ಗೃಹಲಕ್ಷ್ಮಿ ಯೋಜನೆಗೆ ಮಲ್ಲಿಕಾರ್ಜುನ ಖರ್ಗೆ ಚಾಲನೆ, ಮಲ್ಲಿಗೆ ಹಾರಕ್ಕೆ ರಾಹುಲ್ ಗಾಂಧಿ ಫಿದಾ!
ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ನಾಲ್ಕನೇ ಗ್ಯಾರಂಟಿಯಾದ ಗೃಹಲಕ್ಷ್ಮಿ ಯೋಜನೆಗೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಉಪಸ್ಥಿತಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಿದ್ದಾರೆ.

ಮೈಸೂರು (ಆ.30): ದೇಶದ ಇತಿಹಾಸದಲ್ಲೇ ಅತಿ ದೊಡ್ಡ ಕಲ್ಯಾಣ ಕಾರ್ಯಕ್ರಮ ಎನ್ನಲಾಗುತ್ತಿರುವ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರುಪಾಯಿ ನೀಡುವ ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ನಾಲ್ಕನೇ ಗ್ಯಾರಂಟಿಯಾದ ಗೃಹಲಕ್ಷ್ಮಿ ಯೋಜನೆಗೆ ಬುಧವಾರ ಅದ್ಧೂರಿ ಚಾಲನೆ ಸಿಕ್ಕಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಮದ್ಯಾಹ್ನ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಉಪಸ್ಥಿತಿಯಲ್ಲಿ ರಾಜ್ಯಸಭಾ ಪ್ರತಿಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಟನ್ ಒತ್ತುವ ಮೂಲಕ ಯೋಜನೆಗೆ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದ ಚಾಲನೆ ವೇಳೆ ವೇದಿಕೆಯಲ್ಲಿ ಅಷ್ಟ ಲಕ್ಷ್ಮಿಯರು ಗಮನ ಸೆಳೆದರು. ಇದೇ ವೇಳೆ ಸರಕಾರಕ್ಕೆ 100 ದಿನ ಪುರೈಕೆ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆ ಕುರಿತ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯ್ತು. DBT ಮೂಲಕ ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳ ಅಕೌಂಟ್ ಗೆ 2 ಸಾವಿರ ವರ್ಗಾವಣೆ ಗೆ ರಾಹುಲ್ ಗಾಂಧಿ ಚಾಲನೆ ನೀಡಿದರು.
ಇದಕ್ಕೂ ಮುನ್ನ ಇನ್ನು ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಗೆ ಮೈಸೂರು ಪೇಟಾ ಮತ್ತು ಮಲ್ಲಿಗೆ ಹಾರ ಹಾಕಿ ಸನ್ಮಾನ ಮಾಡಲಾಯ್ತು. ಮಲ್ಲಿಗೆ ಹಾರಕ್ಕೆ ಫಿದಾ ಆದ ರಾಹುಲ್ ಗಾಂಧಿ, ಮಲ್ಲಿಗೆ ಹಾರ ಹಾಕ್ತಿದ್ದ ಹಾಗೇ ಅದ್ರ ಸುವಾಸನೆ ಸವಿದದರು. ಜನರತ್ತ ಕೈ ಬೀಸಿದ ಡಿಕೆಶಿ, ಖರ್ಗೆ ,ರಾಹುಲ್ ಮತ್ತು ಸಿದ್ದರಾಮಯ್ಯ ಒಟ್ಟಿಗೆ ಕೈ ಹಿಡಿದು ಒಗ್ಗಟ್ಟು ಪ್ರದರ್ಶನ ತೋರಿದರು. ಕಾರ್ಯಕ್ರಮದಲ್ಲಿ ಸಚಿವ ಮಹದೇವಪ್ಪ ಸಂವಿಧಾನ ಪೀಠಿಕೆ ಭೋದಿಸಿದರು.
