ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಬಳಸಿ ತಮ್ಮನ್ನು ಸಿಲುಕಿಸಲು ಸಿಎಂ ಹಾಗೂ ಗೃಹ ಸಚಿವರು ಹುನ್ನಾರ ನಡೆಸಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಸಿಂಡಿಕೇಟ್ನ ಈ ರಾಜಕೀಯ ಸಂಚಿನ ಬಗ್ಗೆ ಹೈ ತನಿಖೆ ನಡೆಸುವಂತೆ ಅವರು ಸವಾಲು ಹಾಕಿದ್ದಾರೆ.
ಬೆಂಗಳೂರು (ಅ.16): ‘ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಿದವರನ್ನು ಕರೆಸಿ ನನ್ನ ವಿರುದ್ಧ ನ್ಯಾಯಾಲಯದಲ್ಲಿ 164ರ ಅಡಿಯಲ್ಲಿ ಹೇಳಿಕೆ ನೀಡಿಸುವ ಮೂಲಕ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲು ಹುನ್ನಾರ ನಡೆಸಿದ್ದರು’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಗಂಭೀರವಾಗಿ ಆಪಾದಿಸಿದ್ದಾರೆ.
ಗುರುವಾರ ಪಕ್ಷದ ಕಚೇರಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹಾಲಿ ಸಿಎಂ ಮತ್ತು ಖಾಸಗಿ ಸುದ್ದಿವಾಹಿನಿಯ ಮುಖ್ಯಸ್ಥ ಹೂಡಿದ ಸಂಚಿಗೆ ಸಿದ್ದರಾಮಯ್ಯ ಬಲಿಯಾದರು. ಅವರ ಚಾರಿತ್ರ್ಯಹರಣ ಮಾಡಲು ರಾಜಕೀಯ ಸಂಚು ರೂಪಿಸಿದ ಡಿ.ಕೆ.ಶಿವಕುಮಾರ್ ಸಿಂಡಿಕೇಟಿನಲ್ಲಿದ್ದ ಎಲ್ಲರನ್ನೂ ಬಂಧಿಸಬೇಕು ಆಗ್ರಹಿಸಿದರು.
ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಸಿದ್ದರಾಮಯ್ಯ ಅವರಿಗೆ ತಾವು ನ್ಯಾಯಾಲಯದಿಂದ ತಡೆಯಾಜ್ಞೆ ಪಡೆಯಲು ಹೋಗಬೇಡಿ, ಧೈರ್ಯವಾಗಿ ಎದುರಿಸಿ ಎಂದು ನಾನು ಮನವಿ ಮಾಡಿದ್ದೆ. ಕೆಲ ದಿನಗಳ ಹಿಂದೆ ಸಿಎಂ ಆದೇಶ ಕೊಟ್ಟರು ಎಂಬ ಕಾರಣಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಸ್ಟಿಂಗ್ ಆಪರೇಷನ್ ತನಿಖೆಯನ್ನು ಚುರುಕು ಮಾಡಿದ್ದಾರೆ. ಅದರ ಭಾಗವಾಗಿ ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್ ಮಾಡಿದ ಅಸಲಿ ಅಪರಾಧಿಗಳನ್ನು ಕರೆಸಿ ನನ್ನ ವಿರುದ್ಧ ನ್ಯಾಯಾಲಯದಲ್ಲಿ ಹೇಳಿಕೆ ಮಾಡಿಸಲು ಹುನ್ನಾರ ನಡೆಸಿದ್ದರು ಎಂದು ಅವರು ಹೇಳಿದರು.
ನನ್ನ ಮೇಲೆಯೂ ಸ್ಟಿಂಗ್ ಹುನ್ನಾರ; ಆದ್ರೆ ನಾನು ರೇವಣ್ಣ ಅಲ್ಲ:
ನಾನೇನು ಎಚ್.ಡಿ. ರೇವಣ್ಣ ಅಲ್ಲ ಆತನ ಹಾಗೆ ಸುಲಭವಾಗಿ ಇವರ ಸಂಚಿಗೆ ಬಲಿ ಆಗುವುದಕ್ಕೆ. ಇವರಿಗೆ ಹೇಗೆ ಚೆಕ್ಮೇಟ್ ಇಡಬೇಕು ಎನ್ನುವುದು ನನಗೆ ಗೊತ್ತಿದೆ. ಅದು ತಿಳಿದೇ ಇವರು ಜೆಡಿಎಸ್ ಸಾಮಾಜಿಕ ಜಾಲತಾಣದ ಒಬ್ಬ ಹುಡುಗನನ್ನು ಕರೆದುಕೊಂಡು ಕಿರುಕುಳ ನೀಡಿದ್ದಾರೆ. ಇನ್ನೊಬ್ಬ ಹುಡುಗನ ಮನೆ ಬಳಿಗೆ ಹೋಗಿ ಗಲಾಟೆ ಮಾಡಿದ್ದಾರೆ. ಇದೆಲ್ಲವೂ ಗೃಹ ಸಚಿವರ ಅತ್ಯುತ್ಸಾಹದ ಫಲ ಎಂದು ಕುಮಾರಸ್ವಾಮಿ ಟೀಕಿಸಿದರು.
ಸ್ಟಿಂಗ್ ಆಪರೇಷನ್ ವಿಚಾರ ಆರಂಭಿಸಿದ್ದು ನಾನಲ್ಲ
ಸ್ಟಿಂಗ್ ಆಪರೇಷನ್ ವಿಚಾರ ಆರಂಭಿಸಿದ್ದು ನಾನಲ್ಲ. ಈ ವಿಷಯ ಸಂಪುಟದಲ್ಲಿ ಚರ್ಚೆಯಾಗಿತ್ತು. ಸಂಪುಟದ ಚರ್ಚೆಗಳು ರಹಸ್ಯವಾಗಿರಬೇಕಾದ ಸಂದರ್ಭದಲ್ಲಿ ಅದರ ಮಾಹಿತಿ ಮಾಧ್ಯಮಗಳಿಗೆ ಸೋರಿಕೆಯಾಗಿದ್ದು ಹೇಗೆ ಎಂಬುದು ಪ್ರಶ್ನೆ? ಮುಖ್ಯಮಂತ್ರಿಗಳು ತಮಗೆ ಬೇಕಾದವರಿಗೆ ಸ್ಟಿಂಗ್ ಆಪರೇಷನ್ ಫೈಲ್ನ ವಿಷಯವನ್ನು ಪೂರ್ವನಿಯೋಜಿತವಾಗಿ ಸೋರಿಕೆ ಮಾಡಿದರು ಎಂದು ಆರೋಪಿಸಿದರು.
ಅಂದು ನಾನು ಬೆಳಗ್ಗೆ 11 ಗಂಟೆಗೆ ಮಾಧ್ಯಮಗೋಷ್ಠಿ ಕರೆದು ನೈಸ್ ಅಕ್ರಮಗಳ ಕುರಿತು ಕೆಲ ದಾಖಲೆಗಳನ್ನು ಬಹಿರಂಗ ಮಾಡಲು ನಿರ್ಧಾರ ಮಾಡಿದ್ದೆ. ಆದರೆ, ಪ್ರಧಾನಿಗಳು ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದ ಸಂದರ್ಭ ಅದಾಗಿದ್ದರಿಂದ ನಾನು ನನ್ನ ಮಾಧ್ಯಮಗೋಷ್ಠಿಯನ್ನು ಹನ್ನೆರಡು ಗಂಟೆಗೆ ಮುಂದಕ್ಕೆ ಹಾಕಿದೆ. ಅದನ್ನೇ ಕಾದು ಕುಳಿತಿದ್ದ ಮುಖ್ಯಮಂತ್ರಿ ಸಿಂಡಿಕೇಟ್ ನನ್ನ ಮಾಧ್ಯಮಗೋಷ್ಠಿ ಆರಂಭಕ್ಕೆ ಕೆಲ ನಿಮಿಷಗಳ ಮೊದಲು ಸಂಪುಟದಲ್ಲಿ ಸ್ಟಿಂಗ್ ವಿಷಯ ಚರ್ಚೆಯಾಗಿದೆ ಎಂಬ ವಿಷಯವನ್ನು ಮಾಧ್ಯಮಗಳಲ್ಲಿ ತೇಲಿಬಿಟ್ಟಿತು. ಅದರ ಮೂಲಕ ಮಾಜಿ ಮುಖ್ಯಮಂತ್ರಿಗಳ ವಿರುದ್ಧ ನಡೆಸಿದ ಸ್ಟಿಂಗ್ ಸಂಚು ಕೂಡ ಚರ್ಚೆಗೆ ಬಂತು ಎಂದು ಹೇಳಿದರು.
