ಕಲಬುರಗಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದ ನಾಯಕತ್ವ ಗೊಂದಲವನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಸಿಎಂ ಬದಲಾವಣೆ ಸದ್ಯಕ್ಕಿಲ್ಲ ಎಂದ ಅವರು, ಪಂಚರಾಜ್ಯಗಳ ಚುನಾವಣಾ ಫಲಿತಾಂಶಗಳ ಬಗ್ಗೆಯೂ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಕೆಲವು ರಾಜ್ಯಗಳಲ್ಲಿ ಮೈತ್ರಿಕೂಟಗಳಿಗೆ ಗೆಲುವಿನ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಲವು ಮಹತ್ವದ ರಾಜಕೀಯ ವಿಷಯಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ರಾಜ್ಯ ರಾಜಕೀಯದ ನಾಯಕತ್ವ ಗೊಂದಲದಿಂದ ಹಿಡಿದು ಪಂಚರಾಜ್ಯ ಚುನಾವಣೆಗಳ ಫಲಿತಾಂಶದವರೆಗೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ರಾಜ್ಯದಲ್ಲಿ ನಾಯಕತ್ವ ಗೊಂದಲ ಬಗ್ಗೆ ಹೇಳಿದ್ದೇನು?

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಕುರಿತು ಉಂಟಾಗಿರುವ ಗೊಂದಲದ ಬಗ್ಗೆ ಮಾತನಾಡಿದ ಖರ್ಗೆ, ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಲಾಗುವುದು ಎಂದು ಹೇಳಿದರು. ತಮ್ಮನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಯೋಗ್ಯ ಎಂದು ಕೆಲವರು ಹೇಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರು ಹೇಳ್ತಾರೆ, ನೀವು ಹೇಳ್ತೀರಿ, ಮೇಲಿನವರು (ಹೈಕಮಾಂಡ್) ಹೇಳ್ತಾರೆ. ಆದರೆ ನಮ್ಮ ಹಣೆಬರಹವೂ ಇರಬೇಕು. ಹಣೆಬರಹ ಅಂದರೆ ಅದು ಕೇವಲ ಅದೃಷ್ಟವಲ್ಲ, ಅದು ನಮ್ಮ ಐಡಿಯಾಲಜಿ, ಮತ್ತು ಪಕ್ಷಕ್ಕಾಗಿ ನಾವು ಇಷ್ಟು ವರ್ಷಗಳಿಂದ ಮಾಡಿದ ಶ್ರಮವೂ ಸೇರಿದೆ ಎಂದು ಖರ್ಗೆ ಸ್ಪಷ್ಟಪಡಿಸಿದರು.

ಹೈಕಮಾಂಡ್ ಪಾತ್ರ ಮತ್ತು ಸಿಎಂ ಬದಲಾವಣೆ ಪ್ರಶ್ನೆ

ಪಕ್ಷದ ಪ್ರಮುಖ ನಿರ್ಧಾರಗಳನ್ನು ಸಾಮಾನ್ಯವಾಗಿ ಸೋನಿಯಾ ಗಾಂಧಿ ಅವರು ಕೈಗೊಳ್ಳುತ್ತಾರೆ ಎಂದು ಖರ್ಗೆ ತಿಳಿಸಿದರು. ಈಗ ರಾಜ್ಯದಲ್ಲಿ ಮುಖ್ಯಮಂತ್ರಿ ಇದ್ದಾರೆ. ಆದ್ದರಿಂದ ಸಿಎಂ ಬದಲಾವಣೆ ಬಗ್ಗೆ ತಕ್ಷಣದ ಯಾವುದೇ ಪ್ರಶ್ನೆ ಇಲ್ಲ. ಆದರೆ ಅಂತಹ ಪರಿಸ್ಥಿತಿ ಬಂದರೆ, ನಾವು ಎಲ್ಲರೂ ಸೇರಿ ಚರ್ಚೆ ಮಾಡುತ್ತೇವೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ನಾವು ಎಲ್ಲರೂ ಕೂಡಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸದ್ಯಕ್ಕೆ ಸಿಎಂ ಬದಲಾವಣೆ ಬಗ್ಗೆ ಮಾತನಾಡುವ ಸಮಯ ಬಂದಿಲ್ಲ; ಸಮಯ ಬಂದಾಗ ನೋಡೋಣ ಎಂದು ಹೇಳಿದರು.

