ನನ್ನನ್ನು ಬಿಜೆಪಿ ಪಕ್ಷ ಕರೆದಿಲ್ಲ, ಬೊಮ್ಮಾಯಿ ಮಾಮ ಕರೆದಿದ್ದಾರೆ: ಸುದೀಪ್
ನಟ ಸುದೀಪ್ ಅವರು ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ನನ್ನ ಕಷ್ಟದ ದಿನಗಳಲ್ಲಿ ಜತೆಗೆ ನಿಂತ ‘ಬೊಮ್ಮಾಯಿ ಮಾಮ’ನ ಪರ ಈಗ ನಾನು ನಿಲ್ಲುತ್ತೇನೆ. ಬೊಮ್ಮಾಯಿ ಅವರನ್ನು ಬೆಂಬಲಿಸುತ್ತೇನೆ ಎಂದ ಮೇಲೆ ಅವರು ಬಯಸಿದ್ದನ್ನು ಮಾಡುತ್ತೇನೆ.
ನಟ ಸುದೀಪ್ ಅವರು ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ನನ್ನ ಕಷ್ಟದ ದಿನಗಳಲ್ಲಿ ಜತೆಗೆ ನಿಂತ ‘ಬೊಮ್ಮಾಯಿ ಮಾಮ’ನ ಪರ ಈಗ ನಾನು ನಿಲ್ಲುತ್ತೇನೆ. ಬೊಮ್ಮಾಯಿ ಅವರನ್ನು ಬೆಂಬಲಿಸುತ್ತೇನೆ ಎಂದ ಮೇಲೆ ಅವರು ಬಯಸಿದ್ದನ್ನು ಮಾಡುತ್ತೇನೆ. ನಿಮಗೆ ಏನೇನು ಆಗಬೇಕು ಅದನ್ನು ಮಾಡುತ್ತೇನೆ ಎಂದಿದ್ದೇನೆ. ಅವರು ಹೇಳಿದ ಕಡೆ ಪ್ರಚಾರ ಮಾಡುತ್ತೇನೆ’ ಎಂದು ತಿಳಿಸಿದರು. ಸುದೀಪ್ ಜತೆ ನಡೆದ ಪ್ರಶ್ನೋತ್ತರ ಮಾದರಿಯ ಪತ್ರಿಕಾಗೋಷ್ಠಿ ವಿವರ ಹೀಗಿದೆ:
* ಬಿಜೆಪಿ ಆಹ್ವಾನ ಒಪ್ಪಿಕೊಂಡು ಇಲ್ಲಿ ಬಂದಿದ್ದೀರಾ?
ನನಗೆ ಪಕ್ಷ ಕರೆದಿಲ್ಲ. ಬೊಮ್ಮಾಯಿ ಮಾಮ ಕರೆದಿದ್ದಾರೆ. ಪಕ್ಷವನ್ನು ಖಂಡಿತ ಒಪ್ಪಿಕೊಳ್ಳುತ್ತೇನೆ. ಇಂತಹವರಿಗೆ ಬೆಂಬಲ ನೀಡಿ ಎಂದರೆ ಕೊಡುತ್ತೇನೆ. ಎಲ್ಲರಿಗೂ ಅಲ್ಲ.
* ಬೇರೆ ಪಕ್ಷಗಳ ನಾಯಕರ ಪರ ಪ್ರಚಾರ ಕೈಗೊಳ್ಳುವಿರಾ ಅಥವಾ ಬಿಜೆಪಿ ಪರ ಮಾತ್ರ ಪ್ರಚಾರ ಮಾಡುವಿರಾ?
ಬೇರೆ ಪಕ್ಷದಿಂದ ನಮ್ಮ ಪರ ಕಷ್ಟ-ಸುಖ ಅಂತ ಆಗಿದ್ದರೆ ಖಂಡಿತ ಮಾಡುತ್ತೇನೆ. ಪರ ಎಂದು ಬಂದಾಗ ಯಾವ ಪಕ್ಷ ಎಂಬುದನ್ನು ನೋಡುವುದಿಲ್ಲ. ಎಲ್ಲರ ಜತೆ ಒಳ್ಳೆಯನಾಗಬೇಕಾದರೆ ಇಲ್ಲಿಗೆ ಬರಬೇಕಾಗಿಲ್ಲ. ವ್ಯಕ್ತಿಗಾಗಿ ಬಂದಿದ್ದೇನೆ. ಪಕ್ಷವಲ್ಲ. ಅಂಬರೀಶ್ ಮಾಮ ಬದುಕಿದಾಗ ಅವರ ಹೆಸರು ತೆಗೆದುಕೊಂಡಿದ್ದೇನೆ. ಈ ವ್ಯಕ್ತಿಯ ಕಾಳಜಿಗೆ ಹೇಳಿದ್ದೇನೆ. ಯಾವ ಪಕ್ಷವಾದರೂ ಇವರ ಪರವಾಗಿ ನಿಂತುಕೊಳ್ಳುತ್ತಿದ್ದೇನೆ. ನನ್ನ ಜೀವನದಲ್ಲಿ ಕಷ್ಟಜೀವನದಲ್ಲಿ ಒಂದು ಬೆರಳು ಹಿಡಿದು ನಿಂತಿದ್ದರೆ ಅವರ ಪರ ನಿಲ್ಲುತ್ತೇನೆ ಎಂದಿದ್ದೇನೆ. ನನ್ನ ಮಾತಿಗೆ ನಾನು ಬದ್ಧ.
ಸುದೀಪ್ ರಾಜಕೀಯ ಪ್ರವೇಶ ಇಲ್ಲ: ಬಿಜೆಪಿಯ ಪರ ಪ್ರಚಾರ
* ಕಷ್ಟದ ದಿನಗಳು ಎಂದರೆ ಏನು?
ಕಷ್ಟದ ದಿನಗಳು ಎಂದರೆ ಕಷ್ಟದ ದಿನಗಳು ಮಾತ್ರ. ಎಲ್ಲವನ್ನು ಹೇಳಿದರೆ ಒಂದು ಪುಸ್ತಕ ಬರೆಯಬೇಕಾಗುತ್ತದೆ.
* ಈ ಮೂಲಕ ನೀವು ರಾಜಕೀಯ ಪ್ರವೇಶ ಮಾಡುತ್ತೀರಲ್ಲವೇ?
ನಾನು ರಾಜಕೀಯಕ್ಕೆ ಪ್ರವೇಶ ಮಾಡುತ್ತಿಲ್ಲ. ನಾನು ಮತ್ತು ಅಭಿಮಾನಿಗಳು ಸಂತೋಷವಾಗಿರುತ್ತೇವೆ. 27 ವರ್ಷಗಳ ಕಾಲ ಕಷ್ಟಪಟ್ಟನಂತರ ಅಬಿಮಾನಿಗಳು ಬೇಸರವಾಗದಂತೆ ನಡೆದುಕೊಳ್ಳುತ್ತೇನೆ. ನಾನು ರಾಜಕೀಯಕ್ಕೆ ಪ್ರವೇಶ ಮಾಡುತ್ತಿಲ್ಲ. ಮನುಷ್ಯತ್ವ, ಸಂಬಂಧ ಒಂದು ಇದೆ.
* ಹಣ ಪಡೆದುಕೊಂಡು ಪ್ರಚಾರ ಮಾಡಲು ಬಂದಿದ್ದೀರಾ?
ನೋಡಿ, ಸಿನಿಮಾದಲ್ಲಿಯೇ ತುಂಬಾ ಜನರಿಂದ ನನ್ನ ಹಣ ಬರಬೇಕಾಗಿದೆ. ಹಣ ದುಡಿಯುವುದಕ್ಕೆ ಇಲ್ಲಿಯೇ ಬರಬೇಕಾ? ನನಗೆ ಸಾಮರ್ಥ್ಯ ಇಲ್ಲವೇ? ಬೊಮ್ಮಾಯಿ ಅವರಿಗೆ ಬೆಂಬಲ. ಮಾಮ ಅವರಿಗಾಗಿ ಬಂದಿದ್ದೇನೆ ಅಷ್ಟೇ.
* ಚುನಾವಣೆ ಸ್ಪರ್ಧಿಸುವ ಉದ್ದೇಶ ಏನಾದರೂ ಇದೆಯೇ?
ಕೈಯಲ್ಲಿ ಸಿನಿಮಾಗಳಿವೆ. ಮೊನ್ನೆಯಷ್ಟೇ ಘೋಷಿಸಿದ್ದೇನೆ. ಚುನಾವಣೆಗೆ ಬರುವ ಛಾನ್ಸೇ ಇಲ್ಲ. ನಾನು ಚುನಾವಣೆಗೆ ನಿಲ್ಲುತ್ತಿಲ್ಲ. ಅನಿವಾರ್ಯ ಕಾರಣಗಳಿಗಾಗಿ ನಿಲ್ಲುವನಲ್ಲ. ನಿಲ್ಲಬೇಕು ಎಂಬ ನಿಲುವು ತೆಗೆದುಕೊಂಡರೆ ನಿಲ್ಲುತ್ತೇನೆ. ಇಲ್ಲಿ ಒಂದು ಹೇಳಿ, ನಂತರ ಹೋಗಿ ಮತ್ತೊಂದು ಹೇಳುವುದಿಲ್ಲ.
* ಎಷ್ಟು ಜನರ ಪರವಾಗಿ ಪ್ರಚಾರ ಮಾಡುತ್ತೀರಿ ನೀವು? ಇದಕ್ಕಾಗಿ ಎಷ್ಟುಸಮಯ ಕೊಡುತ್ತೀರಿ?
ಒಂದು ವ್ಯಕ್ತಿಗೆ ಬೆಂಬಲ ನೀಡುತ್ತೇನೆ ಎಂದು ಹೇಳಿದ್ದೇನೆ. ಕೆಲವು ವ್ಯಕ್ತಿಗಳ ಪರ ಪ್ರಚಾರ ಮಾಡುತ್ತೇನೆ. ಪ್ರಚಾರದ ಬಗ್ಗೆ ಇನ್ನೂ ಮಾತುಕತೆಯಾಗಿಲ್ಲ. ಬೊಮ್ಮಾಯಿ ಮಾಮ ಹೇಳಿದ ಕಡೆ ಪ್ರಚಾರ ನಡೆಸುತ್ತೇನೆ.
* ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಭ್ರಷ್ಟಾಚಾರ ಆರೋಪವಿದೆ? ಇದನ್ನು ನೀವು ಸಮರ್ಥಿಸಿಕೊಳ್ಳುವಿರಾ?
ನಾನೊಬ್ಬ ನಾಗರಿಕ, ಒಳ್ಳೆಯದು ಆಗುತ್ತಿದೆ ಎಂಬುದನ್ನು ಗಮನಿಸಿದ್ದೇನೆ. ನಾಗರಿಕನಾಗಿ ಎಲ್ಲವನ್ನೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದರೆ, ಕೆಲವೊಂದು ಒಳ್ಳೆಯ ಕೆಲಸಗಳನ್ನು ಒಪ್ಪಿಕೊಳ್ಳುತ್ತೇನೆ. ಭ್ರಷ್ಟಾಚಾರ ಬಗ್ಗೆ ನನಗೆ ಗೊತ್ತಿರುವ ವಿಚಾರ ಮಾತನಾಡಬಹುದು. ದೇಶದಲ್ಲಿ ನಾನು ಮಾತ್ರವಲ್ಲ, ಕಾನೂನನ್ನು ನಂಬುತ್ತೇನೆ. ಆ ರೀತಿ ನಡೆದಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತದೆ. ನನ್ನ ಬೆಂಬಲ ಒಳ್ಳೆಯ ಕಾರಣಗಳಿಗೆ.
* ಐಟಿ ದಾಳಿ ಭೀತಿಯಿಂದ ನೀವು ಬಿಜೆಪಿಗೆ ಬೆಂಬಲಿಸಲು ಮುಂದಾಗಿದ್ದೀರಾ?
ಐಟಿ ದಾಳಿ ಆಗಿದ್ದೂ ಆಯಿತು. ಏನೂ ಸಿಕ್ಕಿಲ್ಲ ಎಂದು ವಾಪಸ್ ಹೋಗಿದ್ದೂ ಆಯಿತು. ಯಾರೋ ಒತ್ತಡ ಮಾಡಿದ್ದಕ್ಕೆ ಬರುವ ವ್ಯಕ್ತಿ ನಾನಲ್ಲ. ನಾನು ಹಾಗೆ ಕಾಣಿಸುತ್ತೇನೆಯೇ? ಪ್ರೀತಿಗಾಗಿ ಬಂದವನು ನಾನು.
ಚಿತ್ರರಂಗದವರೇ ಮಾಡಿದ ಕೃತ್ಯ, ಯಾರು ಅಂತ ಗೊತ್ತಿದೆ; ಬೆದರಿಕೆ ಪತ್ರದ ಬಗ್ಗೆ ಸುದೀಪ್ ಶಾಕಿಂಗ್ ಹೇಳಿಕೆ
* ನೀವು ನಿಮ್ಮ ಆಪ್ತರೊಬ್ಬರ ಪರವಾಗಿ ಟಿಕೆಟ್ ಕೇಳಿದ್ದೀರಂತೆ?
ನಾನು ಯಾರ ಪರವಾಗಿಯೂ ಟಿಕೆಟ್ ಕೇಳಿಲ್ಲ. ಯಾವುದಾದರೂ ಸಿನಿಮಾ ರಿಲೀಸ್ ಆಗಿದ್ದರೆ ಅದಕ್ಕೆ ಟಿಕೆಟ್ ಕೊಡಿಸಬಲ್ಲೆ. ಆದರೆ, ಪಕ್ಷದ ಟಿಕೆಟ್ ಕೊಡಿಸುವ ಮಟ್ಟದಲ್ಲಿ ನಾನು ಇಲ್ಲ. ಅದಕ್ಕೆ ನಾನು ಹೋಗುವುದೂ ಇಲ್ಲ. ಇವತ್ತಿವರೆಗೆ ಅಂಥದ್ದು ಮಾಡಿಲ್ಲ.