ಬಿಜೆಪಿ ಸೇರಿದ ಅನುಪಮಾ ಸೀರಿಯಲ್ ನಟಿ ರೂಪಾಲಿ ಗಂಗೂಲಿ, ಚುನಾವಣೆಗೆ ಸ್ಪರ್ಧಿಸ್ತಾರಾ?
ಹಿಂದಿ ಸೀರಿಯಲ್ ನಟಿ ಅನುಪಮಾ ಖ್ಯಾತಿಯ ರೂಪಾಲಿ ಗಂಗೂಲಿ ಬಿಜೆಪಿ ಸೇರಿದ್ದಾರೆ. ಇಂದು ದೆಹಲಿ ಬಿಜೆಪಿ ಕಚೇರಿಯಲ್ಲಿ ಪಕ್ಷವನ್ನು ಸೇರಿದ ಅವರು ತಾನು ಪ್ರಧಾನಿ ನರೇಂದ್ರ ಮೋದಿಯವರ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ.
ಹಿಂದಿ ಸೀರಿಯಲ್ ನಟಿ ಅನುಪಮಾ ಖ್ಯಾತಿಯ ರೂಪಾಲಿ ಗಂಗೂಲಿ ಬಿಜೆಪಿ ಸೇರಿದ್ದಾರೆ. ಇಂದು ದೆಹಲಿ ಬಿಜೆಪಿ ಕಚೇರಿಯಲ್ಲಿ ಪಕ್ಷವನ್ನು ಸೇರಿದ ಅವರು ತಾನು ಪ್ರಧಾನಿ ನರೇಂದ್ರ ಮೋದಿಯವರ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ.
ಭಾರತೀಯ ಜನತಾ ಪಾರ್ಟಿ ಸೇರಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೂಪಾಲಿ ಗಂಗೂಲಿ, ನಾನು ಇಲ್ಲಿರುವುದಕ್ಕೆ ತುಂಬಾ ಹೆಮ್ಮೆ ಎನಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನನ್ನ ಮೇಲೆ ತುಂಬಾ ಪ್ರಭಾವ ಬೀರಿದ್ದಾರೆ, ನಾನು ಅವರ ದೊಡ್ಡ ಅಭಿಮಾನಿ, ಬಿಜೆಪಿ ಉತ್ತಮ ಕೆಲಸ ಮಾಡುತ್ತಿದೆ. ಹೀಗಾಗಿ ನಾನು ಬಿಜೆಪಿ ಸೇರಲು ಬಯಸುತ್ತೇನೆ ಹಾಗೂ ನನ್ನನ್ನು ಪಕ್ಷಕ್ಕೆ ಸೇರಿಸಿಕೊಂಡಿರುವುದಕ್ಕೆ ಕೃತಜ್ಞಳಾಗಿದ್ದೇನೆ ಎಂದು ಅವರು ಹೇಳಿದ್ದಾರೆ. ಈ ಅಭಿವೃದ್ಧಿಯ ಮಾಹಾಯಾಗವನ್ನು ನೋಡಿದ ಮೇಲೆ ನನಗೂ ಈ ಮಹಾಯಾಗದ ಭಾಗವಾಗಬೇಕು ಎಂದು ನನಗೆ ಅನಿಸಿತು. ನನಗೆ ನಿಮ್ಮ ಆಶೀರ್ವಾದ ಬೇಕು ಎಂದು ಅವರು ಹೇಳಿದ್ದಾರೆ.
ಅಪ್ಪನಿಗೆ ಒಳ್ಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದಕ್ಕಾಗಿಯೇ ಸೀರಿಯಲ್‌ಗಳಲ್ಲಿ ನಟನೆ ಶುರು ಮಾಡಿದೆ
ರೂಪಾಲಿ ಬಿಜೆಪಿ ಸೇರ್ಪಡೆ ವೇಳೆ ಬಿಜೆಪಿ ನಾಯಕರಾದ ವಿನೋದ್ ತಾವ್ಡೆ ಹಾಗೂ ಅನಿಲ್ ಬಲುನಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ತಮ್ಮ ರಾಜಕೀಯ ಸೇರ್ಪಡೆಯ ಬಗ್ಗೆ ರೂಪಾಲಿ ಘೋಷಣೆ ಮಾಡಿದ್ದರೂ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರವನ್ನು ಅವರು ಖಚಿತಪಡಿಸಿಲ್ಲ, ಆದರೆ ಈ ವರ್ಷ ಬಿಜೆಪಿ ಸೇರ್ಪಡೆಗೊಂಡಿರುವ ನಟನಟಿರಾದ ಕಂಗನಾ ರಣಾವತ್, ರಾಮಾಯಣ ಪಾತ್ರಧಾರಿ ಅರುಣ್ ಗೋವಿಲ್ ಅವರು ಬಿಜೆಪಿ ಸೇರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.