ಎಲ್ಲಾ ಗ್ಯಾರಂಟಿಗಳಿಗೆ ರಾಹುಲ್ ಮಾರ್ಗದರ್ಶನ:
ಡಿಕೆಶಿ ಮಾತನಾಡಿ, ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿ ರಾಹುಲ್ ಗಾಂಧಿ ಹೆಜ್ಜೆ ಹಾಕಿದ್ರು. ಆಗ ಅವರು ಕಂಡಿದ್ದು ನಿಮ್ ಹಸಿವು ನಿರುದ್ಯೋಗ ಸಮಸ್ಯೆ ಮತ್ತು ಬಡತನ. ಅದನ್ನ ನಿಗಿಸುವ ಕೆಲಸ ಮಾಡಬೇಕು ಎಂದು ನನಗೆ ಮತ್ತು ಸಿದ್ದರಾಮಯ್ಯವರಿಗೆ ಕಿವಿ ಮಾತು ಹೇಳಿದ್ರು. ಐದು ಗ್ಯಾರಂಟಿಗಳ ಮೂಲಕ ಚುನಾವಣೆಗೆ ಹೋದ್ವಿ. ಚಾಮುಂಡೇಶ್ವರಿ ದೇವಿಯ ಮುಂದೆ ನಾವು ವಾಗ್ದಾನ ಸಹ ಮಾಡಿದ್ವಿ. ಈಗಾಗಲೇ ನಾವು ನಾಲ್ಕು ಗ್ಯಾರಂಟಿ ಜಾರಿ ಮಾಡಿದ್ವಿ. ಇಡೀ ದೇಶದಲ್ಲಿ ಕರ್ನಾಟಕ ಮಾದರಿ ಎನ್ನುವಂತೆ ಮಾಡುತ್ತಿದ್ದೇವೆ. ನಮ್ಮ ಎಲ್ಲಾ ಗ್ಯಾರಂಟಿಗಳಿಗೆ ರಾಹುಲ್ ಗಾಂಧಿ ಮಾರ್ಗದರ್ಶನ ನೀಡಿದ್ದಾರೆ. ನಾವು ನಡೆದಿದಂತೆ ನಡೆದಿದ್ದೇವೆ. ನಮ್ಮ ಸರ್ಕಾರದ ರೀತಿ ಯಾವ ರಾಜ್ಯದಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನ ತಂದಿಲ್ಲ ಎಂದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗಲ್ಲ, ಮಹಿಳೆಯರ ಆರ್ಥಿಕ ಶಕ್ತಿ ಇನ್ನೂ ಹೆಚ್ಚಾಗುತ್ತೆ: ಹೆಬ್ಬಾಳ್ಕರ್
ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಲಕ್ಷ್ಮಿ ಹೆಬ್ಬಾಳ್ಕರ್, ಕೆ.ಎಚ್.ಮುನಿಯಪ್ಪ, ಕೆ.ವೆಂಕಟೇಶ್, ಎನ್. ಚಲುವರಾಯಸ್ವಾಮಿ, ಕೆ.ಎನ್.ರಾಜಣ್ಣ, ಎಸ್.ಎಸ್. ಬೋಸರಾಜು, ಮೇಯರ್ ಶಿವಕುಮಾರ್ ಮತ್ತಿತರರು ವೇದಿಕೆಯಲ್ಲಿದ್ದರು. ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಿಂದ ಸುಮಾರು 1.30 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಡಿ ಮೊದಲ ತಿಂಗಳು ಬರೊಬ್ಬರಿ 1.11 ಕೋಟಿ ಪಡಿತರ ಕುಟುಂಬಗಳ ಮನೆಯೊಡತಿಯರಿಗೆ ತಲಾ 2000 ರು.ನಂತೆ ಒಟ್ಟು ಅಂದಾಜು .2,220 ಕೋಟಿ ಹಣ ನೇರ ನಗದು ಪಾವತಿ(ಡಿಬಿಟಿ)ಯಾಗುವ ನಿರೀಕ್ಷೆ ಇದೆ. ಈ ಯೋಜನೆಗೆ ಪ್ರತಿ ವರ್ಷ 32 ಸಾವಿರ ಕೋಟಿ ರು. ಅನುದಾನ ಬೇಕೆಂದು ಸರ್ಕಾರ ಅಂದಾಜಿಸಿದೆ. ಆದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಈಗಾಗಲೇ 5 ತಿಂಗಳು ಕಳೆದಿರುವುದರಿಂದ ಸುಮಾರು 20 ಸಾವಿರ ಕೋಟಿ ರು. ಬೇಕಾಗಬಹುದೆಂದು ಹೇಳಲಾಗಿದೆ.
ಗೃಹಲಕ್ಷ್ಮಿಗೆ ಅರ್ಜಿ ಹಾಕಿದ 15 ಲಕ್ಷ ಮಹಿಳೆಯರು 2000 ರೂ. ಪಡೆಯಲು ಅರ್ಹರಲ್ಲ: ತಿದ್ದುಪಡಿಗೆ ಇಲ್ಲಿದೆ ಮಾಹಿತಿ
ಪ್ರಸ್ತುತ ನೋಂದಣಿಯಾಗಿರುವ 1.11 ಕೋಟಿ ಕುಟುಂಬಗಳ ಜೊತೆಗೆ ಬರುವ ತಿಂಗಳುಗಳಲ್ಲಿ ಈ ಯೋಜನೆಗೆ ಅರ್ಹತೆ ಇರುವ ಇನ್ನೂ 23 ಲಕ್ಷ ಕುಟುಂಬಗಳು ನೋಂದಣಿಯಾಗುವ ನಿರೀಕ್ಷೆ ಇದೆ. ಇಷ್ಟಾದರೂ ಪ್ರತಿ ತಿಂಗಳು 2660 ಕೋಟಿ ರು.ನಂತೆ ಈ ಆರ್ಥಿಕ ವರ್ಷದ (2024ರ ಮಾಚ್‌ರ್ ವರೆಗೆ) 8 ತಿಂಗಳಿಗೆ ಸುಮಾರು 20 ಸಾವಿರ ಕೋಟಿ ರು. ಬೇಕಾಗಬಹುದು ಎಂಬ ಲೆಕ್ಕಾಚಾರ ಸರ್ಕಾರದ್ದು.