Asianet Suvarna News Asianet Suvarna News

ಬಿಜೆಪಿಯ ಮಣಿಕಂಠ ರಾಥೋಡ್ ಪತ್ರಿಕಾಗೋಷ್ಠಿ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ದಾಳಿ!

ಕಳೆದ 2 ದಿನಗಳ ಹಿಂದಷ್ಟೆ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅಲ್ಲಿಂದ ಬಿಡುಗಡೆಯಾದ ಬೆನ್ನಲ್ಲೇ ಶನಿವಾರ ಸುದ್ದಿಗೋಷ್ಠಿಗೆ ಮುಂದಾದಾಗ ಪತ್ರಿಕಾ ಭವನ, ಜಿಪಂ ಕಚೇರಿ ಸಮುಚ್ಚಯದ ಅಂಗಳದಲ್ಲೆಲ್ಲಾ ಹೈಡ್ರಾಮಾ ನಡೆಯಿತು.

BJPs Manikant Rathore press conference attacked by Congress workers at kalaburagi rav
Author
First Published Dec 10, 2023, 4:39 AM IST

ಕಲಬುರಗಿ (ಡಿ.10) ಕಳೆದೆರಡು ದಿನಗಳ ಹಿಂದಷ್ಟೆ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅಲ್ಲಿಂದ ಬಿಡುಗಡೆಯಾದ ಬೆನ್ನಲ್ಲೇ ಶನಿವಾರ ಸುದ್ದಿಗೋಷ್ಠಿಗೆ ಮುಂದಾದಾಗ ಪತ್ರಿಕಾ ಭವನ, ಜಿಪಂ ಕಚೇರಿ ಸಮುಚ್ಚಯದ ಅಂಗಳದಲ್ಲೆಲ್ಲಾ ಹೈಡ್ರಾಮಾ ನಡೆಯಿತು.

ಮಣಿಕಂಠ ಸುದ್ದಿಗೋಷ್ಠಿ ಇರೋ ವಿಚಾರ ತಿಳಿಯುತ್ತಿದ್ದಂತೆಯೇ ಬರೋಬ್ಬರಿ ಬೆಳಗಿನ 9 ಗಂಟೆಗೇ ಪತ್ರಿಕಾ ಭವನದ ಮುಂದೆ ಪೊಲೀಸ್‌ ವ್ಯಾನ್‌, ಖಾಕಿ ಕಾವಲು ಹಾಕಲಾಗಿತ್ತು. 50ರಿಂದ 60 ಮಂದಿ ಪೊಲೀಸ್‌ ಸಿಬ್ಬಂದಿ, ಪಿಐ ದರ್ಜೆ ಅಧಿಕಾರಿಗಳು ಅಲ್ಲಿದ್ದು ಬಿಗಿ ಭದ್ರತೆ ಒದಗಿಸಿದ್ದರು.

ಬಿಜೆಪಿ ತೊರೆದರೆ ಕಾಂಗ್ರೆಸ್‌ನಿಂದನಿಗಮಾಧ್ಯಕ್ಷ ಹುದ್ದೆ ಆಮಿಷ: ಮಣಿಕಂಠ ಆರೋಪ

ಮಣಿಕಂಠ ರಾಠೋಡ ಸುದ್ದಿಗೋಷ್ಠಿ ನಡೆಸಿ ಹೊರಬರುತ್ತಿದ್ದಂತೆಯೇ ಈತನನ್ನು ಘೇರಾವ್‌ ಹಾಕಲು ಮುಂದಾದ ಕಾಂಗ್ರೆಸ್‌ ಕಾರ್ಯಕರ್ತರು, ಪಾಲಿಕೆ ಮಾಜಿ ಸದಸ್ಯ ರಾಜು ಕಪನೂರ್‌ ಅಭಿಮಾನಿಗಳು ಧಿಕ್ಕಾರದ ಘೋಷಣೆ ಕೂಗಲು ಶುರು ಮಾಡಿದಾಗ ಪತ್ರಿಕಾ ಭವನ ಹಾಗೂ ಜಿಪಂ ಕಚೇರಿ ಆವರಣದಲ್ಲಿ ಉದ್ರಿಕ್ತ ವಾತಾವರಣ ಉಂಟಾಗಿತ್ತು. ಉದ್ರಿಕ್ತ ಗುಂಪುಗಳನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಡಬೇಕಾಯ್ತು.

ಮಣಿಕಂಠ ರಾಠೋಡ ಪತ್ರಿಕಾಗೋಷ್ಠಿ ಮಾಡಿ ತನ್ನ ಕೆಂಪು ಬಣ್ಣದ ಕಾರಲ್ಲಿ ಹೊರಗೆ ಹೋಗುತ್ತಿರೋವಾಗ ರಾಜು ಕಪನೂರ್‌ ಗುಂಪಿನ ಅಭಿಮಾನಿಗಳ ಬಳಗದವರು ಅವರೂ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ಬಂದರಲ್ಲದೆ ಮಣಿಕಂಠ ಗೋ ಬ್ಯಾಕ್‌, ಧಿಕ್ಕಾರ ಎಂದು ಹೇಳಲಾರಂಭಿಸಿದಾಗ ದಾಂಧಲೆ ಶುರುವಿಟ್ಟಿತ್ತಾದರೂ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ಬಂದು ಪರಿಸ್ತಿತಿ ತಿಳಿ ಮಾಡುವಲ್ಲಿ ಯಶಸ್ವಿಯಾದರು.

ನಾನೆಂದರೆ ನಿಮಗೆ ಭಯವೇಕೆ?:

ಮಣಿಕಂಠ ಎಂದರೆ ನಿಮಗೆ ಭಯ ಯಾಕೆ? ಇಷ್ಟೆಲ್ಲಾ ಕೇಸ್‌ ಇದ್ದವನಿಗೆ ಬಿಜೆಪಿ ಟಿಕೆಟ್‌ ಕೊಡುತ್ತದೆ ಯಾಕೆ ಎಂದು ಪದೇಪದೇ ಹೇಳುತ್ತಿದ್ದೀರಿ? ನಿಮಗೆ ನಿಜಕ್ಕೂ ನಾನೆಂದರೆ ಭೀತಿ ಇರೋದು ಸಾಬೀತಾಗದೆ ಎಂದು ದೂರಿದ ರಾಠೋಡ, ಭಯದಿಂದಲೇ ನನ್ನಮೇಲೆ ಕೇಸ್‌ ಹಾಕಿಸುತ್ತಿದ್ದೀರಿ, ಆದರೆ ನಿಮ್ಮ ಸುಳ್ಳು ಕೇಸ್‌ಗಳಿಂದ ಅಂಜಲಾರೆನೆಂದರು.

ಪೊಲೀಸ್‌ ಬಳಸಿ ಸುಳ್ಳು ಕೇಸ್‌ ತಾವು ಹಾಕಿಸುತ್ತಿದ್ದರೂ ಅಂಬೇಡ್ಕರ್‌ ಅವರು ನಮಗೆ ನೀಡಿರುವ ಸಂವಿಧಾನದ ಆಸರೆಯಲ್ಲಿರುವ ನಾವು ಎದೆಗುಂದದೆ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ, ತಮ್ಮ ಮೇಲೆ ಹಲ್ಲೇ ನಡೆದಿರೋದು ನೂರಕ್ಕೆ ನೂರು ನಿಜ. ಪೊಲೀಸರ ಕಟ್ಟುಕಥೆ ಯಾರೂ ನಂಬೋದಿಲ್ಲವೆಂದು ಮಣಿಕಂಠ ಹೇಳಿದರು.

