Asianet Suvarna News Asianet Suvarna News

Karnataka Politics: ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯಲ್ಲಿ ಭಿನ್ನಮತ, ಪಕ್ಷಾಂತರ ಪರ್ವ?

*  ಕಾಂಗ್ರೆಸ್‌ನತ್ತ ಬಿಜೆಪಿಯ ವಿ.ಎಸ್‌. ಪಾಟೀಲ
*  ಸಚಿವರ ವಿರುದ್ಧ ಸ್ವಪಕ್ಷದ ಮುಖಂಡ ಅಸಮಾಧಾನ
*  ಪಕ್ಷ ತೊರೆಯುತ್ತಿರುವ ಕಾರ್ಯಕರ್ತರು
 

BJP Leaders Likely Join JDS and Congress in Uttara Kananda grg
Author
Bengaluru, First Published May 24, 2022, 7:55 AM IST

ಸಂತೋಷ ದೈವಜ್ಞ

ಮುಂಡಗೋಡ(ಮೇ.24): ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯ ಭಿನ್ನಮತ ಮತ್ತೆ ಸ್ಫೋಟಗೊಂಡಿದ್ದು, ಪಕ್ಷಾಂತರ ಪರ್ವ ಪ್ರಾರಂಭವಾಗಿದೆ? ಮಾಜಿ ಶಾಸಕ ವಿ.ಎಸ್‌. ಪಾಟೀಲ ಕಾಂಗ್ರೆಸ್‌ ಕಡೆಗೆ ಹಾಗೂ ಯುವ ಧುರೀಣ ಸಂತೋಷ ರಾಯ್ಕರ ಮಾತೃಪಕ್ಷ ಜೆಡಿಎಸ್‌ ಕಡೆ ಮುಖ ಮಾಡುತ್ತಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಯಲ್ಲಾಪುರ- ಮುಂಡಗೋಡ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದರು.

2019ರ ಲೋಕಸಭೆ ಚುನಾವಣೆ ವೇಳೆ ಅನಂತಕುಮಾರ ಹೆಗಡೆ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿ ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದರು. ಆದರೆ ಈಗ ಬಿಜೆಪಿ ನಾಯಕರ ಧೋರಣೆಯಿಂದ ಮುನಿಸಿಕೊಂಡು ಅಂತರ ಕಾಯ್ದುಕೊಂಡಿದ್ದಾರೆ.

Uttara Kannada: ಬಿಜೆಪಿಯವರು ತಲವಾರು, ಪಿಸ್ತೂಲು ಕೊಡ್ತಾರೆ: ಬಿ.ಕೆ.ಹರಿಪ್ರಸಾದ್

ಜೆಡಿಎಸ್‌ನಿಂದ ಆಹ್ವಾನ?:

ಈಗ ಮತ್ತೆ ಮಾತೃಪಕ್ಷಕ್ಕೆ ಮರಳುವಂತೆ ರಾಜ್ಯ ಜೆಡಿಎಸ್‌ ನಾಯಕರು ಸಂತೋಷ ರಾಯ್ಕರ ಅವರನ್ನು ಸಂಪರ್ಕಿಸಿ ಆಹ್ವಾನಿಸಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಅಭ್ಯರ್ಥಿಯಾಗುವಂತೆ ಮನವಿ ಮಾಡಿದ್ದಾರೆ.

ಆಂತರಿಕ ಭಿನ್ನಾಭಿಪ್ರಾಯ:

2019ರಲ್ಲಿ ಆಪರೇಷನ್‌ ಕಮಲದಲ್ಲಿ ಶಿವರಾಮ ಹೆಬ್ಬಾರ ಜತೆ ಕಾಂಗ್ರೆಸ್‌ನಲ್ಲಿದ್ದ ಹಲವರು ಪಕ್ಷಕ್ಕೆ ಬಂದಿದ್ದರಿಂದ ಮೂಲ ಬಿಜೆಪಿಗರಲ್ಲಿ ಅಸಮಾಧಾನ ಹೆಚ್ಚಿತ್ತು. ಅದು ಇನ್ನೂ ಶಮನವಾಗಿಲ್ಲ. ಸಚಿವರು ತಮ್ಮನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂಬ ಆರೋಪ ಮೂಲ ಬಿಜೆಪಿಗರದ್ದು.

ಕಾಂಗ್ರೆಸ್ಸಿನಲ್ಲೂ ರಾಜೀನಾಮೆ:

ಕಾಂಗ್ರೆಸ್‌ ಪರಿಸ್ಥಿತಿ ಕೂಡ ಇದಕ್ಕೆ ಹೊರತಾಗಿಲ್ಲ. 2019ರ ಆಪರೇಷÜನ್‌ ಕಮಲದ ಬಳಿಕ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಸ್ತಿತ್ವ ಕಳೆದುಕೊಂಡಿತ್ತು. ಅಂತಹ ಸಂದರ್ಭ ಗಟ್ಟಿಯಾಗಿ ನಿಂತು ಪಕ್ಷ ಸಂಘಟನೆಯಲ್ಲಿ ತೊಡಗಿದವರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ. ಈಗ ಹಿರೇಹಳ್ಳಿ ಅವರನ್ನು ದಿಢೀರನೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ. ಇದು ನಿಷ್ಠಾವಂತ ಕಾರ್ಯಕರ್ತರಲ್ಲಿ ನೋವುಂಟು ಮಾಡಿದ್ದು, ಇದರಿಂದ ಕೆಲವರು ಪದಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಜೆಡಿಎಸ್‌ ಹವಣಿಕೆ:

