ಕಾಂಗ್ರೆಸ್ಸಿಗರಿಗೆ ದುಬಾರಿಯಾದ ಹೊಸ ಮೀಸಲಾತಿ : ಬಿಬಿಎಂಪಿ ಮೀಸಲಾತಿಗೆ ಕೈ ಶಾಕ್
ರಾಜ್ಯ ಸರ್ಕಾರ ಬುಧವಾರ ಬಿಬಿಎಂಪಿಯ 243 ವಾರ್ಡ್‌ಗಳಿಗೆ ಕರಡು ಮೀಸಲಾತಿ ಪಟ್ಟಿ ಪ್ರಕಟಿಸಿದ್ದು, ಇದರಿಂದ ಮಾಜಿ ಸದಸ್ಯರ ಸ್ಪರ್ಧೆಗೆ ತೊಂದರೆಯಾಗಿದ್ದು, ಬೇರೆ ಕ್ಷೇತ್ರಗಳಿಗೆ ಹುಡುಕಾಟ ಮಾಡಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.
ರಾಜ್ಯ ಸರ್ಕಾರ ಬುಧವಾರ ಬಿಬಿಎಂಪಿಯ 243 ವಾರ್ಡ್‌ಗಳಿಗೆ ಕರಡು ಮೀಸಲಾತಿ ಪಟ್ಟಿ ಪ್ರಕಟಿಸಿದ್ದು, ಇದರಿಂದ ಮಾಜಿ ಸದಸ್ಯರ ಸ್ಪರ್ಧೆಗೆ ತೊಂದರೆಯಾಗಿದ್ದು, ಬೇರೆ ಕ್ಷೇತ್ರಗಳಿಗೆ ಹುಡುಕಾಟ ಮಾಡಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ. ಬಿಬಿಎಂಪಿ ವಾರ್ಡ್ ಮೀಸಲಾತಿ ಪಟ್ಟಿ ಬಿಡುಗಡೆ ಮಾಡುವ ಮೂಲಕ ರಾಜ್ಯ ಸರ್ಕಾರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ತನ್ನೆಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದೆ. ಆದರೆ, ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಕರಡು ಮೀಸಲಾತಿ ಪಟ್ಟಿಗೆ ಮಾಜಿ ಪಾಲಿಕೆ ಸದಸ್ಯರು ಅದರಲ್ಲೂ ಕಾಂಗ್ರೆಸಿಗರ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಮಾಜಿ ಮೇಯರ್‌ಗಳು, ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದವರ ವಾರ್ಡ್‌ಗಳ ಮೀಸಲಾತಿ ಬದಲಿಸಲಾಗಿದೆ. ಆ ಮೂಲಕ ಅವರು ಚುನಾವಣೆಗೆ ಸ್ಪರ್ಧಿಸದಂತೆ ಮಾಡಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.
ಕಳೆದ ಬಾರಿ ಕಾಂಗ್ರೆಸ್‌ನಿಂದ ಮೇಯರ್ ಆಗಿದ್ದವರ ಪೈಕಿ ನಾಲ್ವರಲ್ಲಿ ಮೂವರ ವಾರ್ಡ್ ಮೀಸಲಾತಿ ಬದಲಾಗಿದೆ. ಮಂಜುನಾಥ ರೆಡ್ಡಿ ಪ್ರತಿನಿಧಿಸುವ ಮಡಿವಾಳ ವಾರ್ಡ್ ಸಾಮಾನ್ಯ ಮಹಿಳೆ, 2015ರಲ್ಲಿ ಹಿಂದುಳಿದ ವರ್ಗ ಬಿ (ಮಹಿಳೆ)ಗೆ ಮೀಸಲಿದ್ದ ಪದ್ಮಾವತಿ ಪ್ರತಿನಿಧಿಸುತ್ತಿದ್ದ ಪ್ರಕಾಶ ನಗರ ವಾರ್ಡ್‌ಗೆ ಹಿಂದುಳಿದ ವರ್ಗ ಎ (ಮಹಿಳೆ) ಮೀಸಲು ನಿಗದಿ ಮಾಡಲಾಗಿದೆ. ಅದೇ ರೀತಿ ಸಂಪತ್‌ಕುಮಾರ್ ಪ್ರತಿನಿಧಿಸುವ ದೇವರ ಜೀವನಹಳ್ಳಿ ವಾರ್ಡ್‌ನ ಮೀಸಲನ್ನು ಹಿಂದುಳಿದ ವರ್ಗ ಎ (ಮಹಿಳೆ)ಗೆ ನಿಗದಿ ಮಾಡಲಾಗಿದೆ.
