Asianet Suvarna News Asianet Suvarna News

BBMP ಚುನಾವಣೆ ಮೀಸಲಾತಿಗೆ ರಾಜ್ಯಪಾಲರ ಅನುಮೋದನೆ

* ಮೀಸಲಾತಿ ಹೆಚ್ಚಳಕ್ಕೆ BBMP ಕಾಯ್ದೆ
* BBMP ಕಾಯ್ದೆಗೆ ಹೊರಡಿಸಿದ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅನುಮೋದನೆ
* ಹಿಂದುಳಿದ ವರ್ಗಗಳಿಗೂ ಚುನಾವಣೆಯಲ್ಲಿ ಮೀಸಲಾತಿ

Karnataka governor gives approval to reservation-hike of bbmp act rbj
Author
Bengaluru, First Published Jun 10, 2022, 10:27 PM IST

ಬೆಂಗಳೂರು, (ಜೂನ್.10): ಮೀಸಲಾತಿ ಹೆಚ್ಚಳಕ್ಕೆ ಬಿಬಿಎಂಪಿ ಕಾಯ್ದೆಗೆ ಹೊರಡಿಸಿದ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ಅನುಮೋದನೆ ನೀಡಿದ್ದಾರೆ.

ಬಿಬಿಎಂಪಿ ಕಾಯ್ದೆಯಲ್ಲಿನ ಮೀಸಲಾತಿ ಪ್ರಮಾಣದ ಗೊಂದಲ ನಿವಾರಣೆಗೆ‌ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ರಾಜ್ಯ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಬಿಬಿಎಂಪಿ ಕಾಯ್ದೆಯಲ್ಲಿ SC, ST ಹಾಗೂ ಇತರ ಹಿಂದುಳಿದ ಸಮುದಾಯಗಳ ಮೀಸಲಾತಿಯನ್ನು 1/3 ಎಂದು ನಮೂದಿಸಲಾಗಿತ್ತು. ಇದರಿಂದ ಎಸ್ಸಿ, ಎಸ್ಟಿ ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿಯಲ್ಲಿ ಅನ್ಯಾಯ ಆಗಲಿತ್ತು. ಇದನ್ನರಿತ ರಾಜ್ಯ ಸರ್ಕಾರ ಕಾನೂನು ತಿದ್ದುಪಡಿ ಮಾಡಲು‌ ನಿರ್ಧರಿಸಿತ್ತು.

 ಮೀಸಲಾತಿ ಪ್ರಮಾಣ ಶೇ. 50 ರಷ್ಟು ಮೀರದಂತೆ ಎಂದು ಬದಲಾವಣೆ ಮಾಡಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಈಗ ಸುಗ್ರೀವಾಜ್ಞೆಗೆ ಅನುಮೋದನೆ ಸಿಕ್ಕಿದೆ. ಈ ಮೂಲಕ ಇತರ ಹಿಂದುಳಿದ ವರ್ಗಗಳಿಗೂ ಚುನಾವಣೆಯಲ್ಲಿ ಮೀಸಲಾತಿ ಸಿಗಲಿದೆ.

Bengaluru: ಪಾಲಿಕೆ ವಾರ್ಡ್‌ ಮರು ವಿಂಗಡಣೆ ವರದಿ ಕೊನೆಗೂ ಸರ್ಕಾರಕ್ಕೆ ಸಲ್ಲಿಕೆ

ವಾರ್ಡ್‌ ಮರು ವಿಂಗಡಣೆ ಕರಡು ವರದಿ ಸಲ್ಲಿಕೆ ಆಗಿದೆಯೋ ಅಥವಾ ಇಲ್ಲವೋ ಎಂಬ ಗೊಂದಲಕ್ಕೆ ತೆರೆ ಬಿದ್ದಿದ್ದು, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅವರಿಗೆ ಅಧಿಕೃತವಾಗಿ ವರದಿಯನ್ನು ಸಲ್ಲಿಸಿರುವುದಾಗಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸ್ಪಷ್ಟಪಡಿಸಿದೆ. ಬಿಬಿಎಂಪಿಯ 198 ವಾರ್ಡ್‌ಗಳನ್ನು 243 ವಾರ್ಡ್‌ಗಳನ್ನಾಗಿ ಪರಿವರ್ತಿಸಲಾಗಿದ್ದು, ಕೆಲ ವಾರ್ಡ್‌ಗಳ ಗಡಿ ಗುರುತಿಸುವಲ್ಲಿ ಈ ಹಿಂದೆ ಕಂಡು ಬಂದಿದ್ದ ಕೆಲವು ಲೋಪದೋಷಗಳನ್ನು ಸರಿಪಡಿಸಿ ಕರಡು ವರದಿಯನ್ನು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಲಾಗಿದೆ. 

ಗುರುವಾರ ಬೆಳಗ್ಗೆ 9.30ರ ಸುಮಾರಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ನೇತೃತ್ವದಲ್ಲಿ ಕಂದಾಯ ವಿಭಾಗದ ವಿಶೇಷ ಆಯುಕ್ತ ದೀಪಕ್‌, ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ಬಿಡಿಎ ಆಯುಕ್ತ ರಾಜೇಶ್‌ಗೌಡ ಅವರನ್ನೊಳಗೊಂಡ ಸಮಿತಿ ಕರಡು ವರದಿಯನ್ನು ನಗರಾಭಿವೃದ್ಧಿ ಇಲಾಖೆಗೆ ಹಸ್ತಾಂತರಿಸಿದೆ. ವಾರ್ಡ್‌ ಮರು ವಿಂಗಡಣೆ ಕರಡು ಪ್ರತಿ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಇನ್ನೆರಡು ದಿನಗಳಲ್ಲಿ ನಗರಾಭಿವೃದ್ಧಿ ಇಲಾಖೆ ಕರ್ನಾಟಕ ರಾಜ್ಯಪತ್ರ ಹೊರಡಿಸಿ 15 ದಿನದಲ್ಲಿ ಸಾರ್ವಜನಿಕರಿಂದ ಆಕ್ಷೇಪಣೆ ಪಡೆಯುವ ನಿರೀಕ್ಷೆ ಇದೆ. ಬಳಿಕ ಅಂತಿಮ ರೂಪುರೇಷೆ ನೀಡುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಮೂಲಗಳಿಂದ ತಿಳಿದುಬಂದಿದೆ.

ವಾರ್ಡ್‌ ಮರು ವಿಂಗಡಣಾ ಸಮಿತಿಯು ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಕಳೆದೊಂದು ವರ್ಷದಿಂದ ಈವರೆಗೆ ವಾರ್ಡ್‌ ಮರು ವಿಂಗಡಣೆ ಕುರಿತು ವರದಿ ಸಿದ್ಧಪಡಿಸಿದೆ. ಸುಪ್ರೀಂಕೋರ್ಟ್‌ ಬಿಬಿಎಂಪಿ ವಾರ್ಡ್‌ ಮರು ವಿಂಗಡಣೆಗೆ ಎಂಟು ವಾರ ಗಡುವು ನೀಡಿರುವ ಹಿನ್ನೆಲೆಯಲ್ಲಿ ವಾರ್ಡ್‌ಗಳ ಮರು ವಿಂಗಡಣಾ ಸಮಿತಿ ಈ ಹಿಂದೆ ಸಲ್ಲಿಸಿದ್ದ ಕರಡು ವರದಿಯಲ್ಲಿ ಕೆಲವೊಂದು ಲೋಪಗಳು ಇರುವುದನ್ನು ನಗರಾಭಿವೃದ್ಧಿ ಇಲಾಖೆ ಗುರುತಿಸಿ ಅದನ್ನು ಸರಿಪಡಿಸಿ ಮತ್ತೊಮ್ಮ ವರದಿ ಸಲ್ಲಿಸುವಂತೆ ನಿರ್ದೇಶಿಸಿತ್ತು.

2011ರ ಜನಗಣತಿ ಆಧಾರದಲ್ಲಿ 84.43 ಲಕ್ಷ ಜನಸಂಖ್ಯೆಯಿದ್ದು, ಅದನ್ನು 243 ವಾರ್ಡ್‌ಗಳಿಗೆ ಸರಾಸರಿ 35 ಸಾವಿರ ಜನಸಂಖ್ಯೆ ಹಂಚಿಕೆ ಮಾಡಬೇಕಿತ್ತು. ವಾರ್ಡ್‌ಗಳ ಸಂಖ್ಯೆ 198ರಿಂದ 243ಕ್ಕೆ ಹೆಚ್ಚಾಗುವುದರಿಂದ ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಕೆಲವು ಕ್ಷೇತ್ರಗಳಲ್ಲಿ ವಾರ್ಡ್‌ ಸಂಖ್ಯೆ ಹೆಚ್ಚು, ಕೆಲವು ಕ್ಷೇತ್ರದಲ್ಲಿ ಕಡಿಮೆ ಆಗಲಿದೆ. ನಗರ ಕೇಂದ್ರ ಭಾಗದಲ್ಲಿರುವ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆ ಇರುವುದಿಲ್ಲ ಎಂದು ತಿಳಿದು ಬಂದಿದೆ.

ಬೊಮ್ಮನಹಳ್ಳಿಯಲ್ಲಿ ಅತೀ ಹೆಚ್ಚು ವಾರ್ಡ್‌: ಕೇಂದ್ರ ಭಾಗದ ವಿಧಾನಸಭಾ ಕ್ಷೇತ್ರಗಳಾದ ಚಾಮರಾಜಪೇಟೆ, ಮಲ್ಲೇಶ್ವರ, ಶಾಂತಿನಗರ, ರಾಜಾಜಿನಗರ, ಚಿಕ್ಕಪೇಟೆ, ಗಾಂಧಿನಗರ, ಜಯನಗರ ಸೇರಿದಂತೆ 10 ವಿಧಾನಸಭಾ ಕ್ಷೇತ್ರಗಳ ವಾರ್ಡ್‌ಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳ ಪೈಕಿ ಒಂದು ವಾರ್ಡ್‌ ಕಡಿತಗೊಳಿಸಲಾಗಿದೆ. ಇದರಲ್ಲಿ ಕಾಂಗ್ರೆಸ್‌ ಶಾಸಕರ ಇರುವ 7 ಕ್ಷೇತ್ರಗಳು, ಬಿಜೆಪಿ ಶಾಸಕರ ಇರುವ 3 ಕ್ಷೇತ್ರಗಳಿವೆ. ಬೊಮ್ಮನಹಳ್ಳಿಯಲ್ಲಿ ಈ ಹಿಂದಿಗಿಂತ 6 ವಾರ್ಡ್‌ಗಳನ್ನು ಹೆಚ್ಚಿಗೆ ಸೃಷ್ಟಿಸಲಾಗಿದ್ದು, ಕ್ಷೇತ್ರದ ವಾರ್ಡ್‌ ಸಂಖ್ಯೆ 14ಕ್ಕೆ ಏರಿಕೆಯಾಗಲಿದೆ.

Follow Us:
Download App:
  • android
  • ios