ಮಡಿಕೇರಿಯಲ್ಲಿ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಜೆಟ್ ಟೀಕಿಸಿದ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಪಸಂಖ್ಯಾತರಿಗೆ ನೀಡುವ ಅನುದಾನದ ಬಗ್ಗೆಯೂ ಮಾತನಾಡಿದ್ದಾರೆ.

ವರದಿ : ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮಾ.10):
ವಿಪಕ್ಷ ನಾಯಕರಾದ ಆರ್. ಅಶೋಕ್, ಸಿಟಿ ರವಿ, ಛಲವಾದಿ ನಾರಾಯಣ ಸ್ವಾಮಿ ಮುಂತಾದವರು ಮುಸಲ್ಮಾನರ ನಿಂದಿಸದಿದ್ದರೆ ಅವರು ಬದುಕಿರಲ್ಲ. ಅವರು ಉಸಿರಾಡುತ್ತಿರುವುದೇ ಮುಸಲ್ಮಾನರ ಬೈಯುತ್ತಾ, ಮುಸಲ್ಮಾನರ ಬೈಯದಿದ್ದರೆ ಅವರ ಹೃದಯ ಬಡಿತ ನಿಂತು ಹೋಗುತ್ತದೆ ಎಂದು ಬಿಜೆಪಿ ನಾಯಕರ ವಿರುದ್ಧ ಮಡಿಕೇರಿಯಲ್ಲಿ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ. 

ರಾಜ್ಯ ಬಜೆಟ್ ಅನ್ನು ಟೀಕಿಸಿದ ಬಿಜೆಪಿ ನಾಯಕರ ವಿರುದ್ಧ ತಿರುಗಿಬಿದ್ದ ಲಕ್ಷ್ಮಣ್ ಇಬ್ಬರು ಜೋಕರ್ ಗಳನ್ನು ವಿರೋಧ ಪಕ್ಷದ ನಾಯಕರನ್ನಾಗಿ ಬಿಜೆಪಿ ಮಾಡಿದೆ. ಆರ್ ಅಶೋಕ್ ಅವರು ಬಜೆಟ್ ಓದಿ ಮುಗಿಯುವ ಮೊದಲೇ ಹೊರಹೋಗಿ ಇದು ಹಲಾಲ್ ಕಟ್ ಬಜೆಟ್ ಎಂದರು. ಸುಮ್ಮನೆ ಹಿಟ್ ಅಂಡ್ ರನ್ ಮಾಡಿ ನಿಮ್ಮ ಮರ್ಯಾದೆ ನೀವು ತೆಗೆದುಕೊಂಡಿದ್ದೀರಾ ಎಂದು ಹರಿಹಾಯ್ದರು. ಕಳೆದ ವರ್ಷಕ್ಕಿಂತ ಈ ಬಾರಿ 10.3 % ರಷ್ಟು ಬಜೆಟ್ ಗಾತ್ರ ಜಾಸ್ತಿ ಆಗಿದೆ. 1.16 ಲಕ್ಷ ಸಾಲ ಎಂದು ಬರೆದು ಕೊಂಡಿದ್ದೇವೆ. ಕಳೆದ ಬಾರಿ 1.5 ಲಕ್ಷ ಕೋಟಿ ಸಾಲ ಎಂದು ಬರೆದುಕೊಂಡಿದ್ದೆವು. ಆದರೆ 65 ಸಾವಿರ ಕೋಟಿ ಮಾತ್ರ ಸಾಲ ಪಡೆದೆವು ಎಂದರು.

2013 ರಿಂದ 2018 ರವರೆಗೆ ಸಿದ್ದರಾಮಯ್ಯನವರು 5 ವರ್ಷಗಳಲ್ಲಿ 1.8 ಲಕ್ಷ ಕೋಟಿ ಸಾಲ ಮಾಡಿದ್ದರು. ಆದರೆ ಬಿಜೆಪಿ ಸರ್ಕಾರ 3 ವರ್ಷದಲ್ಲಿ 2.8 ಲಕ್ಷ ಕೋಟಿ ಸಾಲ ಮಾಡಿತ್ತು. ಬೊಮ್ಮಾಯಿಯವರು ಸಿಎಂ ಸ್ಥಾನದಿಂದ ಕೆಳಗಿಳಿಯುವಾಗ 5.75 ಲಕ್ಷ ಕೋಟಿ ರಾಜ್ಯದ ಸಾಲವಿತ್ತು. ಅಂದರೆ, ಅವರು 3.5 ಲಕ್ಷ ಕೋಟಿ ಸಾಲ ಮಾಡಿದ್ದರು. ಒಟ್ಟು ಬಜೆಟ್ ನ 25% ಪರ್ಸೆಂಟ್ ಮಾತ್ರ ಸಾಲ ಮಾಡಬಹುದು. ಆದರೆ ಬೊಮ್ಮಾಯಿಯವರು 35 ರಿಂದ 40 % ಸಾಲ ಮಾಡಿದರು. ನರೇಂದ್ರ ಮೋದಿಯವರು 11 ವರ್ಷಗಳಲ್ಲಿ 150 ಲಕ್ಷ ಕೋಟಿಗೂ ಅಧಿಕ ಸಾಲ ಮಾಡಿದ್ದಾರೆ. ನಿರ್ಮಲಾ ಸೀತಾರಾಮನ್ 56 % ಸಾಲ ಮಾಡಿದ್ದಾರೆ. ಬಿಜೆಪಿಯವರು ಇದನ್ನು ಏಕೆ ಹೇಳುವುದಿಲ್ಲ. ಆದರೆ ಪ್ರಲ್ಹಾದ್ ಜೋಷಿಯವರು ಸಾಲದರಾಮಯ್ಯ ಅಂತ ಟ್ವೀಟ್ ಮಾಡುತ್ತಾರೆ. ಆದರೆ ಅತೀ ಹೆಚ್ಚು ಸಾಲ ಮಾಡಿದವರು ಬಿಜೆಪಿಗರು ಎಂದು ಲಕ್ಷ್ಮಣ್ ವಾಗ್ದಾಳಿ ನಡೆಸಿದರು. 

ಇದನ್ನೂ ಓದಿ: ವರ್ಕ್ ಫ್ರಮ್ ಆಟೋ, ಬೆಂಗಳೂರು ಚಾಲಕನ ಐಡಿಯಾಗೆ ಮನಸೋತ ಜನ

ಈಗ ರಾಜ್ಯದ ವಾರ್ಷಿಕ ವಹಿವಾಟು 30 ಲಕ್ಷ ಕೋಟಿ ಆಗಿದೆ. 2023 ರಲ್ಲಿ ರಾಜ್ಯದ ವಹಿವಾಟು 22 ಲಕ್ಷ ಕೋಟಿ ಇತ್ತು. ಅಂದರೆ ರಾಜ್ಯದ ಅಭಿವೃದ್ಧಿ ಆಗಿದೆ ಎಂದರ್ಥ ಅಲ್ಲವೇ. ರಾಜ್ಯಗಳಿಗೆ 42 % ತೆರಿಗೆ ವಾಪಸ್ ಕೊಡಬೇಕು. ಆದರೆ ರಾಜ್ಯಕ್ಕೆ ಕೊಡುತ್ತಿರುವುದು ಕೇವಲ 14 % ಮಾತ್ರ. 2023 ರ ಬಜೆಟ್ ನಲ್ಲಿ ಬೊಮ್ಮಾಯಿಯವರು ವಿವಿಧ ಕಾಮಗಾರಿಗಳಿಗೆ 37,800 ಕೋಟಿ ಘೋಷಿಸಿದರು. ಆದರೆ, ಟೆಂಡರ್ ಕರೆಯುವಾಗ 2 ಲಕ್ಷದ 600 ಕೋಟಿಗೆ ಟೆಂಡರ್ ಕರೆದರು. ಅದರಲ್ಲಿ 10 ಪರ್ಸೆಂಟ್ ಕಮಿಷನ್ ಪಡೆದು ಜಾಗ ಖಾಲಿ ಮಾಡಿದರು. ಗುತ್ತಿಗೆದಾರರಿಗೆ 40 ಸಾವಿರ ಕೋಟಿ ರೂಪಾಯಿ ಬಾಕಿ ಉಳಿಸಿ ಹೋದರು. ಅದರಲ್ಲಿ 10 ಸಾವಿರ ಕೋಟಿ ನಾವು ತೀರಿಸಿದ್ದೇವೆ. ಇನ್ನೂ 30 ಸಾವಿರ ಕೋಟಿ ಗುತ್ತಿಗೆದಾರರಿಗೆ ಬಾಕಿ ಇದೆ ಎಂದರು.

