Amit Shah Interview ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ, ಅಭಿವೃದ್ಧಿ ಪರ ಇದ್ದಾನೆ ಮತದಾರ;ಅಮಿತ್ ಶಾ!
ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಎಲ್ಲಾ ಸಮುದಾಯದ ಜೊತೆಗೆ ಫಲಾನುಭವಿ ಸಮುದಾಯದ ಬೆಂಬಲವೂ ಇದೆ. ಪೂರ್ಣಬಹುಮತದ ಬಿಜೆಪಿ ಸರ್ಕಾರ ಖಚಿತ ಎಂದು ಅಮಿತ್ ಶಾ ಹೇಳಿದ್ದಾರೆ. ಏಷ್ಯಾನೆಟ್ ಸುವರ್ಣನ್ಯೂಸ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಅಮಿತ್ ಶಾ, ಲಿಂಗಾಯಿತ ಸಮುದಾಯ, ಪಕ್ಷ ತೊರೆದ ಶೆಟ್ಟರ್ ಹಾಗೂ ಸವದಿ ಸೋಲು, ಕಾಂಗ್ರೆಸ್ ಪಕ್ಷದ ಸುಳ್ಳಿನ ಗ್ಯಾರೆಂಟಿ, ಆಧಾರವಿಲ್ಲದ ಕಮಿಷನ್ ಆರೋಪ ಸೇರಿದಂತೆ ಹಲವು ಮಹತ್ವದ ವಿಚಾರ ಹಂಚಿಕೊಂಡಿದ್ದಾರೆ. ಇದೇ ವೇಳೆ ಬಿಜೆಪಿ ಮ್ಯಾಜಿಕ್ ನಂಬರ್, ಮುಂದಿನ ಸಿಎಂ ಕುರಿತು ಅಮಿತ್ ಶಾ ಮಾತನಾಡಿದ್ದಾರೆ. ಸಂದರ್ಶನದ ಸಂಪೂರ್ಣ ಭಾಗ ಇಲ್ಲಿದೆ.
ಬೆಂಗಳೂರು(ಏ.30): ಕರ್ನಾಟಕದಲ್ಲಿ ಪೂರ್ಣಬಹುಮತದ ಸರ್ಕಾರ ಅನ್ನೋ ವಿಶ್ವಾಸದೊಂದಿಗೆ ಬಿಜೆಪಿ ರಾಜ್ಯದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದೆ. ಕೇಂದ್ರದ ನಾಯಕರು ಕರ್ನಾಟಕದಲ್ಲಿ ಹೊಸ ಅಲೆ ಸೃಷ್ಟಿಸಿದ್ದಾರೆ. ಇದರ ನಡುವೆ ಕೇಂದ್ರ ಗೃಹ ಸಚಿವ, ಬಿಜೆಪಿ ನಾಯಕ ಅಮಿತ್ ಶಾ ಬಿಜೆಪಿ ಪೂರ್ಣಬಹುಮತದ ಸರ್ಕಾರ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಏಷ್ಯಾನೆಟ್ ಸುವರ್ಣನ್ಯೂಸ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಅಮಿತ್ ಶಾ, ರಾಜ್ಯದಲ್ಲಿನ ಚುನಾವಣೆ, ಬಿಜೆಪಿಗೆ ಜನರು ನೀಡುತ್ತಿರುವ ಬೆಂಬಲ, ಸರ್ಕಾರ ರಚನೆ ಕುರಿತು ಮಾತನಾಡಿದ್ದಾರೆ. ಕಳೆದ 2 ತಿಂಗಳಲ್ಲಿ ಅಮಿತ್ ಶಾ ಬರೋಬ್ಬರಿ 17 ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ. ಹಲವು ಜಿಲ್ಲೆ, ಕ್ಷೇತ್ರಗಳಲ್ಲಿ ಓಡಾಡಿದ್ದಾರೆ. ಕಾರ್ಯಕರ್ತರು, ನಾಯಕರ ಜೊತೆ ಸಭೆ ನಡೆಸಿದ್ದಾರೆ. ಇದರ ನಡುವೆ ಹಲವು ಸಮೀಕ್ಷೆಗಳನ್ನು ನಡೆಸಿ ರಾಜ್ಯದ ಮತದಾರರ ಒಲವಿನ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಇದರ ಆಧಾರದಲ್ಲಿ ಈ ಬಾರಿ ಬಿಜೆಪಿ ಸ್ಪಷ್ಟಬಹುಮತಕ್ಕಿಂತ 15 ಸ್ಥಾನ ಹೆಚ್ಚು ಗೆಲ್ಲುತ್ತೇವೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