ಮತ್ತೆ ಪ್ರಿಯಾಂಕ್‌ ಖರ್ಗೆ ವಿರುದ್ಧ ಮಣಿಕಂಠ ಗುಟುರು

3 ದಿನಗಳ ಹಿಂದಷ್ಟೇ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸಚಿವ ಪ್ರಿಯಾಂಕ್‌ ಖರ್ಗೆ ನಮ್ಮ ಕುಟುಂಬವನ್ನು ಥರ್ಡ್‌ ಕ್ಲಾಸ್‌ ಎಂದು ಜರಿದಿದ್ದಾರೆಂದು ಹೇಳುತ್ತಲೇ ತಿರುಗೇಟು ನೀಡಿರುವ ಮಣಿಕಂಠ ರಾಠೋಡ ಸ್ವಾಮಿ ನಾವೂ ಗುರುಮಿಠಕಲ್‌ನವರೇ, ಎಲ್ಲಿ ಪ್ರಿಯಾಂಕ್‌ ಅವರ ತಂದೆ ಡಾ. ಮಲ್ಲಿಕಾರ್ಜುನ ಖರ್ಗೆ ಸತತ 11 ಸಾರಿ ಗೆದ್ದು ಬಂದರೋ ಅದೇ ಅಸೆಂಬ್ಲಿ ಕ್ಷೇತ್ರದಿಂದ ಬಂದವರು. ನಾವೆಲ್ಲರೂ ಹೀಗೆ ಥರ್ಡ್‌ ಕ್ಲಾಸ್‌ ಆಗಿರಲು ದೊಡ್ಡ ಖರ್ಗೆಯವರೇ ಕಾರಣವೆಂದು ಜರಿದರು.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಣಿಕಂಠ ತಮ್ಮ ಮೇಲೆ ನ.18ರಂದು ನಡೆದದ್ದು ಹಲ್ಲೆಯೇ ಆಗಿದೆ. ಅದನ್ನು ಬೇಕೆಂದೇ ಅಪಪಘಾತವೆಂದು ಬಿಂಬಿಸಿ ಮರೆಮಾಚಲಾಗುತ್ತಿದೆ. ಇದರಲ್ಲಿ ಪೊಲೀಸರು ಸಹ ಪ್ರಿಯಾಂಕ್‌ ಮಾತು ಕೇಳಿ ಅವರಂತೆಯೇ ತಲೆದೂಗುತ್ತಿದ್ದಾರಂದು ದೂರಿದರು. ಅಪಘಾತವಾಗಿದ್ದು ತನ್ನ ಪತ್ನಿಯ ಕಾರ್‌, ಅದನ್ನು ರಿಪೇರಿಗೆ ಕಳುಹಿಸಲಾಗಿದೆ. ಆದರೆ ನ.18ರಂದು ತಮ್ಮ ಮೇಲೆ ಹಲ್ಲೆ ನಡೆದದ್ದು ನಿಜವೆಂದು ಮಣಿಕಂಠ ಪುನರುಚ್ಚರಿಸಿದರು.

ಪೊಲೀಸರು ಹಾಗೂ ವಕೀಲರ ನಡುವೆ ಬಹಿರಂಗ ಸಂಘರ್ಷಕ್ಕೆ ವಿರಾಮ ?  ಹೈಕೋರ್ಟ್ ಸೂಚನೆ ಏನು?

ನನ್ನ ಮೇಲೆ ಕೇಸ್‌ಗಳಿವೆ ಎಂದು ಆರೋಪ ಮಾಡುತ್ತಿರುವ ಪ್ರಿಯಾಂಕ್‌ ಖರ್ಗೆ ಮೊದಲು ಕೇಸ್‌ ಗಳ ಬಗ್ಗೆ ಅಧ್ಯಯನ ಮಾಡಬೇಕು, ನಂತರ ಮಾತನಾಡಬೇಕು. ಇವೆಲ್ಲ ಯಾರದೋ ಒತ್ತಡದಲ್ಲಾದ ಕೇಸ್‌ಗಳು, ಇವೆಲ್ಲ ಕೇಸ್‌ಗಳನ್ನು ಇಸಿ ಆಕ್ಟ್‌ ಅಡಿಯಲ್ಲಿ ಉಚ್ಚ ನ್ಯಾಯಾಲಯದಲ್ಲಿ ಸುಳ್ಳು, ಆಧಾರ ರಹಿತ, ಸತ್ಯಕ್ಕೆ ದೂರ ಎಂದು ಪರಿಗಣಿಸಲಾಗಿದೆ. ಮಕ್ಕಳ ಹಾಲಿನ ಪೌಡರ್‌ ಕಳವಿನ ವಿಚಾರದಲ್ಲಿನ ತಮ್ಮ ಮೇಲಿನ ಕೇಸ್‌ ಬಗ್ಗೆ ಯಾದಗಿರಿ ಜಿಲ್ಲಾ ಸತ್ರ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಹೀಗಾಗಿ ವಿಷಯ ಅರಿಯದೆ ಹಳೇ ಸಂಗತಿಗಳನ್ನು ಪುನರುಚ್ಚರಿಸಬೇಡಿ ಎಂದು ಮಣಿಕಂಠ ರಾಠೋಡ ಆಗ್ರಹಿಸಿದರು.

Follow Us:
Download App:
  • android
  • ios