BBMP ಚುನಾವಣೆ ಮೀಸಲಾತಿಗೆ ರಾಜ್ಯಪಾಲರ ಅನುಮೋದನೆ
ಇನ್ನು ಬಿಬಿಎಂಪಿ ಚುನಾವಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಮಾಜಿ ಸದಸ್ಯರಾದ ಕಾಂಗ್ರೆಸ್‌ನ ಎಂ.ಶಿವರಾಜು ಮತ್ತು ಅಬ್ದುಲ್ ವಾಜಿದ್ ಅವರಿಗೆ ಕರಡು ಮೀಸಲಾತಿ ಪಟ್ಟಿಯಲ್ಲಿ ಶಾಕ್ ನೀಡಲಾಗಿದೆ. ಅಬ್ದುಲ್ ವಾಜಿದ್ ಅವರು ಪ್ರತಿನಿಧಿಸುವ ಮನೋರಾಯನ ಪಾಳ್ಯ ವಾರ್ಡಗೆ ಹಿಂದುಳಿದ ವರ್ಗ ಎ (ಮಹಿಳೆ) ಮೀಸಲು ನಿಗದಿ ಮಾಡಲಾಗಿದೆ. ಎಂ.ಶಿವರಾಜು ಪ್ರತಿನಿಧಿಸುವ ಶಂಕರಮಠ ವಾರ್ಡನ್ನು ಎಸ್ಸಿ ಮೀಸಲು ಮಾಡಲಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಿ ಬಿಜೆಪಿ ಮುಖಂಡರ ವಿರೋಧ ಕಟ್ಟಿಕೊಂಡಿರುವ ಮಾಜಿ ಕಾರ್ಪೋರೇಟರ್ ಬಿಜೆಪಿಯ ನಾಗರಾಜ್ ಸ್ಪರ್ಧಿಸಿದ್ದ ಬೈರಸಂದ್ರ ವಾರ್ಡನ್ನು ಸಾಮಾನ್ಯ (ಮಹಿಳೆ) ಮೀಸಲು ನಿಗದಿ ಮಾಡಲಾಗಿದೆ.
ಚುನಾವಣೆ ಮುಂದೂಡುವ ತಂತ್ರ?
ಸುಪ್ರೀಂಕೋರ್ಟ್ ಚುನಾವಣೆ ಮುಂದೂಡುವ ತೀರ್ಪು ನೀಡುತ್ತಿಲ್ಲ. ಹೀಗಾಗಿ, ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಮೀಸಲಾತಿಯಲ್ಲಿ ಕಾಂಗ್ರೆಸ್ಸಿಗರನ್ನು ಅಸಮಾಧಾನಗೊಳಿಸಿ, ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವಂತೆ ಮಾಡಿ ಚುನಾವಣೆಗೆ ತೊಡಕಾಗುವಂತೆ ಮಾಡುವುದು ರಾಜ್ಯ ಸರ್ಕಾರದ ತಂತ್ರವಾಗಿದೆ ಎಂಬ ಆರೋಪ ಕೇಳಿ ಬಂದಿವೆ.
ಶೇ.50 ಮಹಿಳಾ ಮೀಸಲು
ಕರಡು ಮೀಸಲಾತಿ ಪಟ್ಟಿಯಲ್ಲಿ 243 ವಾರ್ಡ್‌ಗಳ ಪೈಕಿ 130 ವಾರ್ಡ್‌ಗಳನ್ನು ಸಾಮಾನ್ಯ ವರ್ಗಕ್ಕೆ ನಿಗದಿ ಮಾಡಲಾಗಿದೆ. ಉಳಿದಂತೆ 81 ವಾರ್ಡ್‌ಗಳು ಹಿಂದುಳಿದ ವರ್ಗಗಳಿಗೆ ಹಾಗೂ 28 ಎಸ್ಸಿ, 4 ಎಸ್ಟಿಗೆ ಮೀಸಲಿರಿಸಲಾಗಿದೆ. ಈ ಎಲ್ಲ ವಾರ್ಡ್‌ಗಳಲ್ಲಿ ಶೇ.50 ವಾರ್ಡ್‌ಗಳಲ್ಲಿ ಮಹಿಳಾ ಮೀಸಲಾತಿ ನೀಡಲಾಗಿದೆ.
ಮೀಸಲಾತಿ ಪ್ರಕಟ: ಸೆಪ್ಟೆಂಬರ್‌ನಲ್ಲಿ ಬಿಬಿಎಂಪಿ ಚುನಾವಣೆ ಸಾಧ್ಯತೆ