ಅಭಿವೃದ್ಧಿಗೆ ಜನ ಮತ ನೀಡುತ್ತಾರೆ. ಡಬಲ್ ಎಂಜಿನ್ ಸರ್ಕಾರದಿಂದ ಕರ್ನಾಟಕ ಪಡೆದಿರುವ ಲಾಭವೇ ಈ ಬಾರಿ ಬಿಜೆಪಿ ಕೈಹಿಡಿಯಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಕರ್ನಾಟಕದಲ್ಲಿ ಸುಮಾರು 4.10 ಲಕ್ಷ ಜನರಿಗೆ ಮನೆ ಸಿಕ್ಕಿದೆ. 43 ಲಕ್ಷ ಜನರಿಗೆ ಜಲಜೀವನ್ ಮಿಷನ್‌ನಿಂದ ನೀರು ಸಿಕ್ಕಿದೆ. 48 ಲಕ್ಷ ಕುಟುಂಬಗಳಿಗೆ ಶೌಚಾಲಯ ಸಿಕ್ಕಿದೆ. ಕಿಸಾನ್ ಸಮ್ಮಾನ್ ನಿಧಿಯಲ್ಲಿ 54 ಲಕ್ಷ ರೈತರಿಗೆ ಪ್ರತಿ ವರ್ಷ 10 ಸಾವಿರ ಬ್ಯಾಂಕ್ ಖಾತೆಗೆ ತಲುಪುತ್ತಿದೆ. 37 ಲಕ್ಷ ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್, 1 ಕೋಟಿ 38 ಲಕ್ಷ ಜನರಿಗೆ 5 ಲಕ್ಷ ವರೆಗಿನ ಆರೋಗ್ಯ ವಿಮೆ , 3 ಕೋಟಿ ಜನರಿಗೆ ಪ್ರತಿ ತಿಂಗಳು 5 ಕೆ.ಜಿ ಅಕ್ಕಿ ಉಚಿತ ಸೇರಿದಂತೆ ಕಳೆದ 9 ವರ್ಷದಲ್ಲಿ ಮೋದಿ ಸರ್ಕಾರ ಕರ್ನಾಟಕಕ್ಕೆ ನೀಡಿದ ಕೊಡುಗೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಕರಾವಳಿ, ಮಲೆನಾಡು ಕ್ಲೀನ್‌ಸ್ವೀಪ್ ಮಾಡ್ತೀವಿ: ಅಮಿತ್ ಶಾ
ಕರ್ನಾಟಕದಲ್ಲಿ ಪ್ರತಿ 5 ವರ್ಷಕ್ಕೆ ಸರ್ಕಾರ ಬದಲಾಗಲಿದೆ ಅನ್ನೋ ಮಾತಿಗೆ ಉತ್ತರಿಸಿದ ಅಮಿತ್ ಶಾ, ಈ ಹಿಂದೆ ಕಾಂಗ್ರೆಸ್ ಹಾಗೂ ಜನತಾದಳ ಸತತವಾಗಿ ಆಯ್ಕೆಯಾಗಿದೆ. ಈ ಬಾರಿ ಬಿಜೆಪಿ ಆಯ್ಕೆಯಾಗಲಿದೆ ಎಂದಿದ್ದಾರೆ. ಯಡಿಯೂರಪ್ಪನವರೇ ಸಿಎಂ ಸ್ಥಾನ ಬಿಡುವುದಾಗಿ ಹೇಳಿದ್ದರು. ಆದರೂ ಮುಂದುವರಿಸಿಕೊಂಡು ಹೋಗಿದ್ದೆವು.ಯಡಿಯೂರಪ್ಪ ಚುನಾವಣೆ ನೇತೃತ್ವ ವಹಿಸಿದ್ದಾರೆ.ಬಿಜೆಪಿ ಪಾರ್ಟಿಯಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಅವಕಾಶ ಸಿಗಬೇಗು. ಇದಕ್ಕಾಗಿ ಪ್ರತಿ ಚುನಾವಣೆಗ ಶೇ.20 ರಷ್ಟು ಟಿಕೆಟ್ ಬದಲಾವಣೆ ನಿಯಮವಿದೆ ಎಂದಿದ್ದಾರೆ. ಲಿಂಗಾಯಿತ ಸಮುದಾಯದ ಬಿಜೆಪಿ ಜೊತೆಗಿದೆ. ಲಿಂಗಾಯಿತರು ಕಾಂಗ್ರೆಸ್‌ಗೆ ಮತ ಹಾಕಲು ಒಂದೇ ಒಂದು ಕಾರಣವಿಲ್ಲ. ಅವರು ಲಿಂಗಾಯಿತ ನಾಯಕರನ್ನು ನಡೆಸಿಕೊಂಡ ರೀತಿ ಹಾಗೂ ಸಮುದಾಯಕ್ಕೆ ಮಾಡಿರುವ ದ್ರೋಹ ಸಮುದಾಯ ಮರೆಯುವುದಿಲ್ಲ ಎಂದಿದ್ದಾರೆ.
AMIT SHAH INTERVIEW : ಶೆಟ್ಟರ್, ಸವದಿ 30 ಸಾವಿರ ಮತಗಳ ಅಂತರದಿಂದ ಸೋಲ್ತಾರೆ!
ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಪಾರ್ಟಿ ತೊರೆದು ಕಾಂಗ್ರೆಸ್ ಸೇರಿರುವುದು ಯಾವುದೇ ನಷ್ಟವಿಲ್ಲ. ಇಬ್ಬರೂ 30 ಸಾವಿರ ಅಂತರದಿಂದ ಸೋಲುತ್ತಾರೆ. ಕಾಂಗ್ರೆಸ್ ಸಂಪೂರ್ಣ ಹತಾಶೆಗೊಂಡಿದೆ ಎಂದಿದ್ದಾರೆ. ಇದೇ ವೇಳೆ ಅಮಿತ್ ಶಾ ವಿರುದ್ಧ ದೂರು ನೀಡಿದ ಕಾಂಗ್ರೆಸ್ ನಡೆಯಿಂದ ಯಾವುದೇ ಚಿಂತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಅವಧಿಯಲ್ಲೇ ಹೆಚ್ಚು ಗಲಭೆಗಳು ನಡೆದಿದೆ. ಆಯೋಗ ನನ್ನನ್ನು ಪ್ರಶ್ನಿಸಿದರೆ ದಾಖಲೆ ಸಮೇತ ಉತ್ತರ ನೀಡುವುದಾಗಿ ಅಮಿತ್ ಶಾ ಹೇಳಿದ್ದಾರೆ.
ಕಾಂಗ್ರೆಸ್ ಗ್ಯಾರೆಂಟಿ ಕಾರ್ಡನ್ನು ಯಾರೂ ನಂಬುದಿಲ್ಲ. ಗುಜರಾತ್, ಯುಪಿ ಉತ್ತರಖಂಡ, ಅಸ್ಸಾಂ, ಮಣಿಪುರ, ತ್ರಿಪುರಾದಲ್ಲೂ ಇದೇ ರೀತಿ ಕಾರ್ಡ್ ಹಂಚಿದ್ದರು. ಅವರ ಪಾರ್ಟಿಗೆ ಇಮೇಜ್ ಇಲ್ಲ. ಇನ್ನೂ ಗ್ಯಾರೆಂಟಿ ಯಾರೂ ನಂಬುದಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ. 2,000 ರೂಪಾಯಿ, 200 ಯುನಿಟಿ ಉಚಿತ ವಿದ್ಯುತ್ ಜನತೆಯನ್ನು ಆಕರ್ಷಿಸುವುದಿಲ್ಲವೇ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, ರಾಜ್ಯದ ಜನ ಸಿಲಿಂಡರ್, ಶೌಚಾಲಯ, ಮನೆ, ಅಕ್ಕಿ ಸೇರಿದಂತೆ ಹಲವು ಸೌಲಭ್ಯ ಪಡೆದಿದ್ದಾರೆ. ಹೀಗಾಗಿ ಕಾಂಗ್ರೆಸ್ ಗ್ಯಾರೆಂಟಿಗಿಂತ ನಾವು ನೀಡಿದ ಅಡ್ವಾನ್ಸ್ ಮೇಲೆ ಜನರಿಗೆ ನಂಬಿಕೆ ಹೆಚ್ಚಾಗಿದೆ ಎಂದು ಶಾ ಹೇಳಿದ್ದಾರೆ.
