ಉಡುಪಿಯಲ್ಲಿ ಅಮಿತ್ ಶಾ ಬಿರುಸಿನ ಪ್ರಚಾರ: ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳಿಗೆ ತಿರುಗೇಟು
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೇ ಭ್ರಷ್ಟಾಚಾರ, ಪಿ.ಎಫ್.ಐ ಸಮರ್ಥನೆ, ವಂಶ ರಾಜಕಾರಣ, ಅಸುರಕ್ಷಿತತೆ ಗ್ಯಾರೆಂಟಿಗಳು ಪ್ರಜೆಗಳಿಗೆ ಲಭಿಸಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳಿಗೆ ತಿರುಗೇಟು ನೀಡಿದರು.
ಉಡುಪಿ (ಏ.29): ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೇ ಭ್ರಷ್ಟಾಚಾರ, ಪಿ.ಎಫ್.ಐ ಸಮರ್ಥನೆ, ವಂಶ ರಾಜಕಾರಣ, ಅಸುರಕ್ಷಿತತೆ ಗ್ಯಾರೆಂಟಿಗಳು ಪ್ರಜೆಗಳಿಗೆ ಲಭಿಸಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳಿಗೆ ತಿರುಗೇಟು ನೀಡಿದರು. ಅವರು ಕಟಪಾಡಿ ಗ್ರೀನ್ ವ್ಯಾಲಿ ಮೈದಾನದಲ್ಲಿ ಕಾಪು ಮತ್ತು ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಸೀಮಿತವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಘೋಷಿಸಿರುವ ಗ್ಯಾರೆಂಟಿ ಕಾರ್ಡ್‌ಗಳನ್ನು ಗುಜರಾತ್, ಅಸ್ಸಾಂ, ತ್ರಿಪುರ, ಮಣಿಪುರ, ಉತ್ತರ ಪ್ರದೇಶಗಳಲ್ಲಿಯೂ ಘೋಷಿಸಿತ್ತು. ಆದರೆ ಅಲ್ಲೆಲ್ಲಾ ಕಾಂಗ್ರೆಸ್ ಇದೆಯೋ ಎಂಬುದನ್ನು ದುರ್ಭೀನು ಮೂಲಕ ಹುಡುಕುವ ಸ್ಥಿತಿಗೆ ಕಾಂಗ್ರೆಸ್ ಪಕ್ಷ ತಲುಪಿದೆ ಎಂದು ವ್ಯಂಗಿಸಿದರು.
ಬಿಜೆಪಿಯಿಂದ ದಕ್ಷಿಣ ಭಾರತ ಸುರಕ್ಷಿತ: ದ.ಕ ಜಿಲ್ಲೆಯಲ್ಲಿ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಜೀವವನ್ನು ವಾಪಾಸು ತರಲು ಸಾಧ್ಯವಿಲ್ಲ. ಆದರೆ ಹತ್ಯೆಗೈದ ಸಂಘಟನೆಯನ್ನು ನಿಷೇಧಿಸಿದ್ದೇವೆ. ಆ ಸಂಘಟನೆಯ ಸದಸ್ಯರಾಗಿದ್ದುಕೊಂಡು ದೇಶದಲ್ಲಿ ಗಲಭೆ ಸೃಷ್ಟಿಸಲು ಕಾರಣಿಕರ್ತರಾದವನ್ನು ಜೈಲಿಗೆ ಕಳುಹಿಸಿದ್ದೇವೆ. ಕಾಂಗ್ರೆಸ್ ವೋಟ್ ಬ್ಯಾಂಕ್ ಗಾಗಿ ಪಿ.ಎಫ್.ಐ ಸಂಘಟನೆಯನ್ನು ಸಮರ್ಥಿಸಿಕೊಂಡು ಪ್ರಕರಣಗಳನ್ನು ವಾಪಸು ಪಡೆದಿದೆ. ಬಿಜೆಪಿ ಯಾರಿಗೂ ಹೆದರುವುದಿಲ್ಲ. ಪಿ.ಎಫ್.ಐ ನಿಷೇಧದಿಂದ ದಕ್ಷಿಣ ಭಾರತ ಸುರಕ್ಷಿತವಾಗಿದೆ ಎಂದರು.
