ಬೆಂಗಳೂರು, (ಡಿ.05): `ಭಾಗ್ಯ'ನಗರಕ್ಕೆ ಬಂದವರು ಬೆಂದಕಾಳೂರಿಗೂ ಬರ್ತಾರಾ..? ಡೆಲ್ಲಿಯ ಕಟ್ಟೆಯ ಮೇಲೆ ಬಹುಚರ್ಚಿತವಾಗುತ್ತಿರುವ ವಿಷಯ ಇದು. ಒಂದು ಸಣ್ಣ ಸುಳಿವೂ ಇಲ್ಲದಂತೆ ಘಟಾನುಘಟಿ ನಾಯಕರು `ನವಾಬರ' ಊರು, ಮುತ್ತಿನ ನಗರಿಯ ಬಾಗಿಲು ತಟ್ಟಿದ ಬಿಜೆಪಿಯ ಈ ಹೊಸ ಪ್ರಯೋಗ ಎಲ್ಲರಲ್ಲೂ ಅಚ್ಚರಿ ಉಂಟು ಮಾಡಿದೆ. ಹೈದರಾಬಾದಿಗೆ ಹೋದವರು ಬೆಂಗಳೂರು ಬಿಬಿಎಂಪಿ ಚುನಾವಣೆಯ ಪ್ರಚಾರಕ್ಕೂ ಬರ್ತಾರಾ ? ಅನ್ನೋ ಪ್ರಶ್ನೆ ಇದೀಗ ಕಮಲಪಡೆಯ ಮುಂದೆ ಬಂದಿದೆ. 

ಇನ್ನು ನೀವು ಎಂಐಎಂ ಪಕ್ಷಕ್ಕೆ ಮತ ಹಾಕಿದರೆ ದೇಶದ್ರೋಹಿಗಳಿಗೆ ಮತ ಹಾಕಿದಂತೆ. ನವಾಬರ ಆಡಳಿತ ಇನ್ನೂ ನಡೆಯುತ್ತಿದೆ. ಈಗ ಬದಲಾವಣೆ ಆಗಬೇಕಿದೆ. ಹೈದರಾಬಾದ್ ಅನ್ನು ಭಾಗ್ಯನಗರ ಅಂತ ಮಾಡಬೇಕಿದೆ. ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಚುನಾವಣೆಯಲ್ಲಿ ಇಂಥ ಹತ್ತುಹಲವು ಮಾತುಗಳು ರಾಜಕೀಯ ಧ್ರುವೀಕರಣಕ್ಕೆ ನಾಂದಿ ಹಾಡುವ ಮೂಲಕ ಬಿಜೆಪಿ ಪಕ್ಷವನ್ನು ಭಾಗ್ಯನಗರದ (ಹೈದರಾಬಾದ್) ಹೊಸ್ತಿನಲ್ಲಿ ತಂದು ನಿಲ್ಲಿಸಿದ್ದು ಸುಳ್ಳಲ್ಲ.

ಹೈದರಾಬಾದ್‌ ಪಾಲಿಕೆ ಚುನಾವಣೆ: 4 ರಿಂದ 48 ಕ್ಕೇರಿದ ಬಿಜೆಪಿ; ಕೇಸರಿ ಪಡೆ ಕಮಾಲ್ ಸೀಕ್ರೆಟ್..!

 ಐದು ವರ್ಷಗಳ ಹಿಂದೆ ಕೇವಲ ನಾಲ್ವರು ಕಾರ್ಪೋರೇಟರ್‍ಗಳಿದ್ದ ಕಮಲ ಪಕ್ಷಕ್ಕೆ ಈ ಬಾರಿ ಮತದಾರರ 40ರ ಗಡಿ ದಾಟಿಸಿದ್ದು, 50 ಸ್ಥಾನಗಳ ಹೊಸ್ತಿನಲ್ಲಿ ನಿಲ್ಲಿಸಿದ್ದು ಬಿಜೆಪಿಗೆ ಆನೆಬಲ ಬಂದಂತಾಗಿದೆ.

ಬ್ಯಾಲೆಟ್ ಪೇಪರ್‍ಗಳ ಮೂಲಕ ನಡೆದ ಈ ಚುನಾವಣೆಯಲ್ಲಿ `ಫಲಿತಾಂಶ' ಮಾತ್ರ ಆಡಳಿತರೂಢ ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷಕ್ಕೆ ದೊಡ್ಡ ಹೊಡೆತ ನೀಡಿದೆ. ತಾವು ಮಾಡಿದ್ದೇ ಸರಿ ಎನ್ನುವ ಟಿಆರ್‍ಎಸ್ ಧೋರಣೆಗೆ ರೆಡ್ ಮಾರ್ಕ್ ಹಾಕಿದೆ. ಹಳೇ ಹೈದರಾಬಾದ್ ಏರಿಯಾದಲ್ಲಿ ಹಿಡಿತ ಹೊಂದಿರುವ ಓವೈಸಿ ಪಕ್ಷ ಹೆಚ್ಚುಕಮ್ಮಿ ಅದೇ ಅಂಕಿ-ಸಂಖ್ಯೆಗಳೊಂದಿಗೆ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದೆ. (ಬಿಜೆಪಿ-48, ಟಿಆರ್‍ಎಸ್-55, ಎಐಎಂಐಎಂ-44, ಕಾಂಗ್ರೆಸ್-2)

ಶೂನ್ಯಕ್ಕೆ ರಂಗುತುಂಬಿದ ಬಿಜೆಪಿ 

ಟಿಆರ್‍ಎಸ್ ಪಕ್ಷ ಪಕ್ಕಾ ಬಹುಮತದೊಂದಿಗೆ ತೆಲಂಗಾಣದಲ್ಲಿ ಎರಡನೇ ಬಾರಿ ಆಡಳಿತದ ಚುಕ್ಕಾಣಿ ಹಿಡಿದ ಮೇಲೆ ತನ್ನ ಖದರ್ ಬಹಳ ಜೋರಾಗಿಯೇ ಮುಂದುವರೆಸಿತ್ತು. ಏನೇ ಬಂದರೂ ವಿಜಯಮಾಲೆ ನಮಗೆ, ನಮ್ಮ ಪಕ್ಷಕ್ಕೆ ಅಂತೆಲ್ಲಾ ನಾಯಕರು ಹೇಳೋಕೆ ಶುರು ಮಾಡಿದ್ದರು. ಕಳೆದ ಬಾರಿಯ ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಚುನಾವಣೆಯಲ್ಲೂ ಕೂಡ ಟಿಆರ್‍ಎಸ್ ಪಕ್ಷ ಪಾಲಿಕೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತ್ತು. ಈ ಆಮಲೇ ಈ ಬಾರಿ ಟಿಆರ್‍ಎಸ್ ಹಿಡಿತ ಕಳೆದುಕೊಳ್ಳಲು ಕಾರಣವಾಯ್ತು ಅಂತಾರೆ ರಾಜಕೀಯ ವಿಶ್ಲೇಷಕರು.

ಆಡಳಿತರೂಢ ಟಿಆರ್‍ಎಸ್ ಪಕ್ಷ ಮಳೆಯ ಪ್ರವಾಹ ನಿಭಾಯಿಸಿದ ರೀತಿ, ಕೊರೊನಾ ರೋಗ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು ಮೇಲೆ ಹೈದರಾಬಾದಿಗರಿಗೆ ಬಹಳ ಸಿಟ್ಟು ಇತ್ತು ಇದರ ಜೊತೆಗೆ ಸರ್ಕಾರಿ ಅಧಿಕಾರಿಗಳನ್ನು ನಡೆಸಿಕೊಂಡ ರೀತಿಯೂ ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವಬೀರಿತು. ಅಂಚೆಮತಗಳ ಏಣಿಕೆಯ ವೇಳೆ ಹೆಚ್ಚುಕಮ್ಮಿ ಬಿಜೆಪಿ 80 ಕ್ಷೇತ್ರಗಳಲ್ಲಿ ತೀವ್ರ ಮುನ್ನಡೆ ಸಾಧಿಸಿದ್ದು ಚುನಾವಣೆಯ ಫಲಿತಾಂಶ ಒಂದು ಅಚ್ಚರಿಯಾಗಿ ಕಂಡು ಬಂತು.

 ಅಂತಿಮವಾಗಿ ಈ ಅಚ್ಚರಿ 48 ಡಿವಿಷನ್‍ಗಳಲ್ಲಿ ಗೆಲುವಾಗಿ ಪರಿವರ್ತಿಸಿತು. ಇದಕ್ಕೆ ಸಹಕಾರಿಯಾಗಿದ್ದು ರಾಜಕೀಯ ಧ್ರುವೀಕರಣದ ಮಾತುಗಳು, ಹೈದರಬಾದ್ ಹೆಸರು ಬದಲಾಯಿಸುತ್ತೇವೆ ಎನ್ನುವ ಭರವಸೆ, ಸರ್ಜಿಕಲ್ ಸ್ಟ್ರೈಕ್ ಮಾತುಗಳು, ಕೇಂದ್ರ ಸಚಿವ ಅಮಿತ್ ಶಾ ಅಂಥ ಘಟಾನುಘಟಿ ಹೈಕಮಾಂಡ್ ನಾಯಕರ ಪ್ರಚಾರ ಎಲ್ಲವೂ ಕೂಡ ಚುನಾವಣೆಗೆ ರಂಗು ತುಂಬಿದವು. 

