ಪ್ರಿಯಾಂಕಾ ಮತ್ತು ಸೋನಿಯಾ ಗಾಂಧಿ ಇಬ್ಬರಿಗೂ ಅಹ್ಮದ್ ಪಟೇಲರಿಗೆ ಸಹಾಯ ಮಾಡಲು ಹೋಗಿ ಜೈಲು ಸೇರಿದ್ದ ಡಿ.ಕೆ. ಶಿವಕುಮಾರ್ ಬಗ್ಗೆ ಅನುಕಂಪವಿದೆ. ರಾಹುಲ್ ಗಾಂಧಿ ಅವರಿಗೂ ಡಿ.ಕೆ. ಬಗ್ಗೆ ಅನುಕಂಪವೇನೋ ಇದೆ. ಆದರೆ ಸಿದ್ದರಾಮಯ್ಯ ಅವರನ್ನು ಬಿಟ್ಟುಕೊಟ್ಟರೆ ರಾಜ್ಯವೇ ಕೈತಪ್ಪಿ ಹೋದೀತು ಎಂಬ ಆತಂಕವೂ ಇದೆ.
ಗಾಂಧಿ ಕುಟುಂಬದಲ್ಲಿ ಯಾರು ಸಿದ್ದು, ಯಾರು ಡಿಕೆ ಪರ? । ಕರ್ನಾಟಕ ವಿಚಾರದಲ್ಲಿ ಹೈಕಮಾಂಡ್ ತಡ ಮಾಡುತ್ತಿರುವುದೇಕೆ?
ಪ್ರಿಯಾಂಕಾ ಗಾಂಧಿ ಮತ್ತು ಸೋನಿಯಾ ಗಾಂಧಿ ಇಬ್ಬರಿಗೂ ಅಹ್ಮದ್ ಪಟೇಲರಿಗೆ ಸಹಾಯ ಮಾಡಲು ಹೋಗಿ ಜೈಲು ಸೇರಿದ್ದ ಡಿ.ಕೆ. ಶಿವಕುಮಾರ್ ಬಗ್ಗೆ ಅನುಕಂಪವಿದೆ. ರಾಹುಲ್ ಗಾಂಧಿ ಅವರಿಗೂ ಡಿ.ಕೆ. ಬಗ್ಗೆ ಅನುಕಂಪವೇನೋ ಇದೆ. ಆದರೆ ಸಿದ್ದರಾಮಯ್ಯ ಅವರನ್ನು ಬಿಟ್ಟುಕೊಟ್ಟರೆ ರಾಜ್ಯವೇ ಕೈತಪ್ಪಿ ಹೋದೀತು ಎಂಬ ಆತಂಕವೂ ಇದೆ. ಹೀಗಾಗಿ ನಿರ್ಣಯ ತೆಗೆದುಕೊಳ್ಳುವ ತರಾತುರಿ ಕಾಣುತ್ತಿಲ್ಲ.
