ಮೀಸಲಾತಿ ಪ್ರಕಟ: ಸೆಪ್ಟೆಂಬರ್‌ನಲ್ಲಿ ಬಿಬಿಎಂಪಿ ಚುನಾವಣೆ ಸಾಧ್ಯತೆ
243 ವಾರ್ಡ್‌ಗಳ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದ ರಾಜ್ಯ ಸರ್ಕಾರ
ಬೆಂಗಳೂರು(ಆ.04): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ(ಬಿಬಿಎಂಪಿ) ಚುನಾವಣೆಗೆ ಕಾಲ ಕೂಡಿಬಂದಿದ್ದು ಸೆಪ್ಟೆಂಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಗೋಚರಿಸಿದೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರ 243 ವಾರ್ಡ್‌ಗಳ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿರುವುದು ಅದಕ್ಕೆ ಪುಷ್ಟಿ ನೀಡಿದೆ. ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣೆ ಹಾಗೂ ಮೀಸಲಾತಿ ನಿಗದಿ ಕಾರ್ಯವನ್ನು ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಪೂರ್ಣಗೊಳಿಸಿದೆ. ಜೊತೆಗೆ ಮೀಸಲಾತಿ ನಿಗದಿಪಡಿಸಿದ ಕೂಡಲೇ ಚುನಾವಣೆ ಪ್ರಕ್ರಿಯೆ ಆರಂಭಿಸುವಂತೆ ಈಗಾಗಲೇ ಸರ್ವೋಚ್ಛ ನ್ಯಾಯಾಲಯ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಹಾಗಾಗಿ ರಾಜ್ಯ ಸರ್ಕಾರ ಬಿಬಿಎಂಪಿಯ ಎಲ್ಲ ವಾರ್ಡ್‌ಗಳಿಗೆ ಮೀಸಲಾತಿ ನಿಗದಿಪಡಿಸಿ ಪಟ್ಟಿಯನ್ನು ಪ್ರಕಟಿಸಿರುವುದರಿಂದ ಆಯೋಗ ಚುನಾವಣಾ ಪ್ರಕ್ರಿಯೆ ಆರಂಭಿಸಲು ಹಾದಿ ಸುಗಮವಾದಂತಾಗಿದೆ.
ಬಿಬಿಎಂಪಿ ಸದಸ್ಯರ ಅಧಿಕಾರಾವಧಿ ಸೆಪ್ಟೆಂಬರ್ 10, 2019ಕ್ಕೆ ಪೂರ್ಣಗೊಂಡಿತ್ತು. ಶೀಘ್ರದಲ್ಲಿ ಚುನಾವಣೆ ನಡೆಸಬೇಕೆಂಬ ಒತ್ತಾಯಗಳು ಕೇಳಿ ಬಂದಿದ್ದವು. ಈ ಸಂಬಂಧ ಡಿಸೆಂಬರ್ 4, 2020ರಂದು ರಾಜ್ಯ ಹೈಕೋರ್ಟ್ ಆದೇಶ ಹೊರಡಿಸಿ, ಆರು ವಾರಗಳಲ್ಲಿ ಚುನಾವಣೆ ನಡೆಸಬೇಕು ಎಂದು ಚುನಾವಣಾ ಆಯೋಗಕ್ಕೆ ಸೂಚಿಸಿತ್ತು. ಆದರೆ, ಡಿಸೆಂಬರ್ 18, 2020ರಂದು ಆ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಅಂದಿನಿಂದಲೂ ಒಂದಲ್ಲ ಒಂದು ಕಾರಣಕ್ಕೆ ಬಿಬಿಎಂಪಿ ಚುನಾವಣೆ ಗಡುವು ಮುಂದಕ್ಕೆ ಹೋಗುತ್ತಲೇ ಇದೆ.
ಅಭಿವೃದ್ಧಿಗಾಗಿ ಶೀಘ್ರ ಬಿಬಿಎಂಪಿ ಚುನಾವಣೆ: ಸಿಎಂ ಬೊಮ್ಮಾಯಿ
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯು ಮುಂದಿನ ವರ್ಷ ನಡೆಯಲಿದೆ. 28 ಸದಸ್ಯ ಬಲವಿರುವ ಬೆಂಗಳೂರು ನಗರವು ಯಾವುದೇ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಮಹತ್ವದ ಪಾತ್ರ ನಿರ್ವಹಿಸಲಿದೆ. ಪಾಲಿಕೆಯಲ್ಲಿ ಸದಸ್ಯರು ಇಲ್ಲದಿದ್ದರೆ ಆಕಾಂಕ್ಷಿಗಳನ್ನು ವಿಧಾನಸಭೆ ಚುನಾವಣೆ ವೇಳೆ ಅನುಕೂಲಕ್ಕೆ ತಕ್ಕಂತೆ ದುಡಿಸಬಹುದು ಎನ್ನುವ ಕಾರಣಕ್ಕೆ ಬಿಬಿಎಂಪಿ ಚುನಾವಣೆ ಮುಂದೂಡಬೇಕು ಎಂದು ಎಲ್ಲ ಪಕ್ಷಗಳ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದರು ಎಂಬ ಮಾತು ಕೇಳಿಬಂದಿತ್ತು.
ಈ ನಡುವೆ ಕಾಂಗ್ರೆಸ್‌ನ ಬಿಬಿಎಂಪಿ ಮಾಜಿ ಸದಸ್ಯರಾದ ಎಂ.ಶಿವರಾಜು ಮತ್ತು ಅಬ್ದುಲ್‌ವಾಜಿದ್ ಅವರು ಬಿಬಿಎಂಪಿ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿ ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಅಂತಿಮಗೊಳಿಸಬೇಕು ಮತ್ತು ಮೀಸಲಾತಿ ಪಟ್ಟಿಸಿದ್ಧಪಡಿಸಿ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು.