ಬಿ.ವೈ.ವಿಜಯೇಂದ್ರ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿ ಕಳೆದ ಎರಡು ವರ್ಷಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ತಳಮಟ್ಟದಿಂದ ಪಕ್ಷ ಸಂಘಟನೆ ಬಲಪಡಿಸಿದ್ದಾರೆ. ಈಗಾಗಲೇ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ.
ಬೆಂಗಳೂರು (ನ.16): ಬಿಜೆಪಿ ರಾಜ್ಯಾಧ್ಯಕ್ಷರಾಗಿ ಎರಡು ವರ್ಷ ಪೂರೈಸಿದ ಬಿ.ವೈ.ವಿಜಯೇಂದ್ರ ಅವರನ್ನು ಪಕ್ಷದ ಹಿರಿಯ ನಾಯಕರು ಆತ್ಮೀಯವಾಗಿ ಸನ್ಮಾನಿಸಿ ಶುಭ ಕೋರಿದರು. ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಗೋವಿಂದ ಎಂ.ಕಾರಜೋಳ, ಕೋರ್ ಕಮಿಟಿ ಸದಸ್ಯ ಬಿ.ಶ್ರೀರಾಮುಲು, ವಿಧಾನಸಭೆ ಮುಖ್ಯ ಸಚೇತಕ ದೊಡ್ಡನಗೌಡ ಎಚ್.ಪಾಟೀಲ್ ಸೇರಿ ಪ್ರಮುಖ ಮುಖಂಡರು ವಿಜಯೇಂದ್ರ ಅವರನ್ನು ಸನ್ಮಾನಿಸಿ ಗೌರವಿಸಿದರು. ವಿಜಯೇಂದ್ರ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿ ಕಳೆದ ಎರಡು ವರ್ಷಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ತಳಮಟ್ಟದಿಂದ ಪಕ್ಷ ಸಂಘಟನೆ ಬಲಪಡಿಸಿದ್ದಾರೆ.
ಈಗಾಗಲೇ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ. ವಿಜಯೇಂದ್ರ ಅವರ ನೇತೃತ್ವದಲ್ಲಿ ಕೈಗೊಂಡ ಮೈಸೂರು ಮುಡಾ ಹಗರಣದ ಪಾದಯಾತ್ರೆ, ವಾಲ್ಮೀಕಿ ನಿಗಮದ ಹಗರಣ ಕುರಿತ ಹೋರಾಟ, ಬೆಲೆ ಏರಿಕೆ ಖಂಡಿಸಿ ಅಹೋರಾತ್ರಿ ಧರಣಿ, ಬೆಲೆ ಏರಿಕೆ ವಿರುದ್ಧ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆ, ಕಬ್ಬು ಬೆಳೆಗಾರರ ಹೋರಾಟ, ಎಸ್ಸಿ-ಎಸ್ಟಿ ಅನುದಾನದ ದುರ್ಬಳಕೆ ವಿರುದ್ಧ ಹೋರಾಟ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಜನವಿರೋಧಿ ಆಡಳಿತದ ವಿರುದ್ಧ ಹೋರಾಟ ರೂಪಿಸುವಲ್ಲಿ ನೇತೃತ್ವ ವಹಿಸಿದ್ದಾರೆ. ವಿಜಯೇಂದ್ರ ಅವರ ಯಶಸ್ವಿ ನೇತೃತ್ವದಿಂದ ಪ್ರಧಾನಿ ಮೋದಿ ಅವರ ನೆಚ್ಚಿನ ಮನ್ ಕೀ ಬಾತ್ ಕಾರ್ಯಕ್ರಮದ ಅನುಷ್ಠಾನದಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿರುವುದು ಹೆಮ್ಮೆ ತಂದಿದೆ ಎಂದು ಪಕ್ಷದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬಿಹಾರದಲ್ಲಿ ಪ್ರಜಾಪ್ರಭುತ್ವದ ದಿಗ್ವಿಜಯ
ಬಿಹಾರ ವಿಧಾನಸಭಾ ಚುನಾವಣೆಯ ಅಭೂತಪೂರ್ವ ಜಯ, ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಸದೃಢ ನಾಯಕತ್ವದ ಕೊರಳನ್ನು ಅಲಂಕರಿಸಿದ ಪ್ರಜಾಪ್ರಭುತ್ವದ ವಿಜಯದ ಹಾರವಾಗಿ ವಿಜೃಂಭಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಪ್ರಧಾನಿ ಅವರ ನೇತೃತ್ವದ ಎನ್‌ಡಿಎ ಸರ್ಕಾರ ದೇಶಕ್ಕೆ ಅನಿವಾರ್ಯ ಎಂಬ ಸಂದೇಶವನ್ನೂ ಬಿಹಾರದ ಮತದಾರರು ರವಾನಿಸಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರ ನೇತೃತ್ವದಲ್ಲಿ ಎನ್‌ಡಿಎ ಮೈತ್ರಿಕೂಟದ ಸಂಘಟಿತ ಹೋರಾಟ,
ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರ ಅವರ ಕಾರ್ಯತಂತ್ರ, ಮುಖ್ಯಮಂತ್ರಿ ನಿತೀಶ್ ಕುಮಾರ್‌ರ ದಕ್ಷ ಆಡಳಿತವನ್ನು ಮೆಚ್ಚಿ ಬಿಹಾರದ ಜನತೆ ಮತ್ತೆ ಎನ್‌ಡಿಎ ಸರ್ಕಾರವನ್ನು ನಿರೀಕ್ಷೆ ಮೀರಿದ ಐತಿಹಾಸಿಕ ದಾಖಲೆಯ ಬಹುಮತದಿಂದ ಗೆಲ್ಲಿಸಿ ಆಶೀರ್ವದಿಸಿದ್ದಾರೆ’ ಎಂದಿದ್ದಾರೆ. ‘ಈ ಚುನಾವಣೆಯಲ್ಲಿ ಮತಚೋರಿ ಹೆಸರಿನಲ್ಲಿ ಅಪಪ್ರಚಾರ ನಡೆಸಿ ರಾಜಕೀಯ ಚೋರತನ ಮಾಡಲು ಹೊರಟ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ಗೆ ಬಿಹಾರದ ಮತದಾರರು ತಕ್ಕ ಪಾಠ ಕಲಿಸಿ ಬಿಹಾರದ ರಾಜಕೀಯ ಭೂಪಟದಲ್ಲಿ ಕಾಂಗ್ರೆಸ್ ಗೆ ಅಸ್ತಿತ್ವಕ್ಕಾಗಿ ತಿಣುಕಾಡಬೇಕಾದ ಸ್ಥಿತಿಗೆ ತಳ್ಳಿದ್ದಾರೆ. ಆರ್‌ಜೆಡಿ ಸೇರಿದಂತೆ ಮಹಾಘಟಬಂಧನ್ ಕೂಟವನ್ನು ಬಿಹಾರದ ಜನತೆ ಸೋಲಿನ ಬಂಧನದ ರುಚಿ ತೋರಿಸಿದ್ದಾರೆ. ಪಾಳೆಗಾರಿಕೆ ರಾಜಕೀಯಕ್ಕೆ ಇನ್ನೆಂದೂ ಅವಕಾಶ ನೀಡಲಾಗದು ಎಂಬ ಉತ್ತರ ಕೊಟ್ಟಿದ್ದಾರೆ’ ಎಂದು ಕುಟುಕಿದ್ದಾರೆ.
