ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಬಿಜೆಪಿಯವರ ಯಾವ ಪ್ರಯತ್ನವೂ ಸಫಲ ಆಗುವುದಿಲ್ಲ. ನಮ್ಮ ಸರ್ಕಾರ ಐದು ವರ್ಷ ಪೂರ್ಣಗೊಳಿಸಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. 

ಶಿವಮೊಗ್ಗ (ಮಾ.03): ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಬಿಜೆಪಿಯವರ ಯಾವ ಪ್ರಯತ್ನವೂ ಸಫಲ ಆಗುವುದಿಲ್ಲ. ನಮ್ಮ ಸರ್ಕಾರ ಐದು ವರ್ಷ ಪೂರ್ಣಗೊಳಿಸಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ ಎನ್ನುತ್ತಾರೆ. ಹೌದು, ಗ್ಯಾರಂಟಿ ಯೋಜನೆಗಳ ಕಾರಣದಿಂದಲೇ ಕಾಂಗ್ರೆಸ್‌ ಅಧಿಕಾರಲ್ಲಿದೆ. ಬಿಜೆಪಿಯವರ ಮನೆಯಲ್ಲಿ ಕೂಡ ಗ್ಯಾರಂಟಿ ಯೋಜನೆಯ ಫಲಾನುಭವಿಗಳಿದ್ದಾರೆ. ಬಿಜೆಪಿಯವರು ಭಾವನಾತ್ಮಕ, ಸೂಕ್ಷ್ಮ ವಿಷಯಗಳು ಡೂಪ್ಲಿಕೇಟ್ ಆಗಿವೆ. 

ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದ ಬಿಜೆಪಿಯವರು ಈಗ ಮೋದಿ ಗ್ಯಾರಂಟಿ ಮಾಡಿದ್ದಾರೆ. ಸಿದ್ದರಾಮಯ್ಯನವರ ಗ್ಯಾರಂಟಿ ಮುಂದೆ ಮೋದಿ ಗ್ಯಾರಂಟಿಯನ್ನು ಜನರು ಓಡಿಸುತ್ತಾರೆ ಎಂದು ಕುಟುಕಿದರು. ರಾಜ್ಯ ಬಿಜೆಪಿ ಅಧ್ಯಕ್ಷರು ಶೇ.20ರಷ್ಟು ಜನರಿಗೂ ಗ್ಯಾರಂಟಿ ಯೋಜನೆ ತಲುಪಿಲ್ಲ ಎಂದು ಹೇಳಿದ್ದಾರೆ. ಅವರ ತೋಟದ ಮನೆ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಗ್ಯಾರಂಟಿ ಯೋಜನೆ ಲಾಭ ಪಡೆಯುತ್ತಿದ್ದಾರೆ. ಈಗ ಭಾವನಾತ್ಮಕತೆ ಎಲ್ಲ ಹೋಗಿದೆ, ಅದು ಡೂಪ್ಲಿಕೇಟ್ ಎಂದು ಜನರಿಗೆ ಗೊತ್ತಾಗಿದೆ. 

ಬಾಂಬ್ ಸ್ಫೋಟ ಪ್ರಕರಣ: ಸಿಎಂ ರಾಜೀನಾಮೆಗೆ ಶಾಸಕ ಬಸನಗೌಡ ಯತ್ನಾಳ್‌ ಒತ್ತಾಯ

ವಿಧಾನಸಭಾ ಚುನಾವಣೆ ವೇಳೆ ಜನರಿಗೆ ಹೊಟ್ಟೆ ಹಸಿದಿತ್ತು. ಹಾಗಾಗಿ ನಮ್ಮನ್ನು ಪುರಸ್ಕರಿಸಿದ್ದಾರೆ ಎಂದು ಹೇಳಿದರು. ಕಳೆದ ಚುನಾವಣೆಯಲ್ಲಿ ಬಿಜೆಪಿಯವರು ಜೈ ಆಂಜನೇಯ ಅಂದಿದ್ದರು. ಆದರೂ ಸೋತರು, ಏಕೆಂದರೆ ಮೋದಿ, ಬಿಜೆಪಿಯವರ ಮೇಲೆ ಆಂಜನೇಯನಿಗೆ ವಿಶ್ವಾಸವಿರಲಿಲ್ಲ. ನಮ್ಮ ಮೇಲೆ ಇತ್ತು. ವಿಧಾನಸಭೆ ರೀತಿ ಲೋಕಸಭೆಯಲ್ಲೂ ಗೆದ್ದು ಕಾಂಗ್ರೆಸ್‌ ದೇಶದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಕೊನೆವರೆಗೂ ನಿಮ್ಮ ಜೊತೆ ಇರುತ್ತೇನೆ: ಮಕ್ಕಳು ದೇವರು ಸಮಾನ. ಶಿಕ್ಷಣ ಸಚಿವನಾಗಿ ದೇವರ ಸ್ಥಾನದಲ್ಲಿರುವ ಮಕ್ಕಳ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿದೆ. ಒಬ್ಬ ಬಂಗಾರಪ್ಪನವರನ್ನು ಕಳೆದುಕೊಂಡರೂ ಲಕ್ಷಾಂತರ ಸಂಖ್ಯೆಯಲ್ಲಿ ಬಂಗಾರಪ್ಪನವರನ್ನು ನಿಮ್ಮ ರೂಪದಲ್ಲಿ ಕೊಟ್ಟಿದ್ದಾನೆ. ನನ್ನ ಕೊನೆ ಉಸಿರು ಇರೋವರೆಗೆ ನಿಮ್ಮ ಜೊತೆ ಇರುತ್ತೇನೆ ಎಂದು ಸಚಿವರು ಹೇಳಿದರು.

