತ್ತದೆ. ಆದರೆ ಬಿಎನ್ಎಸ್ ಪ್ರಕಾರ ಅದು ಸಾಧ್ಯವಾಗುತ್ತಿರಲಿಲ್ಲ. ಸೆಕ್ಷನ್ 66A ಐಟಿ ಕಾಯ್ದೆ ರದ್ದುಗೊಳಿಸಿದ ನಂತರ ಆನ್‌ಲೈನ್ ದ್ವೇಷ ಭಾಷಣ ವಿರುದ್ಧ ಕಾಯ್ದೆಯೇ ಇಲ್ಲದಂತಾಗಿದೆ. ಹೀಗಾಗಿಯೇ ನಾವು ದ್ವೇಷ ಭಾಷಣ ತಡೆ ಕಾಯ್ದೆ ಜಾರಿಗೆ ತಂದಿದ್ದೇವೆ.

ವಿಚಾರಣೆಯಿಲ್ಲದೆ ಕೆಳ ನ್ಯಾಯಾಲಯದಿಂದಲೂ ಸಾಧ್ಯವಿಲ್ಲ

ದ್ವೇಷ ಭಾಷಣಗಳನ್ನು ತಡೆಯಲು ಈ ಹಿಂದೆ ಐಪಿಸಿಯಲ್ಲಿ ಅವಕಾಶ ಇತ್ತು. ಐಪಿಸಿ, ಇಂಡಿಯನ್ ಪಿನಲ್ ಕೋಡ್ ಈಗ ಅಸ್ತಿತ್ವದಲ್ಲಿ ಇದ್ದಿದ್ದರೆ ಈ ಕಾಯ್ದೆ ಮಂಡಿಸುವ ಅಗತ್ಯವೇ ಸರ್ಕಾರಕ್ಕೆ ಬರುತ್ತಿರಲಿಲ್ಲ. ಆದರೆ ಪ್ರಧಾನಿ ಮೋದಿ ಹಾಗೂ ಗೃಹ ಮಂತ್ರಿ ಅಮಿತ್ ಶಾ ಐಪಿಸಿ ಬದಲಿಗೆ ಬಿಎನ್ಎಸ್ ತೆಗೆದುಕೊಂಡು ಬಂದರು. ಹಿಂದೆ ಐಪಿಸಿಯಲ್ಲಿ ದ್ವೇಷ ಭಾಷಣ ತಡೆಗೂ ಸಶಕ್ತ ಸೆಕ್ಷನ್‌ಗಳಿದ್ದವು. ಆದರೆ ಈಗ ಬಿಎನ್ಎಸ್‌ನಲ್ಲಿ ದ್ವೇಷ ಭಾಷಣದ ಅಪರಾಧದ ಸೆಕ್ಷನ್‌ಗಳನ್ನು ದುರ್ಬಲಗೊಳಿಸಲಾಗಿದೆ. ಯಾವುದೇ ದ್ವೇಷ ಭಾಷಣ ಮಾಡಿ ಸಾವು-ನೋವಿಗೆ ಕಾರಣವಾಗುವ ಆರೋಪಿ ಬಿಎನ್ಎಸ್ ಸೆಕ್ಷನ್‌ಗಳ ಪ್ರಕಾರ ಸುಲಭವಾಗಿ ಜಾಮೀನು ಪಡೆಯಬಹುದು. ಕೆಳ ನ್ಯಾಯಾಲಯ ಜಾಮೀನು ನೀಡದಿದ್ದರೆ ಹೈಕೋರ್ಟ್ ಸುಲಭವಾಗಿ ಜಾಮೀನು ನೀಡಬಹುದು. ದ್ವೇಷ ಭಾಷಣದ ಆರೋಪಿಯನ್ನು ನೇರವಾಗಿ ಬಂಧಿಸುವ ಅಧಿಕಾರವೇ ಪೊಲೀಸರಿಗೆ ಇಲ್ಲ. ನಮ್ಮ ರಾಜ್ಯ ಸರ್ಕಾರ ಜಾರಿಗೆ ತಂದ ಕಾಯ್ದೆಯಡಿ ಅಂಥವರಿಗೆ ಜಾಮೀನು ನೀಡಲು ಪೊಲೀಸರಿಂದಲೂ, ಸೂಕ್ತ ವಿಚಾರಣೆಯಿಲ್ಲದೆ ಕೆಳ ನ್ಯಾಯಾಲಯದಿಂದಲೂ ಸಾಧ್ಯವಿಲ್ಲ. ಹಾಗಾಗಿ ಈ ಕಾಯ್ದೆ ಕೇವಲ ಕಾನೂನು ಅಲ್ಲ. ಇದು ಸಂವಿಧಾನ ರಕ್ಷಿಸುವ ಸಾಧನ.