ಮಂಡ್ಯ ವಿಶ್ವವಿದ್ಯಾಲಯವನ್ನು ಮೈಸೂರು ವಿಶ್ವವಿದ್ಯಾಲಯದೊಂದಿಗೆ ವಿಲೀನಗೊಳಿಸುವುದು ಉತ್ತಮ ಎಂದು ಮರಿತಿಬ್ಬೇಗೌಡ ಅಭಿಪ್ರಾಯಪಟ್ಟಿದ್ದಾರೆ. ಮೂಲ ಸೌಕರ್ಯಗಳ ಕೊರತೆ ಮತ್ತು ಅನುದಾನದ ಸಮಸ್ಯೆಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತವೆಂದು ಅವರು ಹೇಳಿದ್ದಾರೆ.
ಮಂಡ್ಯ (ಮಾ.10): ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಅವರಿಗೆ ಕಳೆದ 2 ವರ್ಷಗಳಿಂದ ಸಂಬಳವನ್ನೇ ಕೊಟ್ಟಿಲ್ಲ. ಮಂಡ್ಯ ವಿವಿಗೆ 2 ಕೋಟಿ ರೂ. ಅನುದಾನ ಕೊಟ್ಟರೆ ಏನಕ್ಕೂ ಸಾಲುವುದಿಲ್ಲ. ಕನಿಷ್ಠ 500 ಕೋಟಿ ರೂ. ಅನುದಾನ ಬೇಕು. ಮೂಲ ಸೌಕರ್ಯಗಳಿಲ್ಲದೇ ಗುಣಾತ್ಮಕ ಶಿಕ್ಷಣ ಒದಗಿಸದೇ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುವ ಬದಲು ಮೈಸೂರು ವಿಶ್ವವಿದ್ಯಾಲಯದೊಂದಿಗೆ ವಿಲೀನ ಮಾಡುವುದು ಒಳಿತು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಹೇಳಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರು ವಿಶ್ವವಿದ್ಯಾಲಯೊಂದಿಗೆ ಮಂಡ್ಯ ವಿವಿ ವಿಲೀನ ಮಾಡಬೇಕು. ಮಂಡ್ಯ ವಿವಿ ರದ್ದು ಮಾಡುವ ವಿಚಾರವಾಗಿ ಬಿಜೆಪಿ ಹೋರಾಟ ನಡೆಸಿದೆ. ಆದರೆ, ಮಂಡ್ಯ ವಿವಿಯಲ್ಲಿ ಹಲವು ಸಮಸ್ಯೆಗಳಿದ್ದು ಅವುಗಳ ಬಗ್ಗೆಯೂ ಚಿಂತನೆ ಮಾಡಬೇಕಿದೆ. ಇಲ್ಲಿ ಮಂಡ್ಯ ಜಿಲ್ಲೆಯ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಮೈಸೂರು ವಿಶ್ವವಿದ್ಯಾಲಯಕ್ಕೆ ವಿಲೀನ ಮಾಡುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದರು. ಮಂಡ್ಯ ವಿಶ್ವವಿದ್ಯಾಲಯ 5 ವರ್ಷ ಪೂರೈಸಿದೆ. ಆದರೂ ಮೂಲ ಸೌಕರ್ಯದಿಂದ ವಂಚಿತವಾಗಿದೆ ಎಂದು ಹೇಳಿದ್ದಾರೆ.