-ಪ್ರಶಾಂತ್ ನಾತು
---
ಡಿ.ಕೆ. ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗುವುದು ಆಗಿಹೋಗಿರುವ ನಿರ್ಣಯ, ಇನ್ನೇನಿದ್ದರೂ ರಾಹುಲ್ ಗಾಂಧಿ ‘ಯಾವಾಗ’ ಎಂದು ನಿರ್ಧರಿಸಬೇಕಷ್ಟೇ ಎಂಬ ಉತ್ಸಾಹದಲ್ಲಿದ್ದ ಉಪಮುಖ್ಯಮಂತ್ರಿಗಳ ಬಣ ಏಕಾಏಕಿ ದಿಲ್ಲಿಯಲ್ಲಿ ರಾಹುಲ್ ಗಾಂಧಿ ತೋರಿಸಿರುವ ನಿರುತ್ಸಾಹದಿಂದ ಸ್ವಲ್ಪ ವಿಚಲಿತವಾಗಿದೆ. ಉಪಮುಖ್ಯಮಂತ್ರಿಗಳ ಬಣ ಎಷ್ಟೇ ಸಲ ದಿಲ್ಲಿಗೆ ಶಾಸಕರನ್ನು ಕಳುಹಿಸಿ ಒತ್ತಡ ಹೇರಿದರೂ, ಮಾಧ್ಯಮಗಳಿಗೆ ಹೇಳಿಕೆ ನೀಡಿದರೂ, 2.5 ವರ್ಷಗಳ ಗಡುವು ಮುಗಿದು 30 ದಿನಗಳಾಗುತ್ತಾ ಬಂದರೂ ರಾಹುಲ್ ಗಾಂಧಿ ಮಾತ್ರ ಯಾರೊಂದಿಗೂ ಕರ್ನಾಟಕದ ಕಲಹದ ಬಗ್ಗೆ ತುಟಿ ಪಿಟಿಕ್ ಎನ್ನುತ್ತಿಲ್ಲ. ಉಳಿದವರು ಬಿಡಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಸಿ. ವೇಣುಗೋಪಾಲ್ ಜೊತೆಗೂ ರಾಹುಲ್ ಗಾಂಧಿ ಏನು ಮಾಡಬೇಕು, ಯಾವಾಗ ಮಾಡಬೇಕು, ಮಾಡಿದರೆ ಪರಿಣಾಮ ಏನು ಎಂಬುದರ ಚರ್ಚೆ ಮಾಡಿಲ್ಲ. ಮೂಲಗಳು ಹೇಳುವ ಪ್ರಕಾರ, ಗಾಂಧಿ ಕುಟುಂಬದ ಡಿನ್ನರ್ ಟೇಬಲ್ ಮೇಲೂ ಇಲ್ಲಿಯವರೆಗೆ ಯಾವುದೇ ಚರ್ಚೆ ನಡೆದಂತಿಲ್ಲ. ಡಿ.ಕೆ. ಶಿವಕುಮಾರ್ ಅವರು ಗಾಂಧಿ ಕುಟುಂಬಕ್ಕೆ ಎಷ್ಟೇ ಆತ್ಮೀಯರಾಗಿದ್ದರು ಕೂಡ ನವೆಂಬರ್ ನಂತರ ರಾಹುಲ್ ಗಾಂಧಿ ಅವರು ಡಿಕೆ ಅವರನ್ನು ವೈಯಕ್ತಿಕ ಭೇಟಿಗೆ ಇದುವರೆಗೂ ಕರೆದಿಲ್ಲ. ‘ಮುಂದಿನ ವಾರ ಇತ್ಯರ್ಥ ಮಾಡಬೇಕು ಎನ್ನುವ ತನಕ ಗಾಂಧಿ ಕುಟುಂಬ ಈ ಬಗ್ಗೆ ಯಾರೊಂದಿಗೂ ಏನೂ ಚರ್ಚೆ ಮಾಡುವ ಸಾಧ್ಯತೆ ಕಡಿಮೆ’ ಎಂದು ಕಾಂಗ್ರೆಸ್ ನಾಯಕರು ಖಾಸಗಿಯಾಗಿ ಹೇಳುತ್ತಿದ್ದಾರೆ. ಒಂದಂತೂ ನಿಜ: ಅಕ್ಟೋಬರ್‌ವರೆಗೆ ಕುರ್ಚಿ ಹತ್ತಿರ ಹತ್ತಿರ ಬಾ ಎನ್ನುತ್ತಿದೆ, ದೆಹಲಿಯಿಂದ ನೀವೇ ಕೂರೋದು ಕೂರೋದು ಎನ್ನುತ್ತಿದ್ದಾರೆ ಎಂಬ ಅತೀವ ಉತ್ಸಾಹದಲ್ಲಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ಏನು ಮಾಡಿದರೆ ಹೈಕಮಾಂಡ್ ಮಾತುಕತೆಗೆ ಕರೆಯಬಹುದು ಎಂಬ ದ್ವಂದ್ವ ಮತ್ತು ತಳಮಳ ಕಾಡುತ್ತಿದೆ. ಹಳೆಯ ರಾಜಸತ್ತೆ ಇರಲಿ, ಈಗಿನ ಪ್ರಜಾಸತ್ತೆ ಇರಲಿ, ಸಿಂಹಾಸನವು ಕೂರುವವನ ತಾಳ್ಮೆಯನ್ನಂತೂ ಪರೀಕ್ಷೆ ಮಾಡುತ್ತದೆ.
