Asianet Suvarna News Asianet Suvarna News

ಬಿಜೆಪಿ ಆಫೀಸಿಂದಲೇ ನನ್ನ ಬಗ್ಗೆ ಅಪಪ್ರಚಾರ: ಸ್ವಪಕ್ಷೀಯರ ವಿರುದ್ಧವೇ ಹರಿಹಾಯ್ದ ರೇಣುಕಾಚಾರ್ಯ

ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಕಡೆಗಣಿಸಿದ್ದೇ ಬಿಜೆಪಿಗೆ ಶಾಪವಾಗಿ ಪರಿಣಮಿಸಿದೆ. ಬಿಎಸ್‌ವೈ ಅವರನ್ನು ಸಿಎಂ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಲಾಯಿತು. ಇದರ ಪರಿಣಾಮ ಪಕ್ಷಕ್ಕೆ ಭಾರಿ ಹಾನಿಯಾಗಿದೆ:  ಎಂ.ಪಿ.ರೇಣುಕಾಚಾರ್ಯ 

Former MLA MP Renukacharya Slams BJP Leaders grg
Author
First Published Aug 30, 2023, 5:30 AM IST

ದಾವಣಗೆರೆ(ಆ.30):  ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರುತ್ತೇನೆಂದು ನಾನು ಎಲ್ಲೂ ಹೇಳಿಲ್ಲ. ಆದರೂ, ನಾನು ಕಾಂಗ್ರೆಸ್‌ ಸೇರುತ್ತೇನೆಂದು ಬಿಜೆಪಿ ಕಚೇರಿಯಿಂದಲೇ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸ್ವಪಕ್ಷೀಯರ ವಿರುದ್ಧವೇ ಹರಿಹಾಯ್ದಿದ್ದಾರೆ.

ಹೊನ್ನಾಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರದ ಸಾಧನೆಗಳ ಕರಪತ್ರವನ್ನು ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಪ್ರತಿ ಹಳ್ಳಿಗೂ ತಲುಪಿಸುವ ಕೆಲಸದಲ್ಲಿ ತೊಡಗಿರುವ ನಾನು ಬಿಜೆಪಿ ತೊರೆಯುತ್ತೇನೆಯೇ? ಹೊನ್ನಾಳಿ ಕ್ಷೇತ್ರದ ಸಮಸ್ಯೆಗಳ ವಿಚಾರವಾಗಿ, ರೈತರ ನೆರವಿಗೆ ಧಾವಿಸುವಂತೆ ಮನವಿ ಮಾಡಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರನ್ನು ಭೇಟಿ ಮಾಡಿದರೆ ತಪ್ಪೇನಿದೆ? ಆದರೆ ಇದನ್ನು ಮುಂದಿಟ್ಟುಕೊಂಡು ನನ್ನ ವಿರುದ್ಧ ಬಿಜೆಪಿಯಿಂದಲೇ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.

ನಾವಿಕನಿಲ್ಲದ ಹಡಗಿನಂತಾಗಿದೆ ರಾಜ್ಯ ಬಿಜೆಪಿ: ಎಂ.ಪಿ.ರೇಣುಕಾಚಾರ್ಯ

ನನ್ನ ಪಕ್ಷ ನನಗೆ ತಾಯಿ ಸಮಾನ. ಇಂಥ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಪಕ್ಷದ ಕೆಲ ನಾಯಕರ ನಡೆಯಿಂದ ನನ್ನ ಮನಸ್ಸಿಗೆ ನೋವುಂಟಾಗಿದೆ, ಅದನ್ನು ಖಂಡಿಸುತ್ತೇನೆ. ಹೀಗೆ ಮಾತನಾಡಿದ ತಕ್ಷಣವೇ ‘ರೇಣುಕಾಚಾರ್ಯ ಪಕ್ಷ ಬಿಡುತ್ತಾನೆಂಬ’ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅದನ್ನು ಖಂಡಿಸುತ್ತೇನೆ ಎಂದು ಕಿಡಿಕಾರಿದರು.

ನಾನು ರಾಜಕೀಯವಾಗಿ ಬೆಳೆಯುತ್ತೇನೆಂದು ತುಳಿಯುವ ಕೆಲಸ ಮಾಡಿದರು. ಮೊದಲು ಕಾಂಗ್ರೆಸ್‌ ಮುಕ್ತ ಕರ್ನಾಟಕ ಮಾಡುತ್ತೇವೆಂದು ನಾವು ಹೇಳುತ್ತಿದ್ದೆವು. ಆದರೆ, ಅದೇ ಪರಿಸ್ಥಿತಿ ಈಗ ನಮಗೆ ಬಂದಿದೆ. ನಮ್ಮ ಹೇಳಿಕೆಗೆ ವ್ಯತಿರಿಕ್ತವಾಗಿ ಬಿಜೆಪಿಯೇ ಕರ್ನಾಟಕದಿಂದ ಮುಕ್ತವಾಗುತ್ತಿದೆ ಎಂದು ಬೇಸರ ಹೊರಹಾಕಿದರು.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ, ಶಾಸಕ ಬಿ.ವೈ.ವಿಜಯೇಂದ್ರ ಅವರಿಗೆ ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯವಿದೆ. ಆದರೆ ಅವರಿಗೆ ಅವಕಾಶ ಕೊಡುತ್ತಿಲ್ಲ ಎಂದು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.

ಬಿಜೆಪಿಗೆ ಬಿಎಸ್‌ವೈ ನಿರ್ಲಕ್ಷ್ಯವೇ ಶಾಪ

ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಕಡೆಗಣಿಸಿದ್ದೇ ಬಿಜೆಪಿಗೆ ಶಾಪವಾಗಿ ಪರಿಣಮಿಸಿದೆ. ಬಿಎಸ್‌ವೈ ಅವರನ್ನು ಸಿಎಂ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಲಾಯಿತು. ಇದರ ಪರಿಣಾಮ ಪಕ್ಷಕ್ಕೆ ಭಾರಿ ಹಾನಿಯಾಗಿದೆ ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ. 

Follow Us:
Download App:
  • android
  • ios