ಗಟ್ಟಿ ವಿರೋಧ ಪಕ್ಷವಾದರೂ ಇರಲಿ : ಮೈ ಕುದಲು ಝಮ್ ಎನ್ನಿಸುವ ಬಿಜೆಪಿಯ ಮಾತುಗಳಿಗೆ ಹೈದರಾಬಾದಿಗರು ಮಣೆ ಹಾಕಿದರು ಎನ್ನುವುದಕ್ಕಿಂತ ಒಂದು ಗಟ್ಟಿ ವಿಪಕ್ಷವಾದರೂ ನಮಗೆ ಇರಲಿ ಅನ್ನೋ ಅಲೋಚನೆಗೆ ಬಂದು ನಿಂತಂತೆ ಇದ್ದಾರೆ ಹೈದರಾಬಾದ್ ಮತದಾರ. ಹೊಸ ರಾಜ್ಯದ ಸ್ಥಾನಮಾನ ತಂದು ಕೊಟ್ಟ ಕಾಂಗ್ರೆಸ್ ಪಕ್ಷ ಕೈ ಹಿಡಿಯೋಣವೆಂದರೆ ಕಾಂಗ್ರೆಸ್‍ನಲ್ಲಿ ಗೆದ್ದವರೆಲ್ಲಾ ಪುನಃ ಹೋಗಿ ಟಿಆರ್‍ಎಸ್ ಪಕ್ಷಕ್ಕೆ ಸೇರುತ್ತಿದ್ದರು. ಈ ಜಾಗ ತುಂಬುವವರು ಯಾರು ಅನ್ನೋ ಪ್ರಶ್ನೆ ಬಂದಾಗ ಮತದಾರರನಿಗೆ ಕಂಡಿದ್ದು ಹೊಸ ಹುಮ್ಮಸ್ಸಿನಲ್ಲಿದ್ದ ಬಿಜೆಪಿ ಪಕ್ಷ.

ನಾಲ್ವರು ಕಾರ್ಪೋರೇಟರ್‍ಗಳಿದ್ದ ಬಿಜೆಪಿ ಈ ಅವಕಾಶವನ್ನು ಸರಿಯಾಗಿ ಬಳಕೆ ಮಾಡಿಕೊಳ್ತು. ಇದೇ ಪ್ರಥಮ ಎನ್ನುವಂತೆ ಹೈಕಮಾಂಡ್ ಮಟ್ಟದ ನಾಯಕರು ಚುನಾವಣಾ ಪ್ರಚಾರಕ್ಕೆ ಬರುವಂತೆ ನೋಡಿಕೊಂಡಿತು. ಸಾಮಾನ್ಯಕ್ಕೆ ಮುನಿಸಿಪಲ್ ಚುನಾವಣೆಗಳು ಅಭಿವೃದ್ಧಿ, ತ್ಯಾಜ್ಯ ವಿಲೇವಾರಿ ಇಂಥ ಸಮಸ್ಯೆಗಳ ಮೇಲೆ ನಡೆಯುತ್ತವೆ. ಆದರೆ ಬಿಜೆಪಿ ಹೊಸ ಐಡಿಯಾ ಮಾಡಿ ರಾಷ್ಟ್ರಮಟ್ಟದ ಘೋಷಣೆಗಳು ಕೂಗಿತು. 

ಒಂದು ರೀತಿ ಹಿಂದೂ ಮುಸ್ಲಿಂ ಮತಗಳನ್ನು ವಿಭಜಿಸಿತು. ಇದೇ ಅಂಶಗಳ ಮೇಲೆ ಆಟವಾಡುತ್ತಿದ್ದ ಟಿಆರ್‍ಎಸ್‍ಗೆ ದೊಡ್ಡ ಹೊಡೆತಕೊಟ್ತು. ಸಿಎಂ ಚಂದ್ರಶೇಖರ್ ರಾವ್ ಪುತ್ರ, ಆಳಿಯ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಗಳಲ್ಲೇ ಬಿಜೆಪಿ ತನ್ನ ಪ್ರಾಬಲ್ಯ ಮೆರದಿದ್ದು ಸ್ಕೋರ್ ಹೆಚ್ಚಾಗಲು ಕಾರಣವಾಯ್ತು.