ಮುಂದಿನ ವಿಧಾನಸಭಾ ಚುನಾವಣೆ ಅಭ್ಯರ್ಥಿ ಎಂದು ಹೇಳಲಾಗುತ್ತಿರುವ ಪ್ರಶಾಂತ ದೇಶಪಾಂಡೆ ಕಾರ್ಯಕರ್ತರ ಅಭಿಪ್ರಾಯ ಪಡೆಯದೇ ಕೃಷ್ಣ ಹಿರೇಹಳ್ಳಿ ಅವರನ್ನು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದ್ದಾರೆ ಎಂಬುದು ಬಹುತೇಕ ಕಾಂಗ್ರೆಸ್‌ ಕಾರ್ಯಕರ್ತರ ವಾದ. ಇದು ಕಾರ್ಯಕರ್ತರ ಅಸಮಾಧಾನಕ್ಕೂ ಕಾರಣವಾಗಿದೆ. ಇದರ ಲಾಭ ಪಡೆಯಲು ಜೆಡಿಎಸ್‌ ಹವಣಿಸುತ್ತಿದೆ. ಇದರಿಂದ ಸಂತೋಷ ರಾಯ್ಕರ ಅವರನ್ನು ಪಕ್ಷದ ಹುರಿಯಾಳಾಗಿ ಕಣಕ್ಕಿಳಿಸಲು ತಯಾರಿ ನಡೆಯುತ್ತಿದೆ.

ಮುಸುಕಿನ ಗುದ್ದಾಟ:

ಆಪರೇಷನ್‌ ಕಮಲ ವೇಳೆ ಬಾಂಬೆ ತಂಡದೊಂದಿಗೆ ಸೇರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ಹೆಬ್ಬಾರ್‌ ಅವರಿಗೆ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ನೀಡಿ ವಿ.ಎಸ್‌. ಪಾಟೀಲ ಅವರಿಗೆ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನ ಮಾಡಲಾಗಿತ್ತು. ಆದರೆ ಈಗ ಹೆಬ್ಬಾರ, ಪಾಟೀಲ ನಡುವೆ ಉತ್ತಮ ಸಂಬಂಧವಿಲ್ಲ. ಆಂತರಿಕ ಮುಸುಕಿನ ಗುದ್ದಾಟ ಮುಂದುವರಿದಿದೆ.

ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳಲು ಹವಣಿಸುತ್ತಿರುವ ಸ್ಥಳೀಯ ಕಾಂಗ್ರೆಸ್‌ ನಾಯಕರು, ಇದನ್ನು ಹೈಕಮಾಂಡ್‌ ಗಮನಕ್ಕೆ ತಂದಿದ್ದಾರೆ. ಸಚಿವ ಹೆಬ್ಬಾರ ವಿರುದ್ಧ ಪ್ರಬಲ ಸ್ಪರ್ಧೆ ಒಡ್ಡಬೇಕಾದರೆ ಕಾಂಗ್ರೆಸ್ಸಿನಿಂದ ವಿ.ಎಸ್‌. ಪಾಟೀಲ ಅವರಿಂದ ಮಾತ್ರ ಸಾಧ್ಯ ಎನ್ನಲಾಗುತ್ತಿದೆ. ಪಾಟೀಲ ಅವರನ್ನು ಕಾಂಗ್ರೆಸ್‌ಗೆ ಕರೆತರುವ ಪ್ರಯತ್ನ ನಡೆಯುತ್ತಿವೆ.

ಸಾರಿಗೆ ನೌಕರರಿಗೆ ಗುಡ್‌ನ್ಯೂಸ್: ಸಂಬಳ ಏರಿಕೆಗೆ ಮುಂದಾದ ಸರ್ಕಾರ

ಯಲ್ಲಾಪುರ-ಮುಂಡಗೋಡ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಕಾರ್ಯಕರ್ತರು ಒತ್ತಾಯಿಸುತ್ತಿರುವುದು ನಿಜ. ನೊಂದ ಮೂಲ ಬಿಜೆಪಿಗರ ಅಭಿಪ್ರಾಯ ಕೂಡ ಇದೇ ಆಗಿದೆ ಅಂತ ಮಾಜಿ ಶಾಸಕ ವಿ.ಎಸ್‌. ಪಾಟೀಲ ಹೇಳಿದ್ದಾರೆ.  

ಜೆಡಿಎಸ್‌, ಕಾಂಗ್ರೆಸ್ಸಿನವರು ಸಂಪರ್ಕಿಸಿದ್ದಾರೆ. ಬಿಜೆಪಿ ತೊರೆಯಲ್ಲ. ಪಕ್ಷದ ವರಿಷ್ಠರ ಬಗ್ಗೆ ಗೌರವವಿದೆ. ಕ್ಷೇತ್ರದ ಶಾಸಕರ ನಡವಳಿಕೆ ಬೇಸರ ತಂದಿದೆ. ಕಾರ್ಯಕರ್ತರು ಪಕ್ಷ ತೊರೆಯುತ್ತಿದ್ದಾರೆ. ಹೈಕಮಾಂಡ್‌ ಗಂಭೀರವಾಗಿ ಪರಿಗಣಿಸಿ, ಕಾರ್ಯಕರ್ತರನ್ನು ಉಳಿಸಿಕೊಳ್ಳಲಿ ಅಂತ ಯುವ ಧುರೀಣ ಸಂತೋಷ ರಾಯ್ಕರ ತಿಳಿಸಿದ್ದಾರೆ. 
 

Follow Us:
Download App:
  • android
  • ios