ಮೈಸೂರು ವಿಶ್ವವಿದ್ಯಾಲಯವು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದೆ. ಮಂಡ್ಯ ವಿವಿಗೆ 2 ಕೋಟಿ ರೂ. ಕೊಡ್ತಿವಿ ಅಂತ ಹೇಳಿದ್ದರು. ಆದರೆ, ವಿಶ್ವವಿದ್ಯಾಲಯ ಕಟ್ಟಲು ಸುಮಾರು 500 ಕೋಟಿ ಬೇಕು. ಆವಾಗ ಮಾತ್ರ ವಿಶ್ವವಿದ್ಯಾಲಯ ಉಳಿಸಲು ಸಾಧ್ಯವಾಗುತ್ತದೆ. ಈ ಹಿಂದೆ ಬರೀ ಕಟ್ಟಡ ಕಟ್ಟಿ ಬಿಟ್ಟಿದ್ದಾರೆ. ಸರ್ಕಾರಗಳು ಇದುವರೆಗೂ ವಿವಿಯಲ್ಲಿ ಅಧ್ಯಾಪಕರ ನೇಮಕ ಮಾಡಿಲ್ಲ. ಇನ್ನು ವಿಶ್ವವಿದ್ಯಾಲಯದ ಕುಲಪತಿಗಳಿಗೆ ಎರಡೂ ವರ್ಷದಿಂದ ಸಂಬಳ ಕೊಟ್ಟಿಲ್ಲ. ಕಳೆದ 5 ವರ್ಷದಿಂದಲೂ ಕಾಲೇಜು ಶಿಕ್ಷಣ ಇಲಾಖೆಯೇ ಇಲ್ಲಿನ ಬೋಧಕರಿಗೆ ವೇತನ ಕೊಡುತ್ತಿದೆ. ಯುನಿವರ್ಸಿಟಿಯಿಂದ ಅವರಿಗೆ ಸಂಬಳ ಕೊಡುತ್ತಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೆ ಮಂಡ್ಯ ವಿವಿ ನಡೆಸೋದಕ್ಕೂ ದುಡ್ಡಿಲ್ವಾ? ಅಷ್ಟೊಂದು ಪಾಪರ್ ಆಗಿದ್ಯಾ? ಅಶ್ವತ್ಥ ನಾರಾಯಣ!
ಮಂಡ್ಯ ವಿಶ್ವವಿದ್ಯಾಲಯಕ್ಕೆ ಗ್ರೇಡ್ ಇಲ್ಲದ ಕಾರಣ ದೇಶದ ಎಲ್ಲ ವಿವಿಗಳಿಗೆ ಯೂನಿವರ್ಸಿಟಿ ಗ್ರ್ಯಾಂಟ್ ಕಮಿಷನ್ (ಯುಜಿಸಿ) ದುಡ್ಡು ಕೊಡುವುದನ್ನ ನಿಲ್ಲಿಸಿದೆ. ರಾಜಕೀಯ ಇಚ್ಛಾಶಕ್ತಿಗಾಗಿ ವಿವಿ ತೆರೆದು ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುತ್ತಿದ್ದಾರೆ. ಮಂಡ್ಯ ವಿವಿ ಮೈಸೂರು ವಿವಿಯೊಂದಿಗೆ ವಿಲೀನವಾದರೆ ವಿದ್ಯಾರ್ಥಿಗಳಿಗೆ ತೊಂದರೆ ಅಂತ ಅಪಪ್ರಚಾರ ಮಾಡಿದ್ದಾರೆ. ಇದರಿಂದ ಯಾವುದೇ ತೊಂದರೆ ಆಗಲ್ಲ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಓದಿದವರು ರಾಷ್ಟ್ರ ಮಟ್ಟದಲ್ಲಿ ದೊಡ್ಡ ವ್ಯಕ್ತಿಗಳಾಗಿದ್ದಾರೆ. ಹೀಗಾಗಿ, ಮಂಡ್ಯ ವಿವಿಯನ್ನು ಮೈಸೂರಿನೊಂದಿಗೆ ವಿಲೀನಕ್ಕೆ ವಿರೋಧಿಸುವವರಿಗೆ ಕೈ ಮುಗಿದು ಕೇಳುತ್ತೇನೆ. ಮೈಸೂರು ವಿವಿ ಜೊತೆ ಮಂಡ್ಯ ವಿವಿ ವಿಲೀನಕ್ಕೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಯಾವ ಸೀಮೆ ಆರ್ಥಿಕ ತಜ್ಞ, ಸರ್ಕಾರಿ ಖಜಾನೆ ತುಂಬೆಲ್ಲಾ ಹೆಗ್ಗಣ ತುಂಬಿವೆ; ಆರ್. ಅಶೋಕ
