ರಾಯಚೂರು(ನ.06): ಉಪಚುನಾವಣೆ ಮುಗಿದ ಬೆನ್ನಲ್ಲೇ ಮತ್ತೊಂದು ಉಪಸಮರಕ್ಕೆ ಕಾಂಗ್ರೆಸ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹೌದು, ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಗಮನ ಕೇಂದ್ರಿಕರಿಸಿದ್ದಾರೆ ಎಂದು ತಿಳಿದು ಬಂದಿದೆ. 

ಕಳೆದ ಬಾರಿಯ ವಿಧಾಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಬಳಿಕ ಬದಲಾದ ರಾಜಕೀಯ ಸನ್ನಿವೇಶಕ್ಕೆ ಪ್ರತಾಪ್‌ಗೌಡ ಪಾಟೀಲ್‌ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು. ಹೀಗಾಗಿ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದೆ.

ಹೀಗಾಗಿ ಈ ಕ್ಷೇತ್ರದ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಗಮನ ಕೇಂದ್ರಿಕರಿಸಿದ್ದಾರೆ. ಹೀಗಾಗಿ ಅಭ್ಯರ್ಥಿ ಆಯ್ಕೆಯಲ್ಲಿನ ಗೊಂದಲ ಆರಂಭದಲ್ಲೇ ಪರಿಹರಿಸಿಕೊಳ್ಳಲು ಡಿಕೆಶಿ ಪ್ಲಾನ್ ಮಾಡಿದ್ದಾರೆ. ಆಡಳಿತಾರೂಢ ಪಕ್ಷದ ನಾಯಕನ ಆಪರೇಷನ್ ಮಾಡಲು ಡಿಕೆಶಿ ರೆಡಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. 

2018 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಸನಗೌಡ ಪಾಟೀಲ್ ತುರವಿಹಾಳ ಅವರು ಈ ಉಪಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿಯಾಗಲಿದ್ದಾರೆ. ಈ ಸಂಬಂಧ ಬಸನಗೌಡ ಪಾಟೀಲ್ ತುರವಿಹಾಳ ಜೊತೆ ಅಂತಿಮ ಸುತ್ತಿನ ಮಾತುಕತೆಗೆ ಕೆಪಿಸಿಸಿ ಅಧ್ಯಕ್ಷ ಸಿದ್ಧತೆ ಮಾಡಿಕಕೊಂಡಿದ್ದಾರೆ. ಹೀಗಾಗಿ ಮಸ್ಕಿ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿಯೇ ಮುಂದಿನ ಕೈ ಅಭ್ಯರ್ಥಿಯಾಗಲಿದ್ದಾರಾ ಎಂಬೆಲ್ಲ ಪ್ರಶ್ನೆಗಳಿಗೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

ರಾಯಚೂರು: ಮಸ್ಕಿ ಉಪ ಚುನಾವಣೆ ಘೋಷಣೆಗೂ ಮುನ್ನ ಟಿಕೆಟ್‌ ಲೆಕ್ಕಾಚಾರ..!

ಡಿಕೆಶಿ ಪ್ಲಾನ್‌

ಬಸನಗೌಡ ಪಾಟೀಲ್ ತುರವಿಹಾಳರನ್ನು ಅಭ್ಯರ್ಥಿಯಾಗಿಸಲು ಡಿಕೆಶಿ ಪ್ಲಾನ್ ಮಾಡಿಕೊಂಡಿದ್ದಾರೆ. ಈ ಸಂಬಂಧ ಒಂದು ಸುತ್ತಿನ ಮಾತುಕತೆ ಪೂರ್ಣಗೊಳಿಸಲಾಗಿದೆ. ತುರವಿಹಾಳ್ ಅವರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿಸುವ ಬಗ್ಗೆ ಡಿಕೆಶಿ ಭರವಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. 

2018 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬಸನಗೌಡ ಪಾಟೀಲ್ ತುರವಿಹಾಳ, ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್ ವಿರುದ್ಧ ಪರಾಭವಗೊಂಡಿದ್ದರು. ಕೇವಲ 213 ಮತಗಳಿಂದ ಪರಾಜಿತರಾಗಿದ್ದ ತುರವಿಹಾಳ್‌ ಚುನಾವಣೆಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದಾಸದ ಬಳಿಕ ತುರವಿಹಾಳ ಅವರಿಗೆ ಯಡಿಯೂರಪ್ಪ ಸರ್ಕಾರ ಕಾಡಾ ಅಧ್ಯಕ್ಷಗಿರಿ ನೀಡಿತ್ತು. ಹೀಗಾಗಿ ತುರವಿಹಾಳ್‌ ಅರ್ಜಿಯನ್ನ ವಾಪಸ್ ಪಡೆದಿದ್ದರು.