ಗೀತಾ ಅವಶ್ಯಕತೆ ಪಕ್ಷಕ್ಕಿದೆ: ಮುಂಬರುವ ಲೋಕಸಭಾ ಚುನಾವಣೆಗೆ ಗೀತಾ ಶಿವರಾಜಕುಮಾರ್‌ ಸೇರಿದಂತೆ ಕೇಂದ್ರಕ್ಕೆ ಹಲವರ ಹೆಸರನ್ನು ಕಳಿಸಲಾಗಿದೆ. ಬಳ್ಳಾರಿಯಲ್ಲಿ ಶಕ್ತಿ ಯೋಜನೆಗೆ ಶಕ್ತಿ ಕೊಟ್ಟಿದ್ದೇ ಗೀತಾ ಶಿವರಾಜಕುಮಾರ್. ಹೀಗಾಗಿ, ಅವರ ಅವಶ್ಯಕತೆ ನನಗೆ ಮತ್ತು ನಮ್ಮ ಪಕ್ಷಕ್ಕೆ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಶಿವರಾಜಕುಮಾರ್ ಪ್ರಚಾರ ನಡೆಸಿದ್ದರು. ಲೋಕಸಭಾ ಚುನಾವಣೆಯಲ್ಲೂ ಸ್ಪರ್ಧಿಯ ಪರ ಚುನಾವಣೆ ನಡೆಸಲಿದ್ದಾರೆ ಎಂದರು.

2010 ರಲ್ಲಿ ತಂದೆ ಬಂಗಾರಪ್ಪ ಅವರು ಸೋಲನ್ನು ಅನುಭವಿಸಿದ್ದರು. ಆದರೆ, ಅದೇ ಕಾಂಗ್ರೆಸ್ ಪಕ್ಷ 2024ರ ಲೋಕಸಭಾ ಚುನಾವಣೆಯಲ್ಲಿ ಪುನಃ ಗೆಲುವು ಸಾಧಿಸಲಿದೆ ನೋಡುತ್ತಿರಿ ಎಂದು ಮಧು ಬಂಗಾರಪ್ಪ ಭವಿಷ್ಯ ನುಡಿದರು. ಸುದ್ದಿಗೋಷ್ಟಿಯಲ್ಲಿ ನಟ ಶಿವರಾಜ್‌ಕುಮಾರ್, ಗೀತಾ ಶಿವರಾಜ್‌ಕುಮಾರ್, ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಮುಖಂಡರಾದ ಎಂ.ಶ್ರೀಕಾಂತ್, ಕಲಗೋಡು ರತ್ನಾಕರ್, ಜಿ.ಡಿ ಮಂಜುನಾಥ್ ಸೇರಿದಂತೆ ಹಲವರಿದ್ದರು.

ಗ್ಯಾರಂಟಿ ಫಲಾನುಭವಿಗಳ ಗಮನ ಬೇರೆಡೆ ಸೆಳೆಯಲು ಬಿಜೆಪಿ ಡ್ರಾಮಾ: ಸಿದ್ದರಾಮಯ್ಯ

ಸಾವಲ್ಲೂ ಮತ ಕೇಳುವ ಬಿಜೆಪಿ: ಬೆಂಗಳೂರಿನ ಬಾಂಬ್ ಸ್ಪೋಟ ಪ್ರಕರಣ ವಿಚಾರ ಪ್ರಸ್ತಾಪಿಸಿದ ಸಚಿವರು, ಕರ್ನಾಟಕದಲ್ಲಿ ಯಾರೇ ತಪ್ಪು ಮಾಡಿದ್ರೂ ಕ್ರಮ ಕೈಗೊಳ್ಳುತ್ತೇವೆ. ವಿಧಾನಸೌಧದೊಳಗೆ ಮತ್ತು ಹೊರಗೆ ಎಂಬುದು ಇಲ್ಲ. ಇಂಟೆಲಿಜೆನ್ಸ್ ಫೇಲಾಗಿತ್ತು ಎನ್ನುವ ಬಿಜೆಪಿಯವರು ಪುಲ್ವಾಮ ದಾಳಿಯಾದಾಗ ಯಾವ ಫೇಲ್ಯೂರ್‌ ಆಗಿತ್ತು ಎಂಬುದನ್ನು ತಿಳಿಸಬೇಕು. ಸಾವಲ್ಲೂ ಮತ ಕೇಳುವ ವ್ಯವಸ್ಥೆ ಬಿಜೆಪಿಯರದು ಎಂದು ಸಚಿವ ಮಧು ಬಂಗಾರಪ್ಪ ಹರಿಹಾಯ್ದರು. ಮಾ.5ರಂದು ಸಾಗರದಲ್ಲಿ ನಡೆಯಲಿರುವ ಈಡಿಗರ ಸಮಾವೇಶಕ್ಕೆ ಆಹ್ವಾನ ಬಂದರೆ ಹೋಗುತ್ತೇನೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.