ಅಂಜಲಿ ಹತ್ಯೆ ಪ್ರಕರಣ ಸಿಐಡಿಗೆ ವಹಿಸಿ: ಸಚಿವ ಸಂತೋಷ್ ಲಾಡ್
ನಗರದಲ್ಲಿ ನಡೆದ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸುವಂತೆ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.
ಹುಬ್ಬಳ್ಳಿ (ಮೇ.20): ನಗರದಲ್ಲಿ ನಡೆದ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸುವಂತೆ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು. ಇಲ್ಲಿನ ವೀರಾಪುರ ಓಣಿಯಲ್ಲಿರುವ ಮೃತ ಅಂಜಲಿ ನಿವಾಸಕ್ಕೆ ಶನಿವಾರ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಶಿಕ್ಷಣ ಕಾಶಿ ಹಾಗೂ ಶಾಂತಿಗೆ ಹೆಸರಾದ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಇಂಥ ಕೊಲೆ ಘಟನೆಗಳು ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ನೇಹಾ ಹಿರೇಮಠ ಕೊಲೆ ಘಟನೆ ನಂತರ ಇನ್ನೊಂದು ಅಂತಹದ್ದೆ ಘಟನೆ ನಡೆದಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಸಮಾಜದಲ್ಲಿ ಶಾಂತಿ ಕದಡುವ ಹಾಗೂ ಅಹಿತಕರ ಚಟುವಟಿಕೆಯಲ್ಲಿ ಭಾಗವಹಿಸುವ ಮೂಲಕ ಯುವಕರು ಬಲಿಯಾಗುತ್ತಿದ್ದಾರೆ. ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಯುವಕರಿಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ. ಡ್ರಗ್ಸ್ ಹಾಗೂ ಮದ್ಯ ಮಾರಾಟ ಎಲ್ಲೆಡೆ ಹೆಚ್ಚಾಗುತ್ತಿದ್ದು, ಟೆಬ್ಲೆಟ್‌ನಲ್ಲಿಯೂ ನಶೆಯ ವಸ್ತುಗಳು ಮಾರಾಟವಾಗುತ್ತಿವೆ ಎಂದರು.
ಜನರು ಸ್ವಯಂ ಪ್ರೇರಿತರಾಗಿ ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರತಿಭಟನೆ ಮಾಡಬೇಕು. ಎಲ್ಲವನ್ನು ಸರ್ಕಾರವೇ ಮಾಡಲಿ ಎಂಬ ಮನೋಭಾವ ಬದಲಾಗಿ, ಎಲ್ಲರ ಸಹಕಾರ ಅಗತ್ಯವಾಗಿದೆ. ಅಹಿತಕರ ಘಟನೆಗಳು ನಡೆಯುವ ಮೊದಲೆ ಅದಕ್ಕೆ ಕಡಿವಾಣ ಹಾಕುವುದು ಪೊಲೀಸರ ಕರ್ತವ್ಯ. ಈ ಮೊದಲೇ ಅಂಜಲಿಯ ಕುಟುಂಬದವರು ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಪೊಲೀಸರು ನಿರ್ಲಕ್ಷ್ಯ ತೋರಿದ ಪರಿಣಾಮ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಗೃಹ ಸಚಿವರು ಕೂಡ ಅಂಜಲಿ ನಿವಾಸಕ್ಕೆ ಭೇಟಿ ನೀಡಲಿದ್ದಾರೆ ಎಂದರು.
ಪ್ರಜ್ವಲ್ ರೇವಣ್ಣ ವಿಡಿಯೋ ಬಿಡುಗಡೆ ಹಿಂದೆ ಡಿಕೆಶಿ ಮಾಸ್ಟರ್‌ಮೈಂಡ್: ಸಿ.ಪಿ.ಯೋಗೇಶ್ವರ್
ನನಗೆ ಅನಾರೋಗ್ಯದ ಕಾರಣಕ್ಕೆ ಘಟನೆ ನಡೆದ ದಿನ ಅಂಜಲಿ ನಿವಾಸಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಆದರೆ, ಈ ವಿಷಯದಲ್ಲಿ ಬಿಜೆಪಿಯವರು ನೀಡುತ್ತಿರುವ ಹೇಳಿಕೆಗಳು ಸರಿಯಲ್ಲ. ನಾನು ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸುವುದಿಲ್ಲ. ಅವರ ಆರೋಪಕ್ಕೆ ನಾನು ತಕ್ಕ ಉತ್ತರ ನೀಡಿದ್ದೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಇದೇ ಸಂದರ್ಭದಲ್ಲಿ ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ಮೃತ ಅಂಜಲಿಯ ಅಜ್ಜಿ ಗಂಗಮ್ಮಳಿಗೆ ಸಚಿವ ಸಂತೋಷ ಲಾಡ್ ₹ 2 ಲಕ್ಷ ಸಹಾಯಧನದ ಚೆಕ್ ವಿತರಿಸಿದರು.ಈ ವೇಳೆ ಶಾಸಕ ಪ್ರಸಾದ ಅಬ್ಬಯ್ಯ, ಮಹಾನಗರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಫ ಹಳ್ಳೂರ, ವಿನೋದ ಅಸೂಟಿ ಸೇರಿದಂತೆ ಹಲವರಿದ್ದರು.