Asianet Suvarna News Asianet Suvarna News

ಮರಳು ಮಾಫಿಯಾದಿಂದ ಪೇದೆ ಹತ್ಯೆ: ವಿಧಾನ ಪರಿಷತ್‌ನಲ್ಲಿ ಬಿಜೆಪಿ ಧರಣಿ

ನೆಲೋಗಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಜೂ.15ರಂದು ಸಿದ್ದಪ್ಪ ಮನೆ ಕೆಲಸಕ್ಕಾಗಿ ಟ್ರ್ಯಾಕ್ಟರ್‌ನಲ್ಲಿ ಮರಳು ಹಾಗೂ ಸಿಮೆಂಟ್‌ ತುಂಬಿಕೊಂಡು ಬರುವಾಗ, ಹೆಡ್‌ ಕಾನ್ಸ್‌ಟೇಬಲ್‌ ಮಯೂರ್‌ ಏಕಾಏಕಿ ಟ್ರ್ಯಾಕ್ಟರ್‌ಗೆ ಅಡ್ಡಬಂದ ಪರಿಣಾಮ ಹಿಂಬದಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಆದರೆ, ನೆಲೋಗಿ ಪೊಲೀಸರು ಉದ್ದೇಶಪೂರ್ವಕವಾಗಿ ಕೊಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಸದಸ್ಯ ಶಶಿಲ್‌ ನಮೋಶಿ

BJP Held Protest in Vidhan Parishat For Police Murder For Sand Mafia in Kalaburagi grg
Author
First Published Jul 18, 2023, 11:30 PM IST

ವಿಧಾನ ಪರಿಷತ್‌(ಜು.18):  ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಮರಳು ಸಾಗಿಸುವಾಗ ತಡೆಯಲು ಮುಂದಾದ ಹೆಡ್‌ ಕಾನ್ಸ್‌ಟೇಬಲ್‌ ಮೇಲೆಯೇ ಟ್ರ್ಯಾಕ್ಟರ್‌ ಹರಿಸಿ ಕೊಲೆ ಮಾಡಿದ ಆರೋಪದ ಪ್ರಕರಣ ಸೋಮವಾರ ಮೇಲ್ಮನೆಯಲ್ಲಿ ಭಾರೀ ಸದ್ದು ಮಾಡಿತು. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲು ಆಗ್ರಹಿಸಿ ಬಿಜೆಪಿ ಸದಸ್ಯರು ಸದನದ ಬಾವಿಗೆ ಇಳಿದು ಧರಣಿ ಆರಂಭಿಸಿದ ಹಿನ್ನೆಲೆಯಲ್ಲಿ ಸಭಾಪತಿ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದ ಪ್ರಸಂಗವೂ ನಡೆಯಿತು.

ಬಿಜೆಪಿ ಸದಸ್ಯ ಶಶಿಲ್‌ ನಮೋಶಿ ಈ ವಿಚಾರವನ್ನು ಪ್ರಸ್ತಾಪಿಸಿ ಮಾತನಾಡಿ, ನೆಲೋಗಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಜೂ.15ರಂದು ಸಿದ್ದಪ್ಪ ಮನೆ ಕೆಲಸಕ್ಕಾಗಿ ಟ್ರ್ಯಾಕ್ಟರ್‌ನಲ್ಲಿ ಮರಳು ಹಾಗೂ ಸಿಮೆಂಟ್‌ ತುಂಬಿಕೊಂಡು ಬರುವಾಗ, ಹೆಡ್‌ ಕಾನ್ಸ್‌ಟೇಬಲ್‌ ಮಯೂರ್‌ ಏಕಾಏಕಿ ಟ್ರ್ಯಾಕ್ಟರ್‌ಗೆ ಅಡ್ಡಬಂದ ಪರಿಣಾಮ ಹಿಂಬದಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಆದರೆ, ನೆಲೋಗಿ ಪೊಲೀಸರು ಉದ್ದೇಶಪೂರ್ವಕವಾಗಿ ಕೊಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದರು.
ಘಟನಾ ಸ್ಥಳದಲ್ಲಿ ಇಲ್ಲದ ಟ್ರ್ಯಾಕ್ಟರ್‌ ಮಾಲೀಕ ಸಾಯಬಣ್ಣನನ್ನು ವಿಚಾರಣೆಗೆ ಕರೆತರುವಾಗ ಪೊಲೀಸರೇ ಆತನ ಕಣ್ಣಿಗೆ ಬಟ್ಟೆಕಟ್ಟಿ ಬಳಿಕ ಕಾಲಿಗೆ ಗುಂಡು ಹೊಡೆದಿದ್ದಾರೆ. ಪೊಲೀಸರು ತಮ್ಮ ರಕ್ಷಣೆಗಾಗಿ ಸುಳ್ಳು ಪ್ರಕರಣ ದಾಖಲಿಸಿ, ಆತನನ್ನು ಮೈಸೂರು ಜೈಲಿಗೆ ಕಳುಹಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರ ವಿರುದ್ಧವೇ ಆರೋಪ ಕೇಳಿ ಬಂದಿರುವುದರಿಂದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಬಿಜೆಪಿ ಸದಸ್ಯರಾದ ರವಿಕುಮಾರ್‌, ಸಾಬಣ್ಣ ತಳವಾರ ಸೇರಿದಂತೆ ಹಲವು ಸದಸ್ಯರು ದನಿಗೂಡಿಸಿದರು.