40 ಪರ್ಸೆಂಟ್ ಕಮಿಷನ್ ಆರೋಪಕ್ಕೆ ದಾಖಲೆ ಇಲ್ಲ. ಇನ್ನು ಮಾಡಾಳ್ ವಿರೂಪಾಕ್ಷಪ್ಪ ಸಿಕ್ಕಿಬಿದ್ದ ಪ್ರಕರಣದಲ್ಲಿ ಕ್ರಮ ಕೈಗೊಂಡಿದ್ದೇವೆ. ಜೈಲಿಗೆ ಹಾಕಿದ್ದೇವೆ. ಟಿಕೆಟ್ ಕೂಡ ನೀಡಿಲ್ಲ. 40 ಪರ್ಸೆಂಟ ಆರೋಪದ ಒಂದೇ ಒಂದು ದೂರು ಕೋರ್ಟ್‌ನಲ್ಲಿ ಇಲ್ಲ ಎಂದಿದ್ದಾರೆ. ಇದೇ ವೇಳೆ ಮೀಸಲಾತಿ ವಿಚಾರದ ಕುರಿತು ಅಮಿತ್ ಶಾ ಮಾತನಾಡಿದ್ದಾರೆ.ಸಂವಿಧಾನ ಪ್ರಕಾರ ಧರ್ಮದ ಆಧಾರದಲ್ಲಿ ಮೀಸಲಾತಿ ಇಲ್ಲ. ಹೀಗಾಗಿ ಮುಸ್ಲಿಂ ಮೀಸಲಾತಿ ತೆಗೆದು ಹಾಕಿದ್ದೇವೆ. ಇದನ್ನು ಮೊದಲೇ ಮಾಡಬೇಕಿತ್ತು ಎಂದು ಶಾ ಹೇಳಿದ್ದಾರೆ. ಮುಸ್ಲಿಂ, ಹಿಂದೂ, ಕ್ರಿಶ್ಚಿಯನ್ ಅನ್ನೋ ಕಾರಣಕ್ಕೆ ಮೀಸಲಾತಿ ಸಲ್ಲ. ಹಿಂದುಳಿದವರಿಗೆ ಮೀಸಲಾತಿ ಸಿಗಬೇಕು ಎಂದು ಅಮಿತ್ ಶಾ ಹೇಳಿದ್ದಾರೆ.
ಮೋದಿಯನ್ನು ಕೀಳಾಗಿ ನೋಡುವುದು, ಹೇಳಿಕೆ ನೀಡುವುದು ಕಾಂಗ್ರೆಸ್ ನಾಯಕರಿಗೆ ಹೊಸದಲ್ಲ. ಹಲವು ಬಾರಿ ಇದನ್ನೇ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಇದೇ ರೀತಿ ಹೇಳಿಕೆ ಕೊಟ್ಟಿದ್ದಾರೆ. ಇದನ್ನು ಜನರು ಅರಗಿಸಿಕೊಳ್ಳುವುದಿಲ್ಲ. ಈ ಹಿಂದಿನ ಚುನಾವಣೆಗಳಲ್ಲಿ ಇದು ಸಾಬೀತಾಗಿದೆ ಎಂದು ಖರ್ಗೆಯ ವಿಷ ಸರ್ಪ ಹೇಳಿಕೆಗೆ ಶಾ ತಿರುಗೇಟು ನೀಡಿದ್ದಾರೆ. ಮೋದಿ ಎಲ್ಲಾ ಚುನಾವಣೆಗೆ ಹೋಗುತ್ತಾರೆ. ಪ್ರಚಾರ ಮಾಡುತ್ತಾರೆ. ಮನ್‌ಮೋಹನ್ ಸಿಂಗ್ ಮಾತೇ ಆಡುತ್ತಿರಲಿಲ್ಲ. ಹೀಗಾಗಿ ಅವರ ಮಾತು ಕೇಳಲು ಯಾರೂ ಬರುತ್ತಿರಲಿಲ್ಲ ಎಂದು ಮೋದಿ ರಾಜ್ಯಕ್ಕೆ ಆಗಮಿಸುವುದನ್ನು ಪ್ರಶ್ನಿಸಿದ್ದ ಕಾಂಗ್ರೆಸ್ ನಾಯಕರ ಆರೋಪಕ್ಕೆ ಉತ್ತರಿಸಿದ್ದಾರೆ.