‘ಗಾಂಧಿ’ ಕುಟುಂಬದ ಕಲಹ
ಯಾರು ಏನೇ ಹೇಳಲಿ, ಖರ್ಗೆ ಸಾಹೇಬರ ತರಹದ ಎಷ್ಟೇ ಜನ ಅಧ್ಯಕ್ಷರಾದರು ಕೂಡ ಪಕ್ಷ ನಡೆಯುವುದು, ಅದನ್ನು ನಡೆಸುವುದು ಗಾಂಧಿ ಕುಟುಂಬ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯವೇ. ಸಂಜಯ್, ಇಂದಿರಾ ಮತ್ತು ರಾಜೀವರ ಸಾವುಗಳನ್ನು ಕಣ್ಣಾರೆ ಕಂಡಿರುವ ಸೋನಿಯಾ, ಅವರ ಮಕ್ಕಳಾದ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಮೂವರಲ್ಲೂ ಒಂದು ಅನ್ಯೋನ್ಯತೆ ಇದೆ. ಒಟ್ಟಿಗೆ ಇರಲೇಬೇಕಾದ ಅನಿವಾರ್ಯತೆಯೂ ಇದೆ. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ನಡೆದಿರುವ ಕಾಂಗ್ರೆಸ್ ಕುರ್ಚಿ ಕಿತ್ತಾಟದಲ್ಲಿ ರಾಹುಲ್ ಮತ್ತು ಪ್ರಿಯಾಂಕಾ ಬೇರೆ ಬೇರೆ ಕ್ಯಾಂಪ್‌ಗಳಲ್ಲಿ ಕಾಣಿಸಿಕೊಳ್ಳುವುದು ಏಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಪರ ರಾಹುಲ್ ಗಾಂಧಿ ಇದ್ದರೆ, ಸಚಿನ್ ಪೈಲಟ್ ಪರವಾಗಿ ಪ್ರಿಯಾಂಕಾ ಗಾಂಧಿ ಬಹಿರಂಗವಾಗಿಯೇ ಇದ್ದರು. ಇನ್ನು ಮಧ್ಯಪ್ರದೇಶದಲ್ಲಿ ಕೂಡ ಕಮಲನಾಥರ ಪರವಾಗಿ ರಾಹುಲ್ ಗಾಂಧಿ ಮತ್ತು ದಿಗ್ವಿಜಯ ಸಿಂಗ್ ಇದ್ದರೆ, ಜ್ಯೋತಿರಾದಿತ್ಯ ಸಿಂಧ್ಯಾ ಪರವಾಗಿ ಪ್ರಿಯಾಂಕಾಗೆ ಸ್ವಲ್ಪ ಸಾಫ್ಟ್ ಕಾರ್ನರ್ ಇತ್ತು. ಈಗ ಕರ್ನಾಟಕವನ್ನೇ ತೆಗೆದುಕೊಳ್ಳಿ. ಪ್ರಿಯಾಂಕಾ ಗಾಂಧಿ ಮತ್ತು ಸೋನಿಯಾ ಗಾಂಧಿ ಇಬ್ಬರಿಗೂ ಅಹ್ಮದ್ ಪಟೇಲರಿಗೆ ಸಹಾಯ ಮಾಡಲು ಹೋಗಿ ಜೈಲು ಸೇರಿದ್ದ ಡಿ.ಕೆ. ಶಿವಕುಮಾರ್ ಬಗ್ಗೆ ಅನುಕಂಪವಿದೆ. ರಾಹುಲ್ ಗಾಂಧಿ ಅವರಿಗೂ ಡಿ.ಕೆ. ಬಗ್ಗೆ ಅನುಕಂಪವೇನೋ ಇದೆ. ಆದರೆ ಸಿದ್ದರಾಮಯ್ಯ ಅವರನ್ನು ಬಿಟ್ಟುಕೊಟ್ಟರೆ ರಾಜ್ಯವೇ ಕೈತಪ್ಪಿ ಹೋದೀತು ಎಂಬ ಆತಂಕವೂ ಇದೆ. ಹೀಗಾಗಿ ನಿರ್ಣಯ ತೆಗೆದುಕೊಳ್ಳುವ ತರಾತುರಿ ಕಾಣುತ್ತಿಲ್ಲ. ಹೀಗಾಗಿಯೇ ಏನೋ ಸ್ಯಾಮ್ ಪಿತ್ರೋಡಾರಿಂದ ಹಿಡಿದು ಅಂಬಿಕಾ ಸೋನಿವರೆಗೆ ಎಲ್ಲರ ಕಡೆಯಿಂದಲೂ ಡಿ.ಕೆ. ಶಿವಕುಮಾರ್ ಒತ್ತಡ ಹಾಕಿಸಲು ನೋಡುತ್ತಿದ್ದಾರೆ. ಆದರೆ ಇದುವರೆಗಂತೂ ಸಿಂಹಾಸನದ ಕೀಲಿಕೈ ತೆರೆಯುವ ತರಾತುರಿಯನ್ನು ರಾಹುಲ್ ಗಾಂಧಿ ತೋರುತ್ತಿಲ್ಲ. ಯಾವಾಗ ಯೋಚಿಸುತ್ತಾರೆ ಎಂಬುದು ಯಾರಿಗೂ ಗೊತ್ತಿಲ್ಲ.
ನಿತಿನ್ ನವೀನ್‌ರ ಟೈಮ್ ನೋಡಿ!
ರಾಜಕಾರಣದಲ್ಲಿ ಬೆಳೆದು ಶೀರ್ಷಸ್ಥಾನಕ್ಕೆ ಹೋಗಿ ಕುಳಿತುಕೊಳ್ಳಬೇಕಾದರೆ ಬರೀ ಅರ್ಹತೆ ಇದ್ದರೆ ಸಾಲದು, ಅದೃಷ್ಟವೂ ದಂಡಿಯಾಗಿ ಇರಬೇಕು. ಈಗ ಬಿಜೆಪಿ ಕಾರ್ಯಾಧ್ಯಕ್ಷ ನಿತಿನ್ ನವೀನ್‌ರನ್ನೇ ತೆಗೆದುಕೊಳ್ಳಿ. ಅವರು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ಸಂಘಟನಾ ಪ್ರವಾಸ ಎಂದು ಉತ್ತರ ಪ್ರದೇಶಕ್ಕೆ ಹೋಗಿದ್ದರು. ಲಖನೌ ವಿಮಾನ ನಿಲ್ದಾಣದಲ್ಲಿ ಇಳಿದಾಗ ಅಲ್ಲಿನ ಪ್ರದೇಶ ಯುವ ಮೋರ್ಚಾ ಅಧ್ಯಕ್ಷನಿಂದ ಹಿಡಿದು ಯಾರೊಬ್ಬರೂ ಸ್ವಾಗತಕ್ಕೆ ಬಂದಿರಲಿಲ್ಲ. ಅಷ್ಟೇ ಅಲ್ಲ, ಆ ಪುಣ್ಯಾತ್ಮ ಫೋನ್ ಕೂಡ ತೆಗೆದುಕೊಳ್ಳಲಿಲ್ಲವಂತೆ. ಕೊನೆಗೆ ನಿತಿನ್ ನವೀನ್ ಬೇರೆ ಯಾರಿಗೋ ಫೋನ್ ಮಾಡಿ ಕಾರು ತರಿಸಿಕೊಂಡು ಹೋಟೆಲ್‌ಗೆ ಹೋಗಿದ್ದರಂತೆ. ಮೊನ್ನೆ ದೆಹಲಿ ಕಚೇರಿಗೆ ಆ ಯುವ ಮೋರ್ಚಾ ಅಧ್ಯಕ್ಷ ಬಂದು ನಿತಿನ್ ನವೀನ್‌ರಿಗೆ ‘ನಂದು ತಪ್ಪಾಯಿತು’ ಎಂದು ಗೋಗರೆಯುವುದು ಬಾಕಿ ಇತ್ತಂತೆ. ಆದರೆ ನಿತಿನ್ ಹಳೆಯದನ್ನು ನೆನಪು ಕೂಡ ಮಾಡದೆ, ಅರ್ಧ ಗಂಟೆ ಮಾತಾಡಿಸಿ, ಚಹಾ ಕುಡಿಸಿ ಕಳುಹಿಸಿದರಂತೆ. ಒಂದು ತಿಂಗಳ ಹಿಂದೆ ದೆಹಲಿಗೆ ಬಂದರೆ ನಿತಿನ್ ನವೀನ್ ಅವರು ಧರ್ಮೇಂದ್ರ ಪ್ರಧಾನ್, ಭೂಪೇಂದ್ರ ಯಾದವ್, ಪೀಯೂಷ್ ಗೋಯಲ್‌ರ ಸಮಯಕ್ಕಾಗಿ ಕಾದು ಕುಳಿತಿದ್ದರಂತೆ. ಈಗ ಈ ಎಲ್ಲಾ ಹಿರಿಯ ನಾಯಕರು ನಿತಿನ್ ಕಚೇರಿಗೆ ಬಂದಾಗ ಸಾಲುಗಟ್ಟಿ ನಿಂತು, ಸ್ವಾಗತ ಕೋರಿ, ಗೌರವ ಸಲ್ಲಿಸುವ ಅನಿವಾರ್ಯತೆ ಸೃಷ್ಟಿ ಆಗಿಯೇಬಿಟ್ಟಿತು.
ಉತ್ತರ ಪ್ರದೇಶದಲ್ಲಿ ‘ಬ್ರಾಹ್ಮಣ’ ಸಭೆಗಳು
ಮಾತು ಎತ್ತಿದರೆ ಹಿಂದುತ್ವ ಎನ್ನುವ ಉತ್ತರ ಪ್ರದೇಶ ಬಿಜೆಪಿಯೊಳಗೆ ಕಳೆದ ಎರಡು ತಿಂಗಳಿನಿಂದ ವಿಚಿತ್ರ ಜಾತಿ ಸಮಾವೇಶಗಳು ನಡೆಯಲು ಶುರುವಾಗಿವೆ. ಮಳೆಗಾಲದ ಅಧಿವೇಶನದಲ್ಲಿ ಕ್ಷತ್ರಿಯ ಸಮುದಾಯದ ಬಿಜೆಪಿ ಶಾಸಕರು ಒಟ್ಟಿಗೆ ಕುಳಿತು ಊಟ ಮಾಡಿದರೆ, ಮೊನ್ನೆ 40 ಬ್ರಾಹ್ಮಣ ಸಮುದಾಯದ ಶಾಸಕರು ನಡೆಸಿದ ಸಭೆ ಬಿಜೆಪಿಯೊಳಗೆ ಕೋಲಾಹಲಕ್ಕೆ ಕಾರಣವಾಗಿದೆ. ಪಕ್ಷದ ಒಳಗೆ ಬ್ರಾಹ್ಮಣರಿಗೆ ಅಗತ್ಯ ಪ್ರಾಶಸ್ತ್ಯ ಸಿಗುತ್ತಿಲ್ಲ ಎಂಬುದರ ಜೊತೆಗೆ ಟಿಕೆಟ್ ಹಂಚಿಕೆಯಲ್ಲಿ ತಮಗೆ ಕೈ ಕೊಡಬಾರದು ಎನ್ನುವುದು ಡಿನ್ನರ್ ಮೀಟಿಂಗ್‌ಗೆ ಮುಖ್ಯ ಕಾರಣ. ಉತ್ತರ ಪ್ರದೇಶದಲ್ಲಿ ಬಹಳ ಹಿಂದಿನಿಂದಲೂ ಕ್ಷತ್ರಿಯ ಮತ್ತು ಬ್ರಾಹ್ಮಣ ಸಮುದಾಯದ ನಡುವೆ ಮುನಿಸು ಜಾಸ್ತಿ. ಆದರೆ ಯಾವಾಗ ಯಾದವರು ರಾಜ್ಯ ಆಳುತ್ತಾರೋ, ಆಗ ಇಬ್ಬರೂ ಒಟ್ಟಿಗೆ ಬರುತ್ತಾರೆ. ಆದರೆ ಈಗ ಬಿಜೆಪಿಯಲ್ಲಿ ನಿಧಾನವಾಗಿ ಜಾತಿ ಜಾತಿ ನಡುವೆ ಕಿತ್ತಾಟ ಶುರುವಾಗಿದೆ.
