Asianet Suvarna News Asianet Suvarna News

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌ ಅಸ್ತ್ರ

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಹಿಂದೆ ನೀಡಿದ ಅನುದಾನವನ್ನೂ ಬಿಡುಗಡೆ ಮಾಡುತ್ತಿಲ್ಲ. ಮೂರು ತಿಂಗಳಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಬಿಡುಗಡೆಯಾಗಿಲ್ಲ. ಹಳಿ ತಪ್ಪಿದ ಆಡಳಿತದ ಕುರಿತು ಜನರ ಮುಂದೆ ಮಾಹಿತಿ ಇಡುತ್ತಿದ್ದೇವೆ. ಜನರಿಟ್ಟನಂಬಿಕೆ, ವಿಶ್ವಾಸಕ್ಕೆ ಸರ್ಕಾರ ದ್ರೋಹ ಬಗೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ನಳಿನ್‌ ಕುಮಾರ್‌ ಕಟೀಲ್‌. 

BJP Charge Sheet Weapon against Karnataka Congress Government grg
Author
First Published Aug 30, 2023, 10:00 AM IST

ಬೆಂಗಳೂರು(ಆ.30):  ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಮೊದಲ ನೂರು ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷ ಬಿಜೆಪಿಯು ಸರ್ಕಾರದ ವೈಫಲ್ಯಗಳ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ವರದಿಗಳನ್ನು ಒಳಗೊಂಡ ‘ಕೈಕೊಟ್ಟಯೋಜನೆಗಳು; ಹಳಿ ತಪ್ಪಿದ ಆಡಳಿತ’ ಎಂಬ ಆರೋಪಪಟ್ಟಿರೂಪದ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದೆ.

ಮಂಗಳವಾರ ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಈ ಕಿರುಹೊತ್ತಿಗೆ ಬಿಡುಗಡೆಗೊಳಿಸಿದರು.

ಬಿಜೆಪಿ ಆಫೀಸಿಂದಲೇ ನನ್ನ ಬಗ್ಗೆ ಅಪಪ್ರಚಾರ: ಸ್ವಪಕ್ಷೀಯರ ವಿರುದ್ಧವೇ ಹರಿಹಾಯ್ದ ರೇಣುಕಾಚಾರ್ಯ

ಸರ್ಕಾರಿ ನೌಕರರ ವರ್ಗಾವಣೆ ದಂಧೆ, ಆಡಳಿತದಲ್ಲಿನ ಭ್ರಷ್ಟಾಚಾರ, ಗುತ್ತಿಗೆದಾರರ ಬಿಲ್‌ ಬಾಕಿ, ರೈತ್‌ ಸಮ್ಮಾನ್‌ ಸೇರಿದಂತೆ ಹಿಂದಿನ ಬಿಜೆಪಿ ಸರ್ಕಾರದ ವಿವಿಧ ಯೋಜನೆಗಳಿಗೆ ಕತ್ತರಿ ಪ್ರಯೋಗ, ರೈತರ ಆತ್ಮಹತ್ಯೆ, ಗ್ಯಾರಂಟಿ ಯೋಜನೆಗಳಿಗೆ ಷರತ್ತು ವಿಧಿಸಿದ್ದು, ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು, ಅನುದಾನ ಬಿಡುಗಡೆ ವಿಳಂಬ, ಲೋಡ್‌ ಶೆಡ್ಡಿಂಗ್‌, ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿ/ಎಸ್‌ಟಿ ಹಣ ಬಳಕೆ ಮತ್ತಿತರ ಅಂಶಗಳ ಬಗ್ಗೆ ಪ್ರಕಟಗೊಂಡಿರುವ ವರದಿಗಳನ್ನು ಸರ್ಕಾರದ ವೈಫಲ್ಯಗಳು ಎಂದು ಹೆಸರಿಸಿ ಕಿರುಹೊತ್ತಿಗೆಯಲ್ಲಿ ಪ್ರಸ್ತಾಪಿಸಲಾಗಿದೆ.

