ಮಹಾರಾಷ್ಟ್ರದ ಹಿರಿಯ ಬಿಜೆಪಿ ನಾಯಕ ಬಸವರಾಜ ಪಾಟೀಲ ಮರುಮ್ ಅವರು ಧಾರಾಶಿವ-ಲಾತೂರ-ಬೀಡ ವಿಧಾನ ಪರಿಷತ್ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಆಳಂದ ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ್ ಅವರ ಸಹೋದರರಾದ ಇವರ ಗೆಲುವನ್ನು ಆಳಂದದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಆಳಂದ (ಕಲಬುರಗಿ): ಆಳಂದ ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ್ ಸಹೋದರ, ಮಹಾರಾಷ್ಟ್ರದ ಹಿರಿಯ ಬಿಜೆಪಿ ನಾಯಕ ಬಸವರಾಜ ಪಾಟೀಲ ಮರುಮ್(Basavaraj Patil) ಅವರು ಧಾರಾಶಿವ- ಲಾತೂರ- ಬೀಡ ಜಿಲ್ಲೆಗಳ ಸ್ಥಳೀಯ ಸಂಘ–ಸಂಸ್ಥೆಗಳ ವಿಧಾನ ಪರಿಷತ್ ಕ್ಷೇತ್ರದಲ್ಲಿ 850 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಳಂದಲ್ಲಿ ವಿಜಯೋತ್ಸವ

ಈ ಗೆಲುವು ಆಳಂದದಲ್ಲಿ ಸಂಭ್ರಮ ಮತ್ತು ಸಡಗರ ಮೂಡಿಸಿದ್ದು, ಕುಟುಂಬಸ್ಥರು, ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಉತ್ಸಾಹದಿಂದ ವಿಜಯೋತ್ಸವ ಆಚರಿಸಿದರು. 2 ಬಾರಿ ಶಾಸಕರಾಗಿ ಹಾಗೂ ಒಮ್ಮೆ ಸಚಿವರಾಗಿ ಮಹಾರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ಬಸವರಾಜ ಪಾಟೀಲ ಮರುಮ್ ಅವರು, ಈ ಗೆಲುವಿನ ಮೂಲಕ ವಿಧಾನ ಪರಿಷತ್ ಸದಸ್ಯರಾಗಿ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ.

ಕುಟುಂಬಕ್ಕೆ ಹೆಮ್ಮೆ

ವಿಜಯೋತ್ಸವದಲ್ಲಿ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್, ‘ನಮ್ಮ ಮನೆತನದ ಕುಡಿ ಶಾಸಕರಾಗಿ, ಸಚಿವರಾಗಿ ಅನುಪಮ ಸೇವೆ ಸಲ್ಲಿಸಿ, ಈಗ ಮತ್ತೊಮ್ಮೆ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವುದು ನಮ್ಮ ಇಡೀ ಕುಟುಂಬಕ್ಕೆ ಅಪಾರ ಹೆಮ್ಮೆ ಮತ್ತು ಸಂತಸ ತಂದಿದೆ. ಅವರ ಜನಪ್ರಿಯತೆ ಮತ್ತು ಸಮಾಜ ಸೇವೆ ಮತದಾರರು ಮತ್ತೊಮ್ಮೆ ಗುರುತಿಸಿ ಅಭೂತಪೂರ್ವ ಬೆಂಬಲ ನೀಡಿದ್ದಾರೆ’ ಎಂದು ಭಾವುಕರಾಗಿ ಹೇಳಿದರು.