Asianet Suvarna News Asianet Suvarna News

ಕುಮಾರಸ್ವಾಮಿಯಿಂದ ಸುಳ್ಳು ಆಶ್ವಾಸನೆ: ಸಿ.ಪಿ.ಯೋಗೇಶ್ವರ್‌

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಜನರಿಗೆ ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ. ಯಾವುದನ್ನು ಜಾರಿ ಮಾಡಲು ಸಾಧ್ಯವಿಲ್ಲವೋ ಆ ಎಲ್ಲಾ ಭರವಸೆಗಳನ್ನು ನೀಡುತ್ತಿದ್ದಾರೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಆರೋಪಿಸಿದರು. 

BJP MLC CP Yogeshwar Lashes Out HD Kumaraswamy At Mandya gvd
Author
First Published Dec 30, 2022, 12:30 AM IST

ಮಂಡ್ಯ (ಡಿ.30): ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಜನರಿಗೆ ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ. ಯಾವುದನ್ನು ಜಾರಿ ಮಾಡಲು ಸಾಧ್ಯವಿಲ್ಲವೋ ಆ ಎಲ್ಲಾ ಭರವಸೆಗಳನ್ನು ನೀಡುತ್ತಿದ್ದಾರೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಆರೋಪಿಸಿದರು. ಬಿಜೆಪಿ ಜನಸಂಕಲ್ಪಯಾತ್ರೆ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿ ಮೇಲೆ ಯಾರಿಗೂ ವಿಶ್ವಾಸವಿಲ್ಲ. ರಾಜ್ಯದಲ್ಲಿ ಜೆಡಿಎಸ್‌ ವರ್ಚಸ್ಸು ಕುಂದಿದೆ ಎನ್ನುವುದು ಜನರಿಗೆ ಅರ್ಥವಾಗುತ್ತಿದೆ. ಜನರಿಗೆ ಸುಳ್ಳು ಆಶ್ವಾಸನೆ ನೀಡುತ್ತಿರುವುದರಿಂದಲೇ ಎಲ್ಲಾ ಕಡೆ ಅವರು ತಡಬಡಿಸುತ್ತಿದ್ದಾರೆ. 

ಹೀಗಾಗಿ ಜೆಡಿಎಸ್‌ ಮುಖಂಡರು ಎಚ್ಚೆತ್ತುಕೊಂಡಿದ್ದಾರೆ. ಅವರೆಲ್ಲರೂ ಬಿಜೆಪಿಯತ್ತ ಬರಲು ಮನಸ್ಸು ಮಾಡಿದ್ದಾರೆ. ಹೊಸ ವರ್ಷದ ಬಳಿಕ ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ಹೇಳಿದರು. ಚನ್ನಪಟ್ಟಣದಲ್ಲಿ ಯೋಗೇಶ್ವರ್‌ ಸ್ಪರ್ಧೆ ಬಗ್ಗೆ ಕೇಳಿದಾಗ, ನಾನು ಈಗಾಗಲೇ ಬಹಳಷ್ಟುಸಲ ಸ್ಪರ್ಧೆ ಮಾಡಿದ್ದೇನೆ. ಕುಮಾರಸ್ವಾಮಿಗೂ ನನಗೂ ಬಹಳ ವ್ಯತ್ಯಾಸ ಇದೆ. ಕಳೆದ ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವರೆಂಬ ಕಾರಣಕ್ಕೆ ಜನ ಹುಚ್ಚೆದ್ದು ಮತ ಕೊಟ್ಟರು. ಆದರೆ, ಕುಮಾರಸ್ವಾಮಿ ಗೆದ್ದು ಮುಖ್ಯಮಂತ್ರಿಯಾದ ಮೇಲೆ ಕ್ಷೇತ್ರವನ್ನೇ ಮರೆತರು ಎಂದು ಟೀಕಿಸಿದರು.

Ramanagara: ಕ್ಷೇತ್ರಕ್ಕೆ ಉತ್ಸವ ಮೂರ್ತಿಯಂತೆ ಬರುವ ಎಚ್ಡಿಕೆ: ಯೋಗೇಶ್ವರ್‌ ಆರೋಪ

ಮಗನ ಸಿನಿಮಾ ಮಾಡೋಕೆ, ಬೆಂಗಳೂರಿನ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಕುಳಿತು ವಿಶ್ರಾಂತಿ ಪಡೆಯುವುದಕ್ಕೆ ಹೆಚ್ಚು ಗಮನಹರಿಸಿದರು. ಅಧಿಕಾರವಿದ್ದಾಗ ಜನರಿಗಾಗಲೀ, ಅವರ ಶಾಸಕರ ಕೈಗೂ ಸಿಗುತ್ತಿರಲಿಲ್ಲ. ಅವರಿಗೆ ಜನ ಬೆಂಬಲವೂ ಇರಲಿಲ್ಲ, ಶಾಸಕರ ಬೆಂಬಲವೂ ಇರಲಿಲ್ಲ. 20 ಸೀಟ್‌ ಗೆದ್ದು ಮುಖ್ಯಮಂತ್ರಿಯಾದರು. ಅದೂ ಕೇವಲ ತಾತ್ಕಾಲಿಕವಾಗಿತ್ತು ಅಷ್ಟೇ. ಚನ್ನಪಟ್ಟಣದಲ್ಲಿ ಅವರು ಯಾವ ಕೆಲಸವನ್ನೂ ಮಾಡಿಲ್ಲ. ಅವರು ಮಾಡಿರುವ ರಸ್ತೆಗಳುಉ ಕೂಡ ಕಿತ್ತು ಬರುತ್ತಿವೆ. ಕುಮಾರಸ್ವಾಮಿ ನಡೆಸಿರುವ ಅನೇಕ ಕಾಮಗಾರಿಗಳಲ್ಲಿ ದೊಡ್ಡ ಹಗರಣ, ಕಳಪೆ ಕಾಮಗಾರಿ ಇರುವುದಾಗಿ ದೂಷಿಸಿದರು.

ಜನಪರವಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿರುವ ಬಗ್ಗೆ ನಾನು ಹೆಮ್ಮೆಯಿಂದ ಹೇಳುತ್ತೇನೆ. ಕುಮಾರಸ್ವಾಮಿಗೆ ರಾಜಕೀಯದಲ್ಲಿ ನಿರ್ದಿಷ್ಟಗುರಿ ಇಲ್ಲ. ದೇವೇಗೌಡರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಅಷ್ಟೇ. ಅವರಿಗೆ ಪಕ್ಷ ಕಟ್ಟುವ ಆಸೆ ಇಲ್ಲ. 15-20 ಸ್ಥಾನಗಳಲ್ಲಿ ಗೆದ್ದು ಬಿಡಬೇಕು, ಅತಂತ್ರ ಸರ್ಕಾರ ಬರಬೇಕು. ನಾನು ಮುಖ್ಯಮಂತ್ರಿ ಆಗಬೇಕು ಅನ್ನೋದಷ್ಟೇ ಅವರ ಆಸೆ ಅವರ ಆಸೆ ಫಲಿಸುವುದಿಲ್ಲ ಎಂದು ನೇರವಾಗಿ ಹೇಳಿದರು.

ಎಚ್ಡಿಕೆ ಮೇಲೆ ಸುರಿಸುವುದು ಹೂವಲ್ಲ ಪಾಪದ ಹಣ: ಪಂಚರತ್ನ ರಥಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮೇಲೆ ಹೆಲಿಕಾಪ್ಟರ್‌ನಿಂದ ಪುಷ್ಪಾರ್ಚನೆ ಮಾಡುತ್ತಿಲ್ಲ, ಪಾಪದ ಹಣ ಸುರಿಯಲಾಗುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ವಾಗ್ದಾಳಿ ನಡೆಸಿದರು. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಬೇನಾಮಿ ಹೆಸರಲ್ಲಿ ಕುಮಾರಸ್ವಾಮಿ ಗುತ್ತಿಗೆ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ. ಆ ಹಣದಿಂದ ಪಂಚರತ್ನ ರಥಯಾತ್ರೆಗೆ ಬಸ್‌ಗಳಲ್ಲಿ ಜನರನ್ನು ಕರೆತರಲಾಗಿದೆ ಎಂದು ಆರೋಪಿಸಿದ ಯೋಗೇಶ್ವರ್‌, ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಹೋದಲ್ಲಿ ಬಂದಲ್ಲೆಲ್ಲಾ ಚನ್ನಪಟ್ಟಣಕ್ಕೆ 1500 ಕೋಟಿ ಅನುದಾನ ತರಲಾಗಿದೆ ಎಂದು ಹೇಳುತ್ತಾರೆ. ಹಾಗಿದ್ದರೆ ಆ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ ಯೋಗೇಶ್ವರ್‌, ಒಂದಿಬ್ಬರು ಗುತ್ತಿಗೆದಾರರ ಹೆಸರಲ್ಲಿ ಕುಮಾರಸ್ವಾಮಿಯವರೇ ಬೇನಾಮಿಯಾಗಿ ಕಾಮಗಾರಿಗಳನ್ನು ನಡೆಸಿದ್ದಾರೆ ಎಂದರು.

ಎಚ್ಡಿಕೆ ಸಿಎಂ ಆಗುವುದು ಸೂರ‍್ಯ ಚಂದ್ರರಿರುವಷ್ಟೇ ಸತ್ಯ: ನಿಖಿಲ್‌ ಕುಮಾರಸ್ವಾಮಿ

ದಬ್ಬಾಳಿಕೆ ಎಷ್ಟು ಸಹಿಸೋದು: ರಾಮನಗರ-ಚನ್ನಪಟ್ಟಣದಲ್ಲಿ ಫ್ಲೆಕ್ಸ್‌ ಹಾಕೋರು ರಿಯಲ್‌ ಎಸ್ಟೇಟ್‌ ಮಾಡೋರು ಅಂತ ಎಚ್‌ಡಿಕೆ ಹೇಳಿಕೆ ನೀಡಿದ್ದಾರೆ. ಆದರೆ, ಪಂಚರತ್ನ ಯಾತ್ರೆಗೆ ಎಲ್ಲೆಲ್ಲೂ ಫ್ಲೆಕ್ಸ್‌ಗಳನ್ನು ಹಾಕಿಸಿದ್ದಾರೆ. ನಾವು ಏನೇ ಮಾಡಿದರು ತಪ್ಪು, ಅದೇ ನೀವು ಮಾಡಿದರೆ ಏನು ತಪ್ಪಿಲ್ಲ ಅಲ್ಲವಾ ಎಂದು ಪಶ್ನಿಸಿದ ಅವರು, ನಿಮ್ಮ ಈ ದಬ್ಬಾಳಿಕೆ ದೌರ್ಜನ್ಯನಾ ಎಷ್ಟುಅಂತಾ ಸಹಿಸೋದು ಎಂದು ಕಿಡಿಕಾರಿದರು.

Follow Us:
Download App:
  • android
  • ios