ಬಿಜೆಪಿ, ಕಾಂಗ್ರೆಸ್ ಆಯ್ತು ಇದೀಗ ಮೂಡಿಗೆರೆ ಜೆಡಿಎಸ್‌ನಲ್ಲೂ ಬಂಡಾಯದ ಕಾವು!
ದಿನದಿಂದ ದಿನಕ್ಕೆ ಚುನಾವಣೆ ಸಮೀಪಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಮೀಸಲು ಕ್ಷೇತ್ರವಾದ ಮೂಡಿಗೆರೆ ತಾಲೂಕಿನಲ್ಲಿ ಬಿಜೆಪಿ-ಜೆಡಿಎಸ್-ಕಾಂಗ್ರೆಸ್ ಮೂರು ಪಕ್ಷದಲ್ಲೂ ಅಭ್ಯರ್ಥಿಗಳ ವಿರುದ್ಧ ಕಾರ್ಯಕರ್ತರು ಬಂಡಾಯ ಎದ್ದಿದ್ದು, ಅವರಿಗೆ ಟಿಕೆಟ್ ಬೇಡವೇ ಬೇಡ ಎಂದು ಮೇಲಿಂದ ಮೇಲೆ ಸಭೆ, ಹೋರಾಟಕ್ಕಿಳಿದಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು : ದಿನದಿಂದ ದಿನಕ್ಕೆ ಚುನಾವಣೆ ಸಮೀಪಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಮೀಸಲು ಕ್ಷೇತ್ರವಾದ ಮೂಡಿಗೆರೆ ತಾಲೂಕಿನಲ್ಲಿ ಬಿಜೆಪಿ-ಜೆಡಿಎಸ್-ಕಾಂಗ್ರೆಸ್ ಮೂರು ಪಕ್ಷದಲ್ಲೂ ಅಭ್ಯರ್ಥಿಗಳ ವಿರುದ್ಧ ಕಾರ್ಯಕರ್ತರು ಬಂಡಾಯ ಎದ್ದಿದ್ದು, ಅವರಿಗೆ ಟಿಕೆಟ್ ಬೇಡವೇ ಬೇಡ ಎಂದು ಮೇಲಿಂದ ಮೇಲೆ ಸಭೆ, ಹೋರಾಟಕ್ಕಿಳಿದಿದ್ದಾರೆ.
ಬಿಜೆಪಿಯ ಹಾಲಿ ಶಾಸಕ ಹಾಗೂ ಈ ಬಾರಿಯೂ ಟಿಕೆಟ್ ಅಭ್ಯರ್ಥಿ ಎಂ.ಪಿ.ಕುಮಾರಸ್ವಾಮಿ(MP Kumaraswamy) ವಿರುದ್ಧ ಕಾರ್ಯಕರ್ತರೇ ಬೀದಿಗಿಳಿದ್ದರು. ಇನ್ನು ಕಾಂಗ್ರೆಸ್ಸಿನ ಅಭ್ಯರ್ಥಿ ನಯನ ಮೋಟಮ್ಮ(Nayana Motamma) ವಿರುದ್ಧವೂ ಕಾರ್ಯಕರ್ತರು ತಾಲೂಕಿನ ಎಲ್ಲಾ ಹೋಬಳಿಗಳಲ್ಲೂ ಬಹಿರಂಗ ಸಭೆ ಮಾಡಿದ್ದರು. ಇದೀಗ ಜೆಡಿಎಸ್ ಸರದಿ ಎಂಬಂತೆ ಮೂಡಿಗೆರೆಯ ಜೆಡಿಎಸ್ ಘೋಷಿತ ಅಭ್ಯರ್ಥಿ ಹಾಗೂ ಮಾಜಿ ಸಚಿವ ಬಿ.ಬಿ.ನಿಂಗಯ್ಯ(BB Ningaiah) ವಿರುದ್ಧವೂ ಕಾರ್ಯಕರ್ತರು ಬಂಡಾಯ ಎದ್ದಿದ್ದಾರೆ.
