ರಾಜ್ಯದಲ್ಲಿ ಜೆಡಿಎಸ್ ಶಾಸಕರಿಗೆ ಹನಿಟ್ರ್ಯಾಪ್ ಭೀತಿ ಎದುರಾಗಿದ್ದು, ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ ಎಂದು ಮಾಜಿ ಶಾಸಕ ಮಂಜುನಾಥ್ ಆರೋಪಿಸಿದ್ದಾರೆ. ತಮ್ಮ ತೇಜೋವಧೆ ತಡೆಯಲು ಮತ್ತು ಸುದ್ದಿ ವಾಹಿನಿಗಳಲ್ಲಿ ವಿಡಿಯೋ ಪ್ರಸಾರ ಮಾಡದಂತೆ ನಿರ್ಬಂಧಕಾಜ್ಞೆ ಕೋರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಬೆಂಗಳೂರು (ಅ.28): ರಾಜ್ಯ ರಾಜಕೀಯ ವಲಯದಲ್ಲಿ ಮತ್ತೊಂದು ಹನಿಟ್ರ್ಯಾಪ್ (Honeytrap) ಬಾಂಬ್ ಸಿಡಿದಿದ್ದು, ಜೆಡಿಎಸ್ ಶಾಸಕರಿಗೆ ಹನಿಟ್ರ್ಯಾಪ್ ಭೀತಿ ಎದುರಾಗಿದೆ. ತಮ್ಮ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ಚಿತ್ರೀಕರಿಸಿ, ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ಈ ಕುರಿತು ಖಾಸಗಿ ಸುದ್ದಿ ವಾಹಿನಿಗಳ ವಿರುದ್ಧ ನಿರ್ಬಂಧಕಾಜ್ಞೆ (Injunction Order) ಕೋರಿ ಮಾಗಡಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ಎ. ಮಂಜುನಾಥ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ಈ ಬೆಳವಣಿಗೆಯು ರಾಮನಗರ ಜಿಲ್ಲೆ ಸೇರಿದಂತೆ ರಾಜ್ಯ ರಾಜಕೀಯ ಅಂಗಳದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.

ಮಹಿಳೆಯನ್ನು ಬಿಟ್ಟು ಖಾಸಗಿ ವಿಡಿಯೋ ರೆಕಾರ್ಡ್ ಆರೋಪ!

ಹೈಕೋರ್ಟ್‌ಗೆ ಸಲ್ಲಿಸಲಾದ ರಿಟ್ ಅರ್ಜಿಯಲ್ಲಿ ಮಾಜಿ ಶಾಸಕ ಎ.ಮಂಜುನಾಥ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ವ್ಯವಸ್ಥಿತ ಸಂಚಿನ ಭಾಗವಾಗಿ ಮಹಿಳೆಯೊಬ್ಬರನ್ನು ತಮ್ಮ ಸಂಪರ್ಕಕ್ಕೆ ತಂದು, ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗಿದೆ. ಈಗ ಆ ಆಕ್ಷೇಪಾರ್ಹ ಹಾಗೂ ಖಾಸಗಿ ದೃಶ್ಯಗಳನ್ನು ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲೇನಿದೆ?

ತಮ್ಮ ತೇಜೋವಧೆ ಮಾಡುವ ದುರುದ್ದೇಶದಿಂದ ಈ ಹನಿಟ್ರ್ಯಾಪ್ ಜಾಲ ಬೀಸಲಾಗಿದೆ ಎಂದು ಆತಂಕ ವ್ಯಕ್ತಪಡಿಸಿರುವ ಎ. ಮಂಜುನಾಥ್ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಯಾವುದೇ ಖಾಸಗಿ ಸುದ್ದಿ ವಾಹಿನಿಗಳು (TV Channels), ವೆಬ್‌ಸೈಟ್‌ಗಳು ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಘನತೆಗೆ ಧಕ್ಕೆ ತರುವಂತಹ ಖಾಸಗಿ ವಿಡಿಯೋ ಅಥವಾ ಸುದ್ದಿಗಳನ್ನು ಪ್ರಸಾರ ಮಾಡದಂತೆ ತುರ್ತು ಮಧ್ಯಂತರ ನಿರ್ಬಂಧಕಾಜ್ಞೆ ವಿಧಿಸಬೇಕು. ಸಂವಿಧಾನಬದ್ಧವಾಗಿ ಪ್ರತಿಯೊಬ್ಬ ನಾಗರಿಕನಿಗೂ ಇರುವ ಖಾಸಗಿತನದ ಹಕ್ಕನ್ನು (Right to Privacy) ರಕ್ಷಿಸಬೇಕು ಮತ್ತು ಬ್ಲ್ಯಾಕ್‌ಮೇಲ್ ತಂತ್ರಕ್ಕೆ ಕಡಿವಾಣ ಹಾಕಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ:

2018ರ ಸಾರ್ವಜನಿಕ ಚುನಾವಣೆಯಲ್ಲಿ ಮಾಗಡಿ ಕ್ಷೇತ್ರದಿಂದ ಜೆಡಿಎಸ್ ಶಾಸಕರಾಗಿ ಆಯ್ಕೆಯಾಗಿದ್ದ ಎ. ಮಂಜುನಾಥ್, ಆ ಬಳಿಕ ಕಾಂಗ್ರೆಸ್ ಸೇರ್ಪಡೆಗೊಂಡು ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇತ್ತೀಚೆಗೆ ಪುನಃ ಜೆಡಿಎಸ್ ಪಕ್ಷಕ್ಕೆ ಮರಳಿದ್ದ ಪ್ರಭಾವಿ ನಾಯಕರಾಗಿದ್ದಾರೆ.

ರಾಜ್ಯದಲ್ಲಿ ಈ ಹಿಂದೆ ಹಲವು ಜನಪ್ರತಿನಿಧಿಗಳು ಸಿಡಿ ಹಾಗೂ ಹನಿಟ್ರ್ಯಾಪ್ ಪ್ರಕರಣಗಳಲ್ಲಿ ಸಿಲುಕಿ ಮುಜುಗರಕ್ಕೀಡಾಗಿದ್ದರು. ಈಗ ಮಾಜಿ ಶಾಸಕರೊಬ್ಬರು ಬಹಿರಂಗವಾಗಿಯೇ ಕೋರ್ಟ್ ಮೆಟ್ಟಿಲೇರಿರುವುದು ರಾಜಕೀಯ ಪಡಸಾಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ರಿಟ್ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಯಾವಾಗ ಕೈಗೆತ್ತಿಕೊಳ್ಳಲಿದೆ ಮತ್ತು ನ್ಯಾಯಾಲಯ ನೀಡಲಿರುವ ಆದೇಶವೇನು ಎಂಬುದು ತೀವ್ರ ಕುತೂಹಲ ಮೂಡಿಸಿದೆ.