ಬೆಳಗಾವಿ, (ಡಿ.05): ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಕೆಟ್ಟ ಮೇಲೆ ಬುದ್ಧಿ ಬಂದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ನವರ ಸಹವಾಸ ಮಾಡಿ ನಾವು ಸರ್ವನಾಶವಾಗಿದ್ದೇವೆ. ಸಿದ್ದರಾಮಯ್ಯ ಮತ್ತು ಟೀಂ ನನ್ನ 12 ವರ್ಷಗಳ ಗುಡ್ ವಿಲ್ ನ್ನು ಹಾಳು ಮಾಡಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

'ದೇವೇಗೌಡ್ರ ಭಾವನಾತ್ಮಕ, ಸಿದ್ದರಾಮಯ್ಯನವರ ಪ್ರೀ ಪ್ಲ್ಯಾನ್‌ನಿಂದ ನಾನು ಟ್ರ್ಯಾಪ್ ಆಗಿದ್ದೇನೆ'

ಇನ್ನು ಈ ಬಗ್ಗೆ ಬೆಳಗಾವಿಯಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಚ್ ಡಿ ಕುಮಾರಸ್ವಾಮಿಯವರು ಬಿಜೆಪಿ ಜೊತೆಗಿದ್ದರೆ ಮುಖ್ಯಮಂತ್ರಿ ಆಗಿರುತ್ತಿದ್ದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ ಕುಮಾರಸ್ವಾಮಿ ಅವರಿಗೆ ಈಗ ಜ್ಞಾನೋದಯವಾಗಿದೆ ಎಂದರು.

ಕುಮಾರಸ್ವಾಮಿ ಇನ್ನಾದರೂ ಕಾಂಗ್ರೆಸ್ ಸಹವಾಸ ಬಿಡಲಿ. ಚಂಚಲ ಮನಸ್ಸು ಮಾಡಬೇಡಿ ಎಂದು ಕಿವಿಮಾತು ಹೇಳಿದರು.

ಕಾಂಗ್ರೆಸ್ ಉರಿಯುವ ಮನೆ ಅಂತಾ ಬಹಳ ದಿನಗಳ ಹಿಂದೆ ಅಂಬೇಡ್ಕರ್ ಹೇಳಿದ್ರು. ಕೆಟ್ಟ ಮೇಲೆಯಾದರೂ ನಿಮಗೆ ಬುದ್ದಿ ಬಂದಿದೆ ಇನ್ಮೇಲೆ ಎಂದಿಗೂ ಅವರ ಸಹವಾಸ ಮಾಡಬೇಡಿ, ನಿಮ್ಮವರಿಗೂ ಹೇಳಿ ಎಂದು ಸಲಹೆ ನೀಡಿದರು.

ಈ ನಿಲುವು ಸದಾಕಾಲ ಇರಲಿ. ಚಂಚಲ ಮನಸ್ಥಿತಿಗೊಳಗಾಗಲ್ಲ ಅಂದುಕೊಂಡಿದೀನಿ. ನಮ್ಮದು ರಾಷ್ಟ್ರವಾದಿ ಪಕ್ಷ. ಯಾರ ಬಗ್ಗೆಯೂ ಪೂರ್ವಾಗ್ರಹ ಅತಿಪ್ರೇಮ ಇಲ್ಲ. ದೇಶದ ಪರವಾಗಿ ಕೆಲಸ ಮಾಡುತ್ತೇವೆ. ಭಾರತ ಮಾತಾ ಕಿ ಜೈ ಎಂದು ನಮ್ಮ ಜೊತೆ ಬಂದ್ರೆ ಎಲ್ಲರೂ ನಮ್ಮವರೇ ಎಂದರು.