ಪಕ್ಷದಲ್ಲಿನ ಸ್ಥಾನಮಾನದ ಅಸಮಾಧಾನದ ಹಿನ್ನೆಲೆಯಲ್ಲಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ಮನವೊಲಿಸಲು ಯತ್ನಿಸಿದರು. ಆದರೆ, ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ ಪಾಟೀಲ್, ತಮ್ಮ ಕ್ಷೇತ್ರದ ಕಾರ್ಯಕರ್ತರೊಂದಿಗೆ ಚರ್ಚಿಸಿದ ನಂತರವೇ ಮುಂದಿನ ನಿರ್ಧಾರವೆಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು: ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗದೆ ಅಸಮಾಧಾನಗೊಂಡಿರುವ ನಾಯಕರನ್ನು ಶಾಂತಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ತೀವ್ರ ಕಸರತ್ತು ಆರಂಭಿಸಿದೆ. ಇದರ ಭಾಗವಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಕಳೆದ ರಾತ್ರಿ ಅಸಮಾಧಾನಿತ ಶಾಸಕ ಯಶವಂತರಾಯಗೌಡ ಪಾಟೀಲ್ ಸೇರಿದಂತೆ ಹಲವು ಪ್ರಮುಖ ನಾಯಕರೊಂದಿಗೆ ದೂರವಾಣಿ ಹಾಗೂ ನೇರ ಭೇಟಿ ಮೂಲಕ ಸುದೀರ್ಘ ಚರ್ಚೆ ನಡೆಸಿದ್ದಾರೆ.

ಎರಡು ತಾಸುಗಳ ಕಾಲ ನಡೆದ ಸುರ್ಜೇವಾಲ ಮನವೊಲಿಕೆ

ಶಾಸಕ ಯಶವಂತರಾಯಗೌಡ ಪಾಟೀಲ್ ಅವರನ್ನು ಭೇಟಿಯಾದ ಸುರ್ಜೇವಾಲ ಅವರು ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿ ಸಮಾಧಾನಪಡಿಸುವ ಪ್ರಯತ್ನ ಮಾಡಿದರು. ರಾಜೀನಾಮೆಯಂತಹ ಯಾವುದೇ ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಮುಂಬರುವ ದಿನಗಳಲ್ಲಿ ಒಳ್ಳೆಯ ಕಾಲ ಬರಲಿದೆ, ಸ್ವಲ್ಪ ತಾಳ್ಮೆಯಿಂದಿ ಎಂದು ಸುರ್ಜೇವಾಲ ಮನವಿ ಮಾಡಿದರು. ಪಕ್ಷದಲ್ಲಿ ಸೂಕ್ತ ಗೌರವ ಹಾಗೂ ಸ್ಥಾನಮಾನ ಕೊಡುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಹೇಳಿದ ಅವರು, ಈ ಕುರಿತು ಕೆಪಿಸಿಸಿ ಅಧ್ಯಕ್ಷರೊಂದಿಗೂ ಮಾತುಕತೆ ನಡೆಸುವಂತೆ ಅವಕಾಶವಂಚಿತ ನಾಯಕರಿಗೆ ಸೂಚಿಸಿದರು.

ಹೈಕಮಾಂಡ್ ನಾಯಕರಿಗೆ ಶಾಸಕ ಪಾಟೀಲ್ ತಿರುಗೇಟು

ಸುರ್ಜೇವಾಲ ಅವರ ಯಾವುದೇ ಸಮಾಧಾನಕರ ಮಾತುಗಳಿಗೆ ತಕ್ಷಣಕ್ಕೆ ಒಪ್ಪದ ಶಾಸಕ ಯಶವಂತರಾಯಗೌಡ ಪಾಟೀಲ್, ಪಕ್ಷದ ನಾಯಕರ ವೈಖರಿಯ ಬಗ್ಗೆ ತಮ್ಮ ತೀವ್ರ ಅಸಮಾಧಾನವನ್ನು ಹೊರಹಾಕಿದರು ಎನ್ನಲಾಗಿದೆ. "ಪಕ್ಷ ಕಟ್ಟುವಾಗ ನಾವೆಲ್ಲರೂ ಬೇಕು. ಆದರೆ ಅಧಿಕಾರ ನೀಡುವಾಗ ಮಾತ್ರ ಕೆಲವು ವ್ಯಕ್ತಿಗಳಿಗೆ ಪದೇ ಪದೇ ಅವಕಾಶ ನೀಡಲಾಗುತ್ತಿದೆ. ಚುನಾವಣೆಯ ಸಂದರ್ಭದಲ್ಲಿ ನೀವು ಕೊಟ್ಟಿದ್ದ ಮಾತನ್ನು ಈಡೇರಿಸಿಲ್ಲ. ನಾವು ಕಳೆದ ನಲವತ್ತು ವರ್ಷಗಳಿಂದ ಇದನ್ನು ಸಹಿಸಿಕೊಂಡು ಬಂದಿದ್ದೇವೆ, ಇನ್ನು ಸಹಿಸಲು ಸಾಧ್ಯವಿಲ್ಲ." ಎಂದು ಶಾಸಕ ಯಶವಂತರಾಯಗೌಡ ಪಾಟೀಲ್ ಹೇಳಿದ್ದಾರೆನ್ನಲಾಗಿದೆ.

ಕ್ಷೇತ್ರದ ಕಾರ್ಯಕರ್ತರೊಂದಿಗೆ ಚರ್ಚಿಸಿದ ಬಳಿಕವೇ ಮುಂದಿನ ನಡೆ

ಹೈಕಮಾಂಡ್ ನೀಡಿದ ಯಾವುದೇ ಆಶ್ವಾಸನೆಗೂ ತಕ್ಷಣಕ್ಕೆ ಬಗ್ಗದ ಪಾಟೀಲ್, ತಮ್ಮ ಮುಂದಿನ ತೀರ್ಮಾನವನ್ನು ಕ್ಷೇತ್ರದ ಜನರ ನಿರ್ಧಾರಕ್ಕೆ ಬಿಟ್ಟಿದ್ದಾರೆ. ಮೊದಲು ನಾನು ನನ್ನ ಕ್ಷೇತ್ರದ ಕಾರ್ಯಕರ್ತರು ಮತ್ತು ಬೆಂಬಲಿಗರ ಜೊತೆ ಸಮಾಲೋಚನೆ ನಡೆಸುತ್ತೇನೆ. ಅವರ ಅಭಿಪ್ರಾಯ ಆಲಿಸಿದ ನಂತರವೇ ನಿಮ್ಮ ಬಳಿ ಬಂದು ಅಂತಿಮವಾಗಿ ಮಾತನಾಡುತ್ತೇನೆ" ಎಂದು ಸುರ್ಜೇವಾಲ ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ರಾತ್ರಿ ನಡೆದ ಈ ಮಹತ್ವದ ಮಾತುಕತೆಯ ವೇಳೆಯಲ್ಲಿ ಸುರ್ಜೇವಾಲ ಅವರು ಯಾವುದೇ ನಿರ್ದಿಷ್ಟ ಭರವಸೆ ನೀಡಲು ಸಾಧ್ಯವಾಗದಿದ್ದರೂ, ಅಸಮಾಧಾನದ ಕಿಚ್ಚು ಶಮನಗೊಳಿಸಲು ಕೆಪಿಸಿಸಿ ಹಂತದಲ್ಲಿ ಮತ್ತೊಂದು ಸುತ್ತಿನ ಚರ್ಚೆಗೆ ವೇದಿಕೆ ಸಿದ್ಧಪಡಿಸುತ್ತಿದ್ದಾರೆ.