ಬಳಿಕ ಮಾತನಾಡಿದ ನಳಿನ್‌ ಕುಮಾರ್‌ ಕಟೀಲ್‌, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಹಿಂದೆ ನೀಡಿದ ಅನುದಾನವನ್ನೂ ಬಿಡುಗಡೆ ಮಾಡುತ್ತಿಲ್ಲ. ಮೂರು ತಿಂಗಳಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಬಿಡುಗಡೆಯಾಗಿಲ್ಲ. ಹಳಿ ತಪ್ಪಿದ ಆಡಳಿತದ ಕುರಿತು ಜನರ ಮುಂದೆ ಮಾಹಿತಿ ಇಡುತ್ತಿದ್ದೇವೆ. ಜನರಿಟ್ಟನಂಬಿಕೆ, ವಿಶ್ವಾಸಕ್ಕೆ ಸರ್ಕಾರ ದ್ರೋಹ ಬಗೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಂಚಾಯ್ತಿ ಕಚೇರಿಯಿಂದ ಮುಖ್ಯಮಂತ್ರಿ ಕಚೇರಿಯವರೆಗೆ ಇವತ್ತು ಭ್ರಷ್ಟಾಚಾರ ಸದ್ದು ಮಾಡುತ್ತಿದೆ. ದ್ವೇಷದ ರಾಜಕಾರಣ ಮಾಡಿಕೊಂಡು ಬಿಜೆಪಿ ಸರ್ಕಾರದ ಕಾನೂನುಗಳನ್ನು ರದ್ದು ಮಾಡುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಪಕ್ಷದ ಕಾರ್ಯಕರ್ತರ ವಿರುದ್ಧ ಸುಳ್ಳು ಆರೋಪ ಹೊರಿಸಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವ ಕೆಲಸ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ಬರೆದವರನ್ನು ಜೈಲಿಗೆ ಕಳುಹಿಸಲಾಗುತ್ತಿದೆ. ಮಾಧ್ಯಮದವರ ಮೇಲೂ ದಬ್ಬಾಳಿಕೆ ನಡೆದಿದೆ. ಇದು ಹಿಂದಿನ ತುರ್ತು ಪರಿಸ್ಥಿತಿಯನ್ನು ನೆನಪಿಸುವಂತಿದೆ. ಸರ್ವಾಧಿಕಾರ ಧೋರಣೆಯ ಸರ್ಕಾರ ರಾಜ್ಯದಲ್ಲಿದೆ ಎಂದು ಹರಿಹಾಯ್ದರು.

ಹಗಲು ದರೋಡೆ- ಬೊಮ್ಮಾಯಿ:

ಬಸವರಾಜ ಬೊಮ್ಮಾಯಿ ಮಾತನಾಡಿ, ನೂರು ದಿನ ಪೂರೈಸಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಮುಂದಿನ ಐದು ವರ್ಷದ ದಿಕ್ಸೂಚಿ ನೀಡುವ ಬದಲು ದಿಕ್ಕು ತಪ್ಪಿದ್ದು, ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರದ ಹಗಲು ದರೋಡೆ ನಡೆಯುತ್ತಿದೆ. ಸರ್ಕಾರ ಗೊಂದಲದಲ್ಲಿ ಸಿಲುಕಿ ಮಾತಿಗೆ ತಪ್ಪಿದ ಸರ್ಕಾರ ಇದಾಗಿದೆ ಎಂದು ಹೇಳಿದರು.

ಸರ್ಕಾರವು ಹಣಕಾಸಿನ ವ್ಯವಸ್ಥೆಯನ್ನು ಹಳಿ ತಪ್ಪಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದ ಮೇಲೆ 8 ಸಾವಿರ ಕೋಟಿ ರು. ಸಾಲ ಮಾಡಿದ್ದಾರೆ. ಸುಮಾರು 35 ಸಾವಿರ ಕೋಟಿ ರು. ತೆರಿಗೆ ಹೆಚ್ಚಳ ಮಾಡಿದ್ದಾರೆ. ಒಟ್ಟು 45 ಸಾವಿರ ಕೋಟಿ ರು. ತೆರಿಗೆ ಮೂಲಕ ಸಂಗ್ರಹಿಸುವ ಅವಕಾಶ ಮಾಡಿಕೊಂಡು 12 ಸಾವಿರ ಕೋಟಿ ರು. ಕೊರತೆ ಹೆಚ್ಚಳ ಮಾಡಿಕೊಂಡಿದ್ದಾರೆ. ನಾವು ಕೋವಿಡ್‌ ಬಳಿಕ ಹೆಚ್ಚುವರಿ ಬಜೆಟ್‌ ಮಾಡಿದ್ದೆವು. ಇವರು ಕೋವಿಡ್‌ ಸ್ಥಿತಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಸಾರಿಗೆ ನೌಕರರ ಸಂಬಳ ವಿಳಂಬವಾಗುತ್ತಿದೆ. ಇವರು ಬಂದ ಮೇಲೆ ಒಂದು ಕಿ.ಮೀ. ರಸ್ತೆಯನ್ನೂ ಮಾಡಿಲ್ಲ ಎಂದರು.

