ಸಂಪುಟ ಪುನರ್ ರಚನೆ ಸಿಎಂಗೆ ಬಿಟ್ಟ ವಿಚಾರ: ಸಚಿವ ರಾಮಲಿಂಗಾರೆಡ್ಡಿ
ಸಂಪುಟ ಪುನರ್ ರಚನೆ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಟ್ಟ ವಿಚಾರವೆಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಸೋಮವಾರ ಇಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧವೆಂದರು.
ಚಿತ್ರದುರ್ಗ (ಮೇ.20): ಸಂಪುಟ ಪುನರ್ ರಚನೆ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಟ್ಟ ವಿಚಾರವೆಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಸೋಮವಾರ ಇಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧವೆಂದರು. ಲೋಕಸಭೆ ಚುನಾವಣೆ ನಂತರ ಸಂಪುಟ ಪುನರ್ ರಚನೆ ಆಗುತ್ತದೆ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಸರ್ಕಾರ ಪತನ ಆಗಲ್ಲ. ಕಾಂಗ್ರೆಸ್ ಪಕ್ಷ 20 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಬಿಜೆಪಿ ಕೇವಲ ಸಿಂಗಲ್ ಡಿಜಿಟ್‌ನಲ್ಲಿ ಇರಲಿದೆ ಎಂದರು. ರಾಜ್ಯದಲ್ಲಿ ಕಾನೂನು ಹದಗೆಟ್ಟಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ,ಬಿಜೆಪಿ ಆಡಳಿತ ಕಾಲದ ವರ್ಷದಲ್ಲಿ 1350 ಕೊಲೆ ಪ್ರಕರಣ ನಡೆದಿವೆ.
ಕಳೆದ 4 ತಿಂಗಳಲ್ಲಿ 400 ಕೊಲೆಗಳು ನಡೆದಿವೆ.ಬಿಜೆಪಿ ಮುಖಂಡರು ಅಂಕಿ ಅಂಶ ನೋಡದೆ ಮಾತನಾಡುತ್ತಾರೆ. ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಲ್ಲಿ ಕಾಂಗ್ರೆಸ್ ಪಾತ್ರವಿಲ್ಲ. ಪ್ರಜ್ವಲ್, ರೇವಣ್ಣ, ದೇವರಾಜೇಗೌಡರ ವೈಯಕ್ತಿಕ ಕಿತ್ತಾಟವದು. ವಕೀಲ ದೇವರಾಜೇಗೌಡ ಬಿಜೆಪಿಯಿಂದ ಸ್ಪರ್ಧಿಸಿ ಸೋತವರು. ವೈಯಕ್ತಿಕ ಜಗಳವನ್ನು ರಾಜ್ಯ ಮಟ್ಟಕ್ಕೆ ತಂದಿಟ್ಟಿದ್ದಾರೆ. ಹೊಳೆನರಸೀಪುರದಲ್ಲಿ ಇರಬೇಕಾದ ಜಗಳ ರಾಜ್ಯವ್ಯಾಪಿ ಹರಡಿದೆ. ಕಾಂಗ್ರೆಸ್ ಪಕ್ಷಕ್ಕೂ, ಸರ್ಕಾರಕ್ಕೂ ಪೆನ್ ಡ್ರೈವ್ ಕೇಸ್‌ಗೂ ಸಂಬಂಧ ಇಲ್ಲ.ಬಿಜೆಪಿ ಅವರು ಏನು ಹೇಳುತ್ತಾರೋ ಅದನ್ನು ದೇವರಾಜೇಗೌಡ ಮಾತನಾಡುತ್ತಿದ್ದಾರೆ ಎಂದರು.
ಅರಾಜಕತೆಯೇ ಕಾಂಗ್ರೆಸ್ ಸರ್ಕಾರದ ಸಾಧನೆ: ಶಾಸಕ ಶೈಲೇಂದ್ರ ಬೆಲ್ದಾಳೆ
ದೇವರಾಜೇಗೌಡರ ಆರೋಪ ರಾಜಕೀಯ ಪ್ರೇರಿತ: ಸಂಸದ ಪ್ರಜ್ವಲ್ ರೇವಣ್ಣರವರ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಪ್ರಚಾರದ ಹಿಂದೆ ನಾಲ್ವರು ಸಚಿವರು ಇದ್ದಾರೆಂದು ವಕೀಲ ದೇವರಾಜೇಗೌಡ ಮಾಡಿರುವ ಆರೋಪ ರಾಜಕೀಯ ಪ್ರೇರಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದರು. ವಕೀಲ ದೇವರಾಜೇಗೌಡ ಸಕ್ರಿಯ ಬಿಜೆಪಿ ಕಾರ್ಯಕರ್ತ. ಆತ ಬಿಜೆಪಿಯಿಂದ ಸ್ಪರ್ಧೆ ಮಾಡಿ ಸೋತಿರುವ ವ್ಯಕ್ತಿ. ಅವರು ರಾಜಕೀಯದಲ್ಲಿ ಇಲ್ಲದೇ ಹೋಗಿದ್ದರೆ ಅವರ ಮಾತನ್ನು ಗಣನೆಗೆ ತೆಗೆದುಕೊಳ್ಳಬಹುದಿತ್ತು. ಆದರೆ ಈಗ ಅವರ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ ಎಂದರು. ಈ ಹಿಂದೆ ದೇವರಾಜೇಗೌಡ ಅವರೇ ಎಚ್.ಡಿ.ರೇವಣ್ಣ ಕುಟುಂಬದ ವಿರುದ್ಧ ಮಾತನಾಡಿದ್ದು, ವೀಡಿಯೋ ಹರಿ ಬಿಟ್ಟಿದ್ದನ್ನು ನಾನು ಗಮನಿಸಿದ್ದೇನೆ.
ಕೊನೆಗೂ ಅಂಜಲಿ ಹತ್ಯೆ ಪ್ರಕರಣ ತನಿಖೆ ಸಿಐಡಿಗೆ: ಗೃಹ ಸಚಿವ ಪರಮೇಶ್ವರ್
ಇದು ಅವರಿಬ್ಬರ ವೈಯಕ್ತಿಕ (ಪರ್ಸನಲ್) ವಿಚಾರ. ಆದರೆ ಅದನ್ನು ರಾಜ್ಯ ಮಟ್ಟಕ್ಕೆ ತಂದಿದ್ದಾರೆ ಎಂದು ಹೇಳಿದರು. ಡಿ.ಕೆ.ಶಿವಕುಮಾರ್ ಅವರಿಂದ 100 ಕೋಟಿ ಆಫರ್ ಆರೋಪ ವಿಚಾರವಾಗಿ ಕೇಳಿದ ಪ್ರಶ್ನೆಗೆ ಇದರ ಬಗ್ಗೆ ದೇವರಾಜೇಗೌಡ ಅಥವಾ ಶಿವಕುಮಾರ್ ಅವರನ್ನೇ ಕೇಳಿ. ಅದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಉತ್ತರಿಸಿದರು. ಈ ಪ್ರಕರಣಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ಇದು ಕೇವಲ ಹೊಳೆನರಸೀಪುರದಲ್ಲಿ ಸುತ್ತುತ್ತಿರುವ ವಿಚಾರ. ರೇವಣ್ಣ, ಪ್ರಜ್ವಲ್ ಹಾಗೂ ದೇವರಾಜೇಗೌಡರ ಜಗಳ ಇದು. ಅವರ ಜಗಳವನ್ನು ಬೀದಿಗೆ ತಂದಿದ್ದಾರೆ ಎಂದರು. ದೇವರಾಜೇಗೌಡ ಜೈಲಿನಿಂದ ಬಂದ ಬಳಿಕ ಸರ್ಕಾರ ಬೀಳುತ್ತೆ ಎಂದಿದ್ದಾರಲ್ಲ ಎಂಬ ಪ್ರಶ್ನೆಗೆ ಸಚಿವ ರಾಮಲಿಂಗಾರೆಡ್ಡಿರವರು ಅವರು ಮೊದಲು ಜೈಲಿನಿಂದ ಬರಲಿ. ಆಮೇಲೆ ಸರ್ಕಾರ ಬೀಳುತ್ತಾ. ಇಲ್ವಾ ಅನ್ನೋದನ್ನ ನೋಡೊಣ ಎಂದು ಹೇಳಿದರು.