48 ಸ್ಥಾನಗಳನ್ನು ಗಳಿಸಿದ್ದು 2023ರ ಚುನಾವಣೆಯಲ್ಲಿ ಭಾಗ್ಯನಗರದ ಮತದಾರರು ನಮಗೆ ಮತ್ತಷ್ಟು ಬಲತುಂಬುತ್ತಾರೆ ಅನ್ನೋ ಹುಮ್ಮಸ್ಸಿನಲ್ಲಿದ್ದಾರೆ ಕಮಲ ನಾಯಕರು. ಇದು ಫಲಿಸಬೇಕಾದ್ರೆ ವಿಪಕ್ಷದ ಜವಾಬ್ದಾರಿಯನ್ನು ಬಿಜೆಪಿ ಬಹಳ ಖಡಕ್ ಆಗಿ ನಿರ್ವಹಿಸಬೇಕಿದೆ. 

ಬೆಂಗಳೂರಿಗೂ ಬರ್ತಾರಾ ?

ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೋರೇಷನ್‍ಗಿಂತ ಬಿಬಿಎಂಪಿ ಬಹಳ ದೊಡ್ಡದು. ಅದು 150 ವಾರ್ಡ್ ಇದ್ರೆ ಬೆಂಗಳೂರಲ್ಲಿ 198 ವಾರ್ಡ್‍ಗಳಿವೆ. ಇದೇ ಹೊತ್ತಿನಲ್ಲಿ ಚುನಾವಣೆ ಷಡ್ಯೂಲ್ ಒಂದು ತಿಂಗಳ ಒಳಗಾಗಿ ಘೋಷಿಸಿ ಅಂಥ ಹೈಕೋರ್ಟ್ ನಿರ್ದೇಶನ ನೀಡಿರುವ ಬೆನ್ನಲ್ಲೇ ಆಡಳಿತರೂಢ ಬಿಜೆಪಿಗೆ ಹೊಸ ತಲೆನೋವು ಶುರುವಾಗಿದೆ. 

ಸುಪ್ರೀಂಕೋರ್ಟ್ ಕದತಟ್ಟಲು ರಾಜ್ಯ ಸರ್ಕಾರ ಚಿಂತಿಸುತ್ತಿದೆ. ಇಷ್ಟರ ನಡುವೆ ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಗೆಲುವು ಬಿಬಿಎಂಪಿಗೂ ವರ್ಗಾಯಿಸಿಕೊಳ್ಳಬೇಕು ಅನ್ನೋ ಆತುರದಲ್ಲಿ ಬೆಂಗಳೂರು ಬಿಜೆಪಿ ಇದೆ. ಈ ಆಸೆ ಕೈಗೂಡಬೇಕಾದರೆ ಹೈದರಾಬಾದ್ ಮಾದರಿಯಲ್ಲಿ ಹೊಸ ಪ್ರಯೋಗಗಳು ಮಾಡಬೇಕು ಅನ್ನೋ ಮಾತು ಕೂಡ ಬೆಂಗಳೂರು ಬಿಜೆಪಿ ಘಟಕದಿಂದ ಕೇಳಿ ಬರುತ್ತಿವೆ. 

ಆದ್ರೆ ಹೈದರಾಬಾದ್‍ನಲ್ಲಿ ವರ್ಕೌಟ್ ಆದ ಐಡಿಯಾ ಬೆಂಗಳೂರಿನಲ್ಲಿ ಯಶಸ್ಸಿಯಾಗುತ್ತಾ ? ಅನ್ನೋ ಚಿಂತೆ ಕೂಡ ಇದೆ. ಆದ್ರೂ ಘಟಾನುಘಟಿ ನಾಯಕರನ್ನು ಪ್ರಚಾರಕ್ಕೆ ಕರೆಯಿಸೋಣ ಅನ್ನೋ ಅಲೋಚನೆ ಕೂಡ ಇದೆ. ಹೈಕಮಾಂಡ್ ಈ ಐಡಿಯಾ ಒಪ್ಪುತ್ತಾ ಅಥವಾ ಸಮಯ ಬರಲಿ ನೋಡೋಣ ಅನ್ನುತ್ತಾ ? ಗೊತ್ತಿಲ್ಲ