ಯಾರೋ ಬರೆದಿರುವ ಪುಸ್ತಕಕ್ಕೆ ತಮ್ಮ ಭಾವಚಿತ್ರ ಹಾಕಿಕೊಂಡು ಬಿಡುಗಡೆಗೊಳಿಸಿರುವುದೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಸಾಧನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.

ಬೆಂಗಳೂರು (ನ.16): ಯಾರೋ ಬರೆದಿರುವ ಪುಸ್ತಕಕ್ಕೆ ತಮ್ಮ ಭಾವಚಿತ್ರ ಹಾಕಿಕೊಂಡು ಬಿಡುಗಡೆಗೊಳಿಸಿರುವುದೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಸಾಧನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ.ಶಿವಕುಮಾರ್‌ ಅವರು ನೀರಾವರಿ ಸಚಿವರಾಗಿ ಕಳೆದ ಎರಡೂವರೆ ವರ್ಷಗಳಲ್ಲಿ ಏನು ಕಡಿದು ಕಟ್ಟೆ ಹಾಕಿದ್ದಾರೆ ಎಂದು ನೀರಿನ ಹೆಜ್ಜೆ ಪುಸ್ತಕ ಬಿಡುಗಡೆಗೊಳಿಸಿದ್ದಾರೆ? ಯಾರೋ ಬರೆದಿರುವ ಪುಸ್ತಕಕ್ಕೆ ತಮ್ಮ ಭಾವಚಿತ್ರ ಅಳವಡಿಸಿಕೊಂಡು ಬಿಡುಗಡೆಗೊಳಿಸಿದ್ದಾರೆ ಎಂದು ಟೀಕಿಸಿದರು. ಕಳೆದ ಎರಡೂವರೆ ವರ್ಷಗಳಲ್ಲಿ ರಾಜ್ಯದ ನೀರಾವರಿ ಯೋಜನೆಗಳಿಗೆ ಎಷ್ಟು ಅನುದಾನ ಕೊಟ್ಟಿದ್ದಾರೆ ಎಂಬುದನ್ನು ಬಹಿರಂಗವಾಗಿ ಚರ್ಚಿಸಬೇಕು ಎಂದು ಒತ್ತಾಯಿಸಿದರು.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ‘ನಮ್ಮ ನಡಿಗೆ ಕೃಷ್ಣೆ ಕಡೆಗೆ’ ಎಂದು ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಮುಖಂಡರು ಪಾದಯಾತ್ರೆ ಮಾಡಿದ್ದರು. ಮಹಾದಾಯಿ ವಿಚಾರಕ್ಕೆ ಸಂಬಂಧಿಸಿ ಶುಕ್ರವಾರದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಉದ್ದುದ್ದ ಭಾಷಣ ಮಾಡಿದ್ದಾರೆ. ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರು ಗೋವಾ ಚುನಾವಣೆ ಸಂದರ್ಭದಲ್ಲಿ ಏನು ಹೇಳಿದ್ದರು? ಯಾವುದೇ ಕಾರಣಕ್ಕೂ ಗೋವಾದಿಂದ ಹನಿ ನೀರನ್ನು ಕರ್ನಾಟಕಕ್ಕೆ ಕೊಡುವುದಿಲ್ಲ ಎಂದಿದ್ದರು. ಆಗ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರವನ್ನು ಟೀಕಿಸುವುದು ಫ್ಯಾಶನ್‌ ಆಗಿದೆ

ಕಳಸ-ಬಂಡೂರಿ ವಿಚಾರದಲ್ಲಿ ಏನಾದರೂ ಪ್ರಗತಿ ಆಗಿದ್ದರೆ ಅದು ಎನ್‌ಡಿಎ ಸರ್ಕಾರ ಬಂದ ನಂತರ ಮಾತ್ರ. 2010ರಲ್ಲಿ ನ್ಯಾಯಾಧಿಕರಣದ ತೀರ್ಪು ಬಂದಾಗ ಯುಪಿಎ ಸರ್ಕಾರ ಯಾವುದೇ ತೀರ್ಮಾನ ಮಾಡಲಿಲ್ಲ. ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರವನ್ನು ಟೀಕಿಸುವುದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ಗೆ ಫ್ಯಾಶನ್‌ ಆಗಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ನೀರಾವರಿ ಯೋಜನೆಗಳಿಗೆ ಎಷ್ಟು ಅನುದಾನ ನೀಡಿದ್ದಾರೆ ಎಂದು ತೆಗೆದು ನೋಡಿದರೆ ವಾಸ್ತವ ಗೊತ್ತಾಗಲಿದೆ. ‘ನೀರಿನ ಹೆಜ್ಜೆ’ ಎಂಬ ಪುಸ್ತಕ ಬಿಡುಗಡೆ ಮಾಡಿದರೆ ನೀರಾವರಿ ಯೋಜನೆಗೆ ಒತ್ತು ಕೊಟ್ಟಂತೆ ಆಗುವುದಿಲ್ಲ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.