ಬಂಡಾಯದ ಬಿಸಿ,ಮೂರು ಪಕ್ಷಗಳಿಗೆ ತಲೆನೋವಾದ ಮೂಡಿಗೆರೆ ಕ್ಷೇತ್ರ
ನಿಂಗಯ್ಯ ಬದಲಿಸಿ ಜೆಡುಎಸ್ ಉಳಿಸಿ ಅಭಿಯಾನ
ಬಿಜೆಪಿ-ಕಾಂಗ್ರೆಸ್ ಆಯ್ತು... ಈಗ ಮೂಡಿಗೆರೆ ಜೆಡಿಎಸ್ ನಲ್ಲೂ ಬಂಡಾಯದ ಗಾಳಿ ಎದ್ದಿದೆ.ಬಿ.ಬಿ.ನಿಂಗಯ್ಯ ವಿರುದ್ಧ ಬಹಿರಂಗ ಸಭೆ ನಡೆಸಿರುವ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಈ ಬಾರಿ ಬಿ.ಬಿ.ನಿಂಗಯ್ಯ ಅವರಿಗೆ ಟಿಕೆಟ್ ನೀಡಲು ವಿರೋಧ ವ್ಯಕ್ತಪಡಿಸಿದ್ದಾರೆ. ಮೂಡಿಗೆರೆ ತಾಲೂಕಿನ ಬಣಕಲ್‍ನಲ್ಲಿ ಬಿ.ಬಿ ನಿಂಗಯ್ಯ ವಿರೋಧಿ ಬಣದಿಂದ ಬಹಿರಂಗ ಸಭೆ ನಡೆದಿದ್ದು ಸಭೆಯಲ್ಲಿ ಈ ಬಾರಿ ಬಿ.ಬಿ. ನಿಂಗಯ್ಯಗೆ ಟಿಕೆಟ್ ಕೊಡುವುದು ಬೇಡವೇ ಬೇಡ ಎಂದು ಆಗ್ರಹಿಸಿದ್ದಾರೆ.
ಬಿ.ಬಿ ನಿಂಗಯ್ಯ ಅವರು ಕಾರ್ಯಕರ್ತರಿಗೆ ಸರಿಯಾಗಿ ಸ್ಪಂದಿಸುವುದಿಲ್ಲ. ಶಾಸಕರಾಗಿದ್ದ ಸಂದರ್ಭದಲ್ಲಿ ತಾಲ್ಲೂಕಿಗೆ ಯಾವುದೇ ಕೊಡುಗೆ ನೀಡಲಿಲ್ಲ. ಹೆಚ್.ಡಿ.ಕುಮಾರಸ್ವಾಮಿ ಅವರ ಬಳಿ ನಿಯೋಗ ಹೋಗಿ ಬಿ.ಬಿ.ನಿಂಗಯ್ಯ ಅವರಿಗೆ ಟಿಕೆಟ್ ನೀಡದಂತೆ ಮನವಿ ಮಾಡಿದ್ದರೂ ಮೊದಲ ಪಟ್ಟಿಯಲ್ಲೇ ಬಿ.ಬಿ. ನಿಂಗಯ್ಯ ಅವರ ಹೆಸರು ಸೇರಿಸಿದ್ದು ಸರಿಯಲ್ಲ. ಬಿ.ಬಿ. ನಿಂಗಯ್ಯ ಅವರನ್ನು ಹೊರತು ಪಡಿಸಿ ಬೇರೆ ಯಾರಿಗೆ ಟಿಕೆಟ್ ನೀಡಿದರೂ ಬೆಂಬಲ ನೀಡುತ್ತೇವೆ ಎಂದು ಜೆಡಿಎಸ್ ನಾಯಕರಿಗೆ ಆಗ್ರಹಿಸಿದ್ದಾರೆ.