ಆದರೆ, ಏಕಾಏಕಿ ತುರವಿಹಾಳ್‌ ಕಾಂಗ್ರೆಸ್‌ ಸೇರಲಿದ್ದಾರೆ. ಶೀಘ್ರದಲ್ಲೇ ಕಾಂಗ್ರೆಸ್‌ಗೆ ಸೇರ್ಪಡೆಯಾಗಲು ವೇದಿಕೆ ಕೂಡ ಸಿದ್ಧಗೊಂಡಿದೆ. ಕಾಂಗ್ರೆಸ್‌ ಸೇರ್ಪಡೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆಗೆ ಗುರುವಾರ ಸಭೆ ನಿಗದಿಯಾಗಿತ್ತು. ಅಂತಿಮ ಕ್ಷಣದಲ್ಲಿ ಸಭೆ ರದ್ದಾಗಿ ಭಾನುವಾರ ನಡೆಸಲು ತಿರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ. 

ಕೋರ್ಟ್‌ನಲ್ಲಿ ಅನರ್ಹ ಶಾಸಕ ಪ್ರತಾಪ್ ಗೌಡಗೆ ಜಯ: ಮಸ್ಕಿ ಬೈ ಎಲೆಕ್ಷನ್‌ ಹಾದಿ ಸುಗಮ

ಭಾನುವಾರ ಬೆಂಗಳೂರಿಗೆ ಬರಲು ಡಿ.ಕೆ.ಶಿವಕುಮಾರ್ ಬಸನಗೌಡ ತುರವಿಹಾಳ್‌ಗೆ ಆಹ್ವಾನ ನೀಡಲಾಗಿದೆ. ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಅಂತಿಮ ಮಾತುಕತೆಗೆ ದಿನಾಂಕ ನಿಗದಿಯಾಗಿದೆ. ಮಸ್ಕಿ ಕ್ಷೇತ್ರದಲ್ಲಿ ಚುನಾವಣೆ ಘೋಷಣೆಗೆ ಮುನ್ನವೇ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ. ಟಿಕೆಟ್ ನೀಡುವ ಕುರಿತು ಸ್ಪಷ್ಟ ಭರವಸೆಯೊಂದಿಗೆ ತುರವಿಹಾಳ್‌ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.

ಸಿಎಂ ಆಹ್ವಾನ ಒಪ್ಪದ ಬಸನಗೌಡ ಪಾಟೀಲ್ ತುರವಿಹಾಳ 

ಡಿಕೆಶಿ ಪ್ಲಾನ್ ತಿಳಿದ ಬಿಜೆಪಿ ನಾಯಕರು ಬಸನಗೌಡ ಪಾಟೀಲ್ ತುರವಿಹಾಳ ಅವರ ಮನವೊಲಿಕೆಗೆ ಯತ್ನಿಸಲಾಗಿದೆ. ಈ ಸಂಬಂಧ ನಾಳೆ(ಶನಿವಾರ) ಸಿಎಂ ಯಡಿಯೂರಪ್ಪ ಸಮ್ಮುಖದಲ್ಲಿ ಸಂಧಾನ ನಡೆಸಲು ಸಿದ್ದತೆ ನಡೆಸಲಾಗಿದೆ. ಆದ್ರೆ, ಸಿಎಂ ಆಹ್ವಾನವನ್ನು ಒಪ್ಪಲು  ಬಸನಗೌಡ ಪಾಟೀಲ್ ತುರವಿಹಾಳ ನಿರಾಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. 

ಇನ್ನು ಬಸನಗೌಡ ಪಾಟೀಲ್ ತುರವಿಹಾಳ್ ಕಾಂಗ್ರೆಸ್ ಸೇರ್ಪಡೆ ವಿಚಾರದ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ರಾಯಚೂರು ಜಿಲ್ಲೆಯ ಪ್ರಭಾವಿ ನಾಯಕರುಗಳ ಸಭೆ ಕರೆದಿದ್ದಾರೆ. ಈ ಸಂಬಂಧ ಬೆಂಗಳೂರಿನ ಸಿದ್ದರಾಮಯ್ಯ ನಿವಾಸದಲ್ಲಿ ಮಹತ್ವದ ಸಭೆ ನಡೆದಿದೆ. ಬಸನಗೌಡ ಪಾಟೀಲ್ ತುರವಿಹಾಳ್ ಕಾಂಗ್ರೆಸ್ ಅಭ್ಯರ್ಥಿಯಾಗಲು ಸಹಮತ ವ್ಯಕ್ತಪಡಿಸಿರುವ ಕುರಿತು ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಭಾನುವಾರ ಇಲ್ಲವೇ ಸೋಮವಾರ ಬಸನಗೌಡ ಪಾಟೀಲ್ ತುರವಿಹಾಳ್ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ. ನಾಯಕರ ಮಧ್ಯೆ ಸಹಮತ ಮೂಡಿಸುವ ಜವಾಬ್ದಾರಿಯನ್ನ ಸಿದ್ದರಾಮಯ್ಯ ತೆಗೆದುಕೊಂಡಿದ್ದಾರೆ.