ತಮಿಳುನಾಡು ಮತ್ತು ಕೇರಳದಲ್ಲಿ ಮೈತ್ರಿಗೆ ಮುನ್ನಡೆ

ಪಂಚರಾಜ್ಯ ಚುನಾವಣೆಗಳ ಫಲಿತಾಂಶದ ಕುರಿತು ಮಾತನಾಡಿದ ಖರ್ಗೆ, ಕೆಲವು ರಾಜ್ಯಗಳಲ್ಲಿ ಸ್ಪಷ್ಟತೆ ಇದ್ದರೂ, ಇನ್ನೂ ಕೆಲವು ಕಡೆ ಗೊಂದಲದ ಸ್ಥಿತಿ ಇದೆ ಎಂದು ಹೇಳಿದರು. ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಗೆ ಸ್ಪಷ್ಟ ಬಹುಮತ ಸಿಗುವ ಸಾಧ್ಯತೆ ಇದೆ ಎಂದು ಖರ್ಗೆ ಹೇಳಿದರು. ಅದೇ ರೀತಿ ಕೇರಳದಲ್ಲಿ ಯುಡಿಎಫ್ ಮೈತ್ರಿಗೆ ಬಹುಮತ ಲಭ್ಯವಾಗುವ ನಿರೀಕ್ಷೆಯೂ ಇದೆ ಎಂದು ಅವರು ತಿಳಿಸಿದ್ದಾರೆ.

ಅಸ್ಸಾಂ ಮತ್ತು ಪಾಂಡಿಚೇರಿ, ಸ್ಪರ್ಧಾತ್ಮಕ ಪೈಪೋಟಿ

ಅಸ್ಸಾಂನಲ್ಲಿ ಪಕ್ಷ ನಿರೀಕ್ಷಿಸಿದ್ದಷ್ಟು ಸ್ಥಾನಗಳು ಸಿಗುತ್ತಿಲ್ಲ ಎಂಬ ವರದಿಗಳು ಇದ್ದರೂ, ಅಂತಿಮ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡುವ ವಿಶ್ವಾಸವಿದೆ ಎಂದು ಖರ್ಗೆ ಹೇಳಿದ್ದಾರೆ. ಪಾಂಡಿಚೇರಿಯಲ್ಲಿ ಬಿಜೆಪಿ ವಿರುದ್ಧ ಸಮಬಲದ ಹೋರಾಟ ನಡೆದಿದ್ದು, ಅಲ್ಲಿ ಕೂಡ ತೀವ್ರ ಪೈಪೋಟಿ ಕಂಡುಬಂದಿದೆ ಎಂದು ಅವರು ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ಹಣಾಹಣಿ

ಪಶ್ಚಿಮ ಬಂಗಾಳದಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಖರ್ಗೆ ಹೇಳಿದರು. ಟಿಎಂಸಿಗೆ ಮುನ್ನಡೆ ಇದೆ ಎಂಬ ಮಾಹಿತಿ ಇದ್ದರೂ, ಬಿಜೆಪಿ ಮತ್ತು ಅವರ ಮೈತ್ರಿ ಪಕ್ಷಗಳು ಒತ್ತಡ ತಂತ್ರಗಳನ್ನು ಬಳಸಿಕೊಂಡಿವೆ. ಕೇಂದ್ರ ಪಡೆಗಳನ್ನು ಬಳಸಿಕೊಂಡು ಚುನಾವಣೆಯಲ್ಲಿ ದಬ್ಬಾಳಿಕೆ ಮಾಡಿದ್ದಾರೆ ಎಂದು ಆರೋಪಿಸಿದರು. ಬಂಗಾಳದಲ್ಲಿ ಕಾಂಗ್ರೆಸ್ ಪಕ್ಷ ಮೊದಲು ಬಲವಾಗಿರಲಿಲ್ಲ. ಈ ಬಾರಿ ನಾವು ಸ್ವತಂತ್ರವಾಗಿ ಸ್ಪರ್ಧಿಸಿದ್ದೇವೆ. ಪಕ್ಷವನ್ನು ಬಲಪಡಿಸಲು ಪ್ರಯತ್ನಿಸುತ್ತಿದ್ದು, ಈ ಬಾರಿ ಉತ್ತಮ ಬೆಳವಣಿಗೆ ಕಾಣಬಹುದು,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಟಿಎಂಸಿ ಬೆಂಬಲ ಪ್ರಶ್ನೆ

ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಬೆಂಬಲ ನೀಡುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖರ್ಗೆ, “ಮೊದಲು ಫಲಿತಾಂಶ ಬರಲಿ, ನಂತರ ನೋಡೋಣ,” ಎಂದು ತಿಳಿಸಿದ್ದಾರೆ. ಒಟ್ಟಾರೆ, ರಾಜ್ಯದಲ್ಲಿ ನಾಯಕತ್ವ ಗೊಂದಲ ಶೀಘ್ರದಲ್ಲೇ ನಿವಾರಣೆಯಾಗಲಿದೆ ಎಂಬ ಭರವಸೆ ನೀಡಿದ ಖರ್ಗೆ, ಸಿಎಂ ಬದಲಾವಣೆ ವಿಚಾರದಲ್ಲಿ ಯಾವುದೇ ತುರ್ತು ನಿರ್ಧಾರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಪಂಚರಾಜ್ಯ ಚುನಾವಣೆಯ ಫಲಿತಾಂಶಗಳು ಮಿಶ್ರವಾಗಿದ್ದರೂ, ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಉತ್ತಮ ಸಾಧನೆ ಮಾಡಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.