ಕೈ ಗೇಟ್ ತೆಗೆದ್ರೆ ಬಿಜೆಪೀಲಿ ಒಬ್ಬ ಶಾಸಕನೂ ಇರೊಲ್ಲ: ಸಚಿವ ಶಿವರಾಜ ತಂಗಡಗಿ

ಕಾವೇರಿ ವಿಷಯದಲ್ಲಿ ರೈತರ ಮತ್ತು ರಾಜ್ಯದ ಹಿತ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. 10 ಸಾವಿರ ಕ್ಯೂಸೆಕ್ಸ್‌ ನೀರು ಬಿಡಲು ಸೂಚನೆ ನೀಡಿರುವುದನ್ನು ಪ್ರಶ್ನಿಸಲು ಸರ್ಕಾರ ಇನ್ನೂ ಸುಪ್ರೀಂಕೋರ್ಚ್‌ಗೆ ಯಾಕೆ ಹೋಗಿಲ್ಲ? ತಮಿಳುನಾಡಿನ ಅರ್ಜಿ ವಿಚಾರಣೆ ಎರಡು ಬಾರಿ ನಡೆದಿದೆ. ಈಗ ನ್ಯಾಯಾಲಯ ಆದೇಶಿಸಿದರೆ ನಮ್ಮ ರೈತರ ಪರಿಸ್ಥಿತಿ ಏನಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಅಧಿಕಾರಕ್ಕೆ ಬರುವ ಮುನ್ನ ಗ್ಯಾರಂಟಿಗಳ ಘೋಷಣೆ ಮಾಡಿ, ಭ್ರಷ್ಟಾಚಾರ ವಿರುದ್ಧ ಪುಂಖಾನುಪುಂಖ ಭಾಷಣ ಮಾಡಲಾಗಿತ್ತು. ಅಧಿಕಾರಕ್ಕೆ ಬಂದ ನಂತರ 100 ದಿನದಲ್ಲಿ ನೂರಾರು ತಪ್ಪುಗಳನ್ನು ಸರ್ಕಾರ ಮಾಡಿದೆ. ಗ್ಯಾರಂಟಿಗಳಿಗೆ ಮಾನದಂಡಗಳನ್ನು ವಿಧಿಸಿ ಮಾತು ತಪ್ಪಿದೆ. ಕಾಂಗ್ರೆಸ್‌ ಸರ್ಕಾರದಲ್ಲಿ ಇಬ್ಬರು ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದರೂ ಅವರ ರಾಜೀನಾಮೆ ಪಡೆಯುವಲ್ಲಿ ವಿಫಲವಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗರಿಷ್ಠ ಬಂಡವಾಳ ಹೂಡಿಕೆ ಬರುತ್ತಿತ್ತು. ಆದರೆ, ಈಗ ವಿದ್ಯುತ್‌ ಅಭಾವ, ಅತಿ ಹೆಚ್ಚು ದರದಿಂದ ಹೂಡಿಕೆದಾರರು ವಾಪಸ್‌ ಹೋಗುತ್ತಿದ್ದಾರೆ. ವಿದ್ಯುತ್‌ ಉಚಿತವೆಂದು ಘೋಷಿಸಿ ಅಘೋಷಿತ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ. ಬಜೆಟ್‌ನಲ್ಲಿ ರೈತಪರ ಯೋಜನೆಗಳನ್ನು ಘೋಷಣೆ ಮಾಡಿಲ್ಲ. ರೈತ ಸಮ್ಮಾನ್‌ ಯೋಜನೆಯಡಿ ರಾಜ್ಯದಿಂದ ನೀಡಲಾಗುತ್ತಿದ್ದ ನಾಲ್ಕು ಸಾವಿರ ರು. ರದ್ದು ಮಾಡಿದೆ ಎಂದು ಕಿಡಿಕಾರಿದರು.

Follow Us:
Download App:
  • android
  • ios