ಕರಾವಳಿ, ಮಲೆನಾಡು ಕ್ಲೀನ್‌ಸ್ವೀಪ್ ಮಾಡ್ತೀವಿ: ಅಮಿತ್ ಶಾ
ರಾಜ್ಯದ ಒಟ್ಟು ಕ್ಷೇತ್ರಗಳ ಪೈಕಿ ಮ್ಯಾಜಿಕ್ ನಂಬರ್‌ಗಿಂತ 15 ಕ್ಷೇತ್ರಗಳನ್ನು ಹೆಚ್ಚು ಗೆಲ್ಲುವುದರೊಂದಿಗೆ ಈ ಬಾರಿ ಪೂರ್ಣ ಬಹುಮತದ ಸರ್ಕಾರ ರಚಿಸಲಿದ್ದೇವೆ. ಮಲೆನಾಡು ಮತ್ತು ಕರಾವಳಿ ಕರ್ನಾಟಕದಲ್ಲಿ ಬಿಜೆಪಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಹೀಗಾಗಿ ಈ ಚುನಾವಣೆಯಲ್ಲಿ ಈ ಭಾಗದಲ್ಲಿ ಕ್ಲೀನ್ ಸ್ವೀಪ್ ಮಾಡಲಿದ್ದೇವೆ: ಅಮಿತ್ ಶಾ
ಮಡಿಕೇರಿ(ಏ.30): ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಮಿಂಚಿನ ಪ್ರಚಾರ ನಡೆಸಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯದ ಅಭಿವೃದ್ಧಿಗಾಗಿ ಮತದಾರರು ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದ ಪರ ಮತಹಾಕಬೇಕು ಎಂದು ಹೇಳಿದರು.
ರಾಜ್ಯದ ಒಟ್ಟು ಕ್ಷೇತ್ರಗಳ ಪೈಕಿ ಮ್ಯಾಜಿಕ್ ನಂಬರ್‌ಗಿಂತ 15 ಕ್ಷೇತ್ರಗಳನ್ನು ಹೆಚ್ಚು ಗೆಲ್ಲುವುದರೊಂದಿಗೆ ಈ ಬಾರಿ ಪೂರ್ಣ ಬಹುಮತದ ಸರ್ಕಾರ ರಚಿಸಲಿದ್ದೇವೆ. ಮಲೆನಾಡು ಮತ್ತು ಕರಾವಳಿ ಕರ್ನಾಟಕದಲ್ಲಿ ಬಿಜೆಪಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಹೀಗಾಗಿ ಈ ಚುನಾವಣೆಯಲ್ಲಿ ಈ ಭಾಗದಲ್ಲಿ ಕ್ಲೀನ್ ಸ್ವೀಪ್ ಮಾಡಲಿದ್ದೇವೆ. ಆ ಮೂಲಕ ಪೂರ್ಣ ಬಹುಮತದ ಡಬಲ್ ಎಂಜಿನ್ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಶಾ ಹೇಳಿದರು.
ಉಡುಪಿಯ ಕಟಪಾಡಿಯ ಗ್ರೀನ್ ವ್ಯಾಲಿ ಮೈದಾನದಲ್ಲಿ ನಡೆದ ಬೃಹತ್ ಚುನಾವಣಾ ರಾರಯಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರ, ಮಡಿಕೇರಿ ಮತ್ತು ಮಂಗಳೂರಲ್ಲಿ ಪಕ್ಷದ ಅಭ್ಯರ್ಥಿಗಳ ಪರ ರೋಡ್‌ಶೋ ನಡೆಸಿದರು.
ಕಾಂಗ್ರೆಸ್ ಗೆದ್ದರೆ ಕರ್ನಾಟಕದಲ್ಲಿ ಮತ್ತೆ ಪಿಎಫ್‌ಐ ಸಕ್ರಿಯ: ಅಮಿತ್ ಶಾ
ಅರ್ಧದಲ್ಲೇ ಮೊಟಕು:
ಮಡಿಕೇರಿಯಲ್ಲಿ ಬೃಹತ್ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿಗಳಾದ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಬೋಪಯ್ಯ ಪರ ನಗರದ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಕೊಡವ ಸಾಂಪ್ರದಾಯಿಕ ಪೇಟ ಧರಿಸಿ ತೆರೆದ ವಾಹನ ಏರಿದ ಅವರು ಸಾವಿರಾರು ಬಿಜೆಪಿ ಕಾರ್ಯಕರ್ತರು ಮತ್ತು ಸಾರ್ವಜನಿಕರೆಡೆಗೆ ಕೈ ಬೀಸುತ್ತಲೇ ರೋಡ್ ಶೋ ನಡೆಸಿದರು. ಶಾ ಅವರ ರೋಡ್ ಶೋ ಜನರಲ್ ತಿಮ್ಮಯ್ಯ ವೃತ್ತದವರೆಗೆ ನಡೆದು ನಂತರ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅಮಿತ್ ಶಾ ಅರ್ಧದಿಂದಲೇ ಹೊರಟು ಹೋದ ಕಾರಣ ಕಾದಿದ್ದವರು ನಿರಾಶೆಗೊಂಡರು.