Asianet Suvarna News Asianet Suvarna News

ಪರಿಷತ್‌ನಲ್ಲಿ ಪಾಸಾಗದ ಎಪಿಎಂಸಿ ವಿಧೇಯಕ ಸದನ ಸಮಿತಿ ಹೆಗಲಿಗೆ: ಮಸೂದೆಗೆ ಬ್ರೇಕ್‌

ವಿಧಾನಸಭೆಯಲ್ಲಿ ಅಂಗೀಕೃತವಾದ ‘ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ವಿಧೇಯಕ 2023’ ಅನ್ನು ಮೇಲ್ಮನೆಯಲ್ಲಿ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮತದಾನದ ಮೂಲಕ ಶಾಸನ ಪರಿಶೀಲನಾ ಸಮಿತಿಗೆ ಒಪ್ಪಿಸಲು ನಿರ್ಧರಿಸಲಾಯಿತು.

A setback for the Karnataka Congress govt as it seeks approval for the APMC amendment bill gvd
Author
First Published Jul 19, 2023, 7:23 AM IST

ವಿಧಾನ ಪರಿಷತ್ತು (ಜು.19): ವಿಧಾನಸಭೆಯಲ್ಲಿ ಅಂಗೀಕೃತವಾದ ‘ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ವಿಧೇಯಕ 2023’ ಅನ್ನು ಮೇಲ್ಮನೆಯಲ್ಲಿ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮತದಾನದ ಮೂಲಕ ಶಾಸನ ಪರಿಶೀಲನಾ ಸಮಿತಿಗೆ ಒಪ್ಪಿಸಲು ನಿರ್ಧರಿಸಲಾಯಿತು. ಇದರಿಂದಾಗಿ, ಕೆಳಮನೆಯಲ್ಲಿ ವಿಧೇಯಕ ಅಂಗೀಕಾರ ಪಡೆದುಕೊಂಡ ಖುಷಿಯಲ್ಲಿದ್ದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾದಂತಾಗಿದೆ. ಬುಧವಾರ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್‌.ಪಾಟೀಲ್‌ ಅವರು, ವಿಧೇಯಕ ಅಂಗೀಕರಿಸುವಂತೆ ಪ್ರಸ್ತಾವನೆಯನ್ನು ಸದನದಲ್ಲಿ ಮಂಡಿಸಿದರು. 

ಮಧ್ಯಾಹ್ನದ ವಿರಾಮದ ನಂತರ ವಿಧೇಯಕದ ಕುರಿತು ಸುಮಾರು 3 ಗಂಟೆಗಳ ಸುದೀರ್ಘ ಚರ್ಚೆ ನಡೆಯಿತು. ಆ ನಂತರ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಶಾಸನ ಪರಿಶೀಲನಾ ಸಮಿತಿಗೆ ವಹಿಸಲು ಪಟ್ಟು ಹಿಡಿದರು. ಸಚಿವ ಎಚ್‌.ಕೆ. ಪಾಟೀಲ, ಸುದೀರ್ಘ ಚರ್ಚೆಯ ನಂತರವೂ ಶಾಸನ ಪರಿಶೀಲನಾ ಸಮಿತಿಗೆ ಒಪ್ಪಿಸಲು ಬರುವುದಿಲ್ಲ. ವಿಧೇಯಕ ಮಂಡನೆಯ ವೇಳೆಯೇ ಈ ಬಗ್ಗೆ ಪ್ರಸ್ತಾಪಿಸಬೇಕಿತ್ತು. ಈಗ ಅದು ಸಾಧ್ಯವಿಲ್ಲ ಎಂದರು. ಇದೇ ಸಂದರ್ಭದಲ್ಲಿ ಬಿಜೆಪಿ ಸದಸ್ಯ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, ಶಾಸನ ಪರಿಶೀಲನಾ ಸಮಿತಿಗೆ ಒಪ್ಪಿಸಲು ಎಲ್ಲ ಅವಕಾಶಗಳು ಇವೆ ಎಂದು ನಿಯಮಾವಳಿ ಉಲ್ಲೇಖಿಸಿದರು.

ಸಿದ್ದರಾಮಯ್ಯಗೆ ಭ್ರಷ್ಟಾಚಾರದಲ್ಲಿ ಸಿಲುಕಿರುವ ಭಯ: ಬೊಮ್ಮಾಯಿ

ಆಗ ಸಭಾಪತಿ ಬಸವರಾಜ ಹೊರಟ್ಟಿ ಅವರು, ವಿಧೇಯಕವನ್ನು ಶಾಸನ ಪರಿಶೀಲನಾ ಸಮಿತಿಗೆ ಒಪ್ಪಿಸುವ ನಿಟ್ಟಿನಲ್ಲಿ ಮತದಾನ ಪ್ರಕ್ರಿಯೆ ಆರಂಭಿಸಿದರು. ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ಕುಳಿತ ಆಸನಗಳಲ್ಲೇ ಸಾಲು, ಸಾಲಾಗಿ ಶಾಸಕರ ಪರ-ವಿರೋಧ ಹಾಜರಾತಿ ಪಡೆಯಲಾಯಿತು. ಶಾಸನ ಪರಿಶೀಲನಾ ಸಮಿತಿಗೆ ಒಪ್ಪಿಸುವ ಪರವಾಗಿ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಸೇರಿ 31 ಶಾಸಕರು, ವಿರುದ್ಧವಾಗಿ ಕಾಂಗ್ರೆಸ್‌ ಸದಸ್ಯರು ಮತ್ತು ಜೆಡಿಎಸ್‌ನ ಮರಿತಿಬ್ಬೇಗೌಡ ಅವರು ಒಳಗೊಂಡಂತೆ ಒಟ್ಟು 21 ಶಾಸಕರು ಮತ ಚಲಾಯಿಸಿದರು. ವಿರೋಧ ಪಕ್ಷಗಳ ಸದಸ್ಯರ ಸಂಖ್ಯೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ವಿಧೇಯಕವನ್ನು ಶಾಸನ ಪರಿಶೀಲನಾ ಸಮಿತಿಗೆ ವಹಿಸಲು ನಿರ್ಧರಿಸಲಾಯಿತು.

ಆತ್ಮಸಾಕ್ಷಿಯ ಪ್ರತಿಧ್ವನಿ: ಎಪಿಎಂಸಿ ತಿದ್ದುಪಡಿ ವಿಧೇಯಕದ ಚರ್ಚೆಯ ಸಂದರ್ಭದಲ್ಲಿ ‘ಆತ್ಮಸಾಕ್ಷಿ’ ಪ್ರತಿಧ್ವನಿಸಿದ್ದು ವಿಶೇಷ. ಆರಂಭದಲ್ಲಿ ನಾರಾಯಣಸ್ವಾಮಿ ಸಚಿವ ಶಿವಾನಂದ ಪಾಟೀಲರಿಗೆ ನಿಜವಾಗಿಯೂ ಈ ಕಾಯ್ದೆ ಮಂಡಿಸಲು ಆತ್ಮಸಾಕ್ಷಿ ಒಪ್ಪುತ್ತಿಲ್ಲ. ಆದರೂ ಒತ್ತಡಕ್ಕೆ ಮಣಿದು ವಿಧೇಯಕ ಮಂಡಿಸುತ್ತಿದ್ದಾರೆ ಎಂದು ಕೆಣಕಿದರು. ಇದಕ್ಕೆ ಉತ್ತರ ನೀಡುವ ಸಂದರ್ಭದಲ್ಲಿ ಸಚಿವ ಶಿವಾನಂದ ಪಾಟೀಲ ಅವರು, ಈ ಹಿಂದೆ ಕಾಯ್ದೆಯ ಪರವಾಗಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಿಲುವು ಈಗ ಏಕೆ ಬದಲಾಯಿತೋ ಗೊತ್ತಿಲ್ಲ. ಹಾಗೆಯೇ ಈ ಹಿಂದೆ ಚುಕ್ಕೆ ಗುರುತಿನ ಪ್ರಶ್ನೆ ಕೇಳಿದ ಸದಸ್ಯ ಶರವಣ ಅವರು ಎಪಿಎಂಸಿ ವ್ಯವಸ್ಥೆ ಪರವಾಗಿ ಮತ ಹಾಕುವೆ ಎಂದಿದ್ದರು. ಅವರು ತಮ್ಮ ಆತ್ಮಸಾಕ್ಷಿ ಕೇಳಿಕೊಳ್ಳಲಿ. ಭೋಜೆಗೌಡರಿಗೂ ಆತ್ಮಸಾಕ್ಷಿಗನುಗುಣವಾಗಿ ಮತ ಹಾಕಲು ಬಿಡಿ ಎಂದು ತಿರುಗೇಟು ನೀಡಿದರು.

ಆರ್‌ಎಸ್‌ಎಸ್‌ ಸಂಸ್ಥೆಗೆ ಜಮೀನು ಮಂಜೂರಿಗೆ ತಡೆ: ಬೊಮ್ಮಾಯಿ ಆಕ್ರೋಶ

ಕಾಯ್ದೆ ಪರ ಮತ ಚಲಾಯಿಸಿದ ಜೆಡಿಎಸ್‌ ಶಾಸಕ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಸೇರಿಸಲಾಗಿದ್ದ ಅಂಶಗಳನ್ನು ರದ್ದುಪಡಿಸಲು ರೂಪಿಸಿರುವ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ವಿಧೇಯಕ 2023 ಪರವಾಗಿ ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಮತ ಚಲಾಯಿಸಿದ್ದು ವಿಶೇಷ. ಸದನ ಪರಿಶೀಲನಾ ಸಮಿತಿಗೆ ವಿಧೇಯಕ ನೀಡುವಂತೆ ಬಿಜೆಪಿ ಸದಸ್ಯರ ಆಗ್ರಹಕ್ಕೆ ಜೆಡಿಎಸ್‌ನ ಎಲ್ಲ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಆದರೆ, ಜೆಡಿಎಸ್‌ನ ಮರಿತಿಬ್ಬೇಗೌಡ ಅವರು ಮಾತ್ರ ಎಪಿಎಂಸಿ ಕಾಯ್ದೆ ರದ್ದುಪಡಿಸುವ ತಿದ್ದುಪಡಿ ವಿಧೇಯಕ ಪರ ಮತ ಚಲಾಯಿಸಿದರು.

Follow Us:
Download App:
  • android
  • ios