ಭದ್ರಾ ಮೇಲ್ದಂಡೆಗೆ 5 ಸಾವಿರ ಕೋಟಿ ಕೊಡುವುದಾಗಿ ಕೇಂದ್ರ ಸರ್ಕಾರ ಕಳೆದ ಬಾರಿ ಬಜೆಟ್‌ನಲ್ಲಿ ಹೇಳಿತ್ತು. ಆದರೆ ಇದುವರೆಗೆ ಒಂದು ರೂಪಾಯಿ ಕೊಟ್ಟಿಲ್ಲ. ಅಲ್ಪಸಂಖ್ಯಾತರಿಗೆ ಮಾತ್ರ ಬಜೆಟ್ ಎನ್ನುತ್ತಾರೆ. ಅಲ್ಪಸಂಖ್ಯಾತರು ಎಂದರೆ ಕೇವಲ ಮುಸಲ್ಮಾನರಲ್ಲ. ಬೌದ್ಧ , ಸಿಖ್, ಕ್ರೈಸ್ತ ಎಲ್ಲರೂ ಇದ್ದಾರೆ. ಎಲ್ಲರನ್ನೂ ಸೇರಿ 4100 ಕೋಟಿ ಕೊಟ್ಟಿದ್ದೇವೆ. ಅಂದರೆ ಬಜೆಟ್ ನ ಶೇ.1 ರಷ್ಟು ಮಾತ್ರ ಅವರಿಗೆ ಕೊಡಲಾಗಿದೆ. ಹಾಗೆ ನೋಡಿದರೆ ಅವರಿಗೆ ನಿಜವಾಗಿಯೂ ಕೊಡಬೇಕಾಗಿದ್ದು 16 ಪರ್ಸೆಂಟ್. ಮುಸ್ಲಿಮರು ಈ ನೆಲದ ಜನರಲ್ಲವೇ? ಅವರಿಂದ ರಾಜ್ಯದ ದೇಶದ ಬೊಕ್ಕಸಕ್ಕೆ ಆದಾಯವಿಲ್ಲವೇ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಮಠ ಮಾನ್ಯಗಳಿಗೆ ಕೊಟ್ಟಿರುವುದು ಮರೆತು ಹೋಯಿತೇ ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ: ಮಂಡ್ಯ ವಿವಿ ಕುಲಪತಿಗೆ 2 ವರ್ಷದಿಂದ ಸಂಬಳ ಕೊಟ್ಟಿಲ್ಲ; ಮೈಸೂರು ವಿವಿಯೊಂದಿಗೆ ವಿಲೀನಮಾಡಿ-ಮರಿತಿಬ್ಬೇಗೌಡ!

ರಾಜ್ಯದ 224 ಕ್ಷೇತ್ರಗಳಿಗೆ ಐದು ವರ್ಷಗಳಿಗೆ 8 ಸಾವಿರ ಕೋಟಿ ನೀಡಲಾಗಿದೆ. ಎಸ್ಇಪಿ, ಎಸ್ಟಿಪಿ ಪ್ಲಾನ್ ತಂದಿದ್ದೇ ಸಿದ್ದರಾಮಯ್ಯನವರು. ಆದರೆ ಬೊಮ್ಮಾಯಿ ಸರ್ಕಾರ ಅದರಲ್ಲಿ 18 ಸಾವಿರ ಕೋಟಿ ಕಡಿತ ಮಾಡಿತು. ಆದರೆ ಸಿದ್ದರಾಮಯ್ಯನವರ ಸರ್ಕಾರ ಎಸ್‌ಇಪಿ, ಎಸ್‌ಟಿಪಿಗಾಗಿ 42 ಸಾವಿರ ಕೋಟಿ ನೀಡಿದೆ. ನ್ಯೂನ್ಯತೆಗಳಿದ್ದರೆ ಬಿಜೆಪಿಯ ನಾಯಕರು ಚರ್ಚೆಗೆ ಬನ್ನಿ ಎಂದು ಲಕ್ಷ್ಮಣ್ ಮಡಿಕೇರಿಯಲ್ಲಿ ವಾಗ್ದಾಳಿ ನಡೆಸಿದರು.