ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಯ ಕಾಂಗ್ರೆಸ್ ಟಿಕೆಟ್ ಹಂಚಿಕೆ ಕಗ್ಗಂಟಾಗಿದೆ. ಸಿಎಂ ಸಿದ್ದರಾಮಯ್ಯ ಅಲ್ಪಸಂಖ್ಯಾತ ಅಭ್ಯರ್ಥಿಗೆ ಪಟ್ಟು ಹಿಡಿದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಶಾಮನೂರು ಕುಟುಂಬದ ಸಮರ್ಥ್ ಪರ ನಿಂತಿದ್ದಾರೆ. ಈ ಹಗ್ಗಜಗ್ಗಾಟದಿಂದಾಗಿ ಪಕ್ಷದಲ್ಲಿ ಗೊಂದಲ ಸೃಷ್ಟಿಯಾಗಿದೆ.
ಬೆಂಗಳೂರು (ಮಾ.20): ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವ ಕುತೂಹಲ ಈಗ ತುತ್ತತುದಿಗೆ ತಲುಪಿದೆ. ಒಂದು ಕಡೆ ಶಾಮನೂರು ಕುಟುಂಬದ ಕುಡಿ ಸಮರ್ಥ ಶಾಮನೂರು ಈಗಾಗಲೇ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದರೆ, ಇನ್ನೊಂದೆಡೆ ಮುಸ್ಲಿಂ ಮುಖಂಡ ಸಾದಿಕ ಪೈಲ್ವಾನ್ ಕೂಡ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಆದರೆ, ಇತ್ತ ಬೆಂಗಳೂರಿನಲ್ಲಿ ಟಿಕೆಟ್ ಹಂಚಿಕೆಯ ಪಂಚಾಯಿತಿ ಮಾತ್ರ ಇನ್ನೂ ಮುಗಿದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವಿನ ಭಿನ್ನಾಭಿಪ್ರಾಯದಿಂದಾಗಿ ದಾವಣಗೆರೆ ಟಿಕೆಟ್ ಕಗ್ಗಂಟಾಗಿ ಉಳಿದಿದೆ.
ಸಿದ್ಧರಾಮಯ್ಯ v/s ಡಿ.ಕೆ. ಶಿವಕುಮಾರ್:
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತಗಳು ನಿರ್ಣಾಯಕವಾಗಿರುವುದರಿಂದ, ಈ ಬಾರಿ ಅಲ್ಪಸಂಖ್ಯಾತರಿಗೇ ಟಿಕೆಟ್ ನೀಡಬೇಕು ಎನ್ನುವುದು ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಬಲವಾದ ಇಚ್ಛೆಯಾಗಿದೆ. ಆದರೆ, ಇದಕ್ಕೆ ಡಿ.ಕೆ. ಶಿವಕುಮಾರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ದಶಕಗಳಿಂದ ಪಕ್ಷವನ್ನು ಕಟ್ಟಿ ಬೆಳೆಸಿದ ಶಾಮನೂರು ಕುಟುಂಬಕ್ಕೆ (ಸಮರ್ಥ್ ಮಲ್ಲಿಕಾರ್ಜುನ) ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಸಮರ್ಥ್ ಪರ ಈಶ್ವರ್ ಖಂಡ್ರೆ ಲಾಬಿ:
ಈ ನಡುವೆ ಸಚಿವ ಈಶ್ವರ್ ಖಂಡ್ರೆ ಅವರು ಸಮರ್ಥ್ ಶಾಮನೂರು ಪರವಾಗಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ. ವಿಮಾನ ನಿಲ್ದಾಣದಿಂದ ಸುರ್ಜೇವಾಲ ಅವರ ಜೊತೆಯಲ್ಲೇ ಕಾರಿನಲ್ಲಿ ಆಗಮಿಸಿದ ಖಂಡ್ರೆ, ಸುಮಾರು 45 ನಿಮಿಷಗಳ ಕಾಲ ಸಮರ್ಥ್ ಪರವಾಗಿ ವಕಾಲತ್ತು ವಹಿಸಿದರು. 'ದಾವಣಗೆರೆಯಲ್ಲಿ ಶಾಮನೂರು ಕುಟುಂಬದ ಪ್ರಭಾವ ಹೆಚ್ಚಿದೆ, ಸಮರ್ಥ್‌ಗೆ ಟಿಕೆಟ್ ನೀಡಿದರೆ ಗೆಲುವು ಸುಲಭ' ಎಂದು ಸುರ್ಜೇವಾಲ ಮನವೊಲಿಸಲು ಪ್ರಯತ್ನಿಸಿದರು. ಇದರ ಬೆನ್ನಲ್ಲೇ ಸಿಎಂ, ಡಿಸಿಎಂ ಮತ್ತು ಸುರ್ಜೇವಾಲ ನಡುವೆ ಸುದೀರ್ಘ ಚರ್ಚೆ ನಡೆದಿದ್ದು, ಸಿದ್ದರಾಮಯ್ಯ ಅವರು ಯಾವುದೇ ಅಂತಿಮ ತೀರ್ಮಾನ ಕೈಗೊಳ್ಳದೆ ಸಭೆಯಿಂದ ನಿರ್ಗಮಿಸಿದ್ದಾರೆ.
ಗೊಂದಲದಲ್ಲಿ ರಾಜ್ಯ ನಾಯಕರು:
ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ, 'ನಾಳೆ ನಮ್ಮ ಅಭ್ಯರ್ಥಿಗಳ ಘೋಷಣೆ ಆಗಬಹುದು. ಸಮರ್ಥ್ ನಾಮಪತ್ರ ಸಲ್ಲಿಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ' ಎಂದು ಹೇಳುವ ಮೂಲಕ ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಇತ್ತ ಸುರ್ಜೇವಾಲ ಅವರು, 'ಕಾಂಗ್ರೆಸ್‌ನಲ್ಲಿ ಪ್ರತಿಯೊಬ್ಬರಿಗೂ ಆಸೆ ಇರುವುದು ಸಹಜ. ಹೈಕಮಾಂಡ್ ಎಲ್ಲರಿಗೂ ನ್ಯಾಯ ಒದಗಿಸುತ್ತದೆ. ನಾವು ಉಪಚುನಾವಣೆಯನ್ನು ಗೆಲ್ಲುತ್ತೇವೆ' ಎಂದು ರಾಜತಾಂತ್ರಿಕ ಉತ್ತರ ನೀಡಿದ್ದಾರೆ.
ಈಗಾಗಲೇ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಿಸಿ ಒಗ್ಗಟ್ಟು ಪ್ರದರ್ಶಿಸುತ್ತಿದ್ದರೆ, ಕಾಂಗ್ರೆಸ್‌ನಲ್ಲಿ ಟಿಕೆಟ್ ಹಂಚಿಕೆಯ ಈ ಹಗ್ಗಜಗ್ಗಾಟ ಕಾರ್ಯಕರ್ತರಲ್ಲಿ ಆತಂಕ ಮೂಡಿಸಿದೆ. ಹೈಕಮಾಂಡ್ ಶಾಮನೂರು ಕುಟುಂಬದ ಕೈ ಹಿಡಿಯುತ್ತದೆಯೇ ಅಥವಾ ಸಿಎಂ ಅವರ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿ ವಾದಕ್ಕೆ ಮಣಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.


