ಬಿಜೆಪಿಗೆ ಬರುವಾಗ ಜಾಮೂನು ನೀಡ್ತಾರೆ, ಬಳಿಕ ವಿಷ ಕೊಡ್ತಾರೆ: ಶಾಸಕ ಎಸ್.ಟಿ.ಸೋಮಶೇಖರ್
‘ಬಿಜೆಪಿಯವರು ಪಕ್ಷಕ್ಕೆ ಆಹ್ವಾನಿಸುವಾಗ ಸಿಹಿಯಾದ ಜಾಮೂನು ನೀಡುತ್ತಾರೆ. ಅಧಿಕಾರ ಮುಗಿದ ಮೇಲೆ ವಿಷ ಕೊಡುತ್ತಾರೆ’ ಎಂದು ಮಾಜಿ ಸಚಿವ ಹಾಗೂ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅವರು ಸ್ವಪಕ್ಷೀಯರ ವಿರುದ್ಧವೇ ಕಿಡಿಕಾರಿದ್ದಾರೆ.
ಮೈಸೂರು (ನ.10): ‘ಬಿಜೆಪಿಯವರು ಪಕ್ಷಕ್ಕೆ ಆಹ್ವಾನಿಸುವಾಗ ಸಿಹಿಯಾದ ಜಾಮೂನು ನೀಡುತ್ತಾರೆ. ಅಧಿಕಾರ ಮುಗಿದ ಮೇಲೆ ವಿಷ ಕೊಡುತ್ತಾರೆ’ ಎಂದು ಮಾಜಿ ಸಚಿವ ಹಾಗೂ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅವರು ಸ್ವಪಕ್ಷೀಯರ ವಿರುದ್ಧವೇ ಕಿಡಿಕಾರಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ನಾನು ಕಾಂಗ್ರೆಸ್ ನಲ್ಲಿದ್ದಾಗ ಕರೆದು ನನ್ನನ್ನು ಪಕ್ಷಕ್ಕೆ ಸೇರಿಸಿಕೊಂಡರು. ಈಗ ಸೋಮಶೇಖರ್ ಹೋದರೆ ಹೋಗಲಿ ಎನ್ನುತ್ತಾರೆ. ನನ್ನನ್ನು ಪಕ್ಷ ಬಿಡಿಸಲು ಕೆಲವರು ಸಿದ್ಧರಾಗಿದ್ದಾರೆ. ನಾನು ಪಕ್ಷ ಬಿಡುತ್ತೇನೆ ಎಂಬ ಆಸೆಯಲ್ಲಿಯೇ ಕೆಲವರಿದ್ದಾರೆ. ಆದರೆ, ನಾನು ಬಿಜೆಪಿಯಲ್ಲಿಯೇ ಇದ್ದೇನೆ. ಕಾಂಗ್ರೆಸ್ ಸೇರುತ್ತೇನೆ ಎಂಬುದೆಲ್ಲಾ ಉಹಾಪೋಹ’ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, ‘ಈಶ್ವರಪ್ಪ ಅವರಿಗೆ ಬಿಜೆಪಿಯಲ್ಲಿ ಯಾವುದೇ ಬೆಲೆ ಇಲ್ಲ. ಅಂಥವರ ಹೇಳಿಕೆಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನನ್ನು ಪಕ್ಷದಿಂದ ಬಿಟ್ಟು ಹೋಗು ಎಂದು ಹೇಳಲು ಈಶ್ವರಪ್ಪ ಏನು ರಾಜ್ಯಾಧ್ಯಕ್ಷರೆ? ಅವರನ್ನು ನಂಬಿ ಪಕ್ಷಕ್ಕೆ ಬಂದಿದ್ದೇನಾ? ನಾನು ಯಡಿಯೂರಪ್ಪ ಅವರನ್ನು ನಂಬಿ ಪಕ್ಷಕ್ಕೆ ಬಂದಿದ್ದೇನೆ. ಇದೆಲ್ಲ ಬೆಳವಣಿಗೆ ಆದ ಮೇಲೆ ನಾನು ಯಡಿಯೂರಪ್ಪ ಜೊತೆ ಮಾತನಾಡಿದ್ದೇನೆ. ಅವರು ಯಾವುದೇ ಕಾರಣಕ್ಕೂ ಪಕ್ಷ ಬಿಡಬೇಡ ಎಂದು ಹೇಳಿದ್ದಾರೆ. ಅವರ ಮಾತಿಗೆ ಬೆಲೆ ಕೊಟ್ಟು ಪಕ್ಷದಲ್ಲಿದ್ದೇನೆ. ಈಗ ಯಾರೋ ಐದು ಮಂದಿ ಮಾತನಾಡುತ್ತಿರುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ಹೇಳಿದರು.
ಪಕ್ಷದಲ್ಲಿನ ಪರಿಸ್ಥಿತಿ ಸ್ವಚ್ಛ ಮಾಡಿದರೆ ಯಾರೂ ಬಿಜೆಪಿ ಬಿಟ್ಟು ಹೋಗುವುದಿಲ್ಲ: ಎಸ್.ಟಿ.ಸೋಮಶೇಖರ್
‘ಪಕ್ಷ ಬಿಟ್ಟಿರುವುದು ಕೇವಲ ಎಸ್.ಟಿ. ಸೋಮಶೇಖರ್ ಬೆಂಬಲಿಗರು ಮಾತ್ರವಲ್ಲ. ಮಾಜಿ ಸಚಿವ ಅಶೋಕ್ ಪ್ರತಿನಿಧಿಸುವ ಕ್ಷೇತ್ರದಲ್ಲೂ ಅವರು ಕೆಲ ಬೆಂಬಲಿಗರು ಪಕ್ಷ ಬಿಟ್ಟು ಹೋಗಿಲ್ಲವೇ? ಮುನಿರತ್ನ ಕ್ಷೇತ್ರದಲ್ಲಿ ಹೋಗಿಲ್ಲವೇ? ದಾಸರಹಳ್ಳಿ, ಕೆ.ಆರ್. ಪುರಂ ಕ್ಷೇತ್ರದಲ್ಲಿ ಹೋಗಿಲ್ಲವೇ? ಕೇವಲ ನನ್ನನ್ನು ಏಕೆ ಗುರಿಯಾಗಿಸಿಕೊಂಡಿದ್ದಾರೋ ಗೊತ್ತಿಲ್ಲ. ಕ್ಷೇತ್ರದಲ್ಲಿ ಸಾವಿರ ಜನ ನಾಯಕರು ಇರುತ್ತಾರೆ. ಚುನಾವಣೆ ಸಂದರ್ಭದಲ್ಲಿ ಆ ಕಡೆ, ಈ ಕಡೆ ಹೋಗುತ್ತಾರೆ. ಇದು ಸ್ವಾಭಾವಿಕ’ ಎಂದು ಹೇಳಿದರು.
‘ಅತೃಪ್ತ’ ಸೋಮಶೇಖರ್ ಸದ್ಯದಲ್ಲೇ ದಿಲ್ಲಿಗೆ ದೌಡು: ಕಾಂಗ್ರೆಸ್ ಪಕ್ಷ ಸೇರ್ಪಡೆ?
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ಕುರಿತು ಪ್ರತಿಕ್ರಿಯಿಸಿ, ‘ನಾನು ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಿಎಂ ಮತ್ತು ಡಿಸಿಎಂ ಬಳಿಗೆ ಹೋಗಿದ್ದರಲ್ಲಿ ತಪ್ಪೇನಿದೆ? ನನಗೆ ನನ್ನ ಕ್ಷೇತ್ರದ ಅಭಿವೃದ್ಧಿ ಮುಖ್ಯ. ನನ್ನ ಕಚೇರಿಯಿಂದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದೇನೆ. ಆದರೆ, ಅದು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ. ನೀವೇಕೆ ಉತ್ತೇಜಿಸುತ್ತೀರಿ ಎಂದು ಬಿಜೆಪಿಯವರು ಕೇಳುತ್ತಾರೆ. ಸರ್ಕಾರದ ಒಳ್ಳೆಯ ಕೆಲಸವನ್ನು ಜಾರಿಗೊಳಿಸುವುದು ತಪ್ಪೇ?’ ಎಂದು ಅವರು ಪ್ರಶ್ನಿಸಿದರು.