ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿರುವ ಕಾಂಗ್ರೆಸ್‌ಗೆ ಎಂಎಲ್‌ಸಿ ಸಿಟಿ ರವಿ ಬಹಿರಂಗ ಸವಾಲು ಹಾಕಿದ್ದಾರೆ. 99 ಲಕ್ಷ ಎಎಸ್‌ಡಿಡಿ ಮತಗಳ ಪೈಕಿ ಕನಿಷ್ಠ 9 ಲಕ್ಷ ಜನರನ್ನಾದರೂ ಕರೆತಂದು ಸಾಬೀತುಪಡಿಸುವಂತೆ ಸವಾಲು ಹಾಕಿದ್ದಾರೆ.

ಚಿಕ್ಕಮಗಳೂರು (ಅ.28): ಮತದಾರರ ಪಟ್ಟಿ ಪರಿಷ್ಕರಣೆ(SIR) ಹೆಸರಲ್ಲಿ ಕೇಂದ್ರ ಸರ್ಕಾರ ಮತಗಳ್ಳತನ ಮಾಡಿದೆ ಎಂದು ಆರೋಪಿಸಿ ನವೆಂಬರ್ 1 ರಂದು ಕಾಂಗ್ರೆಸ್ ಪ್ರತಿಭಟನೆಗೆ ಕರೆ ಕೊಟ್ಟಿರುವ ಬೆನ್ನಲ್ಲೇ ಎಂಎಲ್‌ಸಿ ಸಿಟಿ ರವಿ ಪ್ರತಿಕ್ರಿಯಿಸಿದ್ದು, ಎಸ್‌ಐಆರ್ ವಿಚಾರದಲ್ಲಿ ಜ್ಞಾನೇಶ್ ರಾಜೀನಾಮೆ ಕೇಳುವ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ.

ಎಸ್‌ಐಆರ್ ವಿಚಾರದಲ್ಲಿ ಕಾಂಗ್ರೆಸ್‌ಗೆ ಸಿಟಿ ರವಿ ಸವಾಲೇನು?

ಎಸ್‌ಐಆರ್‌ನಲ್ಲಿ ಕೇಂದ್ರ ಸರ್ಕಾರ ಅನ್ಯಾಯ, ಅಕ್ರಮ ಮಾಡಿದೆ ಎಂದು ಬೊಬ್ಬೆ ಹೊಡೆಯುವ ಕಾಂಗ್ರೆಸ್, ತನ್ನದೇ ಆಡಳಿತವಿರುವ ಕರ್ನಾಟಕದಲ್ಲಿ ಬರೋಬ್ಬರಿ 99 ಲಕ್ಷ ಮತಗಳು ಎಎಸ್‌ಡಿಡಿ ಆಗಿವೆ. ಹಾಗಾದ್ರೆ ಅಷ್ಟು ಜನರನ್ನು ಕರೆತಂದು ಅರ್ಜಿ ಹಾಕಿಸಲಿ. 99 ಲಕ್ಷ ಬೇಡ, ನಾವು ಸತ್ತಿಲ್ಲ, ಡಬಲ್ ವೋಟ್ ಇಲ್ಲ, ಊರು ಬಿಟ್ಟಿಲ್ಲ ಅಂತಾ ಕನಿಷ್ಠ 9 ಲಕ್ಷ ಜನರನ್ನು ಕರೆತಂದು ಅರ್ಜಿ ಹಾಕಿಸಲಿ. ಆಗ ನಿಮ್ಮ ಆರೋಪದಲ್ಲಿ ಸತ್ಯವಿದೆ ಅಂತಾ ಜನ ನಂಬುತ್ತಾರೆ. ಅದು ಸಾಧ್ಯವಾಗದಿದ್ದರೆ ನೀವು ಸುಳ್ಳುಬುರುಕರು, ವಂಚಕರು ಎಂದು ಜನ ತೀರ್ಮಾನಿಸುತ್ತಾರೆ ಎಂದು ಎಸ್‌ಐಆರ್ ವಿರುದ್ಧ ಆರೋಪಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಸಿಟಿ ರವಿ ಓಪನ್ ಚಾಲೆಂಜನ್ ಮಾಡಿದರು.

ಪ್ರಧಾನಿ ಮೋದಿಗಿರೋ ಜನಬೆಂಬಲ ಕಂಡು ಕಾಂಗ್ರೆಸ್‌ಗೆ ಹೊಟ್ಟೆ ಉರಿ

ಎಸ್‌ಐಆರ್ ವಿರೋಧಿಸುವ ಕಾಂಗ್ರೆಸ್ ಪಕ್ಷಕ್ಕೆ ಅಸಲಿಗೆ ಅದರ ಹೊಟ್ಟೆ ಉರಿ ಎಸ್‌ಐಆರ್ ಮೇಲಿನದ್ದಲ್ಲ, ದೇಶದ ಜನರು ಪ್ರಧಾನಿ ಮೋದಿಯವನ್ನ ಬೆಂಬಲಿಸುತ್ತಿರುವ ರೀತಿ, ಪ್ರೀತಿಸುತ್ತಿರುವ ಪರಿ ಈ ಕಾಂಗ್ರೆಸ್ ಪಕ್ಷಕ್ಕೆ ಸಹಿಸಿಕೊಳ್ಳಲಿಕ್ಕೆ ಆಗುತ್ತಿಲ್ಲ. ಹೊಟ್ಟೆ ಉರಿ ಶುರುವಾಗಿದೆ. ಪ್ರಧಾನಿ ಮೋದಿಯವರನ್ನ ವಿರೋಧಿಸಲು ಈ ರೀತಿ ಎಸ್‌ಐಆರ್‌ ಬಗ್ಗೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ನಿಮಗಿರೋ ಅರ್ಹತೆ ಏನು?(ರಾಹುಲ್ ಗಾಂಧಿ) ನಮ್ಮ ಮುತ್ತಜ್ಜ, ಅಜ್ಜಿ ಪ್ರಧಾನಿ ಆಗಿದ್ರು, ನಾನು ಹುಟ್ಟಿರೋದೇ ಪ್ರಧಾನಿ ಆಗೋಕೆ ಅನ್ನೋದು ಇದೇ ತಾನೇ ನಿಮ್ಮ ಅರ್ಹತೆ? ಇದು ಪ್ರಜಾಪ್ರಭುತ್ವ ದೇಶ. ತಾತ ಪ್ರಧಾನಿ ಆಗಿದ್ದ, ತಂದೆ ಪ್ರಧಾನಿ ಆಗಿದ್ದ ಅನ್ನೋದೇ ನಿಮಗೆ ಪ್ರಧಾನಿ ಆಗಲು ಅರ್ಹತೆ ಎಂದು ಭಾವಿಸಿದ್ದೀರಾ? ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಿಟಿ ರವಿ ಅವರು, ಸುಮ್ಮನೆ ಸೋಲಿನಿಂದ ಹತಾಶೆಯಾಗಿ ಮಾತನಾಡಬೇಡಿ ಡಿಕೆಶಿಯವರೇ ಕನಿಷ್ಠ ಒಂಭತ್ತು ಲಕ್ಷ ಜನರನ್ನಾದರೂ ಕರೆತಂದು ತೋರಿಸಿ, ಆಗ ಚುನಾವಣಾ ಆಯೋಗದ ಕಚೇರಿ ಮುಂದೆ ಧರಣಿ ಮಾಡಿದ್ದಕ್ಕೆ ಸಾರ್ಥಕವಾಗುತ್ತದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ ವಿರುದ್ಧವೂ ಹರಿಹಾಯ್ದರು.