ಬೆಂಗಳೂರು(ನ.07):  ಡಿಸೆಂಬರ್‌ನಲ್ಲಿ ರಾಜ್ಯದಲ್ಲಿ ಮತ್ತೊಂದು ಮಹಾ ಮಿನಿಸಮರ ನಡೆಯುವ ಸಾಧ್ಯತೆ ಇದೆ. ಹೌದು, ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭೆ, ಬೀದರ್‌ ಜಿಲ್ಲೆಯ ಬಸವಕಲ್ಯಾಣ ವಿಧಾನಸಭೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪಚುಚನುವಾಣೆ ನಡೆಯುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗದ ಮೂಲಗಳಿಂದ ತಿಳಿದು ಬಂದಿದೆ. 

ಹೀಗಾಗಿ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ನಿಂದ ಈಗಿನಿಂದಲೇ ಭರ್ಜರಿ ತಯಾರಿ ಆರಂಭಿಸಿವೆ. ಇದೇ ತಿಂಗಳ(ನವೆಂಬರ್) ಕೊನೆಯ ವಾರದಲ್ಲಿ ಉಪಚುನಾವಣೆಯ ವೇಳಾಪಟ್ಟಿ ಪ್ರಕಟವಾಗಲಿದೆ ಎಂದು ಹೇಳಲಾಗುತ್ತಿದೆ. 

ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಬಸನಗೌಡ ತುರವಿಹಾಳ್ ಕಾಂಗ್ರೆಸ್‌ ಅಭ್ಯರ್ಥಿ ಆಗೋದು ಪಕ್ಕಾ ಎಂದು ಹೇಳಲಾಗುತ್ತಿದೆ. ಬಿಜೆಪಿಯಿಂದ ಅನರ್ಹ ಶಾಸಕ‌ ಪ್ರತಾಪಗೌಡ ಪಾಟೀಲ್ ಕಣಕ್ಕೆ ಇಳಿಯಲಿದ್ದಾರೆ. 

ಬಿಜೆಪಿಗೆ ಬಿಗ್‌ ಶಾಕ್‌: ಆಪರೇಷನ್‌ ಹಸ್ತಕ್ಕೆ ಡಿ.ಕೆ. ಶಿವಕುಮಾರ್‌ ಸಿದ್ಧತೆ..!

ಇನ್ನು ಬೀದರ್‌ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರದಲ್ಲಿ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಅವರು ಸ್ಪರ್ಧಿಸಲಿದ್ದಾರೆ ಎಂದು ವದಂತಿಯೊಂದು ಹರಿದಾಡುತ್ತಿದೆ. ಈ ಬಗ್ಗೆ ವಿಜಯೇಂದ್ರ ಅವರಾಗಲಿ, ಬಿಜೆಪಿ ಪಕ್ಷವಾಗಲಿ ಯಾವುದೇ ರೀತಿಯಾದ ಅಧಿಕೃತವಾದ ಹೇಳಿಕೆಗಳನ್ನ ನೀಡಿಲ್ಲ. ಆದರೆ, ಉಪಚುನಾವಣೆಗೆ ಮಾತ್ರ ಬಿಜೆಪಿ ನಾಯಕರು ತುಯಾರಿಯನ್ನ ಶುರು ಮಾಡಿದ್ದಾರೆ. 

ನ.12 ರಂದು ಬಿ.ವೈ.ವಿಜಯೇಂದ್ರ ಭೇಟಿ ನೀಡಿ ಕಾರ್ಯಕರ್ತರ ಮತ್ತು ಮುಖಂಡರ ಜೊತೆ ಸಭೆ ನಡೆಸಲಿದ್ದಾರೆ. ಬಸವಕಲ್ಯಾಣದಲ್ಲಿ ವಿಜಯೇಂದ್ರ ಸ್ಪರ್ಧೆ ಎಂಬ ವದಂತಿ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಭಾರೀ ತಯಾರಿ ಆರಂಭವಾಗಿದೆ. 
ಹೇಗಾದರೂ ಮಾಡಿ ಬಸವಕಲ್ಯಾಣ ಕ್ಷೇತ್ರ ಉಳಿಸಿಕೊಳ್ಳಲು ಕಾಂಗ್ರೆಸ್‌ ಪಣತೊಟ್ಟು ನಿಂತಂತೆ ಕಾಣುತ್ತಿದೆ. ಹೀಗಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಗೆ ಇಡೀ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನ ವಹಿಸಲಾಗಿದೆ.

ಉಪಚುನಾವಣೆ ಸಂಬಂಧ ಈಶ್ವರ್ ಖಂಡ್ರೆ ಕಳೆದ ವಾರ ಒಂದು ಸುತ್ತಿನ ಸಭೆ ಕೂಡ ನಡೆಸಿದ್ದಾರೆ. ಇನ್ನು ನ. 12 ರಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರ ಸಭೆ ಜರುಗಲಿದೆ. ಉಪಚುನಾವಣೆ ಕುರಿತು ಪೂರ್ವ ತಯಾರಿ ಬಗ್ಗೆ ಸಮಾಲೋಚನೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 

ಬಸನಗೌಡರಿಗೆ ಚುನಾವಣಾ ಟಿಕೆಟ್‌ : ಕಾರ್ಯಕರ್ತರ ಒತ್ತಾಯ

ಕಳೆದ ಬಾರಿಯ ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಬಳಿಕ ಬದಲಾದ ರಾಜಕೀಯ ಸನ್ನಿವೇಶಕ್ಕೆ  ಪ್ರತಾಪ್‌ಗೌಡ ಪಾಟೀಲ್‌ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು. ಹೀಗಾಗಿ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದೆ. 

ಬೀದರ್‌ ಜಿಲ್ಲೆಯ ಬಸವಕಲ್ಯಾಣ ಶಾಸಕ ಕಾಂಗ್ರೆಸ್‌ ಶಾಸಕ ಬಿ.ನಾರಾಯಣರಾವ್‌ ಹಾಗೂ ಬೆಳಗಾವಿ ಸಂಸದ ಹಾಗೂ ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿ ಅವರು ಮಹಾಮಾರಿ ಕೊರೋನಾಗೆ ಬಲಿಯಾಗಿದ್ದರು. ಹೀಗಾಗಿ ಈ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಿದೆ.