Asianet Suvarna News Asianet Suvarna News

ಬಿಜೆಪಿಯಿಂದ ವಿವಿಧ ಯೋಜನೆಗಳ ಸೌಲಭ್ಯ ವಿತರಣೆ, ಉತ್ತರ ಕನ್ನಡದಲ್ಲಿ ಪಕ್ಷದ ಪರವಾಗಿ ಭರ್ಜರಿ ಪ್ರಚಾರ

ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ಬಿಜೆಪಿ ತನ್ನ ಸರದಿ ಎಂಬಂತೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ನೀಡುವ ಜತೆ ಪಕ್ಷದ ಪರವಾಗಿ ಭರ್ಜರಿ ಪ್ರಚಾರ ನಡೆಸಿದೆ.

BJP massive campaign in  Uttara Kannada gow
Author
First Published Mar 17, 2023, 9:15 PM IST

ವರದಿ: ಭರತ್‌ರಾಜ್ ಕಲ್ಲಡ್ಕ ಏಷಿಯಾನೆಟ್ ಸುವರ್ಣ ನ್ಯೂಸ್ 

ಕಾರವಾರ (ಮಾ.17): ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಏರಲು ತಮ್ಮ ಕಸರತ್ತನ್ನು ಪ್ರಾರಂಭಿಸಿದೆ. ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಂತೂ ಈ ಹಿಂದೆ ಜೆಡಿಎಸ್, ಕಾಂಗ್ರೆಸ್ ಭರ್ಜರಿ ಪ್ರಚಾರ ನಡೆಸಿದ್ದು, ಇದೀಗ ಬಿಜೆಪಿ ತನ್ನ ಸರದಿ ಎಂಬಂತೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ನೀಡುವ ಜತೆ ಪಕ್ಷದ ಪರವಾಗಿ ಭರ್ಜರಿ ಪ್ರಚಾರ ನಡೆಸಿದೆ. ಏಪ್ರಿಲ್ ತಿಂಗಳ ಅಂತ್ಯದೊಳಗೆ ಈ ಬಾರಿಯ ವಿಧಾನಸಭಾ ಚುನಾವಣೆ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಅಧಿಕವಾಗಿದೆ. ಏಪ್ರಿಲ್ ಅಂತ್ಯ ಅಥವಾ ಮೇ ಮೊದಲ ವಾರದಲ್ಲಿ ಚುನಾವಣೆ ನಡೆಯಲಿದ್ದು, ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಏರಲು ತಮ್ಮ ಕಸರತ್ತನ್ನು ಚುರುಕುಗೊಳಿಸಿದೆ. ರಾಜ್ಯದ ಬಿಜೆಪಿ ಸರ್ಕಾರ ಪ್ರತೀ ಜಿಲ್ಲಾ ಮಟ್ಟದಲ್ಲಿ ತಮ್ಮ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಆಯೋಜನೆ ಮಾಡುತ್ತಿದ್ದು, ಇಂದು ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದಲ್ಲಿ ಬೃಹತ್ ಸಮಾವೇಶವನ್ನು ಆಯೋಜನೆ ಮಾಡಲಾಗಿತ್ತು.

ಸಮಾವೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಇಂಧನ ಸಚಿವ ಸುನೀಲ್ ಕುಮಾರ್, ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಚಾಲನೆ ನೀಡಿದರು. ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ವಿತರಣೆ ಮಾಡಲು ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಆದರೆ, ಕಾರ್ಯಕ್ರಮದಲ್ಲಿ ಬಂದಂತಹ ನಾಯಕರುಗಳು ಸೌಲಭ್ಯ ಹಾಗೂ ಸರಕಾರದ ಸಾಧನೆಯನ್ನು ತಿಳಿಸುವ ಬದಲು ತಮ್ಮ ಭಾಷಣದಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ವಿರುದ್ಧ ಕಿಡಿಕಾರುವುದಕ್ಕೆ ಪ್ರಮುಖ ಆದ್ಯತೆ ನೀಡಿದ್ದರು.‌ ಇದರಿಂದಾಗಿ ಇದು ಸರ್ಕಾರಿ ಕಾರ್ಯಕ್ರಮವೋ ಅಥವಾ ಪಕ್ಷದ ಕಾರ್ಯಕ್ರಮವೋ ಅನ್ನುವ ಅನುಮಾನ ವ್ಯಕ್ತಪಡಿಸುವಂತೆ ಮಾಡಿದ್ದರು.

