ವಾಪಸ್ ಗೂಡಿಗೆ ಮರಳಲಿದೆ 'ಹಳ್ಳಿಹಕ್ಕಿ': ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ತಾರಾ ವಿಶ್ವನಾಥ್?
ಬಿಜೆಪಿಯಲ್ಲಿ ಯಾವುದೇ ಸ್ಥಾನಮಾನ ಸಿಕ್ಕಿಲ್ಲ ಎಂಬ ಅಸಮಾಧಾನದಿಂದ ಪಕ್ಷದಿಂದ ಹೊರಹೋಗಲು ಸಿದ್ದತೆ ನಡೆಸಿರುವ ವಿಶ್ವನಾಥ್
ಬೆಂಗಳೂರು(ಅ.26): ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿ ಬಳಿಕ ಅಲ್ಲಿಂದಲೂ ಕಾಲ್ಕಿತ್ತು ಬಿಜೆಪಿ ಸೇರ್ಪಡೆಯಾಗಿದ್ದ ಮಾಜಿ ಸಚಿವ ಹಾಗೂ ಬಿಜೆಪಿ ಎಂಎಲ್‌ಸಿ ಎಚ್. ವಿಶ್ವನಾಥ್ ಮತ್ತೆ ಕಾಂಗ್ರೆಸ್ ಸೇರಲಿದ್ದಾರೆ ಅಂತ ಹೇಳಲಾಗುತ್ತಿದೆ. ಸದ್ಯ ಬಿಜೆಪಿಯಲ್ಲಿ ಯಾವುದೇ ಸ್ಥಾನಮಾನ ಸಿಕ್ಕಿಲ್ಲ ಎಂಬ ಅಸಮಾಧಾನದಿಂದ ವಿಶ್ವನಾಥ್ ಪಕ್ಷದಿಂದ ಹೊರಹೋಗಲು ಸಿದ್ದತೆ ನಡೆಸಿದ್ದಾರೆ.
ಇದೀಗ ಮತ್ತೆ ಕಾಂಗ್ರೆಸ್ ಕದ ತಟ್ಟಲು ವಿಶ್ವನಾಥ್ ಮುಂದಾಗಿದ್ದಾರೆ. ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಮಟ್ಟದ ನಾಯಕರ ಜೊತೆಗೂ ಮಾತುಕತೆ ಆಗಿದೆ. ಆದರೆ ಸಿದ್ದರಾಮಯ್ಯ ಒಬ್ಬರು ಮಾತ್ರ ಇನ್ನೂ ನೀಡಿಲ್ಲ ಗ್ರೀನ್ ಸಿಗ್ನಲ್ ಅಂತ ಹೇಳಲಾಗುತ್ತಿದೆ.
ದಲಿತರ ಮನೆಗೆ ಸಿಎಂ, ಸಚಿವರ ಭೇಟಿಗೆ ಎಚ್ ವಿಶ್ವನಾಥ್ ಕಿಡಿ
ಈ ಹಿಂದೆ ವಿಶ್ವನಾಥ್ ಕಾಂಗ್ರೆಸ್‌ನಿಂದ ಜೆಡಿಎಸ್, ನಂತರ ಬಿಜೆಪಿ ಸೇರಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಮೇಲಿನ ಅಸಮಾಧಾದಿಂದ ಕಾಂಗ್ರೆಸ್ ತೊರೆದು, ಜೆಡಿಎಸ್ ಸೇರಿದ್ದರು. ಜೆಡಿಎಸ್‌ನಲ್ಲಿ ವಿಶ್ವನಾಥ್‌ಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಲಾಗಿತ್ತು. ನಂತರ ಆಪರೇಷನ್ ಕಮಲಕ್ಕೆ ತುತ್ತಾಗಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದರು.
