'ಅಧಿಕಾರಕ್ಕೆ ಬಂದ್ರೆ ಎಲ್ಲಾ ಮದರಸಾಗಳನ್ನ ಮುಚ್ತೇವೆ..' ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ!
ಕರ್ನಾಟಕಕ್ಕೆ ಭೇಟಿ ನೀಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮ ತಮ್ಮ ರಾಜ್ಯದಲ್ಲಿ ಮದರಸಾಗಳನ್ನು ಮುಚ್ಚುತ್ತಿರುವ ಬಗ್ಗೆ ಹೇಳಿಕೆ ನೀಡಿದ ಒಂದು ದಿನದಲ್ಲಿಯೇ ವಿಜಯಪುರದ ಬಿಜೆಪಿ ಶಾಸಕ ಬಸವನೌಡ ಪಾಟೀಲ್ ಯತ್ನಾಳ್ ಅಂಥದ್ದೇ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಬೆಂಗಳೂರು (ಮಾ.17): ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ಕರ್ನಾಟಕದಲ್ಲಿರುವ ಎಲ್ಲಾ ಮದರಸಾಗಳನ್ನು ಮುಚ್ಚುವುದಾಗಿ ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಶುಕ್ರವಾರ ತಮ್ಮ ಸಾರ್ವಜನಿಕ ಭಾಷಣದ ವೇಳೆ ಹೇಳಿದ್ದಾರೆ. ಈ ಕುರಿತಾಗಿ ಎಎನ್‌ಐ ವರದಿ ಮಾಡಿದೆ. ಅಸ್ಸಾಂನಲ್ಲಿ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮ ಇದೇ ರೀತಿಯ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅದನ್ನು ರಾಜ್ಯದಲ್ಲಿಯೂ ಮಾಡಲಿದ್ದೇವೆ ಎಂದು ಹಾಲಿ ವಿಜಯಪುರ ಶಾಸಕ ಹೇಳಿದ್ದಾರೆ. ಕರ್ನಾಟಕ ಪ್ರವಾಸದಲ್ಲಿರುವ ಹಿಮಾಂತ ಬಿಸ್ವಾ ಶರ್ಮ, ತಮ್ಮ ರಾಜ್ಯದಲ್ಲಿರುವ ಎಲ್ಲಾ ಮದರಸಾಗಳನ್ನು (ಮುಸ್ಲಿಂ ಧಾರ್ಮಿಕ ಶಾಲೆಗಳು) ಮುಚ್ಚುವ ಇಂಗಿತ ತಮಗೆ ಇರುವುದಾಗಿ ತಿಳಿಸಿದ್ದರು. ಹೊಸ ಭಾರತಕ್ಕೆ ಇಂಥ ಶಾಲೆಗಳು ಅಗತ್ಯವಿಲ್ಲ ಎಂದು ತಿಳಿಸಿದ್ದರು. ಅಸ್ಸಾಂಗೆ ಶಾಲೆಗಳು, ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳ ಅಗತ್ಯವಿದೆ. ಇದರಿಂದಾಗಿ ವೈದ್ಯರು, ಇಂಜಿನಿಯರ್‌ಗಳು ಹಾಗೂ ಇತರ ವೃತ್ತಿಪರರು ಲಭ್ಯರಾಗುತ್ತದೆ. ಆ ಮೂಲಕ ದೇಶ ಹಾಗೂ ರಾಜ್ಯದ ಸೇವೆಗೆ ಅವರು ಲಭ್ಯರಾಗುತ್ಥಾರೆ. ಆದರೆ, ಮದರಸಾದಲ್ಲಿ ಕಲಿತವರಿಂದ ಇಂಥದ್ದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಸಾರ್ವಜನಿಕ ಸಮಾವೇಶದ ವೇಳೆ ಹೇಳಿದ್ದರು.
ಬೆಳಗಾವಿಯಲ್ಲಿ ಶಿವಾಜಿ ಮಹಾರಾಜ ಗಾರ್ಡನ್‌ನಲ್ಲಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಬಿಸ್ವಾ ಶರ್ಮ, "ನಾನು ಅಸ್ಸಾಂನಿಂದ ಬಂದಿದ್ದೇನೆ, ಅಲ್ಲಿ ಬಾಂಗ್ಲಾದೇಶದಿಂದ ದಿನನಿತ್ಯದ ಜನರು ಆಗಮಿಸುತ್ತಾರೆ. ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಅವರಿಂದ ಅಪಾಯವಿದೆ" ಎಂದು ಹೇಳಿದರು. "ಇತ್ತೀಚೆಗೆ ದೆಹಲಿಯಲ್ಲಿ ಟಿವಿ ಸಂದರ್ಶನವೊಂದರಲ್ಲಿ, 600 ಮದರಸಾಗಳನ್ನು ಮುಚ್ಚುವ ಉದ್ದೇಶವೇನು ಎಂದು ನನಗೆ ಪ್ರಶ್ನೆ ಮಾಡಿದ್ದರು. ಅದಕ್ಕೆ ನಾನು, 600 ಅನ್ನು ಮುಚ್ಚಿದ್ದೇನೆ, ಆದರೆ ಎಲ್ಲಾ ಮದರಸಾಗಳನ್ನು ಮುಚ್ಚುವುದು ನನ್ನ ಉದ್ದೇಶ" ಎಂದು ಅವರಿಗೆ ಹೇಳಿದ್ದೆ ಎಂದರು.
ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಬಿಸ್ವಾ ಶರ್ಮಾ, ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ಇತಿಹಾಸವನ್ನು ತಿರುಚಿದ್ದಾರೆ ಮತ್ತು ಸತ್ಯಗಳನ್ನು ತಪ್ಪಾಗಿ ನಿರೂಪಿಸಿದ್ದಾರೆ ಎಂದು ಆರೋಪಿಸಿದರು. ಅವರು ಕಾಂಗ್ರೆಸ್‌ಗೆ "ಹೊಸ ಮೊಘಲರು" ಎಂದು ಹಣೆಪಟ್ಟಿ ಕಟ್ಟಿದರು.
'ಹುಷಾರಾಗಿರಿ ಬಿಜೆಪಿಯವ್ರು ದೇವ್ರನ್ನೂ ಕದೀತಾರೆ..' ಜ್ಯೋತಿರ್ಲಿಂಗ ವಿವಾದಕ್ಕೆ ಶಿವಸೇನೆ, ಎನ್‌ಸಿಪಿ ಟೀಕೆ!
"ಈ ನವ ಭಾರತಕ್ಕೆ ಮದರಸಾಗಳ ಅಗತ್ಯವಿಲ್ಲ. ನಾವು ಈ ದಿಕ್ಕಿನಲ್ಲಿ ಮುಂದುವರಿಯಬೇಕು, ನಾವು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಬೇಕಾಗಿದೆ; ನಮ್ಮ ಇತಿಹಾಸವನ್ನು ಹೊಸ ರೀತಿಯಲ್ಲಿ ಪುನಃ ಬರೆಯುವ ಸಮಯ ಬಂದಿದೆ. ಅದನ್ನು ಮೊದಲೇ ವಿರೂಪಗೊಳಿಸಲಾಗಿತ್ತು' ಎಂದರು. ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಬೆಳಕು ಮತ್ತು ಧ್ವನಿ ಪ್ರದರ್ಶನವನ್ನು ಉದ್ಘಾಟಿಸಿದ ನಂತರ ಅಸ್ಸಾಂ ಮುಖ್ಯಮಂತ್ರಿ ಇಲ್ಲಿ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಬಾಲ್ಯ ವಿವಾಹದ ವಿರುದ್ಧ ಸಿಎಂ ಹಿಮಂತ್ ದಿಟ್ಟ ಹೆಜ್ಜೆ, ನಾಳೆಯಿಂದಲೇ ಅರೆಸ್ಟ್!
ಸ್ಥಳೀಯ ಬಿಜೆಪಿ ಶಾಸಕ ಅಭಯ್ ಪಾಟೀಲ್ ಆರು ವರ್ಷಗಳ ಹಿಂದೆಯೇ ಲೈಟ್ ಆ್ಯಂಡ್ ಸೌಂಡ್ ಶೋ ಆಯೋಜಿಸಿದ್ದನ್ನು ತಿಳಿಸಿದ ಬಿಸ್ವಾ ಶರ್ಮ, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. "ಆಗ ಕಾಂಗ್ರೆಸ್ ಸರ್ಕಾರ ಯಾವುದೇ ಸಹಾಯ ಮಾಡಲಿಲ್ಲ, ಕಾಂಗ್ರೆಸ್ ಇಂಥದ್ದಕ್ಕೆಲ್ಲಾ ಯಾಕೆ ಸಹಾಯ ಮಾಡುತ್ತದೆ" ಎಂದು ಪ್ರಶ್ನಿಸಿದ ಅವರು, "ಕಾಂಗ್ರೆಸ್ ಎಂದಿಗೂ ಸಹಾಯ ಮಾಡುವುದಿಲ್ಲ, ಕಾಂಗ್ರೆಸ್ ಬಾಬರ್ ಬಗ್ಗೆ ಯೋಚಿಸುತ್ತದೆ, ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಎಂದೂ ಯೋಚಿಸೋದಿಲ್ಲ" ಎಂದು ಅವರು ಹೇಳಿದರು. ಈ ಬೆಳಕು ಮತ್ತು ಧ್ವನಿ ಪ್ರದರ್ಶನದ ಮೂಲಕ, (ಶಾಸಕರು) ಈ ದೇಶದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳನ್ನು ಜನರು ಅನುಸರಿಸುತ್ತಾರೆ ಮತ್ತು ಭವಿಷ್ಯದಲ್ಲಿ ಸನಾತನ (ಧರ್ಮ) ಅನುಸರಿಸುತ್ತಾರೆ ಮತ್ತು ಸನಾತನ ಆದರ್ಶಗಳು ಇದರಲ್ಲಿ ಬಲಗೊಳ್ಳುತ್ತವೆ ಎಂದು ಹೇಳಿದರು.