ಸಾರಭಾಯ್ ವರ್ಸಸ್ ಸಾರಭಾಯ್ ನಟಿ ರೂಪಾಲಿ ಅವರು ಪ್ರಧಾನಿ ಅವರನ್ನು ಭೇಟಿಯಾದ ಒಂದು ತಿಂಗಳ ನಂತರ ಬಿಜೆಪಿ ಸೇರಿದ್ದಾರೆ. ಮಾರ್ಚ್‌ನಲ್ಲಿ ಅವರು ತಾವು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದೆ. ಅದೊಂದು ಆತಂಕ ಹಾಗೂ ಉತ್ಸಾಹ ಮಿಶ್ರಿತ ಕ್ಷಣವಾಗಿತ್ತು ಎಂದು ರೂಪಾಲಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.
ಒಂದು ದಿನಕ್ಕೆ 30 ಲಕ್ಷ ರೂಪಾಯಿ; ಅತಿ ಹೆಚ್ಚು ಸಂಭಾವನೆ ಪಡೆಯುವ ಕಿರುತೆರೆ ನಟಿ ರೂಪಾಲಿ!
ನಾನು ಆ ದಿನವನ್ನು ನೆನೆಯದೇ ಇರುವ ದಿನವಿಲ್ಲ, ಆ ಸಂಭ್ರಮವನ್ನು ನಾನು ಆಗಾಗ ನೆನಪು ಮಾಡಿಕೊಳ್ಳುವೆ, ಅದು ನನ್ನ ಕನಸು ನನಸಾದ ಕ್ಷಣ, ನಮ್ಮ ಗೌರವಾನ್ವಿತ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ದಿನ ಅದೊಂದು ನಿಜವಾಗಿಯೂ ಫ್ಯಾನ್ ಗರ್ಲ್ ಕ್ಷಣವಾಗಿತ್ತು. 14 ವರ್ಷದಲ್ಲಿ ನಾನು ಅಂತಹ ದೊಡ್ಡ ವೇದಿಕೆಯಲ್ಲಿ ಅವರನ್ನು ಭೇಟಿಯಾಗುವುದಕ್ಕೆ ಸಿಕ್ಕಿದ ಅವಕಾಶ ಸಮಯವನ್ನು ಸ್ಮರಿಸಿಕೊಳ್ಳುತ್ತಿದ್ದೇನೆ ಎಂದು ಅವರು ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು.
ನಮ್ಮ ದೇಶದ ದಿಕ್ಕನ್ನೇ ಬದಲಿಸಿದ, ಜಾಗತಿಕ ಆರ್ಥಿಕತೆಯಲ್ಲಿ ನಮ್ಮ ದೇಶದ ಸ್ಥಾನವನ್ನು ಬದಲಿಸಿದ ಮತ್ತು ನಾವು ಕಾಲಿಡುವ ಮಣ್ಣಿನಲ್ಲಿ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಯಿಂದ ತಲೆ ಎತ್ತುವಂತೆ ಮಾಡಿದ ವ್ಯಕ್ತಿಯೊಂದಿಗೆ ಕ್ಷಣಗಳನ್ನು ಕಳೆಯಲು ಸಿಕ್ಕಿದ ಅವಕಾಶಕ್ಕಿಂತ ಹೆಚ್ಚೇನು ಕೇಳಲಿ ಎಂದು ಅವರು ಇನ್ಸ್ಟಾದಲ್ಲಿ ಬರೆದುಕೊಂಡಿದ್ದರು.