'ಅಧಿಕಾರಕ್ಕೆ ಬಂದ್ರೆ ಎಲ್ಲಾ ಮದರಸಾಗಳನ್ನ ಮುಚ್ತೇವೆ..' ಬಸವನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆ!

ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರಾದ ರೂಪಾಲಿ ನಾಯ್ಕ್, ಸುನೀಲ್ ನಾಯ್ಕ್, ದಿನಕರ ಶೆಟ್ಟಿ ಅವರು ಕಾಂಗ್ರೆಸ್ ವಿರುದ್ದ ಕಿಡಿಕಾರಲು ಕಾರ್ಯಕ್ರಮವನ್ನು ವೇದಿಕೆಯಾಗಿ ಬಳಸಿಕೊಂಡಿದ್ದರು. ಅಲ್ಲದೇ, ತಮ್ಮ ಸರ್ಕಾರದ ಸಾಧನೆಯನ್ನು ಸಹ ಈ ಸಂದರ್ಭದಲ್ಲಿ ಕೊಂಡಾಡಿದರು. ಸಮಾವೇಶದ ವೇದಿಕೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರೂ, ರಾಜಕೀಯ ಭಾಷಣಕ್ಕೆ ಮೌನವಾಗಿಯೇ ಕುಳಿತಿದ್ದರು. ಸಮಾವೇಶ ಹಿನ್ನೆಲೆಯಲ್ಲಿ ಪ್ರತಿ ತಾಲೂಕಿನಿಂದ ಜನರನ್ನು, ಫಲಾನುಭವಿಗಳನ್ನು ಕರೆದುಕೊಂಡು ಬರುವ ಟಾರ್ಗೆಟನ್ನು ಅಧಿಕಾರಿಗಳಿಗೆ ನೀಡಿದ್ದು, ಅಧಿಕಾರಿಗಳು ಬೆಳಿಗ್ಗೆಯಿಂದಲೇ ಜನರನ್ನ ಕರೆದುಕೊಂಡು ಬರುವ ಕಾಯಕಕ್ಕೆ ಇಳಿದಿದ್ದರು. ಇನ್ನು ಸಮಾವೇಶದಲ್ಲಿ ಮಾತನಾಡಿದ ಇಂಧನ ಸಚಿವ ಸುನೀಲ್ ಕುಮಾರ್ ಬಿಜೆಪಿ ಸರ್ಕಾರ ಬಂದ ನಂತರ ಜನರ ಮನೆ ಬಾಗಿಲಿಗೆ ಯೋಜನೆಗಳನ್ನು ತಲುಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಕುಡಿಯುವ ನೀರಿನ ಕೊರತೆ ನೀಗಿಸಿದ ಬಿಜೆಪಿ: ಸಿಎಂ ಬೊಮ್ಮಾಯಿ

ಕುಮಟಾದಲ್ಲಿ ನಡೆದ ಫಲಾನುಭವಿಗಳ ಸಮಾವೇಶಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುತ್ತಾರೆ ಎಂದು ಹೇಳಳಾಗಿತ್ತು. ಸಿಎಂ ಕೈಯಿಂದಲೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ ನಡೆಸುವುದಾಗಿ ನಿರ್ಧರಿಸಲಾಗಿತ್ತು. ಆದರೆ, ಸಿಎಂ ಆಗಮಿಸದ ಹಿನ್ನೆಲೆಯಲ್ಲಿ ಕೇವಲ ಸಮಾವೇಶವನ್ನು ಮಾತ್ರ ಮಾಡಲಾಯಿತು. ಒಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಜಿಲ್ಲಾ ಮಟ್ಟದ ಫಲಾನುಭವಿಗಳ ಸಮಾವೇಶ ಯಶಸ್ವಿಯಾದ್ದರೂ, ಬಿಜೆಪಿ ನಾಯಕರು ತಮ್ಮ ಚುನಾವಣಾ ಪ್ರಚಾರಕ್ಕೆ ಸಮಾವೇಶ ಬಳಸಿಕೊಂಡರು ಅನ್ನೋ ಆರೋಪ ಕೇಳಿಬಂದಿತು.

Follow Us:
Download App:
  • android
  • ios