ಮೇಲ್ಮನೆ ಎಲೆಕ್ಷನ್‌ಗೂ ಕಾಂಗ್ರೆಸ್‌ ನಿಧಿ ಸಂಗ್ರಹ

ಇದಕ್ಕೆ ಉತ್ತರಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಅಂದು ಆರೋಪಿಗಳಾದ ಸಿದ್ದಪ್ಪ ಹಾಗೂ ಸಾಯಬಣ್ಣ ಟ್ರ್ಯಾಕ್ಟರ್‌ನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದರು. ಈ ಬಗ್ಗೆ ದೊರೆತ ಮಾಹಿತಿ ಮೇರೆಗೆ ಹೆಡ್‌ ಕಾನ್ಸ್‌ಟೇಬಲ್‌ ಮಯೂರ್‌ ಮತ್ತು ಕಾನ್ಸ್‌ಟೇಬಲ್‌ ಪ್ರಮೋದ್‌ ದ್ವಿಚಕ್ರ ವಾಹನದಲ್ಲಿ ಸ್ಥಳಕ್ಕೆ ಬಂದು ಟ್ರ್ಯಾಕ್ಟರ್‌ ನಿಲ್ಲಿಸುವಂತೆ ಸೂಚಿಸಿದ್ದಾರೆ. ವೇಳೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ದ್ವಿಚಕ್ರ ವಾಹನದ ಮೇಲೆಯೇ ಆರೋಪಿಗಳು ಟ್ರ್ಯಾಕ್ಟರ್‌ ಚಲಾಯಿಸಿದ್ದಾರೆ. ಇದರಿಂದ ಹೆಡ್‌ ಕಾನ್ಸ್‌ಟೇಬಲ್‌ ಮಯೂರ್‌ ಸ್ಥಳದಲ್ಲೇ ಮೃತಪಟ್ಟರೆ, ಕಾನ್ಸ್‌ಟೇಬಲ್‌ ಪ್ರಮೋದ್‌ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಆರೋಪಿಗಳು ಸ್ಥಳದಲ್ಲೇ ಟ್ರೇಲರ್‌ ಬಿಟ್ಟು ಇಂಜಿನ್‌ ತೆಗೆದುಕೊಂಡು ಪರಾರಿಯಾಗಿದ್ದರು.

ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದ ಹೊರವಲಯದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸಾಯಬಣ್ಣನನ್ನು ವಶಕ್ಕೆ ಪಡೆದು ಕರೆತರುವಾಗ ಮಾರ್ಗ ಮಧ್ಯೆ ಮೂತ್ರ ವಿಸರ್ಜನೆ ನೆಪದಲ್ಲಿ ಚಾಕುವಿನಿಂದ ಪೊಲೀಸರ ಮೇಲೆ ಹಲ್ಲೆಗೈದು ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆದಿದ್ದರು. ಆರೋಪಿ ಸಾಯಬಣ್ಣನ ವಿರುದ್ಧ ನೆಲೋಗಿ ಠಾಣೆಯಲ್ಲಿ ರೌಡಿ ಪಟ್ಟಿತೆರೆಯಲಾಗಿದೆ. ಈತನ ವಿರುದ್ಧ ವಿವಿಧ ಪ್ರಕರಣಗಳು ದಾಖಲಾಗಿವೆ. ಸದ್ಯ ಹೆಡ್‌ ಕಾನ್ಸ್‌ಟೇಬಲ್‌ ಕೊಲೆ ಪ್ರಕರಣವನ್ನು ಪೊಲೀಸರೇ ತನಿಖೆ ನಡೆಸುತ್ತಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವರು ಸ್ಪಷ್ಟವಾಗಿ ಹೇಳಿದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ನ್ಯಾಯಾಂಗ ತನಿಖೆಗೆ ವಹಿಸಲೇಬೇಕು ಎಂದು ಆಗ್ರಹಿಸಿ ಸದನದ ಬಾವಿಗೆ ಇಳಿದು ಧರಣಿ ನಡೆಸಲು ಮುಂದಾದರು. ಈ ವೇಳೆ ಸದನದಲ್ಲಿ ಗದ್ದಲ ಏರ್ಪಟ್ಟಹಿನ್ನೆಲೆಯಲ್ಲಿ ಸಭಾಪತಿ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.

Follow Us:
Download App:
  • android
  • ios