Asianet Suvarna News Asianet Suvarna News

ಕುಡಿಯುವ ನೀರಿನ ಕೊರತೆ ನೀಗಿಸಿದ ಬಿಜೆಪಿ: ಸಿಎಂ ಬೊಮ್ಮಾಯಿ

ಬರಗಾಲ ಪೀಡಿತ, ಬಹಳ ಎತ್ತರದ ಪ್ರದೇಶವಾದ ಚಿಕ್ಕನಾಯಕನಹಳ್ಳಿ ಕ್ಷೇತ್ರದ 155 ಕೆರೆಗಳಿಗೆ 4.5 ಟಿಎಂಸಿ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡುವ ಮೂಲಕ ಈ ಭಾಗದ ನೀರಿನ ಕೊರತೆಯನ್ನು ನೀಗಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

BJP solved the shortage of drinking water Says CM Basavaraj Bommai gvd
Author
First Published Mar 17, 2023, 8:22 PM IST

ತುಮಕೂರು/ಚಿಕ್ಕನಾಯಕನಹಳ್ಳಿ (ಮಾ.17): ಬರಗಾಲ ಪೀಡಿತ, ಬಹಳ ಎತ್ತರದ ಪ್ರದೇಶವಾದ ಚಿಕ್ಕನಾಯಕನಹಳ್ಳಿ ಕ್ಷೇತ್ರದ 155 ಕೆರೆಗಳಿಗೆ 4.5 ಟಿಎಂಸಿ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡುವ ಮೂಲಕ ಈ ಭಾಗದ ನೀರಿನ ಕೊರತೆಯನ್ನು ನೀಗಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಿವಿಧ ಕಟ್ಟಡ ಕಾಮಗಾರಿಗಳ ಲೋಕಾರ್ಪಣೆ ಮತ್ತು ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತ, ಬಹಳ ಎತ್ತರವಾದ ಪ್ರದೇಶವಾದ ಕಾರಣ ಹೇಮಾವತಿ ಯೋಜನೆಯಿಂದ ಈ ಕ್ಷೇತ್ರಕ್ಕೆ ಯಾವುದೇ ಲಾಭವಿರದ ಕಾರಣ ಜೇ.ಸಿ. ಪುರ ಲಿಫ್ಟ್‌ ಇರಿಗೇಶನ್‌ ಮೂಲಕ ಹೆಚ್ಚಿನ ನೀರನ್ನು ಈ ಭಾಗಕ್ಕೆ ಹರಿಸಲಾಗಿದೆ. 

ಇನ್ನು ಮುಂದಿನ ಹಲವಾರು ವರ್ಷಗಳ ಕಾಲ ಈ ಭಾಗದಲ್ಲಿ ಅಂತರ್ಜಲ ಹೆಚ್ಚಲಿದ್ದು, ನೀರಿನ ಸಮಸ್ಯೆ ನಿವಾರಣೆ ಆಗಲಿದೆ. ನೂತನ ತಾಲೂಕು ಆಡಳಿತ ಸೌಧ, 5 ವಸತಿ ಶಾಲೆಗಳನ್ನು ಸಚಿವ ಮಾಧುಸ್ವಾಮಿಯವರು ತಾಲೂಕಿಗೆ ನೀಡುವ ಮೂಲಕ ಜನಪರ ಜನಕಲ್ಯಾಣ ನಿಲುವನ್ನು ಹೊಂದಿದ್ದಾರೆ ಎಂದರು. ಕೃಷಿ ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ತುಮಕೂರು ಜಿಲ್ಲೆ ಅಭಿವೃದ್ಧಿ ಹೊಂದಿದ್ದಲ್ಲಿ ರಾಜ್ಯದ ಜಿಡಿಪಿ ಹೆಚ್ಚುತ್ತದೆ. ತುಮಕೂರು ಜಿಲ್ಲೆ ಕರ್ನಾಟಕದ ಅಭಿವೃದ್ಧಿಗೆ ಪೂರಕ. ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗೆ ಮಲ್ಟಿಮೋಡ್‌ ಪಾರ್ಕ್, ವಿಶೇಷ ಹೂಡಿಕೆ ವಲಯ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. 

ಕಾಂಗ್ರೆಸ್‌ ಗೆಲ್ಲಲ್ಲ, ಅವರ ಗ್ಯಾರಂಟಿ ಕಾರ್ಡ್‌ ತಗೊಂಡು ಉಪ್ಪಿನಕಾಯಿ ಹಾಕಬೇಕೆ: ಸಿಎಂ ಬೊಮ್ಮಾಯಿ

