ಮೂಡಿಗೆರೆ ಶಾಸಕ ಕುಮಾರಸ್ವಾಮಿ ಎಡವಟ್ಟು, ಒಂದೇ ಊರಿಗೆ ಎರಡೆರಡು ಸೇತುವೆ ಭಾಗ್ಯ!

 ಕಳಸ ತಾಲೂಕಿನ ಮುಂಡುಗದಮನೆ ಗ್ರಾಮಕ್ಕೆ ಎರಡೆರಡು ಸೇತುವೆಗಳ ಸದಾ ಒಂದಲ್ಲ ಒಂದು ವಿವಾದದ ಮೂಲಕ ಸುದ್ದಿಯಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಇದೀಗ ಮತ್ತೊಂದು ವಿವಾದದ ಮೂಲಕ ಸುದ್ದಿ ಆಗಿದ್ದಾರೆ.

Mudigere MLA Kumaraswamy stumbles, two bridges for same village gow

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಮಾ.19): ಸದಾ ಒಂದಲ್ಲ ಒಂದು ವಿವಾದದ ಮೂಲಕ ಸುದ್ದಿಯಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಇದೀಗ ಮತ್ತೊಂದು ವಿವಾದದ ಮೂಲಕ ಸುದ್ದಿ ಆಗಿದ್ದಾರೆ. ಅದು ಕೂಡ ಒಂದೇ ಗ್ರಾಮಕ್ಕೆ ಎರಡೆರಡು ಸೇತುವೆ ಭಾಗ್ಯವನ್ನು ನೀಡುವ ಮೂಲಕ  ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. 

ಒಂದೇ ಊರಿಗೆ ಡಬಲ್ ಸೇತುವೆ ಕಂಡು ಅಚ್ಚರಿಗೊಂಡ ಗ್ರಾಮಸ್ಥರು:
ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಮುಂಡುಗದಮನೆ ಗ್ರಾಮ 30 ಮನೆಗಳಿರೋ ಕುಗ್ರಾಮ. ಮಲೆನಾಡಲ್ಲಿ ಅಂತಹಾ ನೂರಾರು ಹಳ್ಳಿಗಳಿವೆ. ಆದ್ರೆ, ಇತಿಹಾದಲ್ಲಿ ಆ ಕುಗ್ರಾಮಕ್ಕೆ ಒಂದೇ ಒಂದು ಸೇತುವೆ ಭಾಗ್ಯವೂ ಇರಲಿಲ್ಲ. ಆದ್ರೀಗ, ಆ 30 ಮನೆಗಳಿಗೆ ಎರಡೆರಡು ಸೇತುವೆಗಳು. ದೂರನೂ ಏನಲ್ಲ. ಅಕ್ಕ-ಪಕ್ಕ. ಅದ್ಯಾಕೋ... ಏನೋ... ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಒಂದು ಸಣ್ಣ ಕುಗ್ರಾಮಕ್ಕೆ ಎರಡೆರಡು ಸೇತುವೆ ಮಾಡುವ ಆಸೆ ಬಂದ್ಬಿಟ್ಟಿದೆ. 38 ಲಕ್ಷದ ಸೇತುವೆ ಆಲ್‍ಮೋಸ್ಟ್ ಮುಗಿದಿದೆ.

ಆದ್ರೀಗ, ಅದೇ ಸೇತುವೆ ಪಕ್ಕ ಎರಡು ಕೋಟಿ ವೆಚ್ಚದ ಮತ್ತೊಂದು ಸೇತುವೆಗೆ ಸರ್ಕಾರ ಮುಂದಾಗಿದೆ. ಈ ಗ್ರಾಮಕ್ಕೆ ಇತಿಹಾಸದಲ್ಲಿ ಒಂದೇ  ಸೇತುವೆ ಇರಲಿಲ್ಲ. ಕಾಲು ಸಂಕದಲ್ಲಿ ಬದುಕುತ್ತಿದ್ದರು. ಹತ್ತಾರು ಬಾರಿ ಮನವಿ ಮಾಡಿದ್ದರು ಸರ್ಕಾರಕ್ಕೆ ಇವರ ಮೇಲೆ ಲವ್ ಬಂದಿರಲಿಲ್ಲ. ಇದೀಗ, ಸಿಕ್ಕಾಪಟ್ಟೆ ಪ್ರೀತಿ ಬಂದು ಅಕ್ಕಪಕ್ಕ ಎರಡೆರಡು ಸೇತುವೆ ಮಾಡ್ತಿದ್ದಾರೆ. ಏಕೆ ಅನ್ನೋದು ಮಾತ್ರ ಇನ್ನೂ ನಿಗೂಢ. ಸ್ಥಳೀಯರು ಸರ್ಕಾರ ಹಾಗೂ ಅಧಿಕಾರಿಗಳಿಗೆ ನಿಮಗೆ ತಲೆ ಸರಿ ಇದ್ಯಾ ಎಂದು ಪ್ರಶ್ನಿಸುತ್ತಿದ್ದಾರೆ.

ಸರ್ಕಾರದ ಹಣವನ್ನ ಏಕೆ ಹೀಗೆ ಪೋಲು ಮಾಡುತ್ತಿದ್ದಾರಾ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಅಸಾಮಧಾನ ಹೊರಹಾಕಿದ್ದಾರೆ. ಈ ಸೇತುವೆ ಸರಿ ಇಲ್ಲ ಅಂತ ಅಧಿಕಾರಿಗಳು ಸಮಾಜಾಯಿಷಿ ನೀಡುತ್ತಿದ್ದಾರಂತೆ. ಹಾಗಾದ್ರೆ, 38 ಲಕ್ಷ ಬಿಡುಗಡೆ ಮಾಡಿ, ಕಾಮಗಾರಿ ನಡೆಯುವ ವೇಳೆ ಏನು ಮಾಡುತ್ತಿದ್ರಿ ಎಂದು ಸ್ಥಳಿಯರು ಸರ್ಕಾರದ ಮೇಲೆ ಮುಗಿಬಿದ್ದಿದ್ದಾರೆ. 

ಸರ್ಕಾರದ ವಿರುದ್ಧ ಜನರ ಆಕ್ರೋಶ:
2019ರಲ್ಲಿ ಈ 38 ಲಕ್ಷದ ಸೇತುವೆಗೆ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಿದ್ದರು. ಎರಡು ಮಳೆಗಾಲದಲ್ಲಿ ಕೆಲಸ ನಿಂತು ಈಗ ಮುಗಿಯುವ ಹಂತಕ್ಕೆ ಬಂದಿದೆ. ಈ ಸೇತುವೆ ಮುಗಿಯುವ ಹಂತಕ್ಕೆ ಬರುತ್ತಿದ್ದಂತೆ ಅದೇ ಸೇತುವೆ ಪಕ್ಕ ಮತ್ತೊಂದು ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

Chikkamagaluru: ಸೇತುವೆ ಕಾಮಗಾರಿ ವಿಳಂಬ, ಸಾರ್ವಜನಿಕರಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ

ಈ ಸೇತುವೆ ಸರಿ ಇಲ್ಲ ಅಂದ್ರೆ ಅದನ್ನ ಕೆಡವುವುದೋ ಅಥವ ಇಂಜಿನಿಯರ್, ಕಂಟ್ರಾಕ್ಟರ್‍ಗಳಿಂದ ಹಣ ವಸೂಲಿ ಮಾಡುವುದು ಏನೋ ಮಾಡಬಹುದು. ಏನನ್ನೂ ಮಾಡದೆ ಮತ್ತೊಂದು ಸೇತುವೆ ಏಕೆ ಅಂತ ಕಳಸ ತಾಲೂಕಿನ ಜನ ಸರ್ಕಾರದ ವಿರುದ್ಧ ಕಿಡಿಕಾರ್ತಿದ್ದಾರೆ. ಸರ್ಕಾರದ ಹಣವನ್ನ ದುರ್ಬಳಕೆ ಮಾಡಿದ ಇಂಜಿನಿಯರ್ ಮಂಜುನಾಥ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಜನ ಆಗ್ರಹಿಸಿದ್ದಾರೆ. ಈ ಮಧ್ಯೆ ಅದು ಕಾಂಗ್ರೆಸ್ಸಿಗರು ಮಾಡಿದ ಸೇತುವೆ. ಅದಕ್ಕೆ ಅದು ಬೇಡ. ನಾವು ಮತ್ತೊಂದು ಮಾಡೋಣ ಎಂದು ಅಧಿಕಾರಿಗಳು ಹಾಗೂ ಶಾಸಕ ಕುಮಾರಸ್ವಾಮಿ ಕಮಿಷನ್ ಹಾಗೂ ಹೆಸರಿಗಾಗಿ ಮತ್ತೊಂದು ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ದಾರೆಂಬ ಗುಸು-ಗುಸು ಕಳಸದಲ್ಲಿ ಚಾಲ್ತಿಯಲ್ಲಿದೆ.

ನಿರ್ಮಾಣ ಹಂತದಲ್ಲಿದ್ದ ಸೇತುವೆ ದಿಢೀರ್ ಕುಸಿತ : ದೊಡ್ಡ ಅನಾಹುತದಿಂದ ಕಾರ್ಮಿಕರು ಜಸ್ಟ್ ಮಿಸ್‌..!

ಒಟ್ಟಾರೆ, ಕಾಫಿನಾಡ ಕಳಸ ತಾಲೂಕು ಅಪ್ಪಟ ಮಲೆನಾಡು. ಅಲ್ಲಿ ರಸ್ತೆ-ನೀರು-ರೋಡು-ಕರೆಂಟ್ ಇಲ್ಲದ ಹಲವು ಗ್ರಾಮಗಳಿವೆ. ಆ ಎಲ್ಲಾ ಗ್ರಾಮಗಳನ್ನ ಬಿಟ್ಟು ಇದೇ ಗ್ರಾಮಕ್ಕೆ ಏಕೆ ಅಕ್ಕ-ಪಕ್ಕ ಎರಡು ಸೇತುವೆ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಈ ಸೇತುವೆಯನ್ನ ಬೇರೆ ಗ್ರಾಮಕ್ಕೆ ಕೊಟ್ಟಿದ್ದಾರೆ ಅಲ್ಲಿನ ಜನಕ್ಕೂ ಅನುಕೂಲವಾಗುತ್ತಿತ್ತು. ಆದರೆ, ಅಧಿಕಾರಿಗಳು, ಜನಪ್ರತಿನಿಧಿಗಳ ಬೇಜಾವಾಬ್ದಾರಿತನಕ್ಕೆ ಸರ್ಕಾರದ ಹಣ ಬೇಕಾಬಿಟ್ಟಿ ಪೋಲಾಗ್ತಿದೆ. ಇದು 40 ಪರ್ಸೆಂಟ್ ಕಮಿಷನ್ ಸರ್ಕಾರದ ಕಮಿಷನ್ ಹೊಡೆಯುವ ಪ್ಲಾನ್ ಎಂದು ಜನ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ.

Latest Videos
Follow Us:
Download App:
  • android
  • ios