ಬೆಂಗಳೂರು ಅಭಿವದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗಿರಲಿಲ್ಲ. ಆದರೆ ನಮ್ಮ ಸರ್ಕಾರ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಿದೆ. 7 ಕಿಮಿ ಇದ್ದ ಮೆಟ್ರೋ 56 ಕಿ.ಮೀ ಆಗಿದೆ. 2024ಕ್ಕೆ 100 ಕಿಮೀ ಆಗಲಿದೆ.ಉಪನಗರ ರೈಲು ಯೋಜನೆಗೆ 15,800 ಕೋಟಿ ರೂಪಾಯಿ ನೀಡಲಾಗಿದೆ. ಸ್ಯಾಟಲೈಟ್ ರಿಂಗ್ ರೋಡ್‌ಗೆ 15 ಸಾವಿರ ಕೋಟಿ ರೂಪಾಯಿ, ಫ್ಲೈಓವರ್, ಸೇತುವೆ ಸೇರಿ ಇತರ ಅಭಿವೃದ್ಧಿಗೆ 9,600 ಕೋಟಿ ರೂಪಾಯಿ, ನಗರೋತ್ಥಾನ ಯೋಜನೆಯಡಿ 6,000 ಕೋಟಿ ನೀಡಲಾಗಿದೆ. ಇನ್ನು ಕುಡಿಯುವ ನೀರು, ಭಯಮುಕ್ತ ಬೆಂಗಳೂರು ಸೇರಿದಂತೆ ಹಲವು ಯೋಜನೆಗೆ ಹಣ ನೀಡಿದ್ದೇವೆ.ವಿಮಾನ ನಿಲ್ದಾಣ ಸೇರಿದಂತೆ ಹಲವು ಸೌಕರ್ಯ ಆಧುನೀಕರಣ ಮಾಡಿದ್ದೇವೆ ಎಂದು ಬೆಂಗಳೂರಿನ ಅಭಿವೃದ್ಧಿ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಸಂದರ್ಶನದಲ್ಲಿ ನೀಡಿದ್ದಾರೆ.
ಉಡುಪಿಯಲ್ಲಿ ಅಮಿತ್ ಶಾ ಬಿರುಸಿನ ಪ್ರಚಾರ: ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳಿಗೆ ತಿರುಗೇಟು
ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನೆ ಬಲಪಡಿಸಿದ್ದೇವೆ. ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ ಎಂದ ಅಮಿತ್ ಶಾ, ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದಿದ್ದಾರೆ. ಕಾಶ್ಮೀರ, ಈಶಾನ್ಯ ಭಾರತ, ಪಂಜಾಬ್ ಸೇರಿದಂತೆ ಹಲವು ಭಾಗದಲ್ಲಿ ಹಿಂಸಾಚಾರ , ಭಯೋತ್ಪಾದನೆ ಕಡಿಮೆ ಆಗಿದೆ ಎಂದಿದ್ದಾರೆ.
ಕನ್ನಡ ಭಾಷೆಗೆ ರಾಜ್ಯದಲ್ಲಿ ಹೆಚ್ಚು ಮಹತ್ವ ನೀಡಿದ್ದು ಭಾರತೀಯ ಜನತಾ ಪಾರ್ಟಿ.. ಐಎಎಸ್, ಐಪಿಎಸ್ ಪರೀಕ್ಷೆಗಳನ್ನ ಕನ್ನಡದಲ್ಲಿ ಶುರು ಮಾಡಿದ್ದು ಮೋದಿ ಬಂದ ಮೇಲೆಯೇ.. ಕನ್ನಡ ಮಾತ್ರವಲ್ಲ ತುಂಬಾ ಭಾಷೆಗಳಲ್ಲಿ ಅವಕಾಶ ನೀಡಿದ್ವಿ.. ಈಗ ಸಿಆರ್‌ಪಿಎಫ್ ಪರೀಕ್ಷೆಯಲ್ಲೂ ಕನ್ನಡಕ್ಕೆ ಅವಕಾಶ ನೀಡಿದ್ದೇವೆ ಎಂದು ಹಿಂದಿ ಹೇರಿಕೆ ಆರೋಪಕ್ಕೆ ಶಾ ಉತ್ತರಿಸಿದ್ದಾರೆ. ಮೇ.13 ಬಿಜೆಪಿಗೆ ಶುಭದಿನವಾಗಲಿದೆ. ಪೂರ್ಣ ಬಹುಮತದ ಸರ್ಕಾರ ರಚನೆಯಾಗಲಿದೆ ಎಂದು ಅಮಿತ್ ಶಾ, ಏಷ್ಯಾನೆಟ್ ಸುವರ್ನ್ಯೂಸ್ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.