ಮೊಬೈಲ್ ಸ್ವಿಚ್ ಆಫ್ ಮಾಡಿ ಪಲಾಯನ :
ಹಿಂದಿನ ಚುನಾವಣೆಗಳಲ್ಲಿ ಬಿ.ಬಿ. ನಿಂಗಯ್ಯ ಅವರು ಗ್ರಾಮ ಗ್ರಾಮಗಳಿಗೆ ಹೋಗಲಿಲ್ಲ. ತಾಲ್ಲೂಕಿನ ಪಂಚರತ್ನ ಯೋಜನೆ ರಥಯಾತ್ರೆ ಬಂದ ಸಂದರ್ಭದಲ್ಲಿ 5 ಹೋಬಳಿಗಳನ್ನು ಕಡೆಗಣಿಸಲಾಗಿದೆ. ಬಿ.ಬಿ.ನಿಂಗಯ್ಯ ಅವರಿಗೆ ಟಿಕೆಟ್ ನೀಡಿದರೇ ಮುಂದಿನ ದಿನಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಭೆ ನಡೆಸಿ ವಿರೋಧ ವ್ಯಕ್ತಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಬಿ.ಬಿ. ನಿಂಗಯ್ಯ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಫಾರಂ.ನಂ 53ರ ದಾಖಲೆಗಳನ್ನು ಬಡವರ್ಗಕ್ಕೆ ಮಾಡಿಕೊಟ್ಟಿಲ್ಲ. ಪಕ್ಷದ ಕಾರ್ಯಕರ್ತರಿಗೆ ಆದ್ಯತೆಯನ್ನು ನೀಡಲಿಲ್ಲ. ಇದರ ಬಗ್ಗೆ ಕಾರ್ಯಕರ್ತರಿಗೆ ಬೇಸರವಿದೆ. ಹಿಂದಿನ ಚುನಾವಣೆಯಲ್ಲೂ ಅಭ್ಯರ್ಥಿಯಾಗಿದ್ದ ಬಿ.ಬಿ. ನಿಂಗಯ್ಯ ಅವರು ಚುನಾವಣೆಗೆ ಮೂರು ದಿನ ಇದ್ದಾಗ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪಲಾಯನ ಮಾಡಿದರು. ಆ ಕಾರಣಕ್ಕಾಗಿಯೇ ಈ ಬಾರಿ ಜೆಡಿಎಸ್ ಪಕ್ಷದಲ್ಲಿ ಟಿಕೆಟ್ ನೀಡಲು ವಿರೋಧ ಮಾಡುತ್ತಿದ್ದೇವೆ ಎಂದಿದ್ದಾರೆ.
ಮೂಡಿಗೆರೆ ಶಾಸಕ ಕುಮಾರಸ್ವಾಮಿ ಎಡವಟ್ಟು, ಒಂದೇ ಊರಿಗೆ ಎರಡೆರಡು ಸೇತುವೆ ಭಾಗ್ಯ!
ನಿಂಗಯ್ಯಾಗೆ ಪಕ್ಷದ ಕಾರ್ಯಕರ್ತರೊಂದಿಗೆ ನಿಕಟವಾದ ಸಂಪರ್ಕವಿಲ್ಲದ. ಅಧಿಕಾರದಲ್ಲಿದ್ದಾಗ ಕ್ಷೇತ್ರದಲ್ಲಿ ಕೆಲಸ ಮಾಡದ ಬಿ.ಬಿ ನಿಂಗಯ್ಯಗೆ ಟಿಕೆಟ್ ನೀಡಿದರೆ ಸೋಲು ಕಟ್ಟಿಟ್ಟ ಬುತ್ತಿ ಎಂದಿದ್ದಾರೆ. ಮೂಡಿಗೆರೆಯ ಮೂರು ಪಕ್ಷದಲ್ಲೂ ಅದೇ ರಾಗ, ಅದೇ ಹಾಡು ಎಂಬಂತಾಗಿದ್ದು, ಮೂರು ಪಕ್ಷದ ಕಾರ್ಯಕರ್ತರು ಹೊಸ ಮುಖಕ್ಕಾಗಿ ಆಗ್ರಹಿಸಿದ್ದಾರೆ.ಸಭೆಯಲ್ಲಿ ಅಭ್ಯರ್ಥಿ ಬಿ.ಬಿ ನಿಂಗಯ್ಯ ಬದಲಿಗಾಗಿ ಸಹಿ ಸಂಗ್ರಹ ಮಾಡಲಾಯಿತು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಕೆಸುವಿನಮನೆ ಬೈರೇಗೌಡ, ಭಾರತಿ ಎಚ್.ಎಸ್.ಮಂಜುನಾಥ್, ಮಂಜುನಾಥ್ ಬೆಟ್ಟಗೆರೆ, ರಮೇಶ್ ಮುಂತಾದವರು ಇದ್ದರು.