ಬಿಜೆಪಿ ಸೇರಿದ ನಂತರ ಮೈಸೂರು ಜಿಲ್ಲೆಯ ಹುಣಸೂರು ಉಪಚುನಾವಣೆಯಲ್ಲಿ ಸೋತಿದ್ದರು. ಪರಾಭವ ಹೊಂದುವ ಮೂಲಕ ಮಂತ್ರಿಯಾಗಬೇಕು ಎಂಬ ಆಸೆ ಕೈಗೂಡಲಿಲ್ಲ. ಯಡಿಯೂರಪ್ಪ ಕೊಟ್ಟ ಮಾತಿನ ಪ್ರಕಾರ ಪರಿಷತ್ ಸದಸ್ಯರಾಗಿ ಆಯ್ಕೆ ಮಾಡಿದ್ದರು. ಆದರೆ ಕೋರ್ಟ್ ತೀರ್ಪಿನ ಪ್ರಕಾರ ಸಚಿವ ಸ್ಥಾನ ನೀಡುವಂತಿರಲಿಲ್ಲ. ಹಾಗಾಗಿ ವಿಶ್ವನಾಥ್ ಪದೇ ಪದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದರು. ಇನ್ನೇನು ಮುಂದಿನ ವರ್ಷವೇ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ಎಚ್. ವಿಶ್ವನಾತ್ ಅವರು ಇದೀಗ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಅಂತ ಹೇಳಲಾಗುತ್ತಿದೆ.
ಕಾಂಗ್ರೆಸ್‌ಗೆ ನವ ಚೈತನ್ಯ ತರಲಿರುವ ಭಾರತ್ ಜೋಡೋ ಯಾತ್ರೆ: ಎಚ್.ವಿಶ್ವನಾಥ್
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿಯವರು ನಡೆಸುತ್ತಿರುವ ಭಾರತ್ ಜೋಡೋ ಪಾದಯಾತ್ರೆ ಕಾಂಗ್ರೆಸ್‌ಗೆ ನವ ಚೈತನ್ಯ ತರಲಿದ್ದು, ಸಂಘಟನೆಗೂ ಅನುಕೂಲವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಯಾರೂ ಸಿಗದಿದ್ದಾಗ ವಿಶ್ವನಾಥ್ ಆತ್ಮೀಯರಿಗೆ ಮದ್ದಾಕುತ್ತಾರೆ: ಸಚಿವ ಸೋಮಶೇಖರ್
ಅ.24 ರಂದು ಮಾತನಾಡಿದ್ದ ವಿಶ್ವನಾಥ್ ಅವರು, ಈ ಪಾದಯಾತ್ರೆಯಿಂದ ರಾಹುಲ್ ಅವರ ಶಕ್ತಿ ಅನಾವರಣವಾಗಿ ನಾಯಕತ್ವ ಗಟ್ಟಿಯಾಗಲಿದ್ದು, ಈ ಸಮಯದಲ್ಲಿ ಅವರು ಸಾರ್ವಜನಿಕರೊಂದಿಗೆ ನಡೆದುಕೊಳ್ಳುತ್ತಿರುವ ರೀತಿ ಮತ್ತು ಪಡೆಯುತ್ತಿರುವ ಅನುಭವ ಅವರನ್ನು ಪರಿಪಕ್ವ ನಾಯಕನನ್ನಾಗಿ ಮಾಡಲಿದೆ ಅವರು ತಿಳಿಸಿದ್ದರು.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಯಾವ ರಾಜಕೀಯ ಪಕ್ಷಗಳು ಮುಳುಗುವ ಹಡಗಲ್ಲ, ಅವು ಸದಾ ಜನರೊಂದಿಗೆ ಸಂಚಾರ ಮಾಡುವ ಹಡಗುಗಳು, ಚುನಾವಣೆಯಲ್ಲಿ ಸೋಲು ಮತ್ತು ಗೆಲುವು ಎಲ್ಲರಿಗೂ ಸಾಮಾನ್ಯ ಎಂದು ವ್ಯಾಖ್ಯಾನಿಸಿದ್ದರು. ತಾವು ಕಾಂಗ್ರೆಸ್ ಸೇರುತ್ತೀರಾ ಎಂದು ಸುದ್ದಿಗಾರರು ಪ್ರಶ್ನಿಸಿದಾಗ ಇದಕ್ಕತ್ತರಿಸಿದ ಅವರು, ರಾಜಕೀಯ ನಿಂತ ನೀರಲ್ಲ, ಮುಂದೆ ಏನಾಗುತ್ತದೊ ಎಂದು ಉತ್ತರಿಸಿ ಆ ಪಕ್ಷದ ಬಗ್ಗೆ ತಮ್ಮ ಮೃದು ಧೋರಣೆ ವ್ಯಕ್ತಪಡಿಸಿದ್ದರು.