ಇನ್ನೊಂದು ಕಡೆ ಉತ್ತರ ಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷರಾಗಿ 7 ಬಾರಿ ಸಂಸದರಾಗಿ ಗೆದ್ದಿರುವ ಕುರ್ಮಿ ಸಮುದಾಯದ, ಗೋರಖಪುರ ಪ್ರಾಂತದ ಪಂಕಜ್ ಚೌಧರಿ ಆಯ್ಕೆಯಾಗಿದ್ದಾರೆ. ಅವರಿಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೂ ಸಂಬಂಧ ಅಷ್ಟಕ್ಕಷ್ಟೆ. 2024ರಲ್ಲಿ ಬಿಜೆಪಿ ಸಂಘಟನೆಯ ಸ್ಥಿತಿ ಹೇಗಿತ್ತು ಎಂದರೆ ಸ್ವತಃ ಪ್ರಧಾನಿ ಮೋದಿ ಅವರ ಕ್ಷೇತ್ರ ವಾರಾಣಸಿಯಲ್ಲಿ ಪನ್ನಾ ಪ್ರಮುಖರನ್ನು ನೇಮಿಸಲು ಸಾಧ್ಯವಾಗಿರಲಿಲ್ಲ. ಮೋದಿಯವರು ಯೋಗಿಯವರ ಮೇಲೆ ಬಿಜೆಪಿ ಜಾಸ್ತಿ ನಿರ್ಭರರಾಗಿದ್ದರಿಂದ ಕಾರ್ಯಕರ್ತರು ಕೆಳಗೆ ಇಳಿದು ಕೆಲಸ ಕೂಡ ಮಾಡಿರಲಿಲ್ಲ. ಈಗ ಮರಳಿ ಜಾತಿವಾರು ಶಾಸಕರು ಪಕ್ಷದ ಪ್ರಮುಖರು ಬೇಡವೆಂದರೂ ಒಟ್ಟಿಗೆ ಊಟಕ್ಕೆ ಸೇರುತ್ತಿರುವುದು ಬಿಜೆಪಿಗೆ ಒಳ್ಳೆಯ ಸಂಕೇತವಂತೂ ಅಲ್ಲ. ಅಲ್ಲಿನ ಸ್ಥಳೀಯರು ಹೇಳುವ ಪ್ರಕಾರ ಹಿಂದುತ್ವ, ಕಾನೂನು ಸುವ್ಯವಸ್ಥೆ ಮೇಲೆ ಚುನಾವಣೆ ನಡೆದರೆ ಯೋಗಿಗೆ ಲಾಭ ಜಾಸ್ತಿ. ಜಾತಿ ಪಿಚ್ ಮೇಲೆ ಬಿಜೆಪಿ ಹೋದರೆ ಅಖಿಲೇಶ್ ಯಾದವ್‌ಗೆ ಲಾಭ ಜಾಸ್ತಿ.


