Asianet Suvarna News Asianet Suvarna News

ಹಳ್ಳಿ ಹಕ್ಕಿ ಮತ್ತೆ ಕಾಂಗ್ರೆಸ್‌ನತ್ತ?: ಖರ್ಗೆ ಬಳಿಕ ಸಿದ್ದು ಭೇಟಿ

ಸೋಮವಾರವಷ್ಟೆ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಬಂದಿದ್ದ ಮಾಜಿ ಸಚಿವ ಎಚ್‌.ವಿಶ್ವನಾಥ್‌ ಅವರು ಮಂಗಳವಾರ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ನಗರದಲ್ಲಿ ಭೇಟಿ ಮಾಡಿದ್ದಾರೆ.

Bjp Mlc H Vishwanath Meets Congress Leader Siddaramaiah gvd
Author
First Published Dec 7, 2022, 10:48 AM IST

ಬೆಂಗಳೂರು (ಡಿ.07): ಸೋಮವಾರವಷ್ಟೆ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಬಂದಿದ್ದ ಮಾಜಿ ಸಚಿವ ಎಚ್‌.ವಿಶ್ವನಾಥ್‌ ಅವರು ಮಂಗಳವಾರ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ನಗರದಲ್ಲಿ ಭೇಟಿ ಮಾಡಿದ್ದು, ಕಾಂಗ್ರೆಸ್‌ ಸೇರುವುದು ಬಹುತೇಕ ಖಚಿತ ಎಂದು ಮೂಲಗಳು ಹೇಳಿವೆ. ನಗರದ ಸರ್ಕಾರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಬೇಟಿ ಮಾಡಿದ ವಿಶ್ವನಾಥ್‌ ಅವರು ಕಾಂಗ್ರೆಸ್‌ಗೆ ಮರಳುವ ಕುರಿತು ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್‌ಗೆ ಮರಳುವಿರಾ ಎಂಬ ಪ್ರಶ್ನೆಗೆ, ‘ರಾಜಕಾರಣ ನಿಂತ ನೀರಲ್ಲ. 

ಹರಿಯುವ ನೀರು. ನೋಡೋಣ, ರಾಜ್ಯ ರಾಜಕಾರಣದಲ್ಲಿ ಹಲವು ವಿದ್ಯಮಾನಗಳು ನಡೆಯುತ್ತಿವೆ. ಮುಂದೆ ಏನಾಗುತ್ತೆ ಅಂತ ಯಾರಿಗೆ ಗೊತ್ತು. ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವೆ. ನಿಮಗೆ ಹೇಳಿಯೇ ತೀರ್ಮಾನ ಮಾಡುವೆ’ ಎಂದು ಹೇಳಿದರು. ನಾನು ಮತ್ತು ಸಿದ್ದರಾಮಯ್ಯ ಅವರು ಬಹಳ ವರ್ಷ ಒಟ್ಟಿಗೆ ರಾಜಕಾರಣದಲ್ಲಿ ಇದ್ದವರು. ನಾನು ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ. ಬೇಗ ಚೇತರಿಸಿಕೊಳ್ಳಿ ಎಂದು ಹಾರೈಸಿದ್ದೇನೆ. ದೆಹಲಿಯಲ್ಲಿ ಅಭಿಮಾನದಿಂದ ಖರ್ಗೆ ಅವರನ್ನು ಭೇಟಿ ಮಾಡಿ ಅಭಿನಂದನೆ ತಿಳಿಸಿ ಬಂದೆ ಅಷ್ಟೆ. ಯಾವುದೇ ರಾಜಕಾರಣದ ವಿಷಯ ಮಾತನಾಡಿಲ್ಲ ಎಂದರು.

ಸಿದ್ದರಾಮಯ್ಯ ಎಲ್ಲಿ ನಿಂತರೂ ಗೆಲ್ಲುತ್ತಾರೆ: ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌

ವಿಶ್ವನಾಥ್‌ ಮರಳಿ ಕಾಂಗ್ರೆಸ್‌ ಸೇರ್ಪಡೆ ಸಾಧ್ಯತೆ: ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಎ.ಎಚ್‌. ವಿಶ್ವನಾಥ್‌ ಮತ್ತೆ ಕಾಂಗ್ರೆಸ್‌ನತ್ತ ಮುಖ ಮಾಡಿದ್ದು ಸದ್ಯದಲ್ಲೇ ಬಿಜೆಪಿ ತೊರೆದು ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗುವ ಸಾಧ್ಯತೆಯಿದೆ. ಸೋಮವಾರ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವ ಅವರು ಈ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಿಸಿದ್ದಾರೆ. ವಿಶ್ವನಾಥ್‌ ಪುತ್ರ ಪೂರ್ವಜ್‌ ವಿಶ್ವನಾಥ್‌ ಈಗಾಗಲೇ ಕಾಂಗ್ರೆಸ್‌ ಜತೆ ಗುರುತಿಸಿಕೊಂಡಿರುವುದರಿಂದ ಸದ್ಯದಲ್ಲೇ ವಿಶ್ವನಾಥ್‌ ಕೂಡ ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದ ವಿಶ್ವನಾಥ್‌ ಕಳೆದ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್‌ ಪಕ್ಷ ಸೇರಿ ರಾಜ್ಯಾಧ್ಯಕ್ಷರೂ ಆಗಿದ್ದರು. ಜತೆಗೆ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಬಳಿಕ ಆಪರೇಷನ್‌ ಕಮಲದ ವೇಳೆ ಬಿಜೆಪಿಗೆ ಹಾರಿದ್ದ ಅವರು ಉಪ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಬಳಿಕ ಪರಿಷತ್‌ ಸದಸ್ಯರಾಗಿದ್ದ ಅವರಿಗೆ ಬಿಜೆಪಿ ಕೊಟ್ಟಮಾತಿನಂತೆ ಸಚಿವ ಸ್ಥಾನ ನೀಡಿಲ್ಲ ಎಂಬ ಅಸಮಾಧಾನವಿದೆ. ಪಠ್ಯ ಪರಿಷ್ಕರಣೆ ವಿಚಾರ, ಹಿಜಾಬ್‌ ವಿಚಾರ ಸೇರಿದಂತೆ ಹಲವು ವಿಚಾರಗಳಲ್ಲಿ ಬಿಜೆಪಿಗೆ ವಿರುದ್ಧವಾದ ಹೇಳಿಕೆ ನೀಡುತ್ತಿದ್ದ ವಿಶ್ವನಾಥ್‌ ಇತ್ತೀಚೆಗೆ ಬಿಜೆಪಿ ಜತೆ ಅಂತರ ಕಾಯ್ದುಕೊಂಡಿದ್ದರು.

ವಾಪಸ್ ಗೂಡಿಗೆ ಮರಳಲಿದೆ 'ಹಳ್ಳಿಹಕ್ಕಿ': ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ತಾರಾ ವಿಶ್ವನಾಥ್‌?

ಇನ್ನು ವಿಶ್ವನಾಥ್‌ ಪುತ್ರ ಪೂರ್ವಜ್‌ ವಿಶ್ವನಾಥ್‌ ನಂಜನಗೂಡು ತಾಲೂಕು ತಗಡೂರಿನಲ್ಲಿ ಕಾಂಗ್ರೆಸ್‌ ಆಯೋಜಿಸಿದ್ದ ‘ಸ್ವಾತಂತ್ರ್ಯ ನಡಿಗೆ’ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು. ಪಕ್ಷ ಸೇರುವ ಬಗ್ಗೆ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇನೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಿದ್ದರಾಮಯ್ಯ ಕೈ ಬಲಪಡಿಸಲು ಸದ್ಯದಲ್ಲೇ ಕಾಂಗ್ರೆಸ್‌ ಸೇರಲಿದ್ದಾರೆ. ಇದಕ್ಕೆ ತಂದೆಯೂ ಸಮ್ಮತಿ ಸೂಚಿಸಿದ್ದಾರೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ವಿಶ್ವನಾಥ್‌ ಅವರ ಖರ್ಗೆ ಭೇಟಿ ಮಹತ್ವ ಪಡೆದುಕೊಂಡಿದೆ.

Follow Us:
Download App:
  • android
  • ios