ಸ್ಟಿಂಗ್ ಫೈಲ್ ಸಂಪುಟಕ್ಕೆ ಹೋಗಿದ್ದು ಏಕೆ?:
ಇಷ್ಟಕ್ಕೂ ಸ್ಟಿಂಗ್ ಫೈಲ್ ಅನ್ನು ಸಂಪುಟಕ್ಕೆ ತೆಗೆದುಕೊಂಡು ಹೋಗಿದ್ದು ಏಕೆ? ಅದರಲ್ಲಿ ಏನೇನು ವಿಷಯ ಇತ್ತು? ಎಂಬುದನ್ನು ಮುಖ್ಯಮಂತ್ರಿ ಜನತೆಗೆ ಹೇಳಬೇಕು. ಸಂಪುಟದಲ್ಲಿಯೇ ಸಚಿವರ ಗುಟ್ಟು ರಟ್ಟು ಮಾಡಿದ ವಿಷಯವನ್ನೇ ಮೀಡಿಯಾಗೆ ಬಿಟ್ಟು ಪಂಚಾಯಿತಿ ಮಾಡಿದ್ದು ಈ ಮುಖ್ಯಮಂತ್ರಿ. ಮುಖ್ಯಮಂತ್ರಿ ಸ್ಥಾನದಲ್ಲಿ ಕೂತಿರುವ ವ್ಯಕ್ತಿಗೆ ಸಚಿವರನ್ನು ಹೇಗೆ ನಡೆಸಿಕೊಳ್ಳಬೇಕು? ಸಂಪುಟ ಸಭೆಯ ಪಾವಿತ್ರ್ಯತೆ ಏನು? ಎಂಬುದು ಗೊತ್ತಿರಬೇಕು. ಈ ಮುಖ್ಯಮಂತ್ರಿಗೆ ಅಂತಹ ಯಾವುದೇ ಶಿಷ್ಟಾಚಾರ ನಿಯಮ ಬದ್ಧತೆಗಳು ಇಲ್ಲ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ತಾಕತ್ತಿದ್ರೆ ಹಾಲಿ ಜಡ್ಜ್ರಿಂದ ತನಿಖೆ ಮಾಡಿಸಿ:
ಸುಳ್ಳು ಪ್ರಕರಣಗಳು ಹಾಗೂ ಬೆದರಿಕೆಗಳಿಗೆ ನಾನು ಜಗ್ಗುವುದಿಲ್ಲ. ಮುಖ್ಯಮಂತ್ರಿ ಶಿವಕುಮಾರ್ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಾಕತ್ತಿದ್ದರೆ ರಾಜ್ಯದ ಹೈಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಸಿ. ನಿಮಗೆ ಯೋಗ್ಯತೆ ಇದ್ದರೆ ಈ ಕೆಲಸ ಮಾಡಿ. ನಾನು ಗಂಡಸ್ತನದಿಂದ ಮಾತನಾಡುತ್ತಿದ್ದೇನೆ. ನಿಮ್ಮ ತರಹ ಹೇಡಿ ಕೆಲಸ ಮಾಡುತ್ತಿಲ್ಲ ಎಂದು ಇದೇ ವೇಳೆ ಕುಮಾರಸ್ವಾಮಿ ಸವಾಲು ಎಸೆದರು.
ನಾನು ಎಲ್ಲವನ್ನೂ ನೇರವಾಗಿ ಹೇಳುತ್ತಿದ್ದೇನೆ. ನೇರವಾಗಿ ಪ್ರಶ್ನೆ ಮಾಡುತ್ತಿದ್ದೇನೆ. ನಿಮ್ಮ ಹಾಗೆ ಹೇಡಿಗಳಂತೆ ಹಿಂದಿನಿಂದ ಕುತಂತ್ರ ಮಾಡುತ್ತಿಲ್ಲ. ಸಿದ್ದರಾಮಯ್ಯ ಅವರಿಗೆ ಎಲ್ಲರೂ ಸೇರಿ ಬೆನ್ನಿಗೆ ಚೂರಿ ಹಾಕಿದರಲ್ಲ, ಆ ರೀತಿ ಎಲ್ಲರಿಗೂ ಮಾಡಲು ಸಾಧ್ಯವಿಲ್ಲ. ನಿಮ್ಮ ಪಾಪದ ಕೊಡ ತುಂಬಿದೆ. ಈ ಕಿರಾತಕರಿಗೆ ಪಾಠ ಕಲಿಸುವ ಸಮಯ ಹತ್ತಿರ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