ಜಿಲ್ಲೆಯ ಅಡಿಕೆ ಹಾಗೂ ತೆಂಗಿಗೆ ಬಹಳಷ್ಟು ಪ್ರಾಮುಖ್ಯತೆ ಇದೆ, ಈ ಬೆಳೆಗಳಿಗೆ ಸ್ಥಿರತೆ ಮತ್ತು ಮಾರುಕಟ್ಟೆಅತ್ಯವಶ್ಯಕ ಇವು ಎರಡನ್ನೂ ಸಹ ಒದಗಿಸಲಾಗಿದೆ. ಎತ್ತಿನಹೊಳೆ ಯೋಜನೆ ಕೆಲಸ ಬಹುತೇಕ ಮುಗಿಯುತ್ತಿದ್ದು, ಬರುವ ಜೂನ್‌ ಮಾಹೆ ವೇಳೆಗೆ ನೆರೆಯ ಸಕಲೇಶಪುರ, ಅರಸೀಕೆರೆ ನಂತರ ಚಿಕ್ಕನಾಯಕನಹಳ್ಳಿ, ತಿಪಟೂರು ತಾಲೂಕುಗಳಿಗೆ ನೀರು ಹರಿಯಲಿದೆ ಎಂದರು. ಕಿಸಾನ್‌ ಸಮ್ಮಾನ ಯೋಜನೆಯಡಿ ತಾಲೂಕಿನ 31605 ರೈತರಿಗೆ 10ಸಾವಿರ ಹಣ ರೈತರ ಖಾತೆಗೆ ಜಮೆ ಆಗಿದೆ, ಇದಕ್ಕಾಗಿ 89 ಕೋಟಿ ವ್ಯಯಿಸಲಾಗಿದೆ. ಕಳೆದ ಮೂರು ವರ್ಷದಲ್ಲಿ ಜಲಜೀವನ್‌ ಮಿಷನ್‌ ಯೋಜನೆಯಡಿ ಮನೆ ಮನೆಗೆ ಕುಡಿಯುವ ನೀರು ಒದಗಿಸಲಾಗಿದೆ ಎಂದರು.

ಸಚಿವ ಮಾಧುಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಆಗಿರುವ ಅಭಿವೃದ್ಧಿಯನ್ನು ಜನತೆ ಮನಗಾಣಬೇಕಿದೆ. ತಾಲೂಕಿಗೆ ಒಂದು ಆಡಳಿತ ಸೌಧ, 5 ವಸತಿ ಶಾಲೆ, 55 ಕೋಟಿ ರು. ವೆಚ್ಚದಲ್ಲಿ ಯುಜಿಡಿ ಯೋಜನೆ, ಸ್ಲಂ ಬೋರ್ಡ್‌ ವತಿಯಿಂದ 48 ಕೋಟಿ ರು. ವೆಚ್ಚದಲ್ಲಿ ಮನೆಗಳನ್ನು ಕಟ್ಟಿಸಲು ಪ್ರಾರಂಭಿಸಲಾಗಿದೆ, ತಾಲೂಕಿನಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳು ನಡೆಯುತ್ತಿವೆ, ತಾಲೂಕಿಗೆ ಒಂದು ಪಾಲಿಟೆಕ್ನಿಕ್‌ ಕಾಲೇಜ… ನೀಡಲಾಗಿದೆ, ಚಿ.ನಾ. ಹಳ್ಳಿ ಹಾಗೂ ಹುಳಿಯಾರ್‌ಗೆ 2 ಪೊಲೀಸ್‌ ಠಾಣೆ ಕಟ್ಟಡಗಳು ಉದ್ಘಾಟನೆಯೂ ಕೂಡ ಆಗಿದೆ ಎಂದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ತಾಲೂಕಿನ ಆಡಳಿತದಲ್ಲಿ ಆಗಿರುವ ಬದಲಾವಣೆಯನ್ನು ಜನತೆ ಗಮನಿಸಬೇಕು. ರಾಜಕಾರಣವನ್ನು ವ್ರತವನ್ನಾಗಿ ಸ್ವೀಕರಿಸಿದ ಶ್ರೇಷ್ಠ ರಾಜಕಾರಿಣಿ ಮಾಧುಸ್ವಾಮಿಯವರು ಅನೇಕ ಶ್ರೇಷ್ಠ ಜನ ಕಲ್ಯಾಣ ಕೆಲಸಗಳನ್ನು ಮಾಡಿದ್ದಾರೆ ಎಂದರು.

ಕಾಂಗ್ರೆಸ್ ಕಾರ್ಯಕರ್ತರಿಗೆ ಸ್ವಾಭಿಮಾನ ಇದ್ದರೆ ರಾಹುಲ್ ಗಾಂಧಿಯನ್ನ ವಿರೋಧಿಸಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ

ಬಟನ್‌ ಹೊತ್ತುವ ಮೂಲಕ ನೂತನ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಿದರು ಹಾಗೂ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ 20 ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸವಲತ್ತುಗಳ ಪ್ರಮಾಣ ಪತ್ರವನ್ನು ನೀಡಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌, ಎಂಎಲ್ಸಿ ಚಿದಾನಂದಗೌಡ, ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ವಿದ್ಯಾಕುಮಾರಿ ಪುರಸಭೆ ಸದಸ್ಯೆ ಉಪಸ್ಥಿತರಿದ್ದರು.

Follow Us:
Download App:
  • android
  • ios