ಬಿಜೆಪಿ- ಜೆಡಿಎಸ್ ಪಕ್ಷದವರು ಪಾದಯಾತ್ರೆ ಮೂಲಕ ಪಾಪ ವಿಮೋಚನೆ ಮಾಡಿಕೊಂಡಿದ್ದಾರೆ: ಎಂ.ಲಕ್ಷ್ಮಣ್
ಬಿಜೆಪಿ- ಜೆಡಿಎಸ್ ಪಕ್ಷದವರು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮೂಲಕ ಪಾಪ ವಿಮೋಚನೆ ಮಾಡಿಕೊಂಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವ್ಯಂಗ್ಯವಾಡಿದರು.
ಮೈಸೂರು (ಆ.13): ಬಿಜೆಪಿ- ಜೆಡಿಎಸ್ ಪಕ್ಷದವರು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮೂಲಕ ಪಾಪ ವಿಮೋಚನೆ ಮಾಡಿಕೊಂಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವ್ಯಂಗ್ಯವಾಡಿದರು. ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರ ಪಾಪದ ಯಾತ್ರೆ ಇಂದು ಅಂತ್ಯಗೊಂಡಿದೆ. ಬಿಜೆಪಿ- ಜೆಡಿಎಸ್ ನವರು ಮಾಡಿದ್ದ ಪಾಪವನ್ನು ಕಳೆದುಕೊಂಡಿದ್ದಾರೆ. ಪಾಪ ವಿಮೋಚಾನ ಪಾದಯಾತ್ರೆ ಮುಕ್ತಾಯವಾಗಿದೆ ಎಂದು ಟೀಕಿಸಿದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿ, ದಾಖಲೆ ಇಲ್ಲದ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದರು. ಆದರೆ, ವೇದಿಕೆಯಲ್ಲಿ ಪರಮ ಭ್ರಷ್ಟರೇ ಕೂತಿದ್ದರು ಎಂದು ಅವರು ಆರೋಪಿಸಿದರು. ಆರ್. ಅಶೋಕ್ ವಿಪಕ್ಷ ನಾಯಕ ಸ್ಥಾನ ಉಳಿಸಿಕೊಳ್ಳಲಿಕ್ಕೆ ಮುಖ್ಯಮಂತ್ರಿ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ವಿಪಕ್ಷ ನಾಯಕನ ಸ್ಥಾನಕ್ಕೆ ತಕ್ಕಂತೆ ಯಾವತ್ತಾದರೂ ನಡೆದುಕೊಂಡಿದ್ದೀರಾ ಎಂದು ಅವರು ವಾಗ್ದಾಳಿ ನಡೆಸಿದರು. ಭ್ರಷ್ಟಾಚಾರದ ಪಿತಾಮಹ ಬಿಜೆಪಿಯವರೇ. ಪ್ರಹ್ಲಾದ್ ಜೋಶಿ ಸುಳ್ಳು ಹೇಳೋದರಲ್ಲಿ ನಿಸ್ಸಿಮರು, ಎರಡು ಪಿಎಚ್.ಡಿ ಪಡೆದಿದ್ದಾರೆ ಎಂದು ಅವರು ಕಿಡಿಕಾರಿದರು.
ಫ್ಲೆಕ್ಸ್ ಹಾಕಿದ್ದು ನಾವಲ್ಲ: ಎಚ್.ಡಿ. ದೇವೇಗೌಡ ಕುಟುಂಬದ ಭೂ ಸ್ವಾಧೀನಾದ ಪಕ್ಷಿನೋಟ ಎಂದು ಜಾಹೀರಾತು ನೀಡಿದ್ದವರು ಬಿಜೆಪಿಗರು. ಕೆಳಗಡೆ ಪ್ರಕಟಣೆಯಲ್ಲಿ ಇದನ್ನು ಸ್ಪಷ್ಟವಾಗಿ ಹೇಳಿದೆ. ಬಿಜೆಪಿಗರು ಮಾಡಿರುವ ಆರೋಪ ಸತ್ಯನ ಸುಳ್ಳು ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಬೇಕು. ಅದು ಬಿಟ್ಟು ತಮ್ಮ ಮನೆಯಲ್ಲಿ ನಡೆದ ಘಟನೆಗಳಿಗೆ ಕಾಂಗ್ರೆಸ್ಸಿಗರೇ ಕಾರಣ ಎಂಬಂತೆ ಜೆಡಿಎಸ್ ನವರು ಆಡುತ್ತಿದ್ದಾರೆ. ಈ ಫ್ಲೆಕ್ಸ್ ಅನ್ನು ಕಾಂಗ್ರೆಸ್ಸಿಗರು ಹಾಕಿಲ್ಲ. ಯಾರು ಆ ಫ್ಲೆಕ್ಸ್ ಹಾಕಿದ್ದಾರೆ ಎಂಬ ಮಾಹಿತಿ ಇಲ್ಲ. ನಮ್ಮ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದರು. ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ನಗರಪಾಲಿಕೆ ಮಾಜಿ ಸದಸ್ಯ ಎಂ. ಶಿವಣ್ಣ, ನಗರಾಧ್ಯಕ್ಷ ಆರ್. ಮೂರ್ತಿ, ಮಾಧ್ಯಮ ವಕ್ತಾರ ಕೆ. ಮಹೇಶ್ ಮೊದಲಾದವರು ಇದ್ದರು.
Kalaburagi: ಚಿನ್ನದ ಪದಕ ಪಡೆಯಲು ಬಂದವಳ ಕೈ ಸೇರಿತ್ತು ವಿಷಾದ ಪತ್ರ: ಕಣ್ಣೀರಿಟ್ಟ ವಿದ್ಯಾರ್ಥಿನಿ ರೋಶನಿ!
ಎಂಡಿಎಯಲ್ಲಿ 50:50 ಅನುಪಾತ ನಿವೇಶನ ಹಂಚಿಕೆ ನಿಯಮ ಜಾರಿಗೆ ತರಲು ಎಂಡಿಎ ಅಧ್ಯಕ್ಷರಿಗೆ ಸಾಧ್ಯವಿಲ್ಲ. ಅದನ್ನು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ನಿಯಮವನ್ನು ಅನುಷ್ಠಾನಕ್ಕೆ ತರಲಾಗಿದೆ. ಈ ಸಾಮಾನ್ಯ ಜ್ಞಾನವೂ ಆರ್. ಅಶೋಕ್ ಅವರಿಗೆ ಇಲ್ಲವೇ?
- ಎಚ್.ವಿ. ರಾಜೀವ್, ಎಂಡಿಎ ಮಾಜಿ ಅಧ್ಯಕ್ಷ