ಮೈಸೂರು, (ಡಿ.05): ಕಾಂಗ್ರೆಸ್ ನವರ ಸಹವಾಸ ಮಾಡಿ ನಾವು ಸರ್ವನಾಶವಾಗಿದ್ದೇವೆ. ಸಿದ್ದರಾಮಯ್ಯ ಮತ್ತು ಟೀಂ ನನ್ನ 12 ವರ್ಷಗಳ ಗುಡ್ ವಿಲ್ ನ್ನು ಹಾಳು ಮಾಡಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

"

ಮೈಸೂರಿನಲ್ಲಿ ಇಂದು (ಶನಿವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ನಮ್ಮ ಕುಟುಂಬಕ್ಕೆ ಶಾಪವಿದೆ. ನಾವು ಬೆಳೆಸಿದವರೇ ನಮ್ಮ ವಿರುದ್ಧ ಮಾತನಾಡುತ್ತಾರೆ. ಶಾಪ ವಿಮೋಚನೆ ಹೇಗೆ ಎಂದು ಕಂಡುಹಿಡಿಯಬೇಕು. ಸಿದ್ದರಾಮಯ್ಯ ಪ್ರೀ ಪ್ಲ್ಯಾನ್ ಮಾಡಿ ನನ್ನ ಟ್ರ್ಯಾಪ್ ಮಾಡಿದರು. ಹೀಗಾಗಿ ನಾನು ಸಿಎಂ ಸ್ಥಾನ ಕಳೆದುಕೊಂಡೆ. ಸಿದ್ದರಾಮಯ್ಯನವರ ಎಮೋಷನಲ್ ಟ್ರ್ಯಾಪ್ ಗೆ ನಾವು ಬಲಿಯಾದೆವು ಎಂದು ಆರೋಪಿಸಿದರು.

"

ದೇವೇಗೌಡ ಮನವೊಲಿಕೆ ಯಶಸ್ವಿ: ಇದೇ ಖುಷಿಯಲ್ಲಿ ಮನೆಯಲ್ಲಿ ಭರ್ಜರಿ ಊಟ

ಸಿದ್ದರಾಮಯ್ಯ ನಮ್ಮ ವಿರುದ್ಧ ಅಪಪ್ರಚಾರ ಮಾಡಿದರು. ನಮ್ಮ ಪಕ್ಷವನ್ನು ಬಿ ಟೀಂ ಎಂದು ಪದೇ ಪದೇ ಹೇಳಿ ಬಿಜೆಪಿಗೆ ಹೆಚ್ಚು ಸ್ಥಾನ ಬರುವಂತೆ ಮಾಡಿದರು. ನನ್ನ ಹೆಸರು ಹಾಳು ಮಾಡುವ ಹುನ್ನಾರ ನಡೆಸಿದರು. ಕಾಂಗ್ರೆಸ್ ನವರ ಸಹವಾಸ ಮಾಡಿ, ದೇವೇಗೌಡರ ಮಾತು ಕಟ್ಟಿಕೊಂಡು ಅಂದರೆ ದೇವೇಗೌಡರಿಗೆ ಅವರದ್ದೇ ಆದ ಕಮಿಟ್ ಮೆಂಟ್ ಇತ್ತು. ಹಾಗಾಗಿ ಅವರ ಮನಸ್ಸಿಗೆ ನೋವಾಗಬಾರದೆಂದು ಕಾಂಗ್ರೆಸ್ ಜೊತೆ ಕೈಜೋಡಿಸಿದೆ. ಆದರೆ ಸಿದ್ದರಾಮಯ್ಯ ಹಾಗೂ ಟೀಂ ನಮ್ಮನ್ನೇ ಸರ್ವನಾಶ ಮಾಡಿದರು ಎಂದು ಗುಡುಗಿದರು.

"

ಸಂಕ್ರಾಂತಿ ಬಳಿಕ ಸಂಘಟನೆ
ನಾನು ಸರಿಯಾದ ಸಮಯಕ್ಕೆ ಕಾಯುತ್ತಿದ್ದೇನೆ. ಸಕ್ರಿಯ ಸಂಘಟನೆಗೆ ಇಳಿದು ಪಕ್ಷವನ್ನು ಬಲ ಪಡಿಸುತ್ತೇನೆ. ಸಂಕ್ರಾಂತಿಯ ಬಳಿಕ ಜೆಡಿಎಸ್‌ ಪಕ್ಷವನ್ನು ಪುನಶ್ಚೇತನ ಮಾಡಲಾಗುವುದು ಎಂದು ಹೇಳಿದರು, ಇದೇ ವೇಳೆ ನಾನು ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದು ಬಿಜೆಪಿ ಸರ್ಕಾರ ಅಲ್ಲ. ಇಲ್ಲಿ ಇರುವುದು ರಾಜ್ಯದ ಸರ್ಕಾರ. ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೂ ಬಂದರೂ ರಾಜ್ಯದ ಸರ್ಕಾರ ಆಗುತ್ತದೆ. ಈ ಸರ್ಕಾರ ಪ್ರಾಧಿಕಾರಗಳನ್ನು ಆರಂಭಿಸಿ ದುಂದುವೆಚ್ಚ ಹೆಚ್ಚಾಗಿದೆ. ಒಬ್ಬೊಬ್ಬ ಅಧ್ಯಕ್ಷರಿಗೆ 3-4 ಕೋಟಿ ರೂ ವೆಚ್ಚವಾಗುತ್ತದೆ. ಅರ್ಧ ರಾತ್ರಿಯಲ್ಲಿ ಐಶ್ಚರ್ಯ ಬಂದರೆ ಹೇಗೇ ಆಡುತ್ತಾರೋ ಹಾಗೇ ಕೆಲ ಸಚಿವರು ಹಾಗೇ ಆಡುತ್ತಿದ್ದಾರೆ. ಕೆಲವರಿಗೆ ಸಚಿವ ಸ್ಥಾನದ ಘನತೆಯೇ ಗೊತ್ತಿಲ್ಲ. ಸಚಿವರು ಜನರ ನೋವಿಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.