ಮುಂಬೈ ಸೇರಿದಂತೆ ಮಹಾರಾಷ್ಟ್ರದ 29 ನಗರಪಾಲಿಕೆಗಳಿಗೆ ಜ.15ರಂದು ನಡೆದಿದ್ದ ಚುನಾವಣೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದೆ. ಇದರಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ- ಶಿವಸೇನೆ ನೇತೃತ್ವದ ‘ಮಹಾಯುತಿ’ 29ರ ಪೈಕಿ 25ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಹೆಜ್ಜೆ
ಮುಂಬೈ: ದೇಶದ ಶ್ರೀಮಂತ ಮಹಾನಗರ ಪಾಲಿಕೆಯಾಗಿರುವ ಮುಂಬೈ ಸೇರಿದಂತೆ ಮಹಾರಾಷ್ಟ್ರದ 29 ನಗರಪಾಲಿಕೆಗಳಿಗೆ ಜ.15ರಂದು ನಡೆದಿದ್ದ ಚುನಾವಣೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದೆ. ಇದರಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ- ಶಿವಸೇನೆ (ಏಕನಾಥ ಶಿಂಧೆ) ನೇತೃತ್ವದ ‘ಮಹಾಯುತಿ’ (ಮಹಾ ಮೈತ್ರಿಕೂಟ) 29ರ ಪೈಕಿ 25ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಹೆಜ್ಜೆ ಹಾಕಿದ್ದು, ಧುರಂಧರ್ (ಬಲಿಷ್ಠ) ಆಗಿ ಹೊರಹೊಮ್ಮಿದೆ. ಜೊತೆಗೆ 227 ಸದಸ್ಯ ಬಲದ ಬೃಹನ್ಮುಂಬೈ ಪಾಲಿಕೆಯಲ್ಲಿ ಉದ್ಧವ್ ಠಾಕ್ರೆಯ 3 ದಶಕಗಳ ಅಧಿಪತ್ಯ ಕೊನೆಗಾಣಿಸಿರುವ ಬಿಜೆಪಿ ಮೊದಲ ಸಲ ಮುಂಬೈನಲ್ಲಿ ಮೇಯರ್ ಹುದ್ದೆಯನ್ನು ತನ್ನದಾಗಿಸಿಕೊಳ್ಳುವತ್ತ ದಾಪುಗಾಲು ಹಾಕಿದೆ.
ಈ ನಡುವೆ ಮುಂಬೈ ಸೇರಿದಂತೆ ರಾಜ್ಯಾದ್ಯಂತ ಅತಿ ಹೆಚ್ಚು ಸ್ಥಾನ ಗೆದ್ದು ನಂ.1 ಪಕ್ಷವಾಗಿ ಹೊರಹೊಮ್ಮಿದ ಜೊತೆಜೊತೆಗೇ, ಮುಂಬೈನಲ್ಲಿ ಉದ್ಧವ್ ಬಣದ ಶಿವಸೇನೆ, ರಾಜ್ ಠಾಕ್ರೆ ನೇತೃತ್ವದ ಎಂಎನ್‌ಎಸ್ ಮತ್ತು ಪುಣೆಯಲ್ಲಿ ಶರದ್ ಪವಾರ್ ಮತ್ತು ಅಜಿತ್ ಪವಾರ್ ಬಣದ ಎನ್‌ಸಿಪಿಯನ್ನೂ ಮಣಿಸುವಲ್ಲಿ ಬಿಜೆಪಿ ಕೂಟ ಯಶಸ್ವಿಯಾಗಿದೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷವು ಚುನಾವಣೆ ನಡೆದ 2869 ವಾರ್ಡ್‌ಗಳ ಪೈಕಿ ಕೇವಲ 318 ಸ್ಥಾನಗಳಲ್ಲಿ ಗೆಲುವು ಸಾಧಿಸಿ ನಿರಾಶಾದಾಯಕ ಪ್ರದರ್ಶನ ನೀಡಿದೆ.
ಇದೇ ವೇಳೆ ಇದು ಅಭಿವೃದ್ಧಿ ಮತ್ತು ಪ್ರಾಮಾಣಿಕತೆಗೆ ಸಂದ ಗೆಲುವು ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹರ್ಷ ವ್ಯಕ್ತಪಡಿಸಿದ್ದಾರೆ.
ಭರ್ಜರಿ ಜಯ:
ಮಹಾರಾಷ್ಟ್ರದ 29 ಮುನಿಸಿಪಲ್, ಮಹಾನಗರ ಪಾಲಿಕೆಯ 2869 ವಾರ್ಡ್‌ಗಳಿಗೆ ನಡೆದ ಚುನಾವಣೆ ಫಲಿತಾಂಶ ಶುಕ್ರವಾರ ಪ್ರಕಟವಾಯಿತು. ಈ ಪೈಕಿ ಅತ್ಯಂತ ಕುತೂಹಲ ಕೆರಳಿಸಿದ್ದ 227 ಸದಸ್ಯಬಲದ ಬೃಹನ್ಮುಂಬೈ ಪಾಲಿಕೆಯಲ್ಲಿ ಬಿಜೆಪಿ 88, ಶಿವಸೇನೆ (ಶಿಂಧೆ) 22, ಶಿವಸೇನೆ ಉದ್ಧವ್ ಬಣ 67, ಎಂಎನ್‌ಎಸ್ 9, ಕಾಂಗ್ರೆಸ್ 24, ಎನ್‌ಸಿಪಿ (ಅಜಿತ್ ಪವಾರ್) 3, ಎನ್‌ಸಿಪಿ (ಶರದ್ ಪವಾರ್)1, ಇತರರು 8 ಸ್ಥಾನ ಗೆದ್ದಿದ್ದಾರೆ.
ಈ ಫಲಿತಾಂಶದೊಂದಿಗೆ ದೇಶದ ಅತ್ಯಂತ ಶ್ರೀಮಂತ ಪಾಲಿಕೆಯಾದ ಬೃಹನ್ಮುಂಬೈ ಮೊದಲ ಸಲ ಬಿಜೆಪಿ ತೆಕ್ಕೆಗೆ ಒಲಿದಂತಾಗಿದೆ. ಇಲ್ಲಿ ಉದ್ದವ್ ಮತ್ತು ರಾಜ್ ಠಾಕ್ರೆ ಒಂದಾಗಿ ಸೆಣೆಸಿದರೂ ಮತದಾರರ ವಿಶ್ವಾಸ ಗೆಲ್ಲುವಲ್ಲಿ ವಿಫಲವಾಗಿದ್ದಾರೆ. ಠಾಕ್ರೆ ಕುಟುಂಬದ ಮರಾಠಿ ಅಸ್ಮಿತೆಯನ್ನು ಮೀರಿ ನಿಲ್ಲುವಲ್ಲಿ ಬಿಜೆಪಿಯ ಅಭಿವೃದ್ಧಿ ಅಜೆಂಡಾ ಯಶಸ್ವಿಯಾಗಿದೆ ಎಂದು ಫಲಿತಾಂಶವನ್ನು ವಿಶ್ಲೇಷಿಸಲಾಗಿದೆ. ಈ ಹಿಂದೆ 2017ರಲ್ಲಿ 82 ಸ್ಥಾನ ಗೆದ್ದಿದ್ದೇ ಬಿಜೆಪಿಯ ಅತ್ಯುತ್ತಮ ಸಾಧನೆಯಾಗಿತ್ತು.
ಇನ್ನೊಂದೆಡೆ 227 ಸ್ಥಾನಗಳ ಪೈಕಿ ಶೆ.10ಕ್ಕಿಂತ ಕಡಿಮೆ ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್ ತನ್ನ ಇದುವರೆಗಿನ ಅತ್ಯಂತ ಹೀನಾಯ ಪ್ರದರ್ಶನ ಮಾಡಿದೆ. ಮತ್ತೊಂದಡೆ ಅಸಾದುದ್ದೀನ್ ಒವೈಸಿ ಅವರ ಎಂಐಎಂ ರಾಜಾದ್ಯಂತ 114 ಸ್ಥಾನ ಗೆಲ್ಲುವ ಮೂಲಕ ಅಚ್ಚರಿಯ ಫಲಿತಾಂಶ ನೀಡಿದೆ.
ಜನಪರ ಆಡಳಿತಕ್ಕೆ ಮಹಾಶೀರ್ವಾದ!
ಧನ್ಯವಾದ ಮಹಾರಾಷ್ಟ್ರ. ಎನ್‌ಡಿಎ ಕೂಟದ ಉತ್ತಮ ಜನಪರ ಆಡಳಿತದ ಕಾರ್ಯಸೂಚಿಗೆ ರಾಜ್ಯದ ಜನ ಆಶೀರ್ವಾದ ಮಾಡಿದ್ದಾರೆ. ಈ ಫಲಿತಾಂಶ ಜನರೊಂದಿಗಿನ ಎನ್‌ಡಿಎಯ ಗಾಢ ಬಾಂಧವ್ಯ ಸೂಚಿಸುತ್ತವೆ. ನಮ್ಮ ಹಿಂದಿನ ಸಾಧನೆ ಮತ್ತು ಅಭಿವೃದ್ಧಿಯ ದೃಷ್ಟಿಕೋನವು ಹೊಸ ತಿರುವು ಪಡೆದುಕೊಂಡಿದೆ. ಪ್ರಗತಿಗೆ ವೇಗ ನೀಡಲು ಮತ್ತು ಅದ್ಭುತ ಸಂಸ್ಕೃತಿಯನ್ನು ಆಚರಿಸಲು ಇದು ಅವಕಾಶ.ನರೇಂದ್ರ ಮೋದಿ, ಪ್ರಧಾನಿ