ಮಸಾಲಾ ಜಯರಾಂ ಸಚಿವರಾಗುವುದು ನಿಶ್ಚಿತ: ರಾಜ್ಯಸಭಾ ಸದಸ್ಯ ಜಗ್ಗೇಶ್
ರಾಜ್ಯದಲ್ಲಿ ಬಿಜೆಪಿಯ ಪೂರ್ಣ ಬಹುಮತ ಸರಕಾರ ಬಂದರೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರನ್ನು ಗೆಲ್ಲಿಸಲು ಸಹಕಾರಿಯಾಗುತ್ತದೆ. ಕಮಲದ ಚಿಹ್ನೆಗೆ ನೀವುಗಳು ಮತ ನೀಡುವುದರ ಮೂಲಕ ಬಿಜೆಪಿ ಸರಕಾರವು ಅಧಿಕಾರಕ್ಕೆ ಬರುವಂತೆ ಮಾಡಬೇಕು. ಆಗ ದ.ಕ ಜಿಲ್ಲೆ ಮತ್ತಷ್ಟು ಸುರಕ್ಷಿತವಾಗಲಿದೆ. ಮೋದಿಯವರ ಡಬಲ್ ಇಂಜಿನ್ ಸರಕಾರ ಬೇಕೆ, ರಾಹುಲ್ ಬಾಬಾ ನವರ ರಿವರ್ಸ್ ಗೇರ್ ಸರಕಾರ ಬೇಕೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ತುಷ್ಟಿಕರಣದ ರಾಜನೀತಿ ಮಾಡಿದೆ. ಆದರೆ ಬಿಜೆಪಿ ಸರಕಾರವು ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆ, ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಗಳನ್ನು ಎನ್.ಐ.ಎ ತನಿಖೆಗೆ ವಹಿಸಿ, ತಪ್ಪಿತಸ್ಥರನ್ನು ಜೈಲಿಗೆ ಅಟ್ಟಲಾಗಿದೆ ಎಂದರು.
ರಿವರ್ಸ್ ಗೇರ್ ಸರಕಾರ ಬಂದರೇ ಪಿ.ಎಫ್.ಐ ಖೇಡರ್ ದೊಡ್ಡದಾಗುತ್ತದೆ. ಮುಸ್ಲಿಂ ಮೀಸಲಾತಿ ರದ್ದತಿಯನ್ನು ಮರು ಆರಂಭಿಸುತ್ತಾರೆ. ಎಸ್.ಸಿ, ಎಸ್.ಟಿ, ಲಿಂಗಾಯಿತ, ಒಕ್ಕಲಿಗರಿಗೆ ಬಿಜೆಪಿಯೂ ಮೀಸಲಾತಿಯನ್ನು ಏರಿಕೆ ಮಾಡಿದ್ದು, ಇವುಗಳಲ್ಲಿ ಯಾವ ಸಮುದಾಯಕ್ಕೆ ಮೀಸಲಾತಿಯನ್ನು ಇಳಿಕೆ ಮಾಡಿ, ಬಿಜೆಪಿ ರದ್ದುಗೊಳಿಸಿರುವ ಮುಸ್ಲಿಂ ಮೀಸಲಾತಿಯನ್ನು, ಮರು ಆರಂಭಿಸುತ್ತೀರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಪ್ರಶ್ನಿಸಿದರು. ರಾಜ್ಯದಲ್ಲಿ ಬಿಜೆಪಿಯೂ ಪೂರ್ಣ ಬಹುಮತದೊಂದಿಗೆ ಸರಕಾರ ರಚಿಸುತ್ತದೆ. ಮುಸ್ಲಿಂ ಮೀಸಲಾತಿಯನ್ನು ಯಾವುದೇ ಕಾರಣಕ್ಕೂ ಮರು ಆರಂಭಿಸಲು ಬಿಡುವುದಿಲ್ಲ, ಇದು ನಮ್ಮ ಸಂಕಲ್ಪ ಎಂದ ಅವರು, ಜೆ.ಡಿ.ಎಸ್ ಕಾಂಗ್ರೆಸ್ ನ ಬಿ ಟೀಮ್. ಜೆ.ಡಿ.ಎಸ್ ಗೆ ಮತ ನೀಡಿದರೇ ಕಾಂಗ್ರೆಸ್ ಗೆ ಮತ ನೀಡಿದಂತೆ, ಯಾವುದೇ ಕಾರಣಕ್ಕೂ ಕಾಂಗ್ರೆಸ್, ಜೆ.ಡಿ.ಎಸ್ ಗೆ ಮತ ನೀಡದೇ ಕಮಲವನ್ನು ಅರಳಿಸಿ ಎಂದರು.
ಪ್ರಧಾನಿ ನರೇಂದ್ರ ಮೋದಿಯವರನ್ನು ವಿಷ ಸರ್ಪಕ್ಕೆ ಹೋಲಿಸಿರುವುದು ಎಷ್ಟು ಸರಿ..? ಸೋನಿಯಾ, ಪ್ರಿಯಾಂಕ, ಬಿ.ಕೆ ಹರಿಪ್ರಸಾದ್, ರಾಹುಲ್ ಬಾಬಾ ಸಹಿತ ಅನೇಕರು ಮೋದಿಯವರನ್ನು ನಿಂದಿಸಿದ್ದಾರೆ. ಯಾವಾಗೆಲ್ಲಾ ಮೋದಿಯವರನ್ನು ನಿಂದಿಸಿದ್ದಾರೋ, ಆವಾಗೆಲ್ಲಾ ಬಿಜೆಪಿಯ ಕಮಲವು ಅರಳಿದೆ. ಅದಕ್ಕೆ ಬಿಜೆಪಿಯ ಕಮಲ ಅರಳಿಸುವುದೇ ನಮ್ಮ ಉತ್ತರ ಎಂದರು. 70 ವರ್ಷಗಳಲ್ಲಿ ಕಾಂಗ್ರೆಸ್, ಬಗೆಹರಿಸಲು ಸಾಧ್ಯವಾಗದ ರಾಮಮಂದಿರ ವಿಚಾರವನ್ನು ಕಾನೂನಾತ್ಮಕವಾಗಿ ಬಗೆಹರಿಸಿ, ಮಂದಿರ ನಿರ್ಮಾಣವಾಗುವಂತೆ ಮೋದಿಯವರ ಸರಕಾರ ಮಾಡಿದೆ. ಯಾವ ಜಾಗದಲ್ಲಿ ಪ್ರಭು ಶ್ರೀರಾಮಚಂದ್ರ ಹುಟ್ಟಿದ್ದನೋ ಅಲ್ಲಿಯೇ ರಾಮಮಂದಿರ ತಲೆ ಎತ್ತುತ್ತಿದ್ದು, 2024 ರ ವೇಳೆಗೆ ಲೋಕಾರ್ಪಣೆಗೊಳ್ಳಲಿದೆ ಎಂದರು.
9 ವರ್ಷಗಳಲ್ಲಿ ಮೋದಿಯವರ ನೇತೃತ್ವದ ಕೇಂದ್ರ ಸರಕಾರವು 2,26,418 ಕೋ.ರೂ ಅನುದಾನವನ್ನು ರಾಜ್ಯಕ್ಕೆ ನೀಡಿದೆ. ಆದರೆ ಸೋನಿಯಾ ಮತ್ತು ಮನಮೋಹನ್ ಅವರ ಕೇಂದ್ರ ಸರಕಾರ ಕೇವಲ 99,000 ಕೋ.ರೂ.ಯನ್ನು ರಾಜ್ಯಕ್ಕೆ ನೀಡಿತ್ತು. ಕಾಂಗ್ರೆಸ್ ಅವಧಿಯಲ್ಲಿ ಕೇಂದ್ರದ ಅನುದಾನದ ಪಟ್ಟಿಯನ್ನು ತರಲಿ, ನಾವು ತರುತ್ತೇವೆ. ತಾಳೆ ಹಾಕಿ ನೋಡೋಣ ಎಂದವರು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ವೇದಿಕೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಅಭ್ಯರ್ಥಿಗಳಾದ ಸುರೇಶ್ ಶೆಟ್ಟಿ ಗುರ್ಮೆ, ಯಶ್ಪಾಲ್ ಸುವರ್ಣ, ಶಾಸಕರಾದ ರಘುಪತಿ ಭಟ್, ಲಾಲಾಜಿ.ಆರ್.ಮೆಂಡನ್, ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ವಿಭಾಗ ಪ್ರಭಾರಿ ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾ ಉಪಾಧ್ಯಕ್ಷರಾದ ಶ್ರೀಶಾ ನಾಯಕ್ ಪೆರ್ಣಂಕಿಲ, ಗೀತಾಂಜಲಿ ಸುವರ್ಣ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ನಗರಾಧ್ಯಕ್ಷ ಮಹೇಶ್ ಠಾಕೂರ್, ಮಹಿಳಾಮೋರ್ಚಾ ರಾಜ್ಯ ಪ್ರ.ಕಾರ್ಯದರ್ಶಿ ಶಿಲ್ಪಾ.ಜಿ.ಸುವರ್ಣ,ಎಸ್.ಸಿ. ಮೋರ್ಚಾ ರಾಜ್ಯ ಪ್ರ.ಕಾರ್ಯದರ್ಶಿ ದಿನಕರ್ ಬಾಬು, ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ್ ನಾಯಕ್, ಉಡುಪಿ ಗ್ರಾಮಾಂತರ ಅಧ್ಯಕ್ಷೆ ವೀಣಾ ನಾಯ್ಕ್, ಮಹಿಳಾಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ, ಪಕ್ಷದ ಚುನಾವಣಾ ಉಸ್ತುವಾರಿ ವಿಜಯೇಂದ್ರ ಗುಪ್ತಾ, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಉಪಸ್ಥಿತರಿದ್ದರು.
ದಾವಣಗೆರೆ: ಹರಿಹರೇಶ್ವರ ದೇವಸ್ಥಾನಕ್ಕೆ ಕೇಂದ್ರ ಸಚಿವ ಅಮಿತ್ ಶಾ ಭೇಟಿ
ಜಿ.ಪ್ರ.ಕಾರ್ಯದರ್ಶಿ ನವೀನ್ ಕಾರ್ಯಕ್ರಮ ನಿರೂಪಿಸಿದರು. ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಭಾಷಾಂತರಿಸಿದರು. 82 ಏಣಗುಡ್ಡೆ ಬೂತ್ ಅಧ್ಯಕ್ಷ ಶ್ರೀಧರ ಪೂಜಾರಿ ಮತ್ತು ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ್ ನಾಯಕ್ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರ ನೇತೃತ್ವದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನಾರಾಯಣ ಗುರುಗಳ ಪ್ರತಿಮೆ ನೀಡಿ, ಮೈಸೂರು ಪೇಟಾ ತೊಡಿಸಿ, ಶಾಲು ಹೊದೆಸಿ ಗೌರವಿಸಿದರು. ಬಿಜೆಪಿ ಕಾಪು ಅಭ್ಯರ್ಥಿ ಸುರೇಶ್ ಶೆಟ್ಟಿ ಗುರ್ಮೆ ಹಾಗು ಉಡುಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ಮತಯಾಚಿಸಿದರು. ಅಮಿತ್ ಶಾ ಅವರು, ನಾರಾಯಣ ಗುರುಗಳು ಹಿಂದುಳಿದ ವರ್ಗದ ಏಳಿಗೆಗೆ, ಸಮಾಜದ ಸುಧಾರಣೆಗೆ ಕ್ರಾಂತಿಕಾರಿ ಕೆಲಸಗಳನ್ನು ಮಾಡಿದ್ದಾರೆ. ಅವರ ಆದರ್ಶಗಳು ಇಂದಿನ ಯುವಕರಿಗೆ ಸ್ಪೂರ್ತಿ ಎಂದು ಹೇಳುತ್ತಾ ತಮ್ಮ ಮಾತನ್ನು